ಪ್ರತಾಪ್ ಸಿಂಹ, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಸಿ.ಟಿ. ರವಿಯವರು ಸತ್ಯಸಂಧರ? ಅವರ ಮಾತುಗಳು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವಂತಿದ್ದರೂ, ಮಾಧ್ಯಮಗಳು ಮುತುವರ್ಜಿ ವಹಿಸಿ ಪ್ರಚಾರ ನೀಡುವುದೇಕೆ? ಇದು ಕಾಂಗ್ರೆಸ್ಸಿಗರಿಗೆ ಅರ್ಥವಾಗುತ್ತಿಲ್ಲವೇ? ಪ್ರತಿಪಕ್ಷದ ಹಗರಣಗಳನ್ನು ಬಿಚ್ಚಿಡಲು ಕಾಂಗ್ರೆಸ್ಸಿಗಿರುವ ಮುಲಾಜಾದರೂ ಏನು?
‘ಮುಸ್ಲಿಂ ಸಮುದಾಯವನ್ನು ಓಲೈಸಲು ಮುಂದಾಗಿರುವ ಸಿದ್ದರಾಮಯ್ಯ ಸುನ್ನತ್ ಮಾಡಿಸಿಕೊಳ್ಳುವುದಷ್ಟೇ ಬಾಕಿ, ಉಳಿದ ಎಲ್ಲಾ ದೃಷ್ಟಿಯಿಂದಲೂ ಸಿಎಂ ಸಂಪೂರ್ಣವಾಗಿ ಮುಸ್ಲಿಂ ಆಗಿದ್ದಾರೆ’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಪ್ರತಾಪ್ ಸಿಂಹರ ಈ ಮಾತಿನಲ್ಲಿ ಮುಸ್ಲಿಂ, ಸುನ್ನತ್, ಓಲೈಕೆಗಳು ಒಡಲಾಳದಿಂದ ಹೊರಬಿದ್ದಿವೆ. ಆ ವಿಶೇಷಣಗಳನ್ನು ಅಥವಾ ವಿಷಬಾಣಗಳನ್ನು ಅವರು, ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ಮೇಲೆ ಪ್ರಯೋಗಿಸಿದ್ದಾರೆ. ಅವರು ಮಾಜಿ ಪತ್ರಕರ್ತರಾದ್ದರಿಂದ, ಪತ್ರಕರ್ತರಾಗಿದ್ದಷ್ಟು ದಿನವೂ ಅಂಥದ್ದೇ ಕೆಲಸಗಳನ್ನು ಮಾಡಿಕೊಂಡು ಬಂದದ್ದರಿಂದ- ಅಂತಹ ವಿಷಬಾಣಗಳು ಕಳೆದ ಹತ್ತು ವರ್ಷಗಳಲ್ಲಿ ಯಾರಿಗೆ ನಾಟುತ್ತವೆ, ಎಂತಹ ಪರಿಣಾಮ ಬೀರುತ್ತವೆ ಎಂಬುದು ಗೊತ್ತಿದ್ದೇ ಪ್ರಯೋಗಿಸಿದ್ದಾರೆ.
ಗೊತ್ತಿಲ್ಲದಿರುವುದು ಕಾಂಗ್ರೆಸ್ಸಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ. ಅವರ ರಾಜಕೀಯ ಅನುಭವ, ಹಿರಿತನ ಮತ್ತು ಮುತ್ಸದ್ದಿತನದ ಮುಂದೆ ಪ್ರತಾಪ್ ಪ್ರಲಾಪ ಪುಟ್ಟದು. ಆದರೆ ಆ ಪುಟ್ಟದಕ್ಕೆ ಸಿಗುತ್ತಿರುವ ಮೀಡಿಯಾ ಮೈಲೇಜ್ ಭಾರೀ ದೊಡ್ಡದು.
ಪ್ರತಾಪ್ ಸಿಂಹ ಮಾಜಿ ಪತ್ರಕರ್ತರು. ಭಟ್ಟರ ಅಡುಗೆ ಮನೆಯಲ್ಲಿ ತರಬೇತಿ ಪಡೆದವರು. ಅವರ ಮೂಲಕ ಸಂಘ ಪರಿವಾರ ಮತ್ತು ಬಿಜೆಪಿಯ ಸಂಪರ್ಕ ಸಾಧಿಸಿದವರು. ಮನುಸ್ಮೃತಿಯ ಕರ್ಮಟ ವಿಚಾರಗಳನ್ನು ಹಂಚುವ ಕೆಲಸದಲ್ಲಿ ನಿರತರಾದವರು. ಮೋದಿಯವರನ್ನು ಹಾಡಿ ಹೊಗಳಿ ಪುಸ್ತಕ ಬರೆದವರು. ಅದನ್ನೇ ಸಂಪರ್ಕ ಸೇತುವೆಯನ್ನಾಗಿ ಮಾಡಿಕೊಂಡು ಎರಡು ಸಲ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಗಿಟ್ಟಿಸಿ, ಗೆದ್ದು, ಸಂಸದರಾದವರು.
ಇದೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೊತ್ತಿದೆ. ಗೊತ್ತಿದ್ದೂ ಸಿಂಹನನ್ನು ಸಾಕಿದ, ಸಲಹಿದ ಭಟ್ಟರನ್ನು ಅಡುಗೆ ಮನೆಗೆ ಬಿಟ್ಟುಕೊಂಡಿದ್ದಾರೆ. ಈಗ ಅವರ ಶಿಷ್ಯನಿಂದಲೇ ಸುನ್ನತ್ ಮಾಡಿಸಿಕೊಳ್ಳುವ ‘ಯೋಗ’ ಒದಗಿ ಬಂದಿದೆ. ಬಿಜೆಪಿಗೇ ಬೇಡವಾದವರಿಂದ ಮುಖ್ಯಮಂತ್ರಿಗಳು ಇಂತಹ ಮಾತುಗಳನ್ನು ಕೇಳಬೇಕಾಗಿ ಬಂದಿರುವುದು, ದುರದೃಷ್ಟಕರ ಸಂಗತಿ.
ಇನ್ನು, ವಿಪಕ್ಷ ನಾಯಕ ಆರ್. ಅಶೋಕ್, ‘ಲವ್ ಜಿಹಾದ್ ಮಾಡಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗಿದೆ. ಈಗ ಲ್ಯಾಂಡ್ ಜಿಹಾದ್ ಮೂಲಕ ರೈತರ ಜಮೀನು ಪರಿವರ್ತನೆ ಮಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನ ಮಗುವಿನಂತೆ ನಿದ್ರಿಸುವ ಜಾಹೀರಾತಿನಂತೆ, ಭಯೋತ್ಪಾದಕರು ಹಾಗೂ ಮೂಲಭೂತವಾದಿಗಳು ಕರ್ನಾಟಕದಲ್ಲಿ ಮಗುವಿನಂತೆ ಆರಾಮಾಗಿ ನಿದ್ರಿಸಬಹುದು’ ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಯಾವಾಗ?
ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಭಯೋತ್ಪಾದಕರು, ಮೂಲಭೂತವಾದಿಗಳು ಎಂಬ ಪದಗಳನ್ನು ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಯೋಗಿಸಿದ್ದಾರೆ. ವಿಪಕ್ಷ ನಾಯಕರಾದ ಅಶೋಕ್, ಸರ್ಕಾರ ಹಳಿ ತಪ್ಪಿದಾಗ ಎಚ್ಚರಿಸುವ, ಟೀಕಿಸುವ ಮೂಲಕ ಸರಿ ದಾರಿಗೆ ತರುವ ಕೆಲಸ ಮಾಡಬೇಕು. ಆದರೆ, ಅವರ ಯೋಚನೆ ಅದಾಗಿರದೆ, ಮುಸ್ಲಿಮರ ವಿರುದ್ಧ ತಿರುಗಿದೆ. ದ್ವೇಷಾಸೂಯೆಗಳನ್ನು ಬಿತ್ತಿ ಬೆಳೆಯುತ್ತಿದೆ. ಆರ್. ಅಶೋಕ್ ಕುರಿತು ಬಿಜೆಪಿಯವರೇ ‘ಹೊಂದಾಣಿಕೆ ವೀರ’ ಎಂದು ಗೇಲಿ ಮಾಡಿಕೊಂಡು ನಗುತ್ತಾರೆ. ಇಂತಹವರು ಕೂಡ ವೀರಾವೇಷದ ಮಾತುಗಳನ್ನಾಡುತ್ತಾರೆ ಎಂದರೆ, ಕಾಂಗ್ರೆಸ್ಸಿಗರು ಅದನ್ನು ಕೇಳಿಸಿಕೊಂಡೂ ಸುಮ್ಮನಿದ್ದಾರೆಂದರೆ, ಅವರ ಸ್ಥಿತಿ ನಿಜಕ್ಕೂ ಶೋಚನೀಯ.
‘ರೈತರ ಜಮೀನು ಮುಟ್ಟಿದವರು ಯಾರೂ ಕುರ್ಚಿ ಮೇಲೆ ಕೂಡಲು ಆಗುವುದಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
‘ವಕ್ಫ್ ಆಸ್ತಿಗಳನ್ನು ವಾಪಸ್ ಪಡೆಯುವ ನಿಟ್ಟಿನಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳಬಾರದು’ ಎಂದು ಮುಖ್ಯಮಂತ್ರಿಯಾಗಿದ್ದಾಗ ಮಾತಾಡಿ, ಈಗ ಉಪ ಚುನಾವಣೆಯ ಸಂದರ್ಭದಲ್ಲಿ ‘ನರಗುಂದ ಮಾದರಿ ರೈತ ಬಂಡಾಯ ಆಗಲಿದೆ’ ಎನ್ನುತ್ತಿರುವ ಬಸವರಾಜ ಬೊಮ್ಮಾಯಿ ಎಂಥವರು? ಅವರು ಮುಖ್ಯಮಂತ್ರಿಯಾಗಿದ್ದಾಗ ಕೋವಿಡ್, ಪಿಎಸ್ಐ, ಬಿಟ್ ಕಾಯಿನ್, ಫಾರ್ಟಿ ಪರ್ಸೆಂಟ್ ಕಮಿಷನ್‌ಗಳ ಸರಮಾಲೆಯನ್ನೇ ಧರಿಸಿದ್ದರು. ಅವುಗಳನ್ನು ಒಂದೊಂದಾಗಿ ಜನರ ಮುಂದಿಟ್ಟು, ಸತ್ಯ ಹೊರಹಾಕದ ಕಾಂಗ್ರೆಸ್; ಈಗ ಅವರಿಂದಲೇ ಎಚ್ಚರಿಕೆಯ ಪಾಠ ಹೇಳಿಸಿಕೊಳ್ಳಬೇಕಾದ ಸ್ಥಿತಿಗೆ ಬಂದಿರುವುದು, ಏನನ್ನು ಸೂಚಿಸುತ್ತದೆ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವಕ್ಫ್ ವಿವಾದವೆಂಬ ಕೃತಕ ಸೃಷ್ಟಿ – ಮತ್ತೊಮ್ಮೆ ಮಾಧ್ಯಮಗಳ ಬಣ್ಣ ಬಯಲು
ಕಳೆದ ಮೂವತ್ತು ವರ್ಷಗಳ ಹಿಂದೆ ಬೆಟ್ಟ ಗುಡ್ಡಗಳಿಂದ ಹಸಿರಾಗಿದ್ದ ಚಿಕ್ಕಮಗಳೂರು, ಈಗ ಕೇಸರಿಮಯವಾಗಿದೆ. ಬೆಟ್ಟ ಗುಡ್ಡಗಳು ಅಕ್ರಮ ಒತ್ತುವರಿಗೊಳಪಟ್ಟಿವೆ. ಗಣಿಗಾರಿಕೆ ಅವ್ಯಾಹತವಾಗಿದೆ. ಬಡರೈತನ ಮಗ ಸಿ.ಟಿ. ರವಿ ಇಂದು ಈಗ ಮಾಜಿ ಮಂತ್ರಿಯಾಗಿದ್ದಾರೆ. ಅವರು, ‘ಅಲ್ಲಾನ ಆಸ್ತಿಯೂ ಅಲ್ಲ, ಮುಲ್ಲಾನ ಆಸ್ತಿಯೂ ಅಲ್ಲ, ಇಲ್ಲಿ ಜಾಗ ಇಲ್ಲ. ಇಸ್ಲಾಂ ಭಾರತಕ್ಕೆ ಬರುವುದಕ್ಕೂ ಮುಂಚೆಯೇ ಇಲ್ಲಿ ಸನಾತನ ಧರ್ಮವಿತ್ತು. ಅದರ ಭೂಮಿ ಇದೆಲ್ಲ’ ಎಂದು ಕಿಡಿಕಾರಿದ್ದಾರೆ. ಅಲ್ಲಾ, ಮುಲ್ಲಾ ವಿರುದ್ಧ ಸನಾತನ ಧರ್ಮವನ್ನು ಎಳೆದು ತಂದು, ಹಿಂದು-ಮುಸ್ಲಿಂ ಸಂಘರ್ಷಕ್ಕೆ ಜನರನ್ನು ಎತ್ತಿಕಟ್ಟುತ್ತಿದ್ದಾರೆ.
ಪ್ರತಾಪ್ ಸಿಂಹ, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಸಿ.ಟಿ. ರವಿಯವರು ಸತ್ಯಸಂಧರ? ಅವರ ಮಾತುಗಳು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವಂತಿದ್ದರೂ, ಮಾಧ್ಯಮಗಳು ಮುತುವರ್ಜಿ ವಹಿಸಿ ಪ್ರಚಾರ ನೀಡುವುದೇಕೆ?
ಇದು ಕಾಂಗ್ರೆಸ್ಸಿಗರಿಗೆ ಅರ್ಥವಾಗುತ್ತಿಲ್ಲವೇ? ಪ್ರತಿಪಕ್ಷದ ಹಗರಣಗಳನ್ನು ಬಿಚ್ಚಿಡಲು ಕಾಂಗ್ರೆಸ್ಸಿಗಿರುವ ಮುಲಾಜಾದರೂ ಏನು? ನ್ಯಾಯ ಮತ್ತು ನಿಜವನ್ನು ಸರಳವಾಗಿ ಜನರ ಮುಂದಿಡುವಲ್ಲಿ ಕಾಂಗ್ರೆಸ್ ಸೋಲುತ್ತಿರುವುದೇಕೆ? ಕಳೆದವಾರವಷ್ಟೇ ‘ನಮ್ಮ ವಿರೋಧಿಗಳಿಗೆ ಅಸ್ತ್ರವನ್ನು ಕೊಟ್ಟು, ನಮ್ಮನ್ನು ಮುಜುಗರಕ್ಕೆ ದೂಡಬೇಡಿ’ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬುದ್ಧಿಮಾತು ಕೂಡ ಮರೆತುಹೋಯಿತೇ?
