ದೇಶದ ಸಂವಿಧಾನ ಪ್ರತಿಪಕ್ಷಕ್ಕೆ ಎತ್ತರದ ಸ್ಥಾನಮಾನ ಕಲ್ಪಿಸಿದೆ. ಪ್ರತಿಪಕ್ಷಗಳಿಲ್ಲದ ಜನತಂತ್ರ ಅಪೂರ್ಣ ಎಂದಿದೆ. ಆದರೆ, ಮೋದಿ-ಶಾ ನೇತೃತ್ವದ ಬಿಜೆಪಿಯು ಕೇವಲ ಕಾಂಗ್ರೆಸ್ ಮುಕ್ತ ಭಾರತವನ್ನಲ್ಲ, ಪ್ರತಿಪಕ್ಷಮುಕ್ತ ಭಾರತವನ್ನು ಬಯಸುತ್ತಿದೆ ಎಂಬುದು ನಿಚ್ಚಳ…
ಇತ್ತೀಚೆಗೆ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯೇ ಅಕ್ರಮ ಎಸಗಿ ಬಿಜೆಪಿ ಅಭ್ಯರ್ಥಿಯನ್ನು ಅಕ್ರಮವಾಗಿ ಗೆಲ್ಲಿಸಿದ್ದ ಮೋಸ ಸುಪ್ರೀಮ್ ಕೋರ್ಟನ್ನೂ ದಂಗು ಬಡಿಸಿತ್ತು. ಸಿಸಿ ಟೀವಿಯಲ್ಲಿ ಈ ವಂಚನೆ ದಾಖಲಾಗಿದ್ದ ಕಾರಣದಿಂದ ಜಗಜ್ಜಾಹೀರಾಯಿತು. ಸುಪ್ರೀಮ್ ಕೋರ್ಟು ನ್ಯಾಯ ಒದಗಿಸಿತು. ಇಲ್ಲವಾಗಿದ್ದರೆ ಬಿಜೆಪಿ ಅಭ್ಯರ್ಥಿಯೇ ಮೇಯರ್ ಆಗಿ ಅಧಿಕಾರ ಹಿಡಿಯುತ್ತಿದ್ದ. ಈ ಪ್ರಕರಣ ಹಸಿರಾಗಿದ್ದಾಗಲೇ ಗುಜರಾತಿನ ಸೂರತ್‌ನಿಂದ ಮತ್ತೊಂದು ವಿದ್ಯಮಾನ ವರದಿಯಾಗಿದೆ.
ಗುಜರಾತಿನ ಸೂರತ್ ಲೋಕಸಭಾ ಕ್ಷೇತ್ರದ ಸುಮಾರು 17 ಲಕ್ಷ ಮತದಾರರು ಮತಗಟ್ಟೆಗೇ ಹೋಗಲಿಲ್ಲ, ಮತಗಳನ್ನೇ ಚಲಾಯಿಸಲಿಲ್ಲ. ಆದರೂ, ಬಿಜೆಪಿ ಉಮೇದುವಾರ ಮುಖೇಶ್ ದಲಾಲ್ ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿ ಹೋಗಿದ್ದಾರೆ. ಸೂರತ್ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಸೌರಭ್ ಪರ್ಧಿಯವರು ದಲಾಲ್ ಅವಿರೋಧ ಆಯ್ಕೆಯನ್ನು ಇದೇ ಏಪ್ರಿಲ್ 22ರಂದು ಘೋಷಿಸಿದ್ದಾರೆ. ಈ ಹಿಂದೆ ಇಂತಹ ಪ್ರಕರಣಗಳು ನಡೆದಿವೆ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ವಿರಳಾತಿವಿರಳ ಬೆಳವಣಿಗೆಯಿದು. ಹಲವು ಕಾರಣಗಳಿಗಾಗಿ ಕಳವಳಕಾರಿ.
ಮತದಾನ ನಡೆದಿದ್ದ ಪಕ್ಷದಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲ್ಲುವ ಪರಿಸ್ಥಿತಿ ಇದ್ದಿರಬಹುದು. ಅಂತಹ ಅಖಂಡ ಬೆಂಬಲವನ್ನು ಬಿಜೆಪಿ ಹೊಂದಿರಲೂಬಹುದು. ಆದರೆ, ಜನತಂತ್ರ ಪ್ರಕ್ರಿಯೆಯ ಕತ್ತು ಹಿಸುಕಿರುವ ಕುಕೃತ್ಯವಿದು. ಸೂರತ್ ಮತದಾರರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಆರೋಗ್ಯಕರ ಸಮಬಲ ಸ್ಪರ್ಧೆ ಜನತಂತ್ರದ ಜೀವಾಳ. ಅದನ್ನೇ ಇಲ್ಲವಾಗಿಸುವ ಈ ಪ್ರವೃತ್ತಿ ಮುಂದುವರೆದರೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ಎಳ್ಳು ನೀರು ಬಿಡಬೇಕಾದೀತು.
ಸೂರತ್‌ನ ಕಾಂಗ್ರೆಸ್ ಹುರಿಯಾಳು ನೀಲೇಶ್ ಕುಂಭಾನಿ ಅವರ ನಾಮಪತ್ರವನ್ನು ಕೂಡ ತಿರಸ್ಕರಿಸಲಾಗಿತ್ತು. ಕುಂಭಾನಿ ನಾಮಪತ್ರವನ್ನು ಅನುಮೋದಿಸಿದ್ದವರ ಸಹಿಗಳನ್ನು ಫೋರ್ಜರಿ ಮಾಡಲಾಗಿದೆ. ಕುಂಭಾನಿ ನಾಮಪತ್ರ ತಿರಸ್ಕೃತವಾದ ಪಕ್ಷದಲ್ಲಿ ಅವರಿಗೆ ಬದಲಿಯಾಗಿ ಇರಲೆಂದು ಹೂಡಲಾಗಿದ್ದ ಎರಡನೆಯ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಪಡ್ಸಾಲಾ ಅವರ ನಾಮಪತ್ರವನ್ನೂ ತಿರಸ್ಕರಿಸಿ ಕಣದಿಂದ ಹೊರಹಾಕಲಾಗಿದೆ. ಈತನ ನಾಮಪತ್ರದ ಅನುಮೋದಕರಲ್ಲೊಬ್ಬ ತನ್ನ ಸಹಿಯನ್ನೂ ಫೋರ್ಜರಿ ಮಾಡಲಾಗಿದೆಯೆಂದು ದೂರುತ್ತಾನೆ. ಕಣದಲ್ಲಿ ಉಳಿದಿದ್ದ ಬಿಎಸ್‌ಪಿ ಹುರಿಯಾಳು ಮತ್ತು ಎಂಟು ಮಂದಿ ಪಕ್ಷೇತರ ಉಮೇದುವಾರರು ತಮ್ಮ ನಾಮಪತ್ರಗಳನ್ನು ವಾಪಸು ಪಡೆದ ಸೋಜಿಗವೂ ಘಟಿಸುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಕುಂಭಾನಿ ಸ್ವಾಭಾವಿಕವಾಗಿ ಪ್ರತಿಭಟಿಸಬೇಕಿತ್ತು. ಆದರೆ, ಆತ ಸಿನಿಮೀಯವಾಗಿ ಕಾಣೆಯಾಗುವುದು ಮತ್ತಷ್ಟು ವಿಚಿತ್ರ ವಿದ್ಯಮಾನ. ಕಾಣೆಯಾಗಿದ್ದ ಕುಂಭಾನಿ ಮರುದಿನ ಸೂರತ್‌ನ ಕ್ರೈಮ್ ಬ್ರ್ಯಾಂಚ್ ಪೊಲೀಸರ ಮುಂದೆ ಹಾಜರಾಗುತ್ತಾನೆ. ತನ್ನನ್ನು ಯಾರೂ ಅಪಹರಿಸಿರಲಿಲ್ಲ ಎಂಬ ಹೇಳಿಕೆ ನೀಡುತ್ತಾನೆ.
ಕುಂಭಾನಿಯ ಅನುಮೋದಕರು ಆತನ ಹತ್ತಿರದ ಸಂಬಂಧಿಕರು ಮತ್ತು ವ್ಯಾಪಾರ ವ್ಯವಹಾರದ ಪಾಲುದಾರರೂ ಆಗಿದ್ದಾರೆಂಬುದು ಗಮನಾರ್ಹ. ಈ ಇಬ್ಬರೂ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರಗಳ ಮೇಲಿನ ಸಹಿಗಳು ತಮ್ಮವಲ್ಲ ಎಂದು ಅನುಮೋದಕರು ಪ್ರಮಾಣಪತ್ರ ಸಲ್ಲಿಸುತ್ತಾರೆ. ಈ ಪ್ರಮಾಣಪತ್ರಗಳನ್ನು ಪ್ರಮಾಣೀಕರಿಸಿದಾತ (Attestor) ಸೂರತ್ ನಗರ ಬಿಜೆಪಿಯ ಕಾನೂನು ಕೋಶದ ಸದಸ್ಯ! ಆತನ ಹೆಸರು ಕಿರಣ್ ಘೋಘಾಡಿ.
ಈ ನಡುವೆ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರ ನಾಮಪತ್ರಗಳ ಅನುಮೋದಕರ ಸಹಿಗಳನ್ನು ಫೋರ್ಜರಿ ಮಾಡಲಾಗಿದೆ ಎಂದು ಬಿಜೆಪಿ ತಕರಾರು ತೆಗೆಯುತ್ತದೆ. ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಸೌರಭ್ ಪರ್ಧಿ ಈ ತಕರಾರನ್ನು ಎತ್ತಿ ಹಿಡಿಯುತ್ತಾರೆ.
ನಾಮಪತ್ರ ವಾಪಸು ಪಡೆದ ಎಂಟು ಮಂದಿ ಪಕ್ಷೇತರ ಅಭ್ಯರ್ಥಿಗಳ ಪೈಕಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪಾರ್ಟಿಯ ಹುರಿಯಾಳು ಅಬ್ದುಲ್ ಹಮೀದ್ ಖಾನ್ ಕೂಡ ಒಬ್ಬರು. ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್ ಪಾಟೀಲ್ ಸೂಚನೆಯ ಮೇರೆಗೆ ತಾವು ನಾಮಪತ್ರ ಸಲ್ಲಿಸಿದ್ದಾಗಿಯೂ, ಅವರದೇ ಸೂಚನೆಯ ಮೇರೆಗೆ ನಾಮಪತ್ರ ವಾಪಸು ಪಡೆದದ್ದಾಗಿಯೂ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಪೂರ್ವನಿಯೋಜಿತ ಸಂಚೊಂದರತ್ತ ಬೆರಳು ಮಾಡುತ್ತಿಲ್ಲವೇ? ಆರೂ ಮಂದಿ ಪಕ್ಷೇತರರು ಒಮ್ಮೆಗೇ ಯಾಕೆ ಕಣ ಖಾಲಿ ಮಾಡಬೇಕು? ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಗೆ ನೆರವಾಗಲೆಂದು ಅಲ್ಲವೇ?
2016ರಲ್ಲಿಯೂ ಇಂತಹುದೇ ಘಟನೆ ಜರುಗಿರುತ್ತದೆ. ಝೀ ಮಾಧ್ಯಮ ಸಮೂಹಗಳ ಮಾಲೀಕ ಸುಭಾಷ್ ಚಂದ್ರ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಹರಿಯಾಣ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆ ಕಣಕ್ಕೆ ಇಳಿದಿರುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ವಿಧಾನಸಭಾ ಸದಸ್ಯರ ಮತಗಳನ್ನು ತಿರಸ್ಕರಿಸಿ, ಸುಭಾಷ್ ಚಂದ್ರ ಅವರನ್ನು ವಿಜೇತನೆಂದು ಘೋಷಿಸಲಾಗುತ್ತದೆ. ಕಾಂಗ್ರೆಸ್ ಶಾಸಕರು ಮತಪತ್ರಗಳಲ್ಲಿ ಭಿನ್ನ ಬಗೆಯ ಶಾಯಿ (ಇಂಕ್) ಬಳಸಿರುವ ಕಾರಣಕ್ಕಾಗಿ ಅವರ ಮತಗಳನ್ನು ತಿರಸ್ಕರಿಸಲಾಗಿದೆ ಎಂಬ ಸಮಜಾಯಿಷಿ ಒದಗಿಸಲಾಗುತ್ತದೆ! ಕಾಂಗ್ರೆಸ್ಸು ನ್ಯಾಯಾಲಯದ ಕಟ್ಟೆ ಹತ್ತಿದರೂ ಪ್ರಯೋಜನವಾಗುವುದಿಲ್ಲ.
ಲೋಕಸಭಾ ಚುನಾವಣೆಯ ಜೊತೆ ಜೊತೆಗೆ ಅರುಣಾಚಲ ಪ್ರದೇಶದ ವಿಧಾನಸಭೆಗೂ ಚುನಾವಣೆ ಜರುಗಿದೆ. ಈ ಚುನಾವಣೆಯ ಹತ್ತು ಮಂದಿ ಬಿಜೆಪಿ ಹುರಿಯಾಳುಗಳು ಕೂಡ ಅವಿರೋಧವಾಗಿ ಆಯ್ಕೆ ಆಗಿದ್ದಾರೆಂದು ಘೋಷಿಸಲಾಗಿದೆ.
ಅತ್ತ ಮಧ್ಯಪ್ರದೇಶದ ಖಜುರಾಹೋ ಕೂಡ ಸೂರತ್ ದಾರಿ ಹಿಡಿದಿದೆ. ಸಮಾಜವಾದಿ ಪಾರ್ಟಿಯ ಮೀರಾ ಯಾದವ್ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರವನ್ನು ಅತ್ಯಂತ ಕ್ಷುಲ್ಲಕ ಕಾರಣ ಒಡ್ಡಿ ತಿರಸ್ಕರಿಸಲಾಗಿದೆ ಎಂಬುದು ಪ್ರತಿಪಕ್ಷಗಳ ಆರೋಪ. ಹೀಗಾಗಿ, ಬಿಜೆಪಿಯ ವಿ.ಡಿ ಶರ್ಮ ಪಾಲಿಗೆ ಕಣ ಖಾಲಿಯಾದಂತೆಯೇ ಲೆಕ್ಕ. ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್‌ನ ಅಭ್ಯರ್ಥಿಯನ್ನು ಕಾಂಗ್ರೆಸ್ ಬೆಂಬಲಿಸಿದೆ. ಆದರೂ ಈ ಪಕ್ಷದ ಹುರಿಯಾಳು ಆರ್.ಬಿ ಪ್ರಜಾಪತಿ ಸ್ಪರ್ಧೆ ಒಡ್ಡುವ ಸ್ಥಿತಿಯಲ್ಲಿ ಇಲ್ಲ. ಈ ಕ್ಷೇತ್ರದ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳೂ ಬಿಜೆಪಿಯ ಬುಟ್ಟಿಯಲ್ಲಿವೆ.
ಸೂರತ್ ಎಂಬ ಹಿಂದೀಮೂಲ ಪದದ ಅರ್ಥ ಮುಖ. ಭಾರತದ ಜನತಂತ್ರದ ಮುಖ ಅಥವಾ ಚಹರೆ ಗುಜರಾತಿನ ‘ಸೂರತ್’ ಆಗಿ ಹೋಗುವುದು ಅದೆಂತಹ ದುರಂತ!
ದೇಶದ ಸಂವಿಧಾನ ಪ್ರತಿಪಕ್ಷಕ್ಕೆ ಎತ್ತರದ ಸ್ಥಾನಮಾನ ಕಲ್ಪಿಸಿದೆ. ಪ್ರತಿಪಕ್ಷಗಳಿಲ್ಲದ ಜನತಂತ್ರ ಅಪೂರ್ಣ ಎಂದಿದೆ. ಮೋದಿ-ಶಾ ಅವರ ನೇತೃತ್ವದ ಬಿಜೆಪಿಯು ಕೇವಲ ಕಾಂಗ್ರೆಸ್ ಮುಕ್ತ ಭಾರತವನ್ನಲ್ಲ, ಪ್ರತಿಪಕ್ಷಮುಕ್ತ ಭಾರತವನ್ನು ಬಯಸುತ್ತಿದೆ ಎಂಬುದು ನಿಚ್ಚಳ.
ಚುನಾವಣಾ ಆಯೋಗ ಗಮನಿಸಬೇಕು. ಇಂತಹ ವಿಕೃತಿ ವಿರೂಪಗಳನ್ನು ತಡೆಯಬೇಕು.