ಬೆವರು ಸುರಿಸಿ ದುಡಿಯುವ ಜನ, ಘನತೆಯ ಬದುಕಿಗೆ ಬೇಕಾಗುವಷ್ಟು ಸಂಬಳ ಕೊಡಿ ಎಂದರೆ- ಅವರ ಚಪ್ಪಲಿ ಸವೆಯುವವರೆಗೂ ಅಲೆದಾಡಿಸಿ ಸತಾಯಿಸುತ್ತಾರೆ. ಆದರೆ, ನವಕುಬೇರರೆಂದು ಸ್ವತಃ ಘೋಷಿಸಿಕೊಂಡಿರುವ ಜನಪ್ರತಿನಿಧಿಗಳು, ಯಾರನ್ನೂ ಕೇಳದೆ ಯದ್ವಾತದ್ವಾ ವೇತನ ಹೆಚ್ಚಳ ಮಾಡಿಕೊಳ್ಳುತ್ತಾರೆ.
ಮೂರು ತಿಂಗಳ ಹಿಂದೆ, ಬೆಂಗಳೂರಿನಲ್ಲಿ ವಿಪರೀತ ಚಳಿ ಇತ್ತು. ಮೈ ಕೊರೆಯುವ ಚಳಿಯಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಅಂಗನವಾಡಿ ಅಮ್ಮಂದಿರು ಬೆಂಗಳೂರಿಗೆ ಬಂದಿದ್ದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ತಿಂಗಳಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಗೌರವಧನ ಹೆಚ್ಚಿಸುವುದಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು.
ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಈ ಭರವಸೆಯನ್ನು ಈಡೇರಿಸಿರಲಿಲ್ಲ. ಹಾಗಾಗಿ ಅವರು ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದರು, ಫ್ರೀಡಂ ಪಾರ್ಕಿನಲ್ಲಿ ಬೀಡುಬಿಟ್ಟಿದ್ದರು. ಅವರಿಗೆ ತಿನ್ನಲು-ಉಣ್ಣಲು ಇರಲಿ, ಹಾಸಲು-ಹೊದಿಯಲು ಹೋಗಲಿ, ಕನಿಷ್ಠ ಶೌಚಾಲಯ ಸೌಕರ್ಯಗಳೂ ಇರಲಿಲ್ಲ. ಅಂತಹ ಸ್ಥಿತಿಯಲ್ಲಿಯೂ, ತಾವೇ ಆಯ್ಕೆ ಮಾಡಿದ ಸರ್ಕಾರದೆದುರು ನ್ಯಾಯಯುತ ಬೇಡಿಕೆ ಮುಂದಿಟ್ಟು ಧರಣಿ ಕೂತಿದ್ದರು.
‘ಕಳೆದ 23 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಅಂಗನವಾಡಿ ಕೆಲಸಕ್ಕೆ ಸೇರಿದಾಗ 750 ರೂಪಾಯಿ ಹಣ ಸಿಗುತ್ತಿತ್ತು. ಹಂತ ಹಂತವಾಗಿ 100, 500 ರೂಪಾಯಿ ಹೆಚ್ಚಳ ಮಾಡಿ 50 ವರ್ಷಕ್ಕೆ 11 ಸಾವಿರದವರೆಗೆ ಗೌರವಧನ ನೀಡುತ್ತಿದ್ದಾರೆ. ಕನಿಷ್ಠ ವರ್ಷಕ್ಕೆ 500 ನೀಡಿದ್ದರೂ ಕೂಡ ಇವತ್ತಿಗೆ ನಮಗೆ 25 ಸಾವಿರ ಸಿಗುತ್ತಿತ್ತು. ಆದರೆ, ನಮ್ಮಿಂದ ಹೆಚ್ಚು ಕೆಲಸ ಮಾಡಿಸಿಕೊಂಡು ಕನಿಷ್ಠ ಕೂಲಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ 7 ಸಾವಿರ, ಕೇಂದ್ರ ಸರ್ಕಾರದಿಂದ 4,500 ರೂಪಾಯಿ ಬರುತ್ತಿದೆ. ಇಷ್ಟು ಸಂಬಳದಲ್ಲಿ, ಈ ಬೆಲೆ ಏರಿಕೆ ಕಾಲದಲ್ಲಿ ಬದುಕುವುದಾದರೂ ಹೇಗೆ?’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ ಸುಜಾತ ಅಳಲು ತೋಡಿಕೊಂಡಿದ್ದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕರ್ನಾಟಕಕ್ಕೆ ಶಾಸನಸಭೆಯಿಂದ ಅಪಮಾನ; ನೈತಿಕ ಹೊಣೆ ಯಾರದ್ದು?
ಇದಾಗಿ ಮೂರು ತಿಂಗಳ ನಂತರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ 2025-26ರ ಬಜೆಟ್ ಮಂಡಿಸುವಾಗ ದೊಡ್ಡ ಮನಸ್ಸು ಮಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ, ಸಹಾಯಕರಿಗೆ 750 ಹೆಚ್ಚಳ ಮಾಡಿತ್ತು. ಈ ಹೆಚ್ಚಳದಿಂದ ತೀವ್ರ ಅಸಮಾಧಾನಗೊಂಡ ಅಂಗನವಾಡಿ ಕಾರ್ಯಕರ್ತೆಯರು ಮತ್ತೆ ಬೆಂಗಳೂರಿಗೆ ಬಂದು, ಅದೇ ಫ್ರೀಡಂ ಪಾರ್ಕಿನಲ್ಲಿ ಧರಣಿ ಕೂತಿದ್ದರು. ಸಚಿವೆ ಮತ್ತದೇ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದರು. ಅವರೆಲ್ಲ ಅಸಹಾಯಕತೆಯಿಂದ ಊರುಗಳಿಗೆ, ಕೆಲಸಗಳಿಗೆ ಮರಳಿದ್ದರು.
ಕಳೆದ 50 ವರ್ಷಗಳಿಂದ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಾರ್ಯಕರ್ತೆಯರಿಗೆ 12 ಸಾವಿರ ಮತ್ತು ಸಹಾಯಕಿಯರಿಗೆ 6,750 ಗೌರವಧನ ನೀಡುತ್ತಿದ್ದಾರೆ. ಈ ಬಡ ಅಮ್ಮಂದಿರು ಹೇಗೆ ಬದುಕುತ್ತಿರಬಹುದು ಎಂಬ ಕನಿಷ್ಠ ಪರಿಜ್ಞಾನವಾದರೂ ಬೇಡವೇ, ಈ ಸರ್ಕಾರಕ್ಕೆ?
ಇದಕ್ಕೆ ತದ್ವಿರುದ್ಧವಾಗಿ, ಬಜೆಟ್ ಅಧಿವೇಶನದ ಕೊನೆಯ ದಿನ, ಇಡೀ ಸದನ ಹನಿಟ್ರ್ಯಾಪ್ ಎಂಬ ಕೊಚ್ಚೆಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿರುವಾಗಲೇ, ‘ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ’ ಮತ್ತು ‘ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ’ ಮಂಡಿಸಿದ ಮರುಕ್ಷಣವೇ, ಉಭಯ ಸದನಗಳಲ್ಲಿ ಯಾವುದೇ ಚರ್ಚೆ ಇಲ್ಲದೆ ಅನುಮೋದನೆ ಮತ್ತು ಅಂಗೀಕಾರ- ಎರಡೂ ಆಗಿದೆ.
ಯಾವುದೇ ವಿಧೇಯಕ ಜಾರಿಗೊಳಿಸಬೇಕಾದರೆ ಮೊದಲಿಗೆ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಬೇಕು. ನಂತರ ವಿಧಾನಮಂಡಲದ ಉಭಯ ಸದನಗಳಲ್ಲಿ ಅನುಮೋದನೆ-ಅಂಗೀಕಾರವಾದ ಬಳಿಕ ರಾಜ್ಯಪಾಲರು ಅಂಕಿತ ಹಾಕಿ ಅಧಿಸೂಚನೆ ಹೊರಬಿದ್ದ ಬಳಿಕ ಜಾರಿಯಾಗಬೇಕು.
ಆದರೆ ಸಿಎಂ, ಸಚಿವರು, ಶಾಸಕರ ವೇತನ, ಭತ್ಯೆ ಹೆಚ್ಚಳ ಸಂಬಂಧ ಪ್ರಸ್ತಾವದ ಬಗ್ಗೆ ಮುಖ್ಯವಾಗಿ ಸಚಿವ ಸಂಪುಟ ಸಭೆಯಲ್ಲೇ ಅನುಮೋದನೆಯಾಗಿಲ್ಲ. ಉಭಯ ಸದನಗಳಲ್ಲಿ ವಿಧೇಯಕಗಳನ್ನು ಮುಂಚಿತವಾಗಿಯೂ ಮಂಡಿಸಲಿಲ್ಲ. ಮಗುಮ್ಮಾಗಿ ವಿಧೇಯಕಗಳನ್ನು ಮಂಡಿಸಿ, ಮರುಕ್ಷಣದಲ್ಲೇ ಅಂಗೀಕಾರ ಪಡೆದವರಿಗೆ ನಾಚಿಕೆಯೂ ಆಗಲಿಲ್ಲ.
ವಿಧೇಯಕಗಳ ಅಂಗೀಕಾರದಿಂದ ಮುಖ್ಯಮಂತ್ರಿಗಳ ಮಾಸಿಕ ವೇತನ 75,000 ರೂ.ನಿಂದ 1.50 ಲಕ್ಷ ರೂ.ಗೆ, ಸ್ಪೀಕರ್ ಮತ್ತು ಸಚಿವರ ವೇತನ 60,000 ರೂ.ನಿಂದ 1.25 ಲಕ್ಷ ರೂ.ಗೆ, ಸಭಾಪತಿಯವರ ವೇತನ 75,000 ರೂ.ನಿಂದ 1.25 ಲಕ್ಷ ರೂ.ಗೆ, ರಾಜ್ಯ ಸಚಿವರ ವೇತನ 50,000 ರೂ.ನಿಂದ 75,000 ರೂ.ಗೆ ಹಾಗೂ ಶಾಸಕರ ವೇತನವು 40,000 ರೂ.ನಿಂದ 80,000 ರೂ.ಗೆ ಏರಿಕೆಯಾಗಲಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಜಾತಿ ವಿನಾಶ: ಆರ್‌ಎಸ್‌ಎಸ್ ಬೂಟಾಟಿಕೆಗೆ ಮಿತಿ ಇಲ್ಲವೇ?
ಒಟ್ಟಾರೆ ಎಂಎಲ್ಎಗಳು, ಎಂಎಲ್ಸಿಗಳು, ಸ್ಪೀಕರ್, ಸಭಾಪತಿ, ಪ್ರತಿಪಕ್ಷದ ನಾಯಕರ, ಮುಖ್ಯ ಸಚೇತಕರ ವೇತನ, ಭತ್ಯೆ ಹೆಚ್ಚಳದಿಂದ 52 ಕೋಟಿ; ಸಿಎಂ, ಸಚಿವರ ವೇತನ, ಭತ್ಯೆ ಏರಿಕೆಯಿಂದ 10 ಕೋಟಿ ಸೇರಿದಂತೆ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 62 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ. ಅಂದರೆ, ಒಂದೇ ಸಲಕ್ಕೆ, ಐದಲ್ಲ, ಹತ್ತಲ್ಲ ಶೇ. 50 ಹೆಚ್ಚಳ ಮಾಡಿಕೊಳ್ಳಲಾಗಿದೆ.
ವಿಪರ್ಯಾಸಕರ ಸಂಗತಿ ಎಂದರೆ, ಶಾಸನ ರಚಿಸುವವರ ವೇತನ, ಭತ್ಯೆ ಹೆಚ್ಚಳ ಪ್ರಸ್ತಾಪವು ಯಾವ ಮನವಿ, ಒತ್ತಾಯ, ಆಗ್ರಹ, ಹೋರಾಟಗಳಿಲ್ಲದೆ ಹೆಚ್ಚಳವಾಗಿದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಮಹತ್ವದ ತೀರ್ಮಾನಗಳನ್ನು ಚರ್ಚೆಯ ಮೂಲಕ ತೆಗೆದುಕೊಳ್ಳಬೇಕು. ಆದರೆ, ಈ ಬಾರಿ ಜನಪ್ರತಿನಿಧಿಗಳ ಸಂಬಳ ಹೆಚ್ಚಳ ಯಾವ ಚರ್ಚೆಯಿಲ್ಲದೆ ನಡೆದಿದೆ. ಇದು ಕಾನೂನುಬಾಹಿರ ಕೃತ್ಯ. ಒಕ್ಕೊರಲಿನಿಂದ ಖಂಡಿಸಬೇಕಾದ ಕೃತ್ಯ.
ಬೆವರು ಸುರಿಸಿ ದುಡಿಯುವ ಜನ, ಘನತೆಯ ಬದುಕಿಗೆ ಬೇಕಾಗುವಷ್ಟು ಸಂಬಳ ಕೊಡಿ ಎಂದರೆ- ಅವರ ಚಪ್ಪಲಿ ಸವೆಯುವವರೆಗೂ ಅಲೆದಾಡಿಸಿ ಸತಾಯಿಸುತ್ತಾರೆ. ಅಂಗನವಾಡಿ ಅಮ್ಮಂದಿರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಿಸುವ ತಾಯಂದಿರು, ಅತಿಥಿ ಶಿಕ್ಷಕರು-ಉಪನ್ಯಾಸಕರು, ಹೊರಗುತ್ತಿಗೆ ನೌಕರರು- ಇವರಿಗೆ ಚಿಕ್ಕಾಸು ಕೊಡಲು ಚೌಕಾಸಿ ಮಾಡುತ್ತಾರೆ. ಆದರೆ, ನವಕುಬೇರರೆಂದು ಸ್ವತಃ ಘೋಷಿಸಿಕೊಂಡಿದ್ದರೂ, ಯಾರನ್ನೂ ಕೇಳದೆ ಯದ್ವಾತದ್ವಾ ವೇತನ ಹೆಚ್ಚಳ ಮಾಡಿಕೊಳ್ಳುತ್ತಾರೆ. ಇವರು ಜನಪ್ರತಿನಿಧಿಗಳಲ್ಲ, ಜನರ ಜೀವ ಹಿಂಡುವ ಜಿಗಣೆಗಳು.

ಮಾನ್ಯ ಸಂಪಾದಕರೇ ನೀವು ಹೇಳಿದ್ದು ಸತ್ಯ 🙏🏼🙏🏼🙏🏼