ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?

Date:

Advertisements
ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಣದುಬ್ಬರದಿಂದ ತತ್ತರಿಸಿಹೋಗಿರುವ ದೇಶದ ಜನತೆ, ಬಿಜೆಪಿ ನಾಯಕರು ಎದುರಾದಲ್ಲೆಲ್ಲ ಚುನಾವಣಾ ಬಾಂಡ್ ಎಂಬ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವ ಧೈರ್ಯ ತೋರಬೇಕಾಗಿದೆ. ಉತ್ತರ ಪಡೆಯುವ ಹಕ್ಕು ಅವರಿಗಿದೆ. ಅದನ್ನು ನಮ್ಮ ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನ ಕಲ್ಪಿಸಿಕೊಟ್ಟಿದೆ.

ರಾಜಕೀಯ ಪಕ್ಷಗಳಿಗೆ ಹೆಸರು ಬಹಿರಂಗಪಡಿಸದೆ ದೇಣಿಗೆಯನ್ನು ನೀಡಲು ಅವಕಾಶ ಮಾಡಿಕೊಟ್ಟಿದ್ದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಅಸಂವಿಧಾನಿಕ, ಮಾಹಿತಿ ಹಕ್ಕಿನ ಉಲ್ಲಂಘನೆ ಹಾಗೂ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಖಾತರಿಪಡಿಸುವ ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ತಕ್ಷಣದಿಂದಲೇ ಚುನಾವಣಾ ಬಾಂಡ್‌ಗಳ ಮಾರಾಟ ನಿಲ್ಲಿಸುವಂತೆ ನ್ಯಾಯಾಲಯ ಸೂಚಿಸಿ ಇಲ್ಲಿಗೆ ಒಂದು ವಾರ ಕಳೆದಿದೆ.

ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತಂದ ಬಿಜೆಪಿ, 2018ರಿಂದ ಇಲ್ಲಿಯವರೆಗೆ ಬಾಂಡ್ ಬಗೆಗಿನ ಆಕ್ಷೇಪಗಳಿಗೆ ಉತ್ತರಿಸದೇ ನಿರ್ಲಕ್ಷಿಸಿತ್ತು. ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದಾಗ, ದೇಣಿಗೆಯ ಮೂಲವನ್ನು ತಿಳಿಯುವ ಹಕ್ಕು ನಾಗರಿಕರಿಗಿಲ್ಲ ಎಂದು ವಾದಿಸಿತ್ತು. ಚುನಾವಣಾ ಬಾಂಡ್ ಮೂಲಕ ಬರುವ ದೇಣಿಗೆಯನ್ನು ಕಾನೂನುಬದ್ಧ ಎಂದು ಸಮರ್ಥಿಸಿಕೊಂಡಿತ್ತು.

ಈಗ ಅದೇ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಕಾನೂನುಬಾಹಿರವೆಂದು ರದ್ದುಗೊಳಿಸಿದೆ. ಈ ತೀರ್ಪು ಪ್ರಜಾಪ್ರಭುತ್ವದ ಮೂಲ ತತ್ವವನ್ನು ಎತ್ತಿ ಹಿಡಿದಿದೆ. ದೇಶದ ಜನರ ಪ್ರಶ್ನಿಸುವ ಹಕ್ಕನ್ನು ಜೀವಂತವಾಗಿರಿಸಿದೆ.

Advertisements

ಕುತೂಹಲಕರ ಸಂಗತಿ ಎಂದರೆ, ಸುಪ್ರೀಂ ಕೋರ್ಟ್ ತೀರ್ಪು ಬಂದು ಒಂದು ವಾರ ಕಳೆದಿದೆ. ಚುನಾವಣಾ ಬಾಂಡ್ ಎಂಬ ಕಾನೂನುಬದ್ಧ ಲಂಚವನ್ನು ಹುಟ್ಟುಹಾಕಿದ, ಕೋಟ್ಯಂತರ ರೂಪಾಯಿಗಳ ಕಾರ್ಪೊರೇಟ್ ದೇಣಿಗೆಯನ್ನು ತಿಜೋರಿಗೆ ತುಂಬಿಕೊಂಡ, ಅದರ ಬಲದಿಂದ ಅಕ್ರಮವಾಗಿ ಚುನಾವಣೆಗಳನ್ನು ಗೆದ್ದು ಅಧಿಕಾರಕ್ಕೇರಿದ ಬಿಜೆಪಿ- ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾಗಿದೆ.

ಮಾತನಾಡಬೇಕಾದ ಪ್ರಧಾನಿ ಮೋದಿಯವರು, ತಮ್ಮನ್ನು ತಾವು ಶ್ರೀಕೃಷ್ಣ ಪರಮಾತ್ಮನ ಅಪರಾವತಾರ ಎಂದಿದ್ದಾರೆ. ಕೃಷ್ಣ-ಕುಚೇಲನ ಅವಲಕ್ಕಿ ಪ್ರಸಂಗವನ್ನು ಪ್ರಸ್ತಾಪಿಸಿ, ಸಾವಿರಾರು ಕೋಟಿಗಳ ದೇಣಿಗೆಯನ್ನು ಅವಲಕ್ಕಿ ಎಂದಿದ್ದಾರೆ. ಇದೊಂದು ಲಘು ಪ್ರಸಂಗ ಎಂದು ದೇಶದ ಜನತೆಗೆ ಸಂದೇಶ ರವಾನಿಸಿದ್ದಾರೆ. ಆ ಮೂಲಕ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪನ್ನು ಲೇವಡಿ ಮಾಡಿದ್ದಾರೆ.

ಫೆ. 19ರಂದು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಶ್ರೀ ಕಲ್ಕಿ ಧಾಮಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿಯವರು, ‘ಸುಧಾಮನು ಶ್ರೀಕೃಷ್ಣನಿಗೆ ಅವಲಕ್ಕಿ ನೀಡುವುದು ಈ ಕಾಲದಲ್ಲಾಗಿದ್ದರೆ, ಬದಲಾದ ಕಾಲದಲ್ಲಿ ಆ ವಿಡಿಯೊ ಹೊರಬಂದರೆ, ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗುತ್ತದೆ. ಇಲ್ಲಿ ಭ್ರಷ್ಟಾಚಾರ ನಡೆದಿದೆ, ಶ್ರೀಕೃಷ್ಣನು ಭ್ರಷ್ಟಾಚಾರ ಮಾಡುತ್ತಿದ್ದಾನೆ ಎಂಬ ತೀರ್ಪು ಬರುತ್ತದೆ’ ಎಂದು ಸಾರ್ವಜನಿಕ ಸಮಾರಂಭದಲ್ಲಿ ವ್ಯಂಗ್ಯವಾಡಿದ್ದಾರೆ. ಚುನಾವಣಾ ಬಾಂಡ್ ಅಸಂವಿಧಾನಿಕ ಎಂಬ ಸುಪ್ರೀಂ ತೀರ್ಪಿಗೆ ತಿಪ್ಪೆ ಸಾರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಚುನಾವಣಾ ಬಾಂಡ್‌ಗಳ ಕತೆ ಆರ್‍‌ಟಿಐ ಮಾಹಿತಿಗಳ ಮೂಲಕ ಒಂದೊಂದಾಗಿ ಬಿಚ್ಚಿಕೊಳ್ಳತೊಡಗಿದೆ. ಕಳೆದ ಕೆಲವು ವರ್ಷಗಳಲ್ಲಿ ಚುನಾವಣಾ ಬಾಂಡ್ ಖರೀದಿಸಿದ, ಖರೀದಿಸದೆ ದಾಳಿಗೆ ತುತ್ತಾದ 30 ಕಂಪನಿಗಳ ಕತೆ ಹೊರಬಿದ್ದಿದೆ. ಈ 30 ಕಂಪನಿಗಳಿಂದ ಬಿಜೆಪಿಯ ತಿಜೋರಿಗೆ ಒಟ್ಟು 335 ಕೋಟಿ ರೂಪಾಯಿಗಳು ದೇಣಿಗೆಯ ರೂಪದಲ್ಲಿ ಹರಿದು ಬಂದಿದೆ. ಕುತೂಹಲಕರ ವಿಷಯವೆಂದರೆ, ಈ 30 ಕಂಪನಿಗಳು ಇದೇ ಅವಧಿಯಲ್ಲಿ ಕೇಂದ್ರ ಸರಕಾರದ ಏಜೆನ್ಸಿಗಳಿಂದ ದಾಳಿಯನ್ನು ಎದುರಿಸಿದ್ದವು. ಕೆಲವು ಕಂಪನಿಗಳು ಈ ಏಜೆನ್ಸಿಗಳ ದಾಳಿಗೆ ಗುರಿಯಾದ ಬಳಿಕ ಬಿಜೆಪಿಗೆ ಹೆಚ್ಚಿನ ದೇಣಿಗೆಯನ್ನೂ ನೀಡಿದ್ದವು. ಈ 30 ಕಂಪನಿಗಳಷ್ಟೇ ಅಲ್ಲ, ಇನ್ನೂ ಹಲವಾರು ಕಾರ್ಪೊರೇಟ್ ಕಂಪನಿಗಳಿಂದ ಹಣ ಹರಿದು ಬಂದಿದೆ. ಆ ಕಂಪನಿಗಳು ಯಾವುವು, ಅವುಗಳ ಮೇಲೆ ಹೊರಿಸಲಾದ ಆರೋಪವೇನು, ಬೆದರಿಸಲಾದ ಕ್ರಮವೇನು ಎಂಬ ಸತ್ಯ ಕೂಡ ಹೊರಬರಬೇಕಾಗಿದೆ. ಸತ್ತಂತಿರುವ ವಿರೋಧ ಪಕ್ಷಗಳು ಎಚ್ಚರಗೊಳ್ಳದಿದ್ದರೆ, ಭವಿಷ್ಯದಲ್ಲಿ ಭಾರತ ಸರ್ವಾಧಿಕಾರಿಯ ತೆಕ್ಕೆಗೆ ಸರಿಯಲಿದೆ.

2014ರಲ್ಲಿ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ ಎಂದು 2ಜಿ ಸ್ಪೆಕ್ಟ್ರಮ್ ಹಗರಣವನ್ನು ಬಯಲಿಗೆಳೆದು ಭಾರೀ ಸದ್ದು ಮಾಡಿ, ಅಧಿಕಾರಕ್ಕೆ ಬಂದ ಬಿಜೆಪಿ, ಈಗ ಅದಕ್ಕಿಂತ ನೂರಾರುಪಟ್ಟು ಹೆಚ್ಚಿನ ಭಾರೀ ಬಾಂಡ್ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ. ಬಿಜೆಪಿಗೆ ಬಗ್ಗದ ವ್ಯಕ್ತಿ, ಸಂಸ್ಥೆಗಳ ಮೇಲೆ ಸರ್ಕಾರಿ ಏಜೆನ್ಸಿಗಳಾದ ಐಟಿ, ಇಡಿ, ಸಿಬಿಐಗಳ ಮೂಲಕ ದಾಳಿ ಮಾಡಿಸಿ, ಬೆದರಿಸಿ ಚುನಾವಣಾ ಬಾಂಡ್ ಎಂಬ ದೇಣಿಗೆಯ ರೂಪದಲ್ಲಿ ಹಣ ಸಂಗ್ರಹಿಸಿದೆ. ಇದು ಬಿಜೆಪಿಯ ಅಧಿಕಾರ ದುರುಪಯೋಗ, ಇದು ಬಿಜೆಪಿಯ ಬ್ಲ್ಯಾಕ್ ಮೇಲ್ ರಾಜಕಾರಣ, ಇದು ಲಂಚವನ್ನು ದೇಣಿಗೆ ಎಂದು ಕಾನೂನುಬದ್ಧಗೊಳಿಸಿದ ನೀಚ ಕ್ರಮ.

ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಣದುಬ್ಬರದಿಂದ ತತ್ತರಿಸಿಹೋಗಿರುವ ದೇಶದ ಜನತೆ, ಬಿಜೆಪಿ ನಾಯಕರು ಎದುರಾದಲ್ಲೆಲ್ಲ ಚುನಾವಣಾ ಬಾಂಡ್ ಎಂಬ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವ ಧೈರ್ಯ ತೋರಬೇಕಾಗಿದೆ. ಉತ್ತರ ಪಡೆಯುವ ಹಕ್ಕು ಅವರಿಗಿದೆ. ಅದನ್ನು ನಮ್ಮ ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನ ಕಲ್ಪಿಸಿಕೊಟ್ಟಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X