ಈ ದಿನ ಸಂಪಾದಕೀಯ | ಕ್ರಿಕೆಟ್ ಕೇಸರಿಕರಣ, ಪರಿಶುದ್ಧ ಆಟ ಅಂತರ್ಧಾನ

Date:

Advertisements
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಪುತ್ರ ಜಯ್ ಶಾ ಬಿಸಿಸಿಐ ಅಧ್ಯಕ್ಷನಾಗಿ, ಐಸಿಸಿ ಅಧ್ಯಕ್ಷನಾಗಿ ಮೆರೆಯತೊಡಗಿದರು. ಆಟಗಾರನಲ್ಲದ ಜಯ್ ಶಾ, ಗೌತಮ್ ಗಂಭೀರ್‍‌ನಂತಹ ಕೋಮುವಾದಿಯನ್ನು ಭಾರತ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ನೇಮಕ ಮಾಡಿದರು. ಮೋದಿಯ ಕಾಲದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಕೇಸರಿಕರಣವಾದಂತೆ, ಆಟದ ಅಂಗಳವೂ ಕೇಸರಿಕರಣವಾಯಿತು. 

ಬಾರ್ಡರ್ – ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ಪ್ರದರ್ಶನ ಕಂಡು ಅಭಿಮಾನಿಗಳು ಭಾರಿ ಬೇಸರದಲ್ಲಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನೇ ಸೋಲದ ಭಾರತ, ಈ ಬಾರಿ ಆಟಗಾರರ ಕಳಪೆ ಪ್ರದರ್ಶನದಿಂದ ಸರಣಿ ಸೋತಿದೆ. ಸೋಲನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಬೇಕಾದ ಮಾಜಿ ಕ್ರಿಕೆಟಿಗರು ಕೂಡ ಭಾರತ ತಂಡದ ಪ್ರದರ್ಶನಕ್ಕೆ ಕಿಡಿ ಕಾರಿದ್ದಾರೆ. ಮೊದಲು ಆಟಗಾರರ ಮೇಲಿದ್ದ ಕೋಪ ಈಗ ಮುಖ್ಯ ಕೋಚ್ ಗೌತಮ್ ಗಂಭೀರ್ ಕಡೆ ತಿರುಗಿದೆ.

ರಾಹುಲ್ ದ್ರಾವಿಡ್‌ರಂತಹ ಅಪರೂಪದ ಆಟಗಾರ ಮುಖ್ಯ ಕೋಚ್ ಹುದ್ದೆಯಿಂದ ನಿರ್ಗಮಿಸಿದ ನಂತರ, ಆರು ತಿಂಗಳ ಹಿಂದೆ ಆ ಸ್ಥಾನಕ್ಕೆ ಮತ್ತೊಬ್ಬ ಹಿರಿಯ ಆಟಗಾರ ಗೌತಮ್ ಗಂಭೀರ್ ನೇಮಕವಾದರು. ಮೊದಲಿಗೆ ಶ್ರೀಲಂಕಾದಲ್ಲಿ ಟಿ20 ಸರಣಿ ಗೆದ್ದರು. ಅದೇ ಹುಮ್ಮಸ್ಸಿನಲ್ಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡ ಗಂಭೀರ್, ಏಕದಿನ ಮತ್ತು ಟಿಸ್ಟ್ ಸರಣಿ ಸೋತು ಭಾರಿ ಮುಖಭಂಗಕ್ಕೀಡಾದರು.

ಶ್ರೀಲಂಕಾ ವಿರುದ್ಧ ಭಾರತ ಕಳೆದ 27 ವರ್ಷಗಳಲ್ಲಿ ಯಾವುದೇ ಸರಣಿ ಸೋತಿರಲಿಲ್ಲ. ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಸೋತಿದ್ದು ಹಲವರ ಕೆಂಗಣ್ಣಿಗೆ ಗುರಿಯಾಯಿತು. ಆಗಲೇ ಅವರನ್ನು ಕೋಚ್ ಸ್ಥಾನದಿಂದ ವಜಾ ಮಾಡಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಅನುಭವಿಗಳನ್ನು ನೇಮಿಸುವಂತೆ ಬಿಸಿಸಿಐಗೆ ಒತ್ತಾಯಿಸಲಾಗಿತ್ತು. ಆದರೂ ಅವರನ್ನೇ ಮುಂದುವರೆಸಲಾಯಿತು.

Advertisements

ಆನಂತರ, ನ್ಯೂಜಿಲೆಂಡ್ ವಿರುದ್ಧದ ಸರಣಿ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಆಲೌಟ್ ಆಗಿದ್ದು ಮತ್ತೊಂದು ಆಘಾತ ನೀಡಿತ್ತು. ಕಳೆದ 12 ವರ್ಷಗಳಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಸೋಲದೆ ಮೆರೆಯುತ್ತಿದ್ದ ಭಾರತ ತಂಡ ತವರಿನಲ್ಲೇ ಸರಣಿ ಸೋಲಿನ ಅವಮಾನ ಅನುಭವಿಸಿತು.

ಇದನ್ನು ಓದಿದ್ದೀರಾ?: ತನ್ನ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡ ವಿರಾಟ್ ಕೊಹ್ಲಿ

ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತಾಗಲೇ ಭಾರತ ಕ್ರಿಕೆಟ್ ತಂಡ, ಮುಖ್ಯ ಕೋಚ್ ಮತ್ತು ಬಿಸಿಸಿಐ ಎಚ್ಚೆತ್ತುಕೊಳ್ಳಬೇಕಾಗಿತ್ತು. ನಿಸ್ಸೀಮ ಉದಾಸೀನತೆಯಲ್ಲಿಯೇ ಆಸ್ಟ್ರೇಲಿಯಾಕ್ಕೆ ತೆರಳಿದರು. ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆದ್ದಾಗ, ಟೆಸ್ಟ್ ರ್‍ಯಾಕಿಂಗ್‌ನಲ್ಲಿ ಭಾರತ ಕ್ರಿಕೆಟ್ ತಂಡ ಮೊದಲ ಸ್ಥಾನದಲ್ಲಿದ್ದಾಗ, ಕೊಬ್ಬಿನಿಂದ ಕುಣಿದಾಡಿದರು.

ಆನಂತರ ನಡೆದದ್ದೇ ಬೇರೆ. ಮೂರು ಪಂದ್ಯಗಳನ್ನು ಗೆದ್ದು ಬೀಗಿದ ಆಸ್ಟ್ರೇಲಿಯಾ ತಂಡ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಭಾರತದ ಭರವಸೆಯನ್ನು ಭಗ್ನಗೊಳಿಸಿತು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಭಾರತವೇ ಅವಕಾಶ ಮಾಡಿಕೊಟ್ಟಿತು.

ಆಸ್ಟ್ರೇಲಿಯಾ ಬಲಿಷ್ಠ ತಂಡವಾಗಿರಬಹುದು. ಅದಕ್ಕೂ ಕೂಡ ಪೈಪೋಟಿ ನೀಡಬಲ್ಲ ಪ್ರತಿಭಾನ್ವಿತ ಆಟಗಾರರು ನಮ್ಮ ತಂಡದಲ್ಲಿದ್ದರು. ಆದರೂ ಸೋತರು. ಸೋಲಿಗೆ ಕಾರಣ ಹುಡುಕಿದರೆ, ಮೊದಲಿಗೆ ಸಮರ್ಥ ನಾಯಕನಿಲ್ಲದ್ದು, ಆಟಗಾರರ ನಡುವೆ ಒಮ್ಮತವಿಲ್ಲದ್ದು ಎದ್ದು ಕಾಣುತ್ತದೆ. ಅದಕ್ಕಿಂತ ಮುಖ್ಯವಾಗಿ ಆಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸದಾ ಸಿಡುಕುವ ಗಂಭೀರ ಸ್ವಭಾವದ ಗಂಭೀರ್‍‌ನಿಂದಾಗಿಯೇ ಆಟ ಹಾಳಾಗಿದ್ದು ಮನವರಿಕೆಯಾಗಿದೆ.

ಗೌತಮ್ ಗಂಭೀರ್‍‌ಗೂ ಮುಂಚೆ ರಾಹುಲ್ ದ್ರಾವಿಡ್‌ರಂತಹ ಸಹನಾಮೂರ್ತಿ, ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು. ಅವರ ಅಪಾರ ಅನುಭವ ಮತ್ತು ಶಿಸ್ತುಬದ್ಧ ತರಬೇತಿಯಿಂದ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿದ್ದರು. ಅಷ್ಟೇ ಅಲ್ಲ, 2025ರ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 2026ರಲ್ಲಿ ನಡೆಯುವ ಟಿ20 ವಿಶ್ವಕಪ್, 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ತಂಡವನ್ನು ಸಜ್ಜುಗೊಳಿಸಿದ್ದರು.

ದ್ರಾವಿಡ್ ಎಂದಾಕ್ಷಣ ಎಲ್ಲರೂ ಹೇಳುವ ಮಾತು ಒಂದೆ- ಜಂಟಲ್‌ಮನ್. ಮೃದು ಮಾತಿನ, ಸೌಮ್ಯ ಸ್ವಭಾವದ, ಅಪಾರ ತಾಳ್ಮೆ, ಸಹನೆಯ, ವಿವಾದಗಳಿಲ್ಲದ, ವಿಪರೀತಕ್ಕೆ ಹೋಗದ ಅಪ್ರಥಮ ಕ್ರಿಕೆಟಿಗ. ಗೆದ್ದಾಗ ಮೆರೆಯದ, ಸೋತಾಗ ಸೊರಗದ ಸ್ಥಿತಪ್ರಜ್ಞ. ಮೈದಾನದಿಂದ ಒಳಗೆ ಮತ್ತು ಹೊರಗೆ, ಸಂಯಮದ ನಡೆ-ನುಡಿಗೆ ಹೆಸರಾದವರು. ತಾನೊಬ್ಬ ಸ್ಟಾರ್ ಎಂಬ ಅಹಂನಿಂದ ಆಚೆಗೆ ನಿಂತವರು.

ಆದರೆ ಇದೇ ಮಾತುಗಳನ್ನು ಗೌತಮ್ ಗಂಭೀರ್ ಅವರಿಗೆ ಅನ್ವಯಿಸಿ ಹೇಳಲಾಗುವುದಿಲ್ಲ. ಗಂಭೀರ್ ಭಾರತ ತಂಡವನ್ನು ಪ್ರತಿನಿಧಿಸುವಾಗ, ಉತ್ತಮ ಓಪನರ್ ಆಗಿ, ತಂಡವನ್ನು ಗೆಲ್ಲಿಸಿದ್ದರೂ, ಸಿಡುಕಿನ ಸ್ವಭಾವದಿಂದಾಗಿ ಆಟದ ಸೊಗಸನ್ನು ಹಾಳು ಮಾಡಿದವರು. ಅದರಲ್ಲೂ ಪಾಕಿಸ್ತಾನದ ಆಟಗಾರರೊಂದಿಗೆ ವಿನಾಕಾರಣ ಕಾಲು ಕೆರೆದು ಜಗಳಕ್ಕೆ ನಿಲ್ಲುವ, ವಿವಾದ ಹುಟ್ಟುಹಾಕುವ, ಆಟದಲ್ಲೂ ಧರ್ಮ ಎಳೆದು ತರುವ ಜಗಳಗಂಟರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕೀರ್ತಿಶನಿ ಹೆಗಲೇರಿದರೆ, ಕ್ರೀಡಾಪಟುಗಳು ಕೂಡ ಕುರೂಪಿಗಳಾಗುತ್ತಾರೆ…

ಇದು ಸಹಜವಾಗಿಯೇ ಸಂಘಪರಿವಾರ ಮತ್ತು ಬಿಜೆಪಿಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಪಾಕಿಸ್ತಾನ ಮತ್ತು ಮುಸ್ಲಿಮರನ್ನು ದ್ವೇಷಿಸುವ ಜನರ ಕಣ್ಣಿಗೆ ಗಂಭೀರ್ ಉಗ್ರ ಹಿಂದುತ್ವವಾದಿಯಂತೆ ಕಾಣತೊಡಗಿತ್ತು. ಹಳಸಿದ ಬಿಜೆಪಿ ಮತ್ತು ಹಸಿದ ಗಂಭೀರ್ ಒಂದಾದರು. ಜನಪ್ರಿಯ ಆಟಗಾರ ರಾಜಕಾರಣಿಯಾದರು. 2019ರಲ್ಲಿ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದರು. ಗಂಭೀರ್ ಗೆದ್ದು ಸಂಸದರಾದರು. ಗೆದ್ದ ಸಂಸದನಿಗೆ ಬಿಜೆಪಿ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತು. ಅಲ್ಲಿಗೆ ಒಬ್ಬ ಉತ್ತಮ ಆಟಗಾರ ಮರೆಯಾಗಿ, ಸಂಘಪರಿವಾರ ಮತ್ತು ಬಿಜೆಪಿ ಬಯಸುವ ಕೋಮುವಾದಿಯಾಗಿ ಮಾರ್ಪಟ್ಟಿದ್ದರು.

ಅದಕ್ಕೆ ಪೂರಕವಾಗಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಪುತ್ರ ಜಯ್ ಶಾ ಬಿಸಿಸಿಐ ಅಧ್ಯಕ್ಷನಾಗಿ, ಐಸಿಸಿ ಅಧ್ಯಕ್ಷನಾಗಿ ಮೆರೆಯತೊಡಗಿದರು. ಆಟಗಾರನಲ್ಲದ ಜಯ್ ಶಾ, ಗೌತಮ್ ಗಂಭೀರ್‍‌ನಂತಹ ಕೋಮುವಾದಿಯನ್ನು ಭಾರತ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ನೇಮಕ ಮಾಡಿದರು. ಮೋದಿಯ ಕಾಲದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಕೇಸರಿಕರಣವಾದಂತೆ, ಆಟದ ಅಂಗಳವೂ ಕೇಸರಿಕರಣವಾಯಿತು. ಪರಿಶುದ್ಧ ಆಟ ಪರಲೋಕವಾಸಿಯಾಯಿತು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X