ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸುವ, ಶಾಶ್ವತ ಹಣೆಪಟ್ಟಿ ಕಟ್ಟುವ ಮಾಧ್ಯಮಗಳ ಕೆಲ ಪತ್ರಕರ್ತರಿಂದ ಇಡೀ ಸಮುದಾಯವನ್ನೇ ಅನುಮಾನದಿಂದ ನೋಡುವ ವಾತಾವರಣ ಸೃಷ್ಟಿಯಾಗಿದೆ. ಹಾಗಂತ ಮೇಲಿನ ಹಣಕಾಸು ಸಂಸ್ಥೆಗಳನ್ನು ಹಳ್ಳ ಹಿಡಿಸಿದವರು, ಕೋಟಿಗಟ್ಟಲೆ ನುಂಗಿ ನೀರು ಕುಡಿದವರು ಪ್ರತಿನಿಧಿಸುವ ಸಮುದಾಯವನ್ನು ವಂಚಕ ಮತ್ತು ನಂಬಿಕೆದ್ರೋಹಿ ಸಮುದಾಯವೆಂದು ಕರೆಯಬಹುದೇ?
ಬೆಂಗಳೂರಿನ ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್ನ 1800 ಕೋಟಿ, ಗುರುಸಾರ್ವಭೌಮ ಸೊಸೈಟಿಯ 270 ಕೋಟಿ, ವಸಿಷ್ಠ ಸೌಹಾರ್ದ ಸೊಸೈಟಿಯ ಸುಮಾರು 500 ಕೋಟಿ ರೂ. ಹಗರಣ ಬೆಳಕಿಗೆ ಬಂದಿದ್ದು 2020ರಲ್ಲಿ. ಆಗ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿತ್ತು. ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು.
ಕುತೂಹಲಕರ ಸಂಗತಿ ಎಂದರೆ, ಮೇಲಿನ ಬ್ಯಾಂಕ್ ಮತ್ತು ಸೊಸೈಟಿಗಳು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರ ಹಿಡಿತದಲ್ಲಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಬಡವರು, ಮಧ್ಯಮವರ್ಗದ ಬ್ರಾಹ್ಮಣರೇ ಠೇವಣಿದಾರರು, ಷೇರುದಾರರು ಮತ್ತು ಖಾತೆ ಹೊಂದಿದ್ದ ಗ್ರಾಹಕರಾಗಿದ್ದರು.
ಬ್ಯಾಂಕ್ ಬಂದ್ ಆದಾಗ ಸಹಜವಾಗಿ ಠೇವಣಿದಾರರು, ಷೇರುದಾರರು ಮತ್ತು ಖಾತೆ ಹೊಂದಿದ್ದ ಗ್ರಾಹಕರು ಆತಂಕಕ್ಕೊಳಗಾದರು. ಭಾರೀ ಮೊತ್ತದ ಠೇವಣಿ ಇಟ್ಟ ಕೆಲ ನಿವೃತ್ತರು ಆಘಾತಕ್ಕೊಳಗಾಗಿ ಅಸುನೀಗಿದರು. ಗ್ರಾಹಕರ ಗೋಳಾಟ ನರಳಾಟ ಮೇರೆ ಮೀರಿದಾಗ ಡಾ. ಶಂಕರಗುಹಾ ದ್ವಾರಕಾನಾಥ್(ಇವರೂ ಬ್ರಾಹ್ಮಣರೇ)ರ ನೇತೃತ್ವದಲ್ಲಿ ಸಂಘಟಿತರಾದರು, ಪ್ರತಿಭಟನೆಗಿಳಿದರು. ಪೊಲೀಸರಿಗೆ ದೂರು ಸಲ್ಲಿಸಿದರು. ಪೇಜಾವರ ಸ್ವಾಮೀಜಿಗಳನ್ನು ಕಂಡು ಕಣ್ಣೀರುಗರೆದರು. ಕೊನೆಗೆ, ನಾವು ಆರಿಸಿದ ಸರ್ಕಾರವಲ್ಲವೇ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಒತ್ತಡ ಹೆಚ್ಚಾದಾಗ ಹಗರಣವನ್ನು ಸಿಐಡಿಗೆ ಒಪ್ಪಿಸಿದರು.
ಸಿಐಡಿ ಪೊಲೀಸರು ತನಿಖೆ ಚುರುಕುಗೊಳಿಸಿದರು. ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಕೆ. ರಾಮಕೃಷ್ಣ, ವಶಿಷ್ಠ ಸೌಹಾರ್ದ ಸೊಸೈಟಿಯ ಅಧ್ಯಕ್ಷ ವೆಂಕಟನಾರಾಯಣ ಮತ್ತು ಬ್ಯಾಂಕಿನ ಮಾಜಿ ಸಿಇಒ ಎಂ.ವಿ ಮಯ್ಯರನ್ನು ಬಂಧಿಸಿ, ತನಿಖೆಗೊಳಪಡಿಸಿದರು. ಈ ನಡುವೆ ಮಯ್ಯ ಆತ್ಮಹತ್ಯೆ ಮಾಡಿಕೊಂಡರು. ಈಗ ಉಳಿದಿಬ್ಬರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕೇಸು ನಡೆಯುತ್ತಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬುದ್ದಿ ಕಲಿಯದ ಕಾಂಗ್ರೆಸ್ ಮತ್ತು ಗಲಭೆ ಹುಡುಕುವ ಬಿಜೆಪಿ
ಏತನ್ಮಧ್ಯೆ, ಸಹಕಾರಿ ಕ್ಷೇತ್ರದ ಮತ್ತೊಂದು ಬ್ಯಾಂಕ್ ಆದ ಬಸವನಗುಡಿಯ ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆರು ತಿಂಗಳ ಅವಧಿಗೆ ಹಣಕಾಸಿನ ನಿರ್ಬಂಧ ಹೇರಿದೆ. ಈ ಸಹಕಾರ ಬ್ಯಾಂಕ್ ಇನ್ನು ಆರು ತಿಂಗಳವರೆಗೆ ಹೊಸದಾಗಿ ಸಾಲ ಕೊಡುವಂತೆ ಇಲ್ಲ, ಹೊಸದಾಗಿ ಠೇವಣಿಗಳನ್ನು ಸ್ವೀಕರಿಸುವಂತೆ ಇಲ್ಲ. ಬ್ಯಾಂಕಿನ ಗ್ರಾಹಕರ ಪ್ರಕಾರ 400 ಕೋಟಿ ರೂ. ಗಳ ಸಾಲ ಬಾಕಿ ಇದೆಯಂತೆ. ವಸೂಲಿ ಕಷ್ಟ ಎನ್ನಲಾಗುತ್ತಿದೆ.
ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಕೂಡ ಬ್ರಾಹ್ಮಣರೇ ಹುಟ್ಟುಹಾಕಿದ ಬ್ಯಾಂಕ್. ಟಿ.ಆರ್ ಶಾಮಣ್ಣ, ಕೃಷ್ಣಯ್ಯರ್ ಮತ್ತು ಕೇಶವಮೂರ್ತಿ ಎಂಬ ಮೂವರ ಪರಿಶ್ರಮದ ಫಲವಾಗಿ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿತ್ತು. ಹಲವಾರು ಶಾಖೆಗಳನ್ನು ಹೊಂದಿತ್ತು. ನೂರಾರು ಜನರಿಗೆ ಉದ್ಯೋಗ ನೀಡಿತ್ತು. ಲಾಭದಲ್ಲೂ ನಡೆಯುತ್ತಿತ್ತು. ಅದೆಲ್ಲಕ್ಕಿಂತ ಮುಖ್ಯವಾಗಿ ಗ್ರಾಹಕರ ನಂಬಿಕೆ ಮತ್ತು ವಿಶ್ವಾಸಕ್ಕೂ ಪಾತ್ರವಾಗಿತ್ತು.
ಆದರೆ ಇತ್ತೀಚಿನ ಕೆಲವರ್ಷಗಳಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ತಪ್ಪು ನಡೆಗಳಿಂದ, ಷೇರುದಾರರಿಗೆ ಲಾಭಾಂಶ ನೀಡಿಕೆ ಸ್ಥಗಿತಗೊಂಡಿತ್ತು. ಬ್ಯಾಂಕಿನ ಚುನಾಯಿತ ಪ್ರತಿನಿಧಿಗಳೇ ಮುಂದೆ ನಿಂತು ವಶಿಷ್ಠ ಸೊಸೈಟಿಯ ಅಧ್ಯಕ್ಷ ವೆಂಕಟನಾರಾಯಣರಿಗೆ 21 ಕೋಟಿ ಸಾಲ ಕೊಡಿಸುವಲ್ಲಿ ಸಹಕರಿಸಿದ್ದರಂತೆ. ಆತ ಅದನ್ನು ಪಾದುಕಾ ಮಂದಿರ ದೇವಸ್ಥಾನ ನಿರ್ಮಿಸಲು ವಿನಿಯೋಗಿಸಿಕೊಂಡರಂತೆ. ಅದನ್ನು ಈಗ ಮಾರಾಟಕ್ಕಿಟ್ಟರೆ 6 ಕೋಟಿಯೂ ಬರುವುದಿಲ್ಲ ಎಂಬ ಮಾಹಿತಿ ಇದೆ.
2005ರಲ್ಲಿ ಶ್ರೀನಿವಾಸ ಶಾಸ್ತ್ರಿ ಎಂಬ ವ್ಯಕ್ತಿ ವಿನಿವಿಂಕ್ ಎಂಬ ಹಣ ದ್ವಿಗುಣಗೊಳಿಸುವ ಕಂಪನಿ ತೆರೆದು ಸುಮಾರು 200 ಕೋಟಿ ರೂ.ಗಳನ್ನು ಗುಳುಂ ಮಾಡಿದ್ದ. ಈತನ ಆಮಿಷಕ್ಕೆ ಒಳಗಾಗಿ ಹಣ ಕಟ್ಟಿದ್ದವರು ಹೆಚ್ಚಿನವರು ಬಡವರು, ಮಧ್ಯಮವರ್ಗದ ಬ್ರಾಹ್ಮಣರು. ವಿನಿವಿಂಕ್ ಶಾಸ್ತ್ರಿ ಕೂಡ ಬ್ರಾಹ್ಮಣರು.
ಮೇಲಿನ ನಾಲ್ಕು ಸಂಸ್ಥೆಗಳ ವಹಿವಾಟು ನೂರಾರಲ್ಲ, ಸಾವಿರಾರು ಕೋಟಿ ರೂಪಾಯಿಗಳು. ಆ ಸಂಸ್ಥೆಗಳನ್ನು ಹುಟ್ಟುಹಾಕಿದವರು ಹಾಗೂ ನುಂಗಿ ನೀರು ಕುಡಿದವರು ಎಲ್ಲರೂ ಬ್ರಾಹ್ಮಣರೆ. ಈ ಸಂಸ್ಥೆಗಳ ಪದಾಧಿಕಾರಿಗಳು ಹಿಂದೆ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳಾಗಿದ್ದವರು. ಈಗ ಆರೋಪಿಗಳ ಸ್ಥಾನದಲ್ಲಿ ನಿಂತಿರುವವರಿಗೆ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರೇ ಕಾನೂನು ಸಲಹೆಗಾರರು.
ಅಷ್ಟೇ ಅಲ್ಲ, ಈ ಎಲ್ಲ ಸಂಸ್ಥೆಗಳು ಇದ್ದದ್ದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಗೂ ಬಸವನಗುಡಿ, ಜಯನಗರ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ. ಲೋಕಸಭಾ ಸದಸ್ಯರು ತೇಜಸ್ವಿ ಸೂರ್ಯ, ವಿಧಾನಸಭಾ ಸದಸ್ಯರು ರವಿಸುಬ್ರಹ್ಮಣ್ಯ, ರಾಮಮೂರ್ತಿ, ಉದಯ್ ಗರುಡಾಚಾರ್. ಎಲ್ಲರೂ ಭಾರತೀಯ ಜನತಾ ಪಕ್ಷದವರು. ಎಲ್ಲರೂ ಬ್ರಾಹ್ಮಣರು.
ಕೋಟ್ಯಂತರ ರೂಪಾಯಿಗಳ ಬಹುದೊಡ್ಡ ಹಗರಣದಿಂದ ಹಲವು ಕುಟುಂಬಗಳು ಬೀದಿ ಪಾಲಾದರೂ, ಸಿಐಡಿ-ಸಿಬಿಐ ತನಿಖೆ ಎಂದು ಬಿಜೆಪಿ ಸರ್ಕಾರ ಸಬೂಬು ಹೇಳುತ್ತಲೇ ಬಂದಿತು. ಪೊಲೀಸ್, ಕಾನೂನು ವ್ಯವಸ್ಥೆಗಳು ದುರ್ಬಲವೆಂದು ಮತ್ತೆ ಮತ್ತೆ ಸಾಬೀತಾಯಿತು. ಎರಡೂ ಕಡೆ ಬಿಜೆಪಿ ಸರ್ಕಾರವಿದ್ದೂ, ಪ್ರಧಾನಿ ಮೋದಿಯವರು ಅದೇ ಹಾದಿಯಲ್ಲಿ ಮೆರವಣಿಗೆ ಮೂಲಕ ಹಾದು ಹೋದರೂ, ಮತ್ತೆ ದುರ್ಬಲ ವ್ಯವಸ್ಥೆಗೇ ಮತ ಚಲಾಯಿಸಲಾಯಿತು. ಇದು ವಿವೇಕಿಗಳು ಮಾಡುವ ಕೆಲಸವೇ?
ಉಗ್ರರು ಎಂದಾಕ್ಷಣ ಮುಸ್ಲಿಮರು, ಮತಾಂತರ ಎಂದಾಕ್ಷಣ ಕ್ರಿಶ್ಚಿಯನ್ನರು ಎಂದು ಬೊಬ್ಬೆಹಾಕುವ ಭಕ್ತರು; ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸುವ, ಶಾಶ್ವತ ಹಣೆಪಟ್ಟಿ ಕಟ್ಟುವ ಮಾಧ್ಯಮಗಳ ಕೆಲ ಪತ್ರಕರ್ತರಿಂದ ಇಡೀ ಸಮುದಾಯವನ್ನೇ ಅನುಮಾನದಿಂದ ನೋಡುವ ವಾತಾವರಣ ಸೃಷ್ಟಿಯಾಗಿದೆ. ಹಾಗಂತ ಮೇಲಿನ ಹಣಕಾಸು ಸಂಸ್ಥೆಗಳನ್ನು ಹಳ್ಳ ಹಿಡಿಸಿದವರು, ಕೋಟಿಗಟ್ಟಲೆ ನುಂಗಿ ನೀರು ಕುಡಿದವರು ಪ್ರತಿನಿಧಿಸುವ ಸಮುದಾಯವನ್ನು ವಂಚಕ ಮತ್ತು ನಂಬಿಕೆದ್ರೋಹಿ ಸಮುದಾಯವೆಂದು ಕರೆಯಬಹುದೇ?
