ಈ ದಿನ ಸಂಪಾದಕೀಯ | ಭೀಕರ ಬರದ ನಡುವೆ ಅನಗತ್ಯ ವಿವಾದಗಳಲ್ಲಿ ಕಾಲಹರಣ ಮಾಡುತ್ತಿರುವ ಸರ್ಕಾರ

Date:

Advertisements

‘ಜನ ಬರಗಾಲದಲ್ಲೂ ಖುಷಿಯಾಗಿದ್ದಾರೆ ಅನ್ನೋದು ನನಗೆ ಸಂತಸ ತಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ದಸರಾ ಅಂಗವಾಗಿ ಆಯೋಜಿಸಿದ್ದ ವೈಮಾನಿಕ ಪ್ರದರ್ಶನ ವೀಕ್ಷಿಸಿದ ಬಳಿಕ ಅವರು ಈ ರೀತಿ ಹರ್ಷ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಸಾಧನೆ ಕಂಡು ಕೃತಕೃತ್ಯರಾದಂತಿದೆ. ಆದರೆ, ರಾಜ್ಯದ ವಾಸ್ತವ ಚಿತ್ರಣ ಭಿನ್ನವಾಗಿದೆ, ಭೀಕರವಾಗಿದೆ.

ಮೈಸೂರು ದಸರಾ ಸರ್ಕಾರದ ಅಧಿಕೃತ ಆಚರಣೆ. ಸರ್ಕಾರವೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸುವ ಹಬ್ಬ. ಬರಗಾಲದ ನಡುವೆಯೂ ಸರಳ ದಸರಾ ಎನ್ನುತ್ತಲೇ ಸರ್ಕಾರದ ಹಣವನ್ನು ಉದಾರವಾಗಿಯೇ ಖರ್ಚು ಮಾಡಿ ನಾಡಹಬ್ಬ ಆಚರಿಸಲಾಗಿದೆ. ಒಂದು ಸಣ್ಣ ಸಂಗೀತ ಕಚೇರಿಗೆ ಅವಕಾಶ ಕೊಡಲು ಅಧಿಕಾರಿಗಳು 3 ಲಕ್ಷ ರೂಪಾಯಿ ಲಂಚ ಕೇಳಿರುವ ಆಚರಣೆಯನ್ನು ಸರಳ ಎನ್ನಲು ಸಾಧ್ಯವಿಲ್ಲ. ಆದರೆ, ಜನ ನಿಜಕ್ಕೂ ಸಂತೋಷದಿಂದಿದ್ದಾರೆಯೋ ಇಲ್ಲವೋ ಎನ್ನುವುದನ್ನು ತಿಳಿಯಲು ಸಿದ್ದರಾಮಯ್ಯನವರು ನಾಡಿನ ವಿವಿಧೆಡೆಗಳ ವಾಸ್ತವ ಚಿತ್ರಣವನ್ನು ಕೊಂಚ ಪರಿಶೀಲಿಸಬೇಕು.

ನವರಾತ್ರಿ ಕಳೆದು ದೀಪಾವಳಿ ಆಗಮನವಾಗುತ್ತಿದೆ ಎಂದರೆ, ಅದು ಸುಗ್ಗಿಯ ಕಾಲ. ಸಹಜವಾಗಿಯೇ ರೈತರಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಸಡಗರ ತುಂಬಿರಬೇಕಿತ್ತು. ಆದರೆ, ಬರದಿಂದಾಗಿ ರಾಜ್ಯದ ಹಳ್ಳಿಗಳಲ್ಲಿ ಈ ಬಾರಿ ಪ್ರೇತ ಕಳೆ ಆವರಿಸಿದೆ. ಕೈಯಲ್ಲಿ ಹಣವಿಲ್ಲ. ಸಾಲ ಮಾಡಿ ಹಾಕಿದ ಬೀಜ ಗೊಬ್ಬರ ಎಲ್ಲ ಮಣ್ಣು ಪಾಲಾಗಿವೆ. ಹೊಲದಲ್ಲಿ ಬೆಳೆ ಬಿಸಿಲಿಗೆ ಸುಟ್ಟು ಕಮರಿಹೋಗಿದೆ. ಮಳೆಗಾಲವಾದರೂ ಬಿಸಿಲು ಬೇಸಿಗೆಯನ್ನು ಮೀರಿಸುವಂತಿದೆ. ಮುಂಗಾರು ಹಾಗೂ ಹಿಂಗಾರು ಎರಡೂ ಈ ಬಾರಿ ವಿಫಲವಾಗಿವೆ. 1973ರಿಂದ, ಅಂದರೆ, ಐವತ್ತು ವರ್ಷಗಳಲ್ಲಿ, ರಾಜ್ಯವನ್ನು ಕಾಡಿದ ಮೂರನೇ ಅತ್ಯಂತ ಕರಾಳ ಬರ ಇದು.

Advertisements

ಉತ್ತರ ಕರ್ನಾಟಕದಲ್ಲಿ ಬರ ಹೊಸದೇನಲ್ಲ. ಅವರ ಜೊತೆಗೆ ಈ ವರ್ಷ ಹಳೇ ಮೈಸೂರು, ಮಲೆನಾಡು, ಕರಾವಳಿ ಭಾಗಗಳಲ್ಲೂ ಬರದ ಪರಿಣಾಮ ಗೋಚರಿಸುತ್ತಿದೆ. ಮಳೆಯ ಕೊರತೆಯಿಂದಾಗಿ ಅನೇಕ ಪಂಪ್‌ಸೆಟ್‌ಗಳು ನೀರೆತ್ತದೇ ಸ್ಥಗಿತಗೊಂಡಿವೆ. ಅಲ್ಪಸ್ವಲ್ಪ ನೀರು ಬರುವ ಕಡೆ, ವಿದ್ಯುತ್ ಕೊರತೆಯಿಂದಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಪ್ರಕಾರ, ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ. ರೈತರಿಗೆ ಐದು ತಾಸು ನಿರಂತರವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ತಾಕೀತು ಮಾಡಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಅನೇಕ ಭಾಗಗಳಲ್ಲಿ ದಿನಕ್ಕೆ ಎರಡು ತಾಸು ಕೂಡ ನಿರಂತರವಾಗಿ ವಿದ್ಯುತ್ ಪೂರೈಸುತ್ತಿಲ್ಲ. ರಾತ್ರಿ ಹೊತ್ತಲ್ಲದ ಹೊತ್ತಿನಲ್ಲಿಯೂ ರೈತರು ಬೆಳೆಗಳಿಗೆ ನೀರು ಹಾಯಿಸಲು ಹೋಗಬೇಕಾಗಿದೆ. ಹೀಗೆ ಹೋದ ವಿಜಯಪುರದ ರೈತನೊಬ್ಬನಿಗೆ ಜಮೀನಿನಲ್ಲಿ ಮೊಸಳೆ ಕಂಡುಬಂದಿದೆ. ಆತ ಅದನ್ನು ಹಿಡಿದು ತಂದು ಹೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ ಘಟನೆಯೂ ನಡೆದಿದೆ. ಅಪರಾತ್ರಿಯಲ್ಲಿ ಹೀಗೆ ನೀರು ಕಟ್ಟಲು ಹೋಗಿ ಹಾವು ಮತ್ತಿತರ ಪ್ರಾಣಿಗಳಿಂದ ಕಡಿತಕ್ಕೊಳಗಾಗಿ ರೈತರು ಸತ್ತ ಉದಾಹರಣೆಗಳೂ ಇವೆ. ರಾಜ್ಯದ ಒಂದಿಲ್ಲೊಂದು ಭಾಗದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ರೈತರು ಬೀದಿಗಿಳಿಯುತ್ತಿದ್ದಾರೆ. ಇದೆಲ್ಲ ಹವಾ ನಿಯಂತ್ರಿತ ಕಚೇರಿಯಲ್ಲಿ ಕೂತ ಅಧಿಕಾರಿಗಳಿಗೆ, ಬರಗಾಲದಲ್ಲೂ 30 ಲಕ್ಷ ರೂಪಾಯಿಯ ಐಷಾರಾಮಿ ಕಾರುಗಳನ್ನು ಕೊಂಡು ಅವುಗಳಲ್ಲಿ ಓಡಾಡುವ ರಾಜ್ಯದ 33 ಸಚಿವರಿಗೆ ಸುಲಭಕ್ಕೆ ಅರ್ಥವಾಗುವುದು ಸಾಧ್ಯವಿಲ್ಲ.

ಬರ ಬಂದಾಗಲೆಲ್ಲ ಗುಳೆ ಹೋಗುವುದು ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಜನರಿಗೆ ಅನಿವಾರ್ಯ. ಈ ವರ್ಷ ಗುಳೆ ಕೊಂಚ ತಡವಾಗಿ ಆರಂಭವಾಗಿದೆ. ಅದಕ್ಕೆ ಕಾರಣ ಸರ್ಕಾರ ಜಾರಿಗೆ ತಂದ ಗ್ಯಾರಂಟಿಗಳು. ಸರ್ಕಾರ ನೀಡುತ್ತಿರುವ ಉಚಿತ ಅಕ್ಕಿ ಬಹಳ ಮಟ್ಟಿಗೆ ಬಡವರ ಹಸಿವು ನೀಗಿಸುತ್ತಿದೆ. ಜೊತೆಗೆ ಗೃಹಲಕ್ಷ್ಮಿ ಯೋಜನೆ ಬಡ ಕುಟುಂಬಗಳಿಗೆ ಒಂದಿಷ್ಟು ತ್ರಾಣ ನೀಡಿದೆ. ಆದರೆ, ಮಹಿಳೆಯರಿಗೆ ಉಚಿತ ಬಸ್ ಸಂಚಾರ ಕಲ್ಪಿಸುವ ಶಕ್ತಿ ಯೋಜನೆ ಸಂಪೂರ್ಣ ಜಾರಿಯಾಗಿದೆ ಎನ್ನುವುದು ಬಿಟ್ಟರೆ ಉಳಿದ ಗ್ಯಾರಂಟಿಗಳು ಇನ್ನೂ ಪೂರ್ಣವಾಗಿ ಜಾರಿಗೆ ಬಂದಿಲ್ಲ. ಕುಟುಂಬದ ಯಜಮಾನಿಗೆ ಮಾಸಿಕ 2,000 ನೀಡುವ ಗೃಹಲಕ್ಷ್ಮಿ ಯೋಜನೆ ಸುಮಾರು 10 ಲಕ್ಷ ಜನರಿಗೆ ಇನ್ನೂ ತಲುಪಿಲ್ಲ. ಬಿಪಿಎಲ್ ಕಾರ್ಡ್‌ದಾರರಿಗೆ ಭರವಸೆ ನೀಡಿದಂತೆ 10 ಕೆಜಿ ಅಕ್ಕಿ ವಿತರಿಸಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3,000 ರೂಪಾಯಿ ನೀಡುವ ಯುವನಿಧಿ ಇನ್ನೂ ಜಾರಿಯೇ ಆಗಿಲ್ಲ. ಹೀಗಾಗಿಯೇ ಗ್ಯಾರಂಟಿ ಜಾರಿಯ ನಡುವೆಯೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ಬಾರಿ ಗುಳೆ ಆರಂಭವಾಗಿದೆ. ರಾಜ್ಯದ ಇತರ ಭಾಗಗಳಲ್ಲೂ ಪರಿಸ್ಥಿತಿ ದಿನೇ ದಿನೆ ಹದಗೆಡುತ್ತಿದೆ. ಬೆಂಗಳೂರಿಗೆ 100 ಕಿಲೋಮೀಟರ್ ದೂರವಿರುವ ಬಾಗೇಪಲ್ಲಿಯಂಥ ಪುಟ್ಟ ಪಟ್ಟಣಕ್ಕೆ ದಿನವೂ ನೂರಾರು ಕೂಲಿ ಕಾರ್ಮಿಕರು ವಿವಿಧ ಗ್ರಾಮಗಳಿಂದ ಕೆಲಸ ಅರಸಿ ಬಂದು ನಿಲ್ಲುತ್ತಾರೆ ಎಂದರೆ, ಪರಿಸ್ಥಿತಿಯ ಗಂಭೀರತೆಯನ್ನು ಆಡಳಿತ ನಡೆಸುವವರು ಅರ್ಥ ಮಾಡಿಕೊಳ್ಳಬೇಕಿದೆ.

ಈ ಬಾರಿ ಬರದ ತೀವ್ರತೆ ಅಷ್ಟು ಕಾಣುತ್ತಿಲ್ಲ ಎಂದರೆ, ಅದಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳು ಜನರಿಗೆ ಕೊಂಚ ಮಟ್ಟಿಗೆ ಸ್ಪಂದಿಸುತ್ತಿರುವುದು ಕಾರಣ. ಆದರೆ, ಎಲ್ಲ ಇಲಾಖೆಗಳ ಹಾಗೂ ಎಲ್ಲ ಭಾಗಗಳ ಪರಿಸ್ಥಿತಿ ಅಷ್ಟು ಆಶಾದಾಯಕವಾಗಿಲ್ಲ. ಸರ್ಕಾರ ಅನಗತ್ಯ ವಿವಾದಗಳಲ್ಲಿ, ಅನಗತ್ಯ ಯೋಜನೆಗಳ ವಿಚಾರದಲ್ಲಿ ಕಾಲಹರಣ ಮಾಡುತ್ತಿದೆ. ಮುಖ್ಯವಾಗಿ, ಬೆಂಗಳೂರಿನಲ್ಲಿ 195 ಕಿಮೀ ಉದ್ದದ 50,000 ಕೋಟಿ ರೂಪಾಯಿ ಖರ್ಚಿನ ಸುರಂಗ ನಿರ್ಮಾಣ, ಅತಿ ಎತ್ತರದ ಸ್ಕೈ ಡೆಕ್ ನಿರ್ಮಾಣ, ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದರಂಥ ಅನಗತ್ಯ ವಿಚಾರಗಳಿಗೆ ಕೊಟ್ಟಷ್ಟು ಒತ್ತನ್ನು ಬರ ಪರಿಹಾರಕ್ಕೆ ಹಾಗೂ ವಾಸ್ತವಿಕ ಯೋಜನಗಳಿಗೆ ನೀಡುತ್ತಿಲ್ಲ ಎನ್ನುವ ಆರೋಪವೂ ಇದೆ.

ಗ್ಯಾರಂಟಿಗಳ ಜಾರಿಗಾಗಿಯೇ ಇನ್ನೂ ತಿಣುಕುತ್ತಿರುವ ಸರ್ಕಾರ, ಬರ ಪರಿಹಾರವೂ ಸೇರಿದಂತೆ ಇತರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು ಪೂರೈಸುವುದು ಎಂದು ಎನ್ನುವ ಪ್ರಶ್ನೆ ಜನರಲ್ಲಿ ಹುಟ್ಟಿಕೊಂಡಿದೆ. ಅದಕ್ಕೆ ಉತ್ತರ ನೀಡುವ ಜವಾಬ್ದಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರದ್ದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X