ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?

Date:

Advertisements
ಗ್ಯಾರಂಟಿ ಗೆಲುವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾರ್ಕೆಟಿಂಗ್ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಮಾಡಿಕೊಳ್ಳುವುದೂ ಸರಿಯಲ್ಲ. ಆದರೆ ಮೋದಿಯಂತಹ ಮಹಾನ್ ಸುಳ್ಳುಗಾರರ ನಡುವೆ, ಜನರಿಗೆ ತಲುಪಿದ್ದನ್ನು, ಜನಕಲ್ಯಾಣವಾಗಿದ್ದನ್ನು ಹೇಳಿಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ, ಆಗಿದ್ದೆಲ್ಲ ನಮ್ಮಿಂದಲೇ ಎನ್ನುವ ಸುಳ್ಳು ದೇಶವನ್ನಾಳುತ್ತದೆ.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ನೂರು ದಿನಗಳಾದವು. ಈ ಆರುನೂರು ದಿನಗಳ ಆಡಳಿತವನ್ನು ಅವಲೋಕನ ಮಾಡಿದರೆ, ರಾಜಕೀಯ ವಿಶ್ಲೇಷಕರು ಪರವಾಗಿಲ್ಲ ಎನ್ನಬಹುದು. ಆಯ್ಕೆ ಮಾಡಿದ ಮತದಾರರನ್ನು ಕೇಳಿದರೆ, ನಿರೀಕ್ಷೆಗೆ ತಕ್ಕಂತೆ ಸರ್ಕಾರ ಕಾರ್ಯ ನಿರ್ವಹಿಸಿಲ್ಲ ಎಂದು ನೇರವಾಗಿ ಹೇಳಬಹುದು. ಆದರೆ ಐದು ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಿದೆಯೇ ಎಂದರೆ, ಅರೆ-ಕೊರೆಗಳಿದ್ದರೂ, ಅಲ್ಪವಾದರೂ ಆಗಿದೆ ಎಂಬ ಉತ್ತರ ಬರುತ್ತದೆ. 

ಆದರೆ, ವಿರೋಧ ಪಕ್ಷಗಳು ಕಾಂಗ್ರೆಸ್‌ ಸರ್ಕಾರ ರಚನೆಯಾದ ದಿನದಿಂದ ಗ್ಯಾರಂಟಿ ಯೋಜನೆಗಳಿಂದ ಜನ ಸೋಮಾರಿಗಳಾಗುತ್ತಾರೆ, ಶಾಸಕರ ಕ್ಷೇತ್ರಗಳಿಗೆ ಅನುದಾನವಿಲ್ಲದೆ ಅಭಿವೃದ್ಧಿ ಕುಂಠಿತವಾಗುತ್ತದೆ, ಖಜಾನೆ ಬರಿದಾಗುತ್ತದೆ, ಸಾಲ ಹೆಚ್ಚಾಗುತ್ತದೆ, ರಾಜ್ಯ ದಿವಾಳಿಯಾಗುತ್ತದೆ ಎಂದು ಬಡಬಡಿಸುತ್ತಲೇ ಬಂದಿವೆ. 

ಸೋಜಿಗದ ಸಂಗತಿ ಎಂದರೆ, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಯಿಂದ ಅನುಕೂಲ ಪಡೆದ ಮಹಿಳೆಯರ ಸ್ವಾವಲಂಬಿ ಬದುಕಿನ ಯಶೋಗಾಥೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ಮಹಿಳೆಯರು ಸ್ವತಂತ್ರರಾಗಿದ್ದಾರೆ, ದುಡಿಯುವ ಮಹಿಳೆಯರಾಗಿದ್ದಾರೆ, ಆರ್ಥಿಕ ಚಲನಶೀಲತೆಗೆ ಕಾರಣವಾಗಿದ್ದಾರೆ. ಗೃಹಲಕ್ಷಿ ಯೋಜನೆಯಿಂದ ಹಲವಾರು ಮಹಿಳೆಯರು ಮನೆ ಖರ್ಚು-ವೆಚ್ಚವನ್ನು ನಿಭಾಯಿಸಿ, ಸ್ವಲ್ಪ ಮಟ್ಟಿಗಾದರೂ ಸಹ್ಯ ಬದುಕನ್ನು ಕಂಡುಕೊಂಡಿದ್ದಾರೆ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕೋರೆಗಾಂವ್ ಭೀಮಾ ವಿಜಯೋತ್ಸವ ದಲಿತ ಅಸ್ಮಿತೆಯ ಕತೆಯನ್ನು ಬಲ್ಲಿರಾ?

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹೆಬ್ಬಾಳ ಗ್ರಾಮದ ಮುಕ್ತುಂಬಿ ನಬಿಸಾಬ್‌ ಎಂಬ ಗೃಹಲಕ್ಷಿ ಫಲಾನುಭವಿ ಹತ್ತು ಸಾವಿರದಲ್ಲಿ ತರಕಾರಿ ತಳ್ಳುಗಾಡಿ ಖರೀದಿಸಿದ್ದಾರೆ. ಉಳಿದ ಹಣದಲ್ಲಿ ತರಕಾರಿ ಖರೀದಿಸಿ ತಂದು ವ್ಯಾಪಾರ ಆರಂಭಿಸಿ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದುಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಕಲ್ಕೆರೆ ಗ್ರಾಮದ ದ್ರಾಕ್ಷಾಯಿಣಿ ಗೃಹಲಕ್ಷಿ ಯೋಜನೆಯ ಹಣದಿಂದ ಹೊಲಿಗೆ ಯಂತ್ರ ಖರೀದಿಸಿದ್ದಾರೆ. ಬೇಡರ ಶಿವನಕೆರೆ ಗ್ರಾಮದ ಸುನಿತಾ, ಮಕ್ಕಳ ಶಾಲೆ ಶುಲ್ಕ ಕಟ್ಟಿ, ಹೊಲಿಗೆ ಯಂತ್ರ ಖರೀದಿಸಿ ಟೈಲರ್ ವೃತ್ತಿಯನ್ನು ಆರಂಭಿಸಿ ದುಡಿಮೆಯ ಮಾರ್ಗ ಕಂಡುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ, ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ದ್ವಿಚಕ್ರ ವಾಹನ ಕೊಡಿಸಿದ್ದಾರೆ. ವೃದ್ಧೆಯೊಬ್ಬರು ಗೃಹಲಕ್ಷ್ಮಿ ಹಣದಿಂದ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ್ದಾರೆ. ಬೆಳಗಾವಿಯ ಅನಗೋಳದ ಅನಿತಾ, ಗೃಹಲಕ್ಷ್ಮಿ ಯೋಜನೆಯ ಹಣದಿಂದ ಪತಿ ಚಂದ್ರಶೇಖರ್‌ ಬಡಿಗೇರಗೆ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ. ಈ ಬಗ್ಗೆ ದಂಪತಿ ವಿಡಿಯೋ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಯಡೇಹಳ್ಳಿ ಗ್ರಾಮದ ಖುರ್ಷಿದಾ ಎಂಬ ಮಹಿಳೆ ಗೃಹಲಕ್ಷ್ಮಿ ಹಣದಿಂದ ಪೆಟ್ಟಿ ಅಂಗಡಿ ತೆರೆದಿದ್ದಾರೆ. ಖುರ್ಷಿದಾ ಮೂಲತಃ ಬಡವಿ. 14 ವರ್ಷಗಳ ಹಿಂದೆ ತನ್ನ ಒಬ್ಬನೇ ಮಗನನ್ನು ಮತ್ತು 12 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದರು. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಂತಹ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳ ಎರಡು ಸಾವಿರ ರೂಪಾಯಿಗಳನ್ನು ಕೂಡಿಟ್ಟು ಇಂದು ಪೆಟ್ಟಿ ಅಂಗಡಿ ತೆರೆದು ಸ್ವಾವಲಂಬಿ ಬದುಕಿಗೆ ಮಾದರಿಯಾಗಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಯಲ್ಲಿ ಬೋರ್‌ವೆಲ್ ಕೊರೆಸಿದ್ದಾರೆ. ಸಮೃದ್ಧ ನೀರು ಸಿಕ್ಕ ಖುಷಿಯಲ್ಲಿದ್ದಾರೆ. ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಗೃಹಲಕ್ಷ್ಮಿ ಯೋಜನೆಯ ಯಶೋಗಾಥೆಗಳು ಒಂದಲ್ಲ ಎರಡಲ್ಲ… ನೂರಾರು.

ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ ಅತ್ಯಧಿಕ ಸಂಖ್ಯೆಯ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ರಾಜ್ಯದ ಶಕ್ತಿ ಯೋಜನೆಯತ್ತ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಕೂಡ ಒಲವು ತೋರಿದೆ. ಈ ನಿಟ್ಟಿನಲ್ಲಿ ಆಂಧ್ರದ ಸಚಿವರು ಹಾಗೂ ಅಧಿಕಾರಿಗಳ ನಿಯೋಗ ರಾಜ್ಯಕ್ಕೆ ಭೇಟಿ ನೀಡಿ, ಶಕ್ತಿ ಯೋಜನೆ ಬಗ್ಗೆ ಅಧ್ಯಯನ ನಡೆಸಲಿದೆ. ಯೋಜನೆಯ ಅನುಷ್ಠಾನ, ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

ಅಂದಹಾಗೆ ಆಂಧ್ರಪ್ರದೇಶದಲ್ಲಿರುವುದು ಟಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ. ಅಷ್ಟೇ ಅಲ್ಲ, ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ-ಎನ್‌ಸಿಪಿಗಳ ಮಹಾಯುತಿ ಸರ್ಕಾರ ಲಾಡ್ಲಿ ಬೆಹನ್‌ ಯೋಜನೆ ಆರಂಭಿಸಿತು. ಅದಕ್ಕೂ ಮುಂಚೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಈ ಯೋಜನೆ ಆರಂಭಿಸಿ ಮಹಿಳೆಯರ ಖಾತೆಗೆ ಹಣ ಜಮೆ ಮಾಡಿತ್ತು.

ಅಂದರೆ, ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನಮನ ಗೆದ್ದಿವೆ. ಜನರಿಗೆ ಅನುಕೂಲ ಮಾಡಿಕೊಟ್ಟಿವೆ. ಸರ್ಕಾರಕ್ಕೆ ಹೊರೆಯಾಗದೆ ಆರ್ಥಿಕ ಚಲನಶೀಲತೆಗೆ ಒತ್ತು ಕೊಟ್ಟಿವೆ. ಸಾಲದು ಎಂದು ಸದಾ ಟೀಕಿಸುತ್ತಿದ್ದ ಬಿಜೆಪಿಯೇ ಈ ಯೋಜನೆಗಳಿಂದ ಪ್ರೇರಣೆ ಪಡೆದು ಕೆಲ ರಾಜ್ಯಗಳಲ್ಲಿ ಜಾರಿಗೆ ತಂದಿದೆ.

ವಸ್ತುಸ್ಥಿತಿ ಹೀಗಿರುವಾಗ, ಆ ಯೋಜನೆಯ ಯಶಸ್ಸನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳಬೇಕಲ್ಲವೇ? ತನ್ನ ಖಾತೆಗೆ ಜಮೆ ಮಾಡಿಕೊಳ್ಳುವ ಸಣ್ಣ ಸ್ವಾರ್ಥವಿರಬೇಕಲ್ಲವೇ? ಆದರೆ ಹಿಂಜರಿಕೆಯ ರೋಗದಿಂದ ನರಳುತ್ತಿದೆ. ಕೆಲ ಶಾಸಕರು ಈಗಲೂ ರಾಗ ಎಳೆಯುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕೀರ್ತಿಶನಿ ಹೆಗಲೇರಿದರೆ, ಕ್ರೀಡಾಪಟುಗಳು ಕೂಡ ಕುರೂಪಿಗಳಾಗುತ್ತಾರೆ…

ಇದಕ್ಕೆ ವ್ಯತಿರಿಕ್ತವಾಗಿ ಪ್ರಧಾನಿ ಮೋದಿಯವರು, ಮಾಡಿದ್ದಕ್ಕಿಂತ ಹೆಚ್ಚು ಮಾತನಾಡುತ್ತಿದ್ದಾರೆ. ಮಾಡಿದ್ದೆಲ್ಲ ನಾನೇ ಎನ್ನುತ್ತಿದ್ದಾರೆ. ಮಾಡದಿದ್ದರೂ ಪುಗಸಟ್ಟೆ ಪ್ರಚಾರ ಪಡೆಯುತ್ತಿದ್ದಾರೆ. 2021ರಲ್ಲಿ ಪಿಎಂ ಆವಾಸ್‌ ಯೋಜನೆಯಡಿ ಬಡ ಮಹಿಳೆಗೆ ಮನೆ ನೀಡಲಾಗಿದೆ ಎಂದು, ಮನೆ-ಮಹಿಳೆ ಮತ್ತು ಮೋದಿ ಇರುವ ಜಾಹೀರಾತನ್ನು ಬಿಡುಗಡೆ ಮಾಡಲಾಗಿತ್ತು. ಅಸಲಿಗೆ ಆ ಬಡ ಮಹಿಳೆಗೆ ಪ್ರಧಾನಮಂತ್ರಿಗಳ ಆವಾಸ್ ಯೋಜನೆಯಡಿ ಮನೆ ಕೊಟ್ಟಿರಲಿಲ್ಲ. ಆ ಬಡವಿ ಲಕ್ಷ್ಮಿದೇವಿ ವಾಸವಿದ್ದ ಕೊಲ್ಕತ್ತಾದ ಬೋಬಜಾರ್‍‌ನ ಮಳಂಗಾ ಓಣಿಯ ಪುಟ್ಟ ಮನೆಗೆ ಆಕೆ ಪ್ರತಿ ತಿಂಗಳು ಐದು ಸಾವಿರ ಬಾಡಿಗೆ ಕಟ್ಟುತ್ತಿದ್ದರು. ಮೋದಿಯ ಸುಳ್ಳು ಜಾಹೀರಾತನ್ನು ಪತ್ತೆ ಹಚ್ಚಿದ ‘ನ್ಯೂಸ್‌ ಲಾಂಡ್ರಿ’ ಆ ಬಡವಿಯನ್ನು ಹುಡುಕಿ, ಮಾತನಾಡಿಸಿ, ಸತ್ಯಸಂಗತಿಯನ್ನು ಜಗತ್ತಿಗೆ ತಿಳಿಸಿತ್ತು.

ಗ್ಯಾರಂಟಿ ಗೆಲುವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾರ್ಕೆಟಿಂಗ್ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಮಾಡಿಕೊಳ್ಳುವುದೂ ಸರಿಯಲ್ಲ. ಆದರೆ ಮೋದಿಯಂತಹ ಮಹಾನ್ ಸುಳ್ಳುಗಾರರ ನಡುವೆ, ಜನರಿಗೆ ತಲುಪಿದ್ದನ್ನು, ಜನಕಲ್ಯಾಣವಾಗಿದ್ದನ್ನು ಹೇಳಿಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ, ಆಗಿದ್ದೆಲ್ಲ ನಮ್ಮಿಂದಲೇ ಎನ್ನುವ ಸುಳ್ಳು ದೇಶವನ್ನಾಳುತ್ತದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X