ಈ ದಿನ ಸಂಪಾದಕೀಯ | ಎರಡು ದೇಶಗಳ ಸ್ಥಾಪನೆ- ಇಸ್ರೇಲ್ ಪ್ಯಾಲೆಸ್ತೀನಿ ಕದನಕ್ಕೆ ಕಾಯಂ ಪರಿಹಾರ

Date:

Advertisements
ಪ್ಯಾಲೆಸ್ತೀನೀಯರ ಮೇಲೆ ನಡೆದಿರುವ ಅಮಾನುಷ ದಮನವನ್ನು ವಿಶ್ವಸಂಸ್ಥೆಯು ಖಂಡಿಸಿದೆ. ತಾಯ್ನಾಡಿನಿಂದ ಅವರನ್ನು ಕಾಯಂ ಆಗಿ ಒಕ್ಕಲೆಬ್ಬಿಸುವ ದುಷ್ಟತನದ ಪರಿಣಾಮ ಎದುರಿಸಬೇಕಾದೀತು ಎಂದು ನೆರೆಹೊರೆಯ ಅರಬ್ ದೇಶಗಳು ಇಸ್ರೇಲ್‌ಗೆ ಎಚ್ಚರಿಕೆ ನೀಡಿವೆ. ಅರ್ಥಾತ್ ಅರಬ್ ರಾಷ್ಟ್ರಗಳೂ ಭಾಗವಹಿಸಿ ಈ ಘರ್ಷಣೆ ವ್ಯಾಪಕ ಸ್ವರೂಪ ಪಡೆಯುವ ಅಪಾಯವಿದೆ.

ಗಾಝಾ ಮೇಲೆ ಇಸ್ರೇಲ್ ನಡೆಸಿರುವ ಸತತ ಏಳು ದಿನಗಳ ಬಾಂಬ್ ದಾಳಿಗೆ 2,700ಕ್ಕೂ ಹೆಚ್ಚು ಮಂದಿ ಪ್ಯಾಲೆಸ್ತೀನಿ ನಾಗರಿಕರು ಬಲಿಯಾಗಿದ್ದಾರೆ. ಇಸ್ರೇಲ್ ಮೇಲೆ ಹಮಾಸ್ ಇತ್ತೀಚಿಗೆ ನಡೆಸಿದ್ದ ದಾಳಿಯಲ್ಲಿ ಸತ್ತ ಇಸ್ರೇಲಿ ನಾಗರಿಕರ ಸಂಖ್ಯೆ 1,400ಕ್ಕೆ ಏರಿದೆ. ಗಾಝಾ ಪಟ್ಟಿಯ ಉತ್ತರ ಭೂಭಾಗವನ್ನು ತೊರೆದು ದಕ್ಷಿಣದತ್ತ ಸಾಗಬೇಕೆಂಬ ಇಸ್ರೇಲಿನ ಆಣತಿಯನ್ನು ಪಾಲಿಸಿ 10 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ದಕ್ಷಿಣ ಗಾಝಾದತ್ತ ಗಾಯಾಳುಗಳಾಗಿ ಎದ್ದು ಬಿದ್ದು ಸೋತು ಸುಣ್ಣವಾಗಿ ಸಾಗಿದ್ದಾರೆ. 1948ರಲ್ಲಿ ಇಸ್ರೇಲ್ ದೇಶ ಹುಟ್ಟಿದಾಗ ಏಳು ಲಕ್ಷ ಪ್ಯಾಲೆಸ್ತೀನೀಯರು ಮನೆಮಠ ತೊರೆದು ವಲಸೆ ಹೋಗುವ ಪರಿಸ್ಥಿತಿಯನ್ನು ಉಂಟು ಮಾಡಲಾಗಿತ್ತು.

ಅನ್ನ, ನೀರು, ನೆರಳು, ಔಷಧಿ ಇಲ್ಲದೆ ಬಯಲಿಗೆ ಬಿದ್ದು, ಹಸಿವು ನೀರಡಿಕೆ ಅನಿಶ್ಚಿತತೆಯ ನಡುವೆ ಬಾಂಬ್ ದಾಳಿಗಳಿಂದ ವಿಹ್ವಲಗೊಂಡಿರುವ ಪ್ಯಾಲೆಸ್ತೀನಿಯರನ್ನು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಬಿಡದೆ ಬೆನ್ನಟ್ಟಿ ಕಾಡುತ್ತಿರುವುದು ಪರಮ ಕ್ರೌರ್ಯ. ತೀವ್ರವಾದಿಗಳ ಮೇಲೆ ಸೇಡು ತೀರಿಸಿಕೊಳ್ಳಲು ನಾಗರಿಕರನ್ನು ಎಣೆಯಿಲ್ಲದ ಶಿಕ್ಷೆಗೆ ಗುರಿ ಮಾಡುವುದು ಯಾವ ನ್ಯಾಯ? ಅಂತಾರಾಷ್ಟ್ರೀಯ ಕಾಯಿದೆ ಕಾನೂನಿನ ಪ್ರಕಾರವೂ ಇದು ಅಕ್ರಮ ಕೃತ್ಯ.

ಹೊರದೇಶಗಳು ಕಳಿಸಿರುವ ಅನ್ನಾಹಾರ ನೀರು ಔಷಧಿಯ ನೆರವನ್ನು ಗಾಝಾ ಗಡಿಯಲ್ಲೇ ತಡೆಯಲಾಗಿದೆ. ಕದನವಿರಾಮದ ವರದಿಗಳನ್ನು ಇಸ್ರೇಲ್ ಮತ್ತು ಹಮಾಸ್ ತಳ್ಳಿ ಹಾಕಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ‘ಸುದೀರ್ಘ ಸಮರ’ದ ಎಚ್ಚರಿಕೆ ನೀಡಿದ್ದಾರೆ.

Advertisements

ಇಸ್ರೇಲ್ ಗೆ ಸತತ ಬೆಂಬಲವಾಗಿ ನಿಂತಿರುವ ಅಮೆರಿಕೆಯದು ಆಷಾಢಭೂತಿ ವರ್ತನೆ. ಗಾಝಾವನ್ನು ಇಸ್ರೇಲ್ ಆಕ್ರಮಿಸಿಕೊಳ್ಳುವುದು ಬಹುದೊಡ್ಡ ತಪ್ಪು, ನನ್ನ ಪ್ರಕಾರ ಹಮಾಸ್ ಮತ್ತು ಹಮಾಸ್‌ನ ತೀವ್ರವಾದಿಗಳು ಎಲ್ಲ ಪ್ಯಾಲೆಸ್ತೀನೀಯರ ಪ್ರತಿನಿಧಿಗಳಲ್ಲ ಎಂದು ಅಮೆರಿಕೆಯ ಅಧ್ಯಕ್ಷ ಬೈಡನ್ ಹೇಳಿದ್ದಾರೆ. ಆದರೆ ಹಮಾಸ್ ಸಂಘಟನೆಯನ್ನು ‘ಬೇರುಸಹಿತ ನಾಶ’ ಮಾಡಲು ಅಮರಿಕೆಯ ಯುದ್ಧನೌಕೆಗಳು ಗಾಝಾ ಪಟ್ಟಿಯ ಗಡಿಯುದ್ದಕ್ಕೆ ಮೆಡಿಟರೇನಿಯನ್ ಸಮುದ್ರದಲ್ಲಿ ‘ಲಂಗರು’ ಹಾಕಿವೆ.

ನೆಲ, ನೀರು, ಆಕಾಶದಿಂದ ಏಕಕಾಲಕ್ಕೆ ಗಾಝಾ ಮೇಲೆ ದಾಳಿ ನಡೆಸಲು ಇಸ್ರೇಲ್ ಎಲ್ಲ ಸಿದ್ಧತೆಗಳನ್ನು ನಡೆಸಿದೆ. ನಾಗರಿಕರು ಮತ್ತು ಮಿಲಿಟರಿಯ ನಡುವಣ ವ್ಯತ್ಯಾಸವನ್ನು ಪರಿಗಣಿಸದೆ ಮಾರಕ ದಾಳಿಗಳನ್ನು ನಡೆಸಿ ಹತ್ಯೆಗಳಿಗೆ ಹಮಾಸ್ ಕಾರಣವಾಗಿರುವುದು ಹೌದು. ಆದರೆ ಹಮಾಸ್ ಇಂತಹ ವರ್ತನೆ ಇಸ್ರೇಲಿಗಳಿಗೆ ಮೇಲ್ಪಂಕ್ತಿಯಾಗಬೇಕಿಲ್ಲ. ಹಮಾಸ್ ದಾಳಿ ಖಂಡನೀಯ ಹೌದು. ಆದರೆ, ಕಳೆದ 15 ವರ್ಷಗಳಲ್ಲಿ 6,407 ಪ್ಯಾಲೆಸ್ತೀನ್ ಪ್ರಾಣಗಳನ್ನು ಬಲಿ ಪಡೆದಿರುವ ಇಸ್ರೇಲ್ ದಾಳಿಯನ್ನು ಏನೆಂದು ಬಣ್ಣಿಸಬೇಕು?

ಪ್ಯಾಲೆಸ್ತೀನೀಯರ ಮೇಲೆ ನಡೆದಿರುವ ಅಮಾನುಷ ದಮನವನ್ನು ವಿಶ್ವಸಂಸ್ಥೆಯು ಖಂಡಿಸಿದೆ. ತಾಯ್ನಾಡಿನಿಂದ ಅವರನ್ನು ಕಾಯಂ ಆಗಿ ಒಕ್ಕಲೆಬ್ಬಿಸುವ ದುಷ್ಟತನದ ಪರಿಣಾಮ ಎದುರಿಸಬೇಕಾದೀತು ಎಂದು ನೆರೆಹೊರೆಯ ಅರಬ್ ದೇಶಗಳು ಇಸ್ರೇಲ್ ಗೆ ಎಚ್ಚರಿಕೆ ನೀಡಿವೆ. ಅರ್ಥಾತ್ ಅರಬ್ ರಾಷ್ಟ್ರಗಳೂ ಭಾಗವಹಿಸಿ ಈ ಘರ್ಷಣೆ ವ್ಯಾಪಕ ಸ್ವರೂಪ ಪಡೆಯುವ ಅಪಾಯವಿದೆ.

‘ಪ್ಯಾಲೆಸ್ತೀನೀಯರ ಹಿತರಕ್ಷಣೆಯು ಸರ್ವ ವ್ಯಾಜ್ಯವಿಷಯಗಳ ಮೂಲ ವಿಷಯ, ಎಲ್ಲ ಅರಬ್ಬರೂ ಒಟ್ಟಾಗಿ ಹೋರಾಟಕ್ಕೆ ಇಳಿಯುವ ವ್ಯಾಜ್ಯವಿಷಯ’ ಎಂದು ಈಜಿಪ್ಟ್ ನ ಅಧ್ಯಕ್ಷರು ಇಸ್ರೇಲ್ ಗೆ ಎಚ್ಚರಿಕೆ ನೀಡಿದ್ದಾರೆ. ಗಾಝಾ ಮತ್ತು ವೆಸ್ಟ್ ಬ್ಯಾಂಕ್‌ಗೆ ಹೊಂದಿಕೊಂಡಿರುವ ಜೋರ್ಡನ್ ಜೊತೆ ಗಡಿಯನ್ನು ಹಂಚಿಕೊಂಡಿರುವ ಏಕೈಕ ಅರಬ್ ದೇಶ ಈಜಿಪ್ಟ್. ಪ್ಯಾಲೆಸ್ತೀನೀಯರನ್ನು ಅವರ ಹುಟ್ಟುನೆಲದಿಂದ ಹೊರ ಹಾಕುವ ಕೃತ್ಯ ತೀವ್ರ ಪರಿಣಾಮಗಳಿಗೆ ನೀಡುವ ಪಂಥಾಹ್ವಾನ ಎಂದು ಜೋರ್ಡನ್ ನ ದೊರೆ ಅಬ್ದುಲ್ಲಾ ಗಂಟಲೇರಿಸಿದ್ದಾರೆ.
ತೀರಾ ಇತ್ತೀಚೆಗಷ್ಟೇ ಇಸ್ರೇಲ್ ನ ಉದ್ದಗಲಕ್ಕೆ ಸಾರ್ವಜನಿಕ ಬಂಡಾಯ ಎದುರಿಸಿದ್ದ ಪ್ರಧಾನಮಂತ್ರಿ ನೇತಾನ್ಯಹು ಪಾಲಿಗೆ ಹಮಾಸ್ ನಡೆಸಿದ ಪರಮ ಮಾರಕ ದಾಳಿಯು ‘ವರ’ವಾಗಿ ಪರಿಣಮಿಸಿದೆ. ಜನತೆಯ ಗಮನವನ್ನು ದೇಶದ ಸುರಕ್ಷತೆಯೆಡೆಗೆ ಸೆಳೆದು ಯಶಸ್ವಿಯಾಗಿ ವಿಷಯಾಂತರ ಮಾಡಿದ್ದಾರೆ. ಹಮಾಸ್ ಮತ್ತು ಪ್ಯಾಲೆಸ್ತೀನೀಯರ ಮೇಲೆ ಬರ್ಬರ ಪ್ರತೀಕಾರ ತೀರಿಸಿಕೊಂಡು ಜನಬೆಂಬಲವನ್ನು ತನ್ನ ಪರವಾಗಿ ತಿರುಗಿಸಿಕೊಳ್ಳುವ ಎಲ್ಲ ಪ್ರಯತ್ನಗಳಲ್ಲಿ ತೊಡಗಿದ್ದಾರೆ.

ಆದರೆ ಹಮಾಸನ್ನು ಮಣಿಸುವುದು ಅಷ್ಟು ಸರಳವಲ್ಲ ಎಂಬ ವಾಸ್ತವವನ್ನು ಈ ಹಿಂದೆ ಇಸ್ರೇಲ್ ನಡೆಸಿರುವ ದಾಳಿಗಳು ರುಜುವಾತು ಮಾಡಿವೆ. ಹಮಾಸನ್ನು ಅಳಿಸಿ ಹಾಕುವುದು ಈ ಸಮಸ್ಯೆಗೆ ಕಾಯಂ ಪರಿಹಾರ ಅಲ್ಲವೇ ಅಲ್ಲ. ಈ ದಾಳಿಯಿಂದ ಇಸ್ರೇಲ್ ತನ್ನ ಹಿತದೃಷ್ಟಿಯಿಂದಲೇ ಹಿಂದೆಗೆಯಬೇಕು ಮತ್ತು ಇಸ್ರೇಲ್‌ನ ರಣೋತ್ಸಾಹಕ್ಕೆ ಶಕ್ತ್ಯಾಯುಧಗಳನ್ನು ಒದಗಿಸಿರುವ ಅಮೆರಿಕೆ ತಾನೂ ಹಿಂದೆ ಸರಿದು ದೊಡ್ಡಣ್ಣನ ನ್ಯಾಯದ ನಿಜ ಜವಾಬ್ದಾರಿಯನ್ನು ನಿರ್ವಹಿಸಬೇಕು. ತಾನು ದೀರ್ಘ ಕಾಲದಿಂದ ಆಕ್ರಮಿಸಿಕೊಂಡಿರುವ ಪ್ಯಾಲೆಸ್ತೀನ್ ಪ್ರದೇಶಗಳನ್ನು ಇಸ್ರೇಲ್ ಬಿಟ್ಟುಕೊಡಬೇಕು. ಆದರೆ ಇಂತಹ ಯಾವುದೇ ದೂರ ದೂರದ ಸುಳಿವು ಸೂಚನೆಯೂ ಇಲ್ಲ. ಬದಲಿಗೆ ವೆಸ್ಟ್ ಬ್ಯಾಂಕ್ ನಲ್ಲಿ ಇಸ್ರೇಲಿ ವಸತಿ ಪ್ರದೇಶಗಳನ್ನು ಹೆಚ್ಚಿಸಿ, ಪ್ಯಾಲೆಸ್ತೀನೀಯರ ಚಲನವಲನಗಳನ್ನು ಮತ್ತಷ್ಟು ನಿರ್ಬಂಧಿಸಲಾಗಿದೆ. ಈ ಯಥಾಸ್ಥಿತಿವಾದ ಪ್ಯಾಲೆಸ್ತೀನೀಯರನ್ನು ತೀವ್ರವಾದದತ್ತ ತಳ್ಳುತ್ತಿದೆ. ಹಮಾಸ್ ತೋಳುಗಳಿಗೆ ಹೆಚ್ಚು ಹೆಚ್ಚು ಬಲವನ್ನೂ ತುಂಬುತ್ತಿದೆ.

ವಾಸ್ತವವಾಗಿ ಹಮಾಸ್ ಗೆ ಭಾರೀ ಮೊತ್ತಗಳ ಹಣವನ್ನು ಹಲವು ಸಲ ಒದಗಿಸಿದ್ದಾರೆ ನೇತಾನ್ಯಹು! ಹಮಾಸ್ ಇಂದು ಇಷ್ಟು ಸುಸಜ್ಜಿತ ಶಸ್ತ್ರಸಜ್ಜಿತ ಮಿಲಿಟರಿ ಪಡೆಯ ರೂಪ ಪಡೆಯುವುದರಲ್ಲಿ ಇಸ್ರೇಲ್ ನ ಪಾತ್ರ ದೊಡ್ಡದು. ಸೌಮ್ಯ ಸ್ವಭಾವದ ಪ್ಯಾಲೆಸ್ತೀನ್ ವಿಮೋಚನಾ ಸಂಸ್ಥೆ ಮತ್ತು ಪ್ಯಾಲೆಸ್ತೀನಿಯನ್ ಪ್ರಾಧಿಕಾರದ ವಿರುದ್ಧ ಹಮಾಸನ್ನು ಎತ್ತಿಕಟ್ಟುವುದು ನೇತಾನ್ಯಹು ಹಂಚಿಕೆಯಾಗಿತ್ತು. ಹೀಗಾಗಿ ಹಮಾಸ್‌ನ ತಿಜೋರಿ ತುಂಬಿಸಿ ಅದನ್ನು ಬೆಳೆಸಿ ಬಲಿಸಿ ಎತ್ತಿಕಟ್ಟಿದ ಅಪರಾಧವನ್ನು ಇಸ್ರೇಲ್ ಹೊರಲೇಬೇಕು.

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಗೆ ಪ್ರತ್ಯೇಕ ದೇಶಗಳನ್ನು ರೂಪಿಸುವುದೇ ಈ ಸಮಸ್ಯೆಗೆ ಕಾಯಂ ಪರಿಹಾರ ಆಗಬಲ್ಲದು. ಜೋರ್ಡನ್ ನದಿ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವೆ ಪ್ಯಾಲೆಸ್ತೀನೀಯರು ಮತ್ತು ಇಸ್ರೇಲಿಗರಿಗೆ ಎರಡು ಪ್ರತ್ಯೇಕ ದೇಶಗಳನ್ನು ರೂಪಿಸಬೇಕು ಎಂಬ ಪರಿಹಾರ ಹೊಸದೇನಲ್ಲ. ಆದರೆ ಹಮಾಸ್ ಮತ್ತು ಇಸ್ರೇಲ್ ನ ಹಠಮಾರಿತನದಿಂದ ಅದು ಕಾರ್ಯರೂಪಕ್ಕೆ ಬಂದಿಲ್ಲ. ವೆಸ್ಟ್ ಬ್ಯಾಂಕ್ ಮತ್ತು ಗಾಝಾದಲ್ಲಿ ಸ್ವತಂತ್ರ ಸಾರ್ವಭೌಮ ಪ್ಯಾಲೆಸ್ತೀನ್ ದೇಶ ರಚನೆಯೊಂದೇ ಈ ವಲಯದಲ್ಲಿ ಶಾಂತಿ ಸ್ಥಾಪಿಸಬಲ್ಲದು. ಹಮಾಸ್ ನಂತಹ ಸಂಘಟನೆಗಳನ್ನು ಕೂಡ ನಿರಾಯುಧಗೊಳಿಸಬಲ್ಲದು. ಆದರೆ ಸ್ವತಂತ್ರ ಪ್ಯಾಲೆಸ್ತೀನ್ ಶಾಂತಿಯುತವಾಗಿ ಬದುಕಿ ಬಾಳುತ್ತದೆಂಬ ಭರವಸೆಯನ್ನು ಪ್ಯಾಲೆಸ್ತೀನೀಯರು ಮತ್ತು ಅರಬ್ ಜಗತ್ತು ಇಸ್ರೇಲ್‌ಗೆ ನೀಡಬೇಕಿದೆ. ಹಾಗೆಯೇ ಇಸ್ರೇಲ್ ಕೂಡ ಅರಬ್ಬರ ನೆಲದಲ್ಲಿ ತಾವು ದೇಶ ಕಟ್ಟಿಕೊಂಡಿದ್ದೇವೆಂಬ ಋಣಪ್ರಜ್ಞೆಯನ್ನು ಇಟ್ಟುಕೊಳ್ಳಬೇಕಿದೆ. ಸಾಮರಸ್ಯ ಸಹಬಾಳ್ವೆಗೆ ಮಿಗಿಲಾದ ಶಾಂತಿ ಬೇರೇನಿದ್ದೀತು?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X