ಮರ್ಯಾದೆಗೇಡು ಹತ್ಯೆಗಳನ್ನು ಸಮಾಜವಾಗಲಿ, ಕಾನೂನು ನಿರೂಪಕರಾಗಲಿ, ನಮ್ಮ ನ್ಯಾಯಾಂಗವಾಗಲಿ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಎಳೆ ಜೀವಗಳ ಹತ್ಯೆ ಇಷ್ಟು ಕೇವಲವಾಗಿ ಒಂದು ದಿನದ ಸುದ್ದಿಯಾಗಿ ಕಳೆದು ಹೋಗುವುದಕ್ಕೆ ಬಿಡಬಾರದು. ಹಾಗೆ ಬಿಟ್ಟರೆ ಅದು ನಾಗರಿಕ ಸಮಾಜಕ್ಕೆ ಕಪ್ಪುಚುಕ್ಕೆ
ಜೂನ್ ತಿಂಗಳಿನಲ್ಲಿ ರಾಜ್ಯದಲ್ಲಿ ಎರಡು ಮರ್ಯಾದೆಗೇಡು ಹತ್ಯೆಗಳು ವರದಿಯಾಗಿವೆ. ವರದಿಯಾಗದ್ದು ಎಷ್ಟಿವೆಯೋ ಗೊತ್ತಿಲ್ಲ. ಜೂನ್ 18ರಂದು ಗುಬ್ಬಿ ತಾಲ್ಲೂಕಿನಲ್ಲಿ ಅಪ್ಪನೊಬ್ಬ ಮಗಳ ಕತ್ತು ಹಿಸುಕಿ ಕೊಂದಿದ್ದಾನೆ. ನಾಯಕ ಸಮುದಾಯದ ಪಿಯು ವಿದ್ಯಾರ್ಥಿನಿ ಅದೇ ಕಾಲೇಜಿನಲ್ಲಿ ಬಿಕಾಂ ಕೊನೆಯ ವರ್ಷದಲ್ಲಿ ಓದುತ್ತಿದ್ದ ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಆಕೆಗೆ 18 ವರ್ಷ ತುಂಬಲು ಇನ್ನು ಮೂರು ತಿಂಗಳಷ್ಟೇ ಬಾಕಿಯಿತ್ತು. ಆದರೆ, ಎರಡು ತಿಂಗಳ ಹಿಂದೆ ಯುವತಿ ಮನೆ ಬಿಟ್ಟು ಹೋಗಿದ್ದಳು. ಪೊಲೀಸರಿಗೆ ದೂರು ಕೊಡದೇ ಪೋಷಕರು ಆಕೆಯನ್ನು ಹುಡುಕಿ ಮನೆಗೆ ಕರೆತಂದಿದ್ದಾರೆ. ನಂತರ ಆಕೆಯ ಅಪ್ಪ, ಸೋದರ ಮತ್ತು ಚಿಕ್ಕಪ್ಪ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ವಿಷ ಕುಡಿದು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಆದರೆ ಊರವರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ ನಂತರ ಮರ್ಯಾದೆಗೇಡು ಹತ್ಯೆ ಬಯಲಾಗಿದೆ. ಮೂವರು ಆರೋಪಿಗಳ ಬಂಧನವಾಗಿದೆ.
ಜೂನ್ 28ರಂದು ಕೋಲಾರದಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ ನಡೆದಿದೆ. ಗೊಲ್ಲ ಸಮುದಾಯದ ಕಾಲೇಜು ಓದುತ್ತಿರುವ ಯುವತಿ ದಲಿತ ಸಮುದಾಯದ ಯುವಕನನ್ನು ಪ್ರೀತಿಸಿದ್ದಳು. ಇದೇ ವಿಚಾರಕ್ಕೆ ರಾತ್ರಿ ಅಪ್ಪ ಮಗಳ ನಡುವೆ ಜಗಳ ನಡೆದಿದೆ. ಮದುವೆಯಾಗುವುದಿದ್ದರೆ ಆತನನ್ನೇ ಎಂದು ಹಟ ಹಿಡಿದ ಮಗಳನ್ನು ಅಪ್ಪನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಯುವತಿಯ ಮರಣವಾರ್ತೆ ತಿಳಿದ ಯುವಕ ರೈಲು ಹಳಿಗೆ ತಲೆಯಿಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವತಿಯ ಅಪ್ಪ ಈಗ ಜೈಲುಪಾಲು. ಯುವಕನ ಮನೆಯಲ್ಲಿ ಪುತ್ರಶೋಕ.
ಮೇಲಿನ ಎರಡು ಜಾತಿಯ ಕಾರಣಕ್ಕಾಗಿ ನಡೆದ ಹತ್ಯೆಗಳಾದರೆ ಮಧ್ಯಪ್ರದೇಶದಲ್ಲಿ ಒಂದೇ ಜಾತಿಗೆ ಸೇರಿದ ಜೋಡಿಯ ಹತ್ಯೆಯೂ ಮರ್ಯಾದೆಗೇಡು ಹೆಸರಿನಲ್ಲಿ ನಡೆದಿದೆ. ಮುಕೌನ ಎಂಬ ಗ್ರಾಮದಲ್ಲಿ ರಾಧೆಶ್ಯಾಮ್ ತೋಮರ್ ಎಂಬ ಯುವಕ ಮತ್ತು ಆತನ ಪ್ರೇಯಸಿ ಶಿವಾನಿಯನ್ನು ಶಿವಾನಿಯ ತಂದೆ ರಾಜ್‌ಪಾಲ್ ಸಿಂಗ್ ತೋಮರ್ ಗುಂಡಿಟ್ಟು ಕೊಲೆ ಮಾಡಿ ದೇಹಗಳಿಗೆ ಕಲ್ಲು ಕಟ್ಟಿ ಮೊಸಳೆಗಳೇ ಹೆಚ್ಚು ಇರುವ ಚಂಬಲ್ ನದಿಗೆ ಎಸೆದಿದ್ದಾನೆ. ಯುವಕನ ತಂದೆ ಲಖನ್ ತೋಮರ್ ಮಗ ಕಾಣೆಯಾಗಿರುವ ಬಗ್ಗೆ ದೂರು ನೀಡಿದ ನಂತರ ಮರ್ಯಾದೆಗೇಡು ಹತ್ಯೆ ಬಯಲಾಗಿದೆ. ಆರೋಪಿಯ ಬಂಧನವಾಗಿದೆ.
ಮರ್ಯಾದೆಗೇಡು ಹತ್ಯೆಗಳೆಲ್ಲ ಜಾತಿಯ ಮೇಲು ಕೀಳಿನ ವಿಚಾರದಲ್ಲಿ ಮಾತ್ರ ನಡೆಯುತ್ತಿಲ್ಲ. ತಾವು ಅಂದುಕೊಂಡಂತೆ, ತಾವು ನೋಡಿದ ವರ /ವಧುವನ್ನೇ ಮದುವೆಯಾಗಬೇಕು ಎಂಬ ಹೆತ್ತವರ ಹಟದ ಕಾರಣಕ್ಕೂ ನಡೆಯುತ್ತಿದೆ. ಅಂತಸ್ತು, ಪ್ರತಿಷ್ಠೆ, ಅಹಂಕಾರ ಮುಂತಾದ ಮನೋವಿಕಾರಗಳನ್ನು ಪೋಷಿಸಿಕೊಂಡು ಬಂದವರಿಗೆ ರಕ್ತ ಸಂಬಂಧ, ಒಡಹುಟ್ಟಿದವರು, ಕರುಳಕುಡಿಗಳು ಎಂಬ ಭಾವನಾತ್ಮಕ ಸಂಬಂಧಗಳೆಲ್ಲ ನಗಣ್ಯ.
ಹಾಗೆ ನೋಡಿದರೆ ನಮ್ಮ ಹಿರೀಕರ ಕಾಲದಲ್ಲಿ ಅಂತರ್‌ಧರ್ಮೀಯ ವಿವಾಹಗಳು ಬೇಕಾದಷ್ಟು ನಡೆದಿವೆ. ಆಗೆಲ್ಲ ಅವರು ಈಗಿನವರಂತೆ ಕೊಲ್ಲುವ ಹಂತಕ್ಕೆ ಹೋಗಿಲ್ಲ. ಅದಕ್ಕೆ ಅವರಿಗೆ ಇದೇ ಮರ್ಯಾದೆ ಅಡ್ಡ ಬರುತ್ತಿತ್ತು. ಆದರೆ ಈಗ ಕೊಲ್ಲುವುದು, ಹತ್ತಾರು ತುಂಡುಗಳಾಗಿ ಕತ್ತರಿಸಿ ಎಸೆಯೋದೆಲ್ಲ ಕಷ್ಟವೇ ಅಲ್ಲ. ಅದಕ್ಕೆ ಯಾವ ಮರ್ಯಾದೆಯೂ ಅಡ್ಡಿಯಾಗುವುದಿಲ್ಲ. ಇಷ್ಟೊಂದು ಮುಂದುವರಿದ ಸಮಾಜದಲ್ಲಿ ಪ್ರೀತಿಸಿದ ಮಕ್ಕಳನ್ನು ಹೆತ್ತವರೇ ಕೊಲೆ ಮಾಡುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ. ಮರ್ಯಾದೆಗೇಡು ಹತ್ಯೆ ಸಾಮಾಜಿಕ ಪಿಡುಗಾಗಿಬಿಟ್ಟಿದೆ. ಮಹಿಳೆಯನ್ನು ಆಸ್ತಿ ಎಂದು ಪರಿಗಣಿಸುವ ಮನುಸ್ಮೃತಿ ಪ್ರಣೀತ ವ್ಯಾಧಿ…ಮರ್ಯಾದೆ ಎಂಬುದನ್ನು ಮಹಿಳೆಗೆ ಅಂಟಿಸಿರುವ ಪುರುಷಪ್ರಧಾನ ವ್ಯವಸ್ಥೆಯ ವಿಕಾರ.
ಅಷ್ಟಕ್ಕೂ ಮರ್ಯಾದೆ ಅಂದ್ರೇನು? ಮರ್ಯಾದೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಕೊಲೆಗಳಾಗಬೇಕೇನು? ಭೂಮಿ ಮೇಲೆ ಜನಿಸಿದ ಎಲ್ಲರಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ. ಹಾಗೆಯೇ ತಮಗಿಷ್ಟ ಬಂದ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡು ಬದುಕುವ ಅವಕಾಶ ನಮ್ಮ ಮಕ್ಕಳಿಗೂ ಕಲ್ಪಿಸಬೇಕಲ್ವೇ? ಎಷ್ಟೊಂದು ಪ್ರೇಮ ವಿವಾಹಗಳು ಅಂತರ್ಜಾತೀಯ ವಿವಾಹಗಳು ಹೆತ್ತವರ ಅಪ್ಪಣೆಗೆ ಕಾಯದೇ ನಡೆಯುತ್ತಿಲ್ಲವೇ? ಅವರನ್ನೆಲ್ಲ ಕೊಂದುಬಿಟ್ಟರೆ ನಮ್ಮನ್ನು ಮನುಷ್ಯರು ಅಂತಾರಾ? ಹೀಗೆಲ್ಲ ಮಾತನಾಡುವುದು ಸಿನಿಕತನ ಎನಿಸಬಹುದು.
ಇದನ್ನು ಓದಿ ಈ ದಿನ ಸಂಪಾದಕೀಯ | ಜನತಂತ್ರವೆಂಬುದು ಭಾರತದ ವಂಶವಾಹಿಯಲ್ಲಿದೆಯೇ ಮೋದಿಯವರೇ, ಹೌದೇ?
ಆದರೆ, ಇಂತಹ ʼಕುಟುಂಬದ ಮರ್ಯಾದೆʼ ಹೆಸರಿನಲ್ಲಿ ನಡೆಯುವ ಹತ್ಯೆಗಳಿಂದ ಯಾವ ರೀತಿಯಲ್ಲಿ ಆ ಕುಟುಂಬಗಳ ಮರ್ಯಾದೆ ಉಳಿಯುತ್ತಿದೆ ಎಂದು ಯೋಚಿಸದಷ್ಟು ಮಂಕು ಕವಿದಿದೆ ಜನರ ಬುದ್ದಿಗೆ. ಮರ್ಯಾದೆ ಹೆಸರಿನಲ್ಲಿ ತಾವೇ ಹೆತ್ತು, ಹೊತ್ತ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕುವುದು, ಎತ್ತಿ ಆಡಿಸಿದ ಅದೇ ಕೈಗಳಿಂದ ಕತ್ತು ಹಿಸುಕಿ ಸಾಯಿಸುವುದಕ್ಕೆ ಮನಸ್ಸಾದರೂ ಹೇಗೆ ಬರುತ್ತದೆ? ತಮ್ಮ ಮಕ್ಕಳ ಮೇಲೆ ನಿಜವಾದ ಪ್ರೀತಿ ಇಟ್ಟುಕೊಂಡವರು ಹೀಗೆ ಮಾಡಲಾರರು.
ನಮ್ಮ ಸಮಾಜ ಅಸ್ಪೃಶ್ಯತೆ, ಮೇಲು-ಕೀಳು, ಜಾತಿ, ಧರ್ಮದ ಕೊಚ್ಚೆಯಲ್ಲಿ ಮುಳುಗುತ್ತಲೇ ಇದೆ. ಅದು ಮೇಲೇಳುವ ಲಕ್ಷಣ ಕಾಣುತ್ತಿಲ್ಲ. ತಮ್ಮಿಷ್ಟದ ಆಹಾರ ಸೇವಿಸುವ, ಉಡುಗೆ ತೊಡುವ, ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ, ಇಷ್ಟ ಬಂದಂತೆ ಬದುಕುವ ಮೂಲಭೂತ ಸ್ವಾತಂತ್ರ್ಯವನ್ನೂ ಕೊಡದಿರುವ ಸಮಾಜವಿದು. ಜಾತಿ- ಅಂತಸ್ತಿನ ಭೂತ ಬಿಡುವವರೆಗೆ ಈ ತರಹದ ಕೃತ್ಯಗಳಿಗೆ ಕಡಿವಾಣ ಹಾಕುವುದಕ್ಕೆ ಬಿಗಿಯಾದ ಕಾನೂನು ರೂಪಿಸುವುದಷ್ಟೇ ಉಳಿದಿರುವ ದಾರಿ.
ಮರ್ಯಾದೆಗೇಡು ಹತ್ಯೆಗಳನ್ನು ಸಮಾಜವಾಗಲಿ, ಕಾನೂನು ನಿರೂಪಕರಾಗಲಿ, ನಮ್ಮ ನ್ಯಾಯಾಂಗವಾಗಲಿ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಎಳೆ ಜೀವಗಳ ಹತ್ಯೆ ಇಷ್ಟು ಕೇವಲವಾಗಿ ಒಂದು ದಿನದ ಸುದ್ದಿಯಾಗಿ ಕಳೆದು ಹೋಗುವುದಕ್ಕೆ ಬಿಡಬಾರದು. ಹಾಗೆ ಬಿಟ್ಟರೆ ಅದು ನಾಗರಿಕ ಸಮಾಜಕ್ಕೆ ಕಪ್ಪುಚುಕ್ಕೆ.
