ಪ್ರಧಾನಿ ಮೋದಿಯವರ ಸರ್ಕಾರ ಉಳ್ಳವರ, ಬಲಿಷ್ಠರ, ಮೇಲ್ಜಾತಿಗಳ ಪರವಿರುವ ಸರ್ಕಾರ ಎನ್ನುವುದು ನೀಟ್ ಅಕ್ರಮದಿಂದ ಸಾಬೀತಾಗಿದೆ. ಬಡ, ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಬದುಕಬೇಕೆಂದರೆ, ನೀಟ್ ರದ್ದುಗೊಳಿಸುವುದೊಂದೇ ದಾರಿ. ಆ ಮೂಲಕವಷ್ಟೇ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕಾಗಿದೆ.
‘ನೀಟ್ ಯುಜಿಯಲ್ಲಿ ಅಕ್ರಮಗಳು ನಡೆದಿರುವುದು ಕಂಡುಬಂದಿದೆ. ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇದೇ ವ್ಯಕ್ತಿ ನಾಲ್ಕು ದಿನಗಳ ಹಿಂದೆ, ‘ನೀಟ್ ಯುಜಿಯಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಎನ್‌ಟಿಎ ಮೇಲೆ ಮಾಡಲಾಗಿರುವ ಭ್ರಷ್ಟಾಚಾರ ಆರೋಪಗಳು ಪತ್ತೆಯಾಗಿಲ್ಲ, ಪುರಾವೆಯೂ ಇಲ್ಲ. ಇದೊಂದು ಅತ್ಯಂತ ವಿಶ್ವಾಸಾರ್ಹ ಸಂಸ್ಥೆ’ ಎಂದು ಸಮರ್ಥಿಸಿಕೊಂಡಿದ್ದರು.
ಮೊದಲು ಇಲ್ಲ ಎಂದು ಭಂಡತನ ಮೆರೆದ ಶಿಕ್ಷಣ ಸಚಿವರು, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಮೇಲೆ; ಅಕ್ರಮಗಳ ಕುರಿತು ದೇಶದಾದ್ಯಂತ ವಿರೋಧ, ಪ್ರತಿಭಟನೆಗಳು ವ್ಯಕ್ತವಾದ ನಂತರ ತಪ್ಪೊಪ್ಪಿಕೊಂಡಿದ್ದಾರೆ.
2016ರಲ್ಲಿ, ಎಂಬಿಬಿಎಸ್ ಮತ್ತು ಬಿಡಿಎಸ್‌ಗೆ ಪ್ರವೇಶ ಪಡೆಯಲು ರಾಷ್ಟ್ರಮಟ್ಟದ ಏಕರೂಪ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸಬೇಕು ಎಂದು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿತು. ಆಗ ಸಮಾನ ಮತ್ತು ಏಕರೂಪ ಎಂಬ ನೀತಿಗಳು ಎಲ್ಲರಿಗೂ ಸಾಧುವಲ್ಲ, ಹೇರಿಕೆ ಸರಿಯಲ್ಲ ಎಂದು ಒಕ್ಕೂಟ ವ್ಯವಸ್ಥೆಯ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಏಕೆಂದರೆ, ನೀಟ್ ಎನ್ನುವುದು ಅಗಾಧ ಪ್ರಮಾಣದ ಹಣವನ್ನು ಒಳಗೊಂಡಿರುವ ಅತಿ ದೊಡ್ಡ ಪ್ರವೇಶ ಪರೀಕ್ಷೆಯಾಗಿದೆ. ಇದು ಕೋಚಿಂಗ್, ಅಡ್ಮಿಷನ್ ಕೌನ್ಸೆಲಿಂಗ್ ಮತ್ತು ಪ್ರವೇಶ ಶುಲ್ಕಕ್ಕಾಗಿ ವೈದ್ಯಕೀಯ ಸೀಟ್ ಹುಡುಕುವುದನ್ನು ಒಳಗೊಂಡಿರುತ್ತದೆ. ಹಾಗಾಗಿ ಅದನ್ನು ವಿರೋಧಿಸಲಾಗಿತ್ತು.
ನೀಟ್ ವಿರೋಧಕ್ಕೆ ಕಾರಣವಿತ್ತು. ಕರ್ನಾಟಕದಲ್ಲಿ ನಡೆಯುತ್ತಿದ್ದ ಸಿಇಟಿ ಮತ್ತು ಕಾಮೆಡ್- ಕೆ ಪರೀಕ್ಷೆಯಲ್ಲಿ ಗ್ರಾಮಾಂತರ, ಕನ್ನಡ ಮಾಧ್ಯಮ ಇತ್ಯಾದಿ ಕೋಟಾಗಳಡಿ ಸೀಟು ಗಿಟ್ಟಿಸುವ ಅವಕಾಶವಿತ್ತು. ಸಾಮಾಜಿಕ ನ್ಯಾಯ ವ್ಯವಸ್ಥೆಯಲ್ಲಿ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವೈದ್ಯರಾಗುವ ಮಹದಾಸೆಯನ್ನು ಈಡೇರಿಸುತ್ತಿತ್ತು. ಕೇಂದ್ರದ ಸುಪರ್ದಿಗೆ ಹೋದನಂತರ, ಇಂತಹ ಒಳಮೀಸಲು ದಾರಿಗಳು ಮುಚ್ಚಿ ಹೋಗಿ, ಬಡವರಿಗೆ ಮತ್ತು ಹಿಂದುಳಿದವರಿಗೆ ಉನ್ನತ ಶಿಕ್ಷಣ ಗಗನಕುಸುಮವಾಗಿ ಉಳಿಯಿತು.
ಆ ವಾದಕ್ಕೆ ಪುಷ್ಟಿ ನೀಡುವಂತೆ, 2016ರಿಂದ ಇಲ್ಲಿಯವರೆಗೆ ನೀಟ್ ಪರೀಕ್ಷೆ, ಫಲಿತಾಂಶ, ಮಾನದಂಡ ಕುರಿತ ವಿವಾದಗಳು, ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಅಕ್ರಮಗಳು ಜರುಗಿ ಬಡ ವಿದ್ಯಾರ್ಥಿಗಳು ಅನ್ಯಾಯಕ್ಕೊಳಗಾಗುತ್ತಲೇ ಇದ್ದರು.
ಈ ವರ್ಷ, ಮೇ 5 ರಂದು ನಡೆದ ನೀಟ್ ಪರೀಕ್ಷೆಯಲ್ಲಿ ದೇಶಾದ್ಯಂತ 571 ಕೇಂದ್ರಗಳಲ್ಲಿ 24 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎನ್‌ಟಿಎ ಇತಿಹಾಸದಲ್ಲಿಯೆ ಮೊದಲ ಬಾರಿಗೆ 67ಕ್ಕೂ ಹೆಚ್ಚು ವಿದ್ಯಾರ್ಥಿಗಳು 720 ಕ್ಕೆ 720 ಅಂಕ ಪಡೆದುಕೊಂಡಿದ್ದರು. ಈ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹರಿಯಾಣದ ಫರಿದಾಬಾದ್ ಪರೀಕ್ಷಾ ಕೇಂದ್ರದಲ್ಲಿ ಬರೆದ ವಿದ್ಯಾರ್ಥಿಗಳಾಗಿದ್ದರು.
ಈ ಪರೀಕ್ಷೆಗೆ ಸಂಬಂಧಿಸಿದಂತೆ ಈಗ ಹಲವು ಪ್ರಶ್ನೆಗಳು ಎದ್ದಿವೆ. ಪರೀಕ್ಷೆಯ ಬಗೆ ಹಾಗೂ ಫಲಿತಾಂಶವನ್ನು ಘೋಷಿಸಿದ ರೀತಿಯ ಕುರಿತು ಟೀಕೆಗಳು ವ್ಯಕ್ತವಾಗಿವೆ. ತರಾತುರಿಯಲ್ಲಿ ಕೃಪಾಂಕ ನೀಡಿರುವುದು ಮತ್ತು ಲೋಕಸಭಾ ಚುನಾವಣೆ ಫಲಿತಾಂಶದ ದಿನವೇ ನೀಟ್ ಫಲಿತಾಂಶ ಪ್ರಕಟಿಸಿರುವುದು ಅನುಮಾನ ಹುಟ್ಟಿಸಿದೆ.
ಈ ಕುರಿತು ‘ಕೃಪಾಂಕ ಎಂದರೆ ಒಂದು ಅಥವಾ ಎರಡು ಅಂಕಗಳನ್ನು ನೀಡಿರುವುದನ್ನು ಕೇಳಿದ್ದೇವೆ. ಆದರೆ 70ರಿಂದ 80 ಅಂಕಗಳನ್ನು ನೀಡಿದ್ದನ್ನು ಕೇಳಿದ್ದು ಇದೇ ಮೊದಲು. ರಾಷ್ಟ್ರೀಯ ಪರೀಕ್ಷಾ ಸಮಿತಿಯು ಇಂಥದ್ದೊಂದು ಕೃತ್ಯ ಎಸಗಿ ಇಡೀ ದೇಶಕ್ಕೇ ಅನ್ಯಾಯವೆಸಗಿದೆ. ಬಿಜೆಪಿ ಸರ್ಕಾರವು ಕೋಚಿಂಗ್ ಕೇಂದ್ರಗಳ ಬೆನ್ನಿಗೆ ನಿಂತು, ಕೋಟಿಗಟ್ಟಲೆ ಲೂಟಿ ಮಾಡಲು ಬಿಟ್ಟಿದೆ. ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಪೊರೇಟ್ ಸಂಸ್ಕೃತಿಯನ್ನು ಹುಟ್ಟುಹಾಕಿದೆ’ ಎಂದು ತಮಿಳುನಾಡಿನ ಡಿಎಂಕೆ ಸರ್ಕಾರ ಆರೋಪಿಸಿದೆ. ಇದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವೂ ದನಿಗೂಡಿಸಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು
ಕೆಲವು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮ ಆರೋಪಗಳ ಕುರಿತು ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಆಗಿದೆ ಎಂದ ಕೋರ್ಟ್, ಎನ್‌ಟಿಎ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಪರೀಕ್ಷೆಯಲ್ಲಿ ಪರೀಕ್ಷಾ ಸಮಯ ನಷ್ಟವಾದ 1,563 ಅಭ್ಯರ್ಥಿಗಳಿಗೆ ನೀಡಲಾಗಿದ್ದ ಕೃಪಾಂಕವನ್ನು ಹಿಂಪಡೆಯುವುದಾಗಿ ಮತ್ತು ಆ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಏತನ್ಮಧ್ಯೆ, ಪರೀಕ್ಷೆಗೂ ಮುನ್ನ ಸೋರಿಕೆಯಾದ ಪ್ರಶ್ನೆಪತ್ರಿಕೆಗಳಿಗೆ ಪ್ರತಿ ಅಭ್ಯರ್ಥಿಯಿಂದ 30 ಲಕ್ಷ ಪಡೆಯಲಾಗಿದ್ದ ಆರು ಪೋಸ್ಟ್ ಡೇಟೆಡ್ ಚೆಕ್‌ಗಳನ್ನು ಜಪ್ತಿ ಮಾಡಿರುವ ಬಿಹಾರದ ಆರ್ಥಿಕ ಅಪರಾಧ ವಿಭಾಗದ ಪೊಲೀಸರು, ಇದುವರೆಗೆ ನಾಲ್ವರು ಪರೀಕ್ಷಾರ್ಥಿಗಳು ಸೇರಿದಂತೆ 13 ಜನರನ್ನು ಬಂಧಿಸಿದ್ದಾರೆ. ಕುತೂಹಲಕರ ಸಂಗತಿ ಎಂದರೆ, ಇವರೆಲ್ಲರೂ ಉತ್ತರ ಭಾರತಕ್ಕೆ- ಬಿಹಾರಕ್ಕೆ ಸೇರಿದವರು.
ಒಂದೊಮ್ಮೆ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರದಿದ್ದರೆ, ಈ ಅಕ್ರಮ ಹೊರಬರುತ್ತಿರಲಿಲ್ಲ. ನೀಟ್ ಪರೀಕ್ಷೆ ಆರಂಭವಾದ ದಿನದಿಂದಲೂ ಬಹಳಷ್ಟು ಅಕ್ರಮಗಳು, ದೂರುಗಳು ಕೇಳಿಬರುತ್ತಲೇ ಇವೆ. ಲಕ್ಷಾಂತರ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಕಮರಿಹೋಗಿದೆ. ಎಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆಗೂ ಒಳಗಾಗಿದ್ದಾರೆ. ಆದರೆ ಬಿಜೆಪಿ ಸರ್ಕಾರ ಒಂದರಲ್ಲೂ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಈಗ ಎನ್‌ಡಿಎ ಮೈತ್ರಿ ಸರ್ಕಾರವಿರುವುದರಿಂದ, ತೋರಿಕೆಗಾಗಿ ತಪ್ಪೊಪ್ಪಿಕೊಂಡಿದೆ. ಅಕಸ್ಮಾತ್ ಇದು ಬಹುಮತದ ಬಿಜೆಪಿ ಸರ್ಕಾರವೇ ಆಗಿದ್ದರೆ, 2016ರಿಂದ ಮಾಡಿಕೊಂಡು ಬಂದಂತೆ, ಈ ಬಾರಿಯೂ ತಳ್ಳಿಹಾಕುತ್ತಿದ್ದರು. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ, ಅಕ್ರಮ ನಡೆಯಲು ಸಾಧ್ಯವೇ ಇಲ್ಲ ಎಂದು ಈಗಲೂ ಸಮರ್ಥನೆಗಿಳಿಯುತ್ತಿದ್ದರು.
ಇಷ್ಟೆಲ್ಲ ರಾದ್ಧಾಂತವಾದರೂ ಬಾಯ್ಬಿಡದ ಪ್ರಧಾನಿ ಮೋದಿ, ಉಳ್ಳವರ, ಬಲಿಷ್ಠರ, ಮೇಲ್ಜಾತಿಗಳ ಪರವಿರುವ ಸರ್ಕಾರ ಎನ್ನುವುದು ನೀಟ್ ಅಕ್ರಮದಿಂದ ಸಾಬೀತಾಗಿದೆ. ಬಡ, ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಬದುಕಬೇಕೆಂದರೆ, ನೀಟ್ ರದ್ದುಗೊಳಿಸುವುದೊಂದೇ ದಾರಿ. ಆ ಮೂಲಕವಷ್ಟೇ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕಾಗಿದೆ.
