ಸದನದ ಅತ್ಯಮೂಲ್ಯ ಸಮಯವನ್ನು ಆಳುವ ಪಕ್ಷ, ವಿಪಕ್ಷ ಎರಡೂ ವ್ಯತ್ಯಾಸವಿಲ್ಲದಂತೆ ಹಾಳು ಮಾಡಿವೆ. ಜನರ ಬೆವರಿನ ತೆರಿಗೆಯ ಹಣವನ್ನು ವ್ಯರ್ಥವಾಗಿ ಪೋಲು ಮಾಡಿವೆ.
ಆಗಸ್ಟ್ 11ರಿಂದ ಆರಂಭವಾದ ರಾಜ್ಯ ಮುಂಗಾರು ಅಧಿವೇಶನ ನಾಳೆ, ಅಂದರೆ ಆ. 22ಕ್ಕೆ ಮುಕ್ತಾಯಗೊಳ್ಳಲಿದೆ. 9 ದಿನಗಳ ಕಾಲ ನಡೆದ ಈ ಅಧಿವೇಶನದಲ್ಲಾದರೂ ರಾಜ್ಯದ ಜನತೆಯ ಸಮಸ್ಯೆಗಳು ಸ್ವಲ್ಪಮಟ್ಟಿಗಾದರೂ ಚರ್ಚೆಯಾದವೇ?
ಈ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ. ಹಾಗೆ ಉಳಿಯಲು ಕಾರಣ- ಸದನದ ಅತ್ಯಮೂಲ್ಯ ಸಮಯವನ್ನು ಆಳುವ ಪಕ್ಷ, ವಿಪಕ್ಷ ಎರಡೂ ವ್ಯತ್ಯಾಸವಿಲ್ಲದಂತೆ ಹಾಳು ಮಾಡಿವೆ. ಜನರ ಬೆವರಿನ ತೆರಿಗೆಯ ಹಣವನ್ನು ವ್ಯರ್ಥವಾಗಿ ಪೋಲು ಮಾಡಿವೆ. ಆಡಳಿತ ಪಕ್ಷದ ಭಾಷೆ, ವಿರೋಧ ಪಕ್ಷಗಳ ಭಾಷೆ ಒಂದೇ ಆಗಿದೆ. ಆ ಭಾಷೆ, ಸದನದ ಭಾಷೆಯಾಗಿರದೆ ಅಸಹ್ಯ ಹುಟ್ಟಿಸಿದೆ. ಹೊಂದಾಣಿಕೆ ರಾಜಕಾರಣ ಮೇಳೈಸಿದೆ. ಆರಿಸಿ ಕಳಿಸಿದ ಜನತೆಯನ್ನು ಅವಮಾನಿಸುವಂತಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಕಳಂಕ ತಂದಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಅಧಿಕಾರದಲ್ಲಿರುವ ಪಕ್ಷ ಅಥವಾ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ವಿರೋಧ ಪಕ್ಷದ್ದೇ ಪ್ರಮುಖ ಪಾತ್ರ. ಪ್ರಜಾಪ್ರಭುತ್ವದ ಯಶಸ್ಸು ವಿರೋಧ ಪಕ್ಷಗಳ ರಚನಾತ್ಮಕ ಪಾತ್ರವನ್ನು ಅವಲಂಬಿಸಿದೆ. ಕಾವಲುಗಾರನಾಗಿ ಕಾರ್ಯನಿರ್ವಹಿಸುವುದು, ಸರ್ಕಾರದ ಕೆಲಸ-ಕಾರ್ಯಗಳನ್ನು ವಿಮರ್ಶಿಸುವುದು ಮತ್ತು ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ಎತ್ತಿ ತೋರಿಸುವುದು ವಿರೋಧ ಪಕ್ಷದ ಪ್ರಮುಖ ಕರ್ತವ್ಯವಾಗಿದೆ.
ಇದನ್ನು ಓದಿದ್ದೀರಾ?: ತಬ್ಬಲಿ ಅಲೆಮಾರಿಗಳನ್ನು ‘ಶವಪೆಟ್ಟಿಗೆ’ಗೆ ಹಾಕಿದ ಕಾಂಗ್ರೆಸ್ ಸರ್ಕಾರ
ಆದರೆ, ರಾಷ್ಟ್ರೀಯ ಪಕ್ಷವೆನಿಸಿಕೊಂಡ ಬಿಜೆಪಿ, ವಿಪಕ್ಷ ಸ್ಥಾನವನ್ನು ನಗೆಪಾಟಲಿಗೀಡು ಮಾಡಿದೆ. ಪಕ್ಷ ಮಾಡಿದೆಯೋ ಅಥವಾ ಆ ಸ್ಥಾನದಲ್ಲಿ ಕೂತ ನಾಯಕನ ವರ್ತನೆಯಿಂದ ಹಾಗಾಗಿದೆಯೋ- ಒಟ್ಟಿನಲ್ಲಿ ಇಂಥವರನ್ನು ನಮ್ಮನ್ನಾಳುವ ನಾಯಕರೆಂದು ಭ್ರಮಿಸುವುದು, ಆರಿಸಿ ಕಳುಹಿಸುವುದು, ಅಂತಹ ಸಂದಿಗ್ಧಕ್ಕೆ ರಾಜ್ಯದ ಜನತೆ ಸಿಲುಕಿರುವುದು ಮಾತ್ರ ದುರಂತ.
ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಹತ್ತಾರು ಪ್ರಕರಣಗಳಿದ್ದವು, ರಾಜ್ಯದ ನೂರಾರು ಸಮಸ್ಯೆಗಳಿದ್ದವು. ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ, ಜಲಾಶಯಗಳು ಭರ್ತಿಯಾಗಿವೆ. ಸಾವು-ನೋವು ಸಂಭವಿಸಿದೆ. ಜನರ ಜೀವನ ಅಸ್ತವ್ಯಸ್ತವಾಗಿದೆ. ಸಾವಿರಾರು ಎಕರೆ ಬೆಳೆ ನಾಶದಿಂದ ರೈತರು ಕಂಗಾಲಾಗಿ ಕೂತಿದ್ದಾರೆ. ನಗರದ ಜೀವನ ನರಕವಾಗಿದೆ.
ಕುತೂಹಲಕರ ಸಂಗತಿ ಎಂದರೆ, ಈ ಎಲ್ಲ ಸಮಸ್ಯೆಗಳ ಬಗ್ಗೆಯೂ ವಿಪಕ್ಷ ಸದನದಲ್ಲಿ ಪ್ರಶ್ನೆ ಎತ್ತಿದೆ. ಆದರೆ ಆ ಪ್ರಶ್ನೆಗಳಾವುವೂ ಒಡಲಾಳದ ಪ್ರಶ್ನೆಗಳಲ್ಲ. ವಿಪಕ್ಷದಲ್ಲಿ ನಿಂತು ಆಳುವ ಪಕ್ಷಕ್ಕೆ ಕೇಳಿದ ಪ್ರಶ್ನೆಗಳಲ್ಲ. ಸಂಸದೀಯ ನಡವಳಿಕೆಗೆ ಘನತೆ-ಗೌರವ ತರುವ ಪ್ರಶ್ನೆಗಳಲ್ಲ. ಕಾಟಾಚಾರದ ಪ್ರಶ್ನೆಗಳು. ಪ್ರಚಾರಕ್ಕಾಗಿ ಕೇಳಿದ ಪ್ರಶ್ನೆಗಳು. ಆ ಪ್ರಶ್ನೆಗಳಿಗೆ ತಕ್ಕಂತಯೇ ಆಳುವ ಪಕ್ಷದ ಹೊಂದಾಣಿಕೆಯ ಉತ್ತರಗಳು.
ಈ ಕ್ಷಣದಲ್ಲಿ ನೆನಪಾಗುತ್ತಿರುವುದು ಹಿರಿಯ ರಾಜಕಾರಣಿ ವಾಟಾಳ್ ನಾಗರಾಜರ ಮಾತುಗಳು. 1967ರಲ್ಲಿ ನಾನು ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿದ್ದೆ. ಆಗ ಎಸ್.ನಿಜಲಿಂಗಪ್ಪನವರು ಮುಖ್ಯಮಂತ್ರಿಗಳು. ಪ್ರಭಾವಿ ಕಾಂಗ್ರೆಸ್ ನಾಯಕರು. ಅವರ ನ್ಯಾಯ ನಿಷ್ಠುರತೆ, ದಕ್ಷತೆ, ಪ್ರಾಮಾಣಿಕತೆ ಜನಜನಿತವಾಗಿದ್ದ ಕಾಲವದು.
ಆಗ ವಿಧಾನಸೌಧ ದೇವಸ್ಥಾನದಂತಿತ್ತು. ಶಾಸನಸಭೆ ಪವಿತ್ರ ಸ್ಥಳವಾಗಿತ್ತು. ನಾಡಿನ ಜನರ ಕಲ್ಯಾಣಕ್ಕಾಗಿ ನಡೆಯುವ ಗಂಭೀರ ಚರ್ಚೆಗಳ ಕೇಂದ್ರವಾಗಿತ್ತು. ಅದರೊಳಕ್ಕೆ ಪ್ರವೇಶ ಪಡೆಯುವುದು ಪವಿತ್ರಕಾರ್ಯವಾಗಿತ್ತು. ಪ್ರವೇಶ ಪಡೆದ ಶಾಸಕರು ದೇವರಂತೆ ಕಾಣುತ್ತಿದ್ದರು. ಅದರಲ್ಲೂ ಒಂದು ಗುಂಪು- ಶಾಂತವೇರಿ ಗೋಪಾಲಗೌಡರು, ಕೆಂಗಲ್ ಹನುಮಂತಯ್ಯ, ಸಿದ್ದವೀರಪ್ಪ, ಎಸ್.ಶಿವಪ್ಪ, ಎಚ್.ಎಂ.ಚನ್ನಬಸಪ್ಪ, ಎಂ.ವಿ.ರಾಮಚಂದ್ರರಾವ್, ಎಂ.ಎಸ್.ಕೃಷ್ಣನ್, ದೇವರಾಜ ಅರಸು– ಇವರನ್ನು ‘ಭಾರೀ ಜನ’ ಎಂದು ಗುರುತಿಸಲಾಗುತ್ತಿತ್ತು.
ಇವರ ಪರಿಶುದ್ಧತೆ, ಪ್ರಾಮಾಣಿಕತೆ, ಜನಪರ ಪ್ರೀತಿ, ಕಾಳಜಿ, ಕಳಕಳಿ ಪ್ರಶ್ನಾತೀತ. ಇವರ ತಿಳಿವಳಿಕೆ, ಅನುಭವ, ಬುದ್ಧಿವಂತಿಕೆಯೂ ಕೂಡ. ಇವರೆಲ್ಲರಿಗೂ ಕಳಶವಿಟ್ಟಂತೆ ಸ್ಪೀಕರ್ ಸ್ಥಾನವನ್ನು ಅಲಂಕರಿಸಿದ್ದ ವೈಕುಂಠ ಬಾಳಿಗ- ಗಾಂಧಿ ಟೋಪಿ ಧರಿಸುತ್ತಿದ್ದ ಸರಳ ಸಜ್ಜನಿಕೆಯ ಅದ್ಭುತ ವ್ಯಕ್ತಿ. ಇವರ ಆದರ್ಶ, ಜನಪರ ನಿಲುವು- ಶಾಸನಸಭೆ ಪ್ರಜಾತಂತ್ರದ ಸ್ವರ್ಗದಂತಿತ್ತು.
ಇದನ್ನು ಓದಿದ್ದೀರಾ?: ಮಳೆ ಸಮಸ್ಯೆಯಾಗಿದ್ದು ಯಾಕೆ ಮತ್ತು ಯಾರಿಗೆಲ್ಲ ಅನುಕೂಲ?
ಇದು ಯಾವುದೋ ರಾಜ್ಯದ ಶಾಸನಸಭೆಯ ಕಟ್ಟುಕತೆಯಲ್ಲ; ನಮ್ಮ ಕರ್ನಾಟಕ ಕಂಡ ರಾಜಕೀಯ ನಾಯಕರು, ತಮ್ಮ ನಡೆ-ನುಡಿಯಿಂದ, ನಿಸ್ಪೃಹ ಸೇವೆಯಿಂದ ಶಾಸನಸಭೆಗೆ ಘನತೆ-ಗೌರವ ತಂದ ಕತೆ.
ಇಂದಿನ ರಾಜಕೀಯ ನಾಯಕರನ್ನು ನೋಡಿದರೆ, ಕೇವಲ ಅರವತ್ತು ವರ್ಷಗಳಲ್ಲಿ, ಒಬ್ಬೊಬ್ಬರು ಒಂದೊಂದು ಬಾವಿಯಾಗಿದ್ದಾರೆ. ತಮ್ಮ ಸುತ್ತ ಕೋಟೆ ಕಟ್ಟಿಕೊಂಡಿದ್ದಾರೆ. ಕಾಲ-ಬುದ್ಧಿ-ಬದುಕು ಅವರನ್ನು ಬದಲಾಯಿಸಿತೇ ಅಥವಾ ಬಲಿ ತೆಗೆದುಕೊಂಡಿತೇ?
