ಮೋದಿ ನೇತೃತ್ವದ ಮೈತ್ರಿಕೂಟ ಸರ್ಕಾರ ವಿರೋಧ ಪಕ್ಷಗಳ ರಾಜ್ಯಗಳ ವಿರುದ್ಧ ದ್ವೇಷ ಮತ್ತು ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂಬುದು ಹಲವಾರು ವಿಷಯಗಳಿಂದ ಸ್ಪಷ್ಟವಾಗುತ್ತದೆ. ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಭಗ್ನಗೊಳಿಸುವ ಈ ನೀತಿಯಿಂದ ಪ್ರಜಾಪ್ರಭುತ್ವದ ಬುನಾದಿಯೇ ದುರ್ಬಲಗೊಳ್ಳುತ್ತದೆ. ಈಗಲಾದರೂ ರಾಜ್ಯಗಳು ಒಗ್ಗಟ್ಟಾಗಿ ಒಕ್ಕೂಟ ವ್ಯವಸ್ಥೆಯ ಪರವಾಗಿ ಜನಾಂದೋಲನ ರೂಪಿಸದಿದ್ದರೆ, ಮುಂದಿನ ದಿನಗಳಲ್ಲಿ ಪ್ರಶ್ನಿಸುವ ಹಕ್ಕನ್ನೂ ಕಳೆದುಕೊಳ್ಳಬೇಕಾಗುತ್ತದೆ.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಜಡ್ಡುಗಟ್ಟಿದ ಆಡಳಿತ ಮತ್ತು ಮಿತಿಮೀರಿದ ಭ್ರಷ್ಟಾಚಾರದಿಂದ ಭಾರತೀಯರು ಬೇಸತ್ತಿದ್ದರು. ಬದಲಾವಣೆ ಬಯಸಿದ್ದರು. ಭಾರತೀಯ ಜನತಾ ಪಕ್ಷವನ್ನು ಆಯ್ಕೆ ಮಾಡಿಕೊಂಡರು. ಅಧಿಕಾರಕ್ಕೇರಿದ ಬಿಜೆಪಿ ಜನರ ನಿರೀಕ್ಷೆಗೆ ತಕ್ಕಂತೆ, ಆಡಳಿತದಲ್ಲಿ ಕೆಲ ಬದಲಾವಣೆಗಳನ್ನು ತರುವ ಮೂಲಕ ಜನರ ಆಯ್ಕೆಗೆ ಬೆಲೆ ಬರುವಂತೆ ನಡೆದುಕೊಂಡಿತ್ತು.
ಬಿಜೆಪಿ ತನ್ನ ಮೊದಲ ಐದು ವರ್ಷಗಳ ಅವಧಿ ಮುಗಿಸಿ 2019ರಲ್ಲಿಯೂ ಗೆದ್ದು, ಅಧಿಕಾರದಲ್ಲಿ ಮುಂದುವರೆಯುತ್ತಿದ್ದಂತೆ ನಾಯಕರೆನಿಸಿಕೊಂಡವರ ನಡೆ ಮತ್ತು ನುಡಿಯಲ್ಲಿ ಭಾರಿ ಬದಲಾವಣೆಗಳಾದವು. ಆಡಳಿತಾತ್ಮಕ ನೀತಿ ನಿರೂಪಣೆಗಳಲ್ಲಿ ಬಹುತ್ವ ಭಾರತ ಮರೆಯಾಗಿ, ಒಂದು ಧರ್ಮ-ಒಂದು ದೇಶ ಎದ್ದು ಕಾಣತೊಡಗಿತು. ಬಿಜೆಪಿ ಬಿಟ್ಟರೆ ಈ ದೇಶವನ್ನು ಆಳುವ ಅರ್ಹತೆ ಮತ್ತು ಯೋಗ್ಯತೆ ಇನ್ನಾರಿಗೂ ಇಲ್ಲವೆಂಬ ದುರಹಂಕಾರದ ವರ್ತನೆ ಗೋಚರಿಸತೊಡಗಿತು.
ಅದಕ್ಕೆ ಪೂರಕವಾಗಿ ಬಿಜೆಪಿ ನಾಯಕರು, ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಬಹಿರಂಗವಾಗಿ ಹೇಳತೊಡಗಿದರು. ಮುಂದುವರೆದು ವಿರೋಧ ಪಕ್ಷಗಳ ಕಳಂಕಿತರನ್ನು ಪಕ್ಷಕ್ಕೆ ಸೇರಿಸಿಕೊಳ್ಳತೊಡಗಿದರು. ವಿರೋಧಿಗಳನ್ನು ಹಣಿಯಲು ಕೇಂದ್ರದ ತನಿಖಾ ತಂಡಗಳನ್ನು ದುರ್ಬಳಕೆ ಮಾಡಿಕೊಂಡರು. ಶಾಸಕರನ್ನು ಖರೀದಿಸಿ ವಿರೋಧ ಪಕ್ಷಗಳು ಆಡಳಿತವಿದ್ದ ರಾಜ್ಯ ಸರ್ಕಾರಗಳನ್ನೇ ಬುಡಮೇಲು ಮಾಡಿದರು. ದೇಶದಲ್ಲಿ ವಿರೋಧಪಕ್ಷಗಳೇ ಇಲ್ಲದಂತೆ ಮಾಡಿ, ಸರ್ವಾಧಿಕಾರಿಯಂತೆ ಮೆರೆಯಲು ನೋಡಿದರು.
ಭಾರತ ಹೇಳಿಕೇಳಿ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳಿಂದ ಆಯ್ಕೆಯಾದ ಬಿಜೆಪಿಗರು ಪ್ರಜೆಗಳನ್ನು ಮರೆತು ಮೆರೆಯುತ್ತಿದ್ದಾಗ ಪ್ರಜೆಗಳು ಎಚ್ಚೆತ್ತರು. 2024ರ ಚುನಾವಣೆಯಲ್ಲಿ ಬಿಜೆಪಿಯನ್ನು 224 ಸ್ಥಾನಕ್ಕೆ ಇಳಿಸಿದರು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರೆ, ಮೈತ್ರಿಕೂಟದೆದುರು ನಡುಬಗ್ಗಿಸಿ ನಿಲ್ಲುವಂತೆ ನೋಡಿಕೊಂಡರು. ಹತ್ತಿದ ಪಿತ್ತವನ್ನು ಇಳಿಸಿದರು.
ಇಷ್ಟಾದರೂ ಬುದ್ಧಿ ಕಲಿಯದ ಮೋದಿಯವರು ಈಗಲೂ ‘ಒಂದು ರಾಷ್ಟ್ರ ಒಂದು ಚುನಾವಣೆ’ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಬಹುತ್ವ ಭಾರತವನ್ನು ಅರ್ಥ ಮಾಡಿಕೊಳ್ಳದೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಲೇ ಇದ್ದಾರೆ. ಅದರಲ್ಲೂ ಬಿಜೆಪಿ ಆಡಳಿತದಲ್ಲಿ ಇಲ್ಲದ ರಾಜ್ಯಗಳಿಗೆ ಕೇಂದ್ರದಿಂದ ಕೊಡಬೇಕಾದ ಅನುದಾನವನ್ನು ಕೊಡದೆ ಕಡೆಗಣಿಸುತ್ತಿದ್ದಾರೆ.
ಕೇಂದ್ರದ ಎನ್ಇಪಿಗಾಗಿ ಮೀಸಲಿಟ್ಟ ಹಣ 27 ಸಾವಿರ ಕೋಟಿ ರೂಪಾಯಿಗಳು. ಎನ್ಇಪಿಯಲ್ಲಿ ಪ್ರಧಾನಿ ಹೆಸರಿರುವುದಕ್ಕೆ, ಪ್ರಾದೇಶಿಕ ಭಾಷೆ ಕಡೆಗಣನೆಗೆ, ಶೇ. 40 ರಾಜ್ಯ ಸರ್ಕಾರಗಳು ವಿನಿಯೋಗಿಸುವ ಕಾರಣಕ್ಕೆ ಕೆಲ ರಾಜ್ಯಗಳು ಒಪ್ಪಲಿಲ್ಲ. ಆ ಕಾರಣಕ್ಕೆ ವಿರೋಧ ಪಕ್ಷಗಳು ಆಡಳಿತದಲ್ಲಿರುವ ತಮಿಳುನಾಡು, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ದೆಹಲಿ ಸರ್ಕಾರಗಳಿಗೆ ನೂರಾರು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡದೆ, ನಿರಾಕರಿಸಲಾಗಿದೆ. ಬಡ ಮಕ್ಕಳ ಶಿಕ್ಷಣಕ್ಕೆ ಕಲ್ಲು ಹಾಕಲಾಗಿದೆ.
ಇನ್ನು ಕರ್ನಾಟಕದ ಬಗ್ಗೆ ಕೇಂದ್ರದ ಬಿಜೆಪಿ ನಾಯಕರು ತಳೆದಿರುವ ನಿಲುವು ಮತ್ತು ಧೋರಣೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ.
ಮಹದಾಯಿ ಕುಡಿಯುವ ನೀರಿನ ಯೋಜನೆಗಾಗಿ ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಯ 11 ತಾಲೂಕಿನ ರೈತರು ಸತತ 44 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಅದೇ ಭಾಗದಿಂದ ಐದು ಬಾರಿ ಗೆದ್ದು ಕೇಂದ್ರ ಸಚಿವರಾಗಿರುವ ಪ್ರಲ್ಹಾದ ಜೋಶಿ ಇದ್ದರೂ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರೂ, ಸರ್ಕಾರಗಳು ಬಂದುಹೋದರೂ, ಹೋರಾಟಗಾರರಿಗೆ ಲಾಠಿ ಏಟು ಸಿಕ್ಕಿತೆ ಹೊರತು ನೀರು ಸಿಗಲಿಲ್ಲ. 2022ರಲ್ಲಿ ಮಹಾರಾಷ್ಟ್ರ, ಗೋವಾ, ಕರ್ನಾಟಕ- ಮೂರೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು. ಆದರೆ ಬಿಜೆಪಿಗರಿಗೆ ಮನಸ್ಸಿರಲಿಲ್ಲ. ನೀರು ಹರಿಯಲಿಲ್ಲ. ಜನರ ದಾಹ ತಣಿಯಲಿಲ್ಲ. ಬದಲಿಗೆ ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಇಲಾಖೆಗಳಿಂದ ಕಾಲಕಾಲಕ್ಕೆ ತಂಟೆ ತಕರಾರುಗಳೂ ನಿಲ್ಲಲಿಲ್ಲ.
ಜೊತೆಗೆ ಈ ಮಹದಾಯಿ ಯೋಜನೆಗೆ 2 ಲಕ್ಷ ಮರ ಕತ್ತರಿಸಬೇಕಾಗುತ್ತದೆ. ಹೀಗಾಗಿ ಅಷ್ಟು ಸುಲಭವಾಗಿ ಇದಕ್ಕೆ ಅನುಮತಿ ಸಿಗಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮಜಾಯಿಷಿ ನೀಡುತ್ತಾರೆ. ಆದರೆ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆಗಾಗಿ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಒಪ್ಪಿಗೆ ನೀಡಿ, ಕಡತಕ್ಕೆ ಸಹಿ ಹಾಕಿದ್ದಾರೆ. ಇದು 404 ಹೆಕ್ಟೇರ್ ಅರಣ್ಯಭೂಮಿ ಗಣಿಗಾರಿಕೆಗೆ ಬಳಕೆಯಾಗಲಿದ್ದು, ಲಕ್ಷಾಂತರ ಮರಗಳನ್ನು ಕತ್ತರಿಸಬೇಕಾಗುತ್ತದೆ. ಇದಕ್ಕೆ ಜೋಶಿಯವರ ಬಳಿ ಉತ್ತರವಿದೆಯೇ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ದ್ವೇಷ ಭಾಷಣ’ದ ಆಪಾದಿತರು ಹೈಕೋರ್ಟ್ ಜಡ್ಜ್ ಆಗಬಹುದೇ?
ಕರ್ನಾಟಕದ ಮಹದಾಯಿ ಯೋಜನೆಗೆ ಅನುಮತಿ ಕೊಡದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಕರ್ನಾಟಕದ 435 ಎಕರೆ ಅರಣ್ಯ ಬಳಕೆಯಾಗುವ ಗೋವಾ – ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ, ಯಾವ ತಂಟೆ ತಕರಾರುಗಳನ್ನು ತೆಗೆಯದಿರುವುದು ಏನನ್ನು ಸೂಚಿಸುತ್ತದೆ?
ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ್ದ 5,300 ಕೋಟಿ ರೂ. ಬಿಡುಗಡೆ ಮಾಡುವ ಬದಲಿಗೆ ಹೊಸ ಷರತ್ತುಗಳನ್ನು ವಿಧಿಸಿ ಘೋರ ಅನ್ಯಾಯ ಮಾಡುತ್ತಿದೆ. ಯೋಜನೆಗೆ ರಾಜ್ಯ ಸರ್ಕಾರ ಈವರೆಗೆ 9,713.28 ಕೋಟಿ ರೂ. ವೆಚ್ಚ ಮಾಡಿದೆ. ಆದರೆ, ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ 5,300 ಕೋಟಿ ರೂ. ಕೇಳಿದರೆ, ಹೊಸ ಷರತ್ತುಗಳನ್ನು ವಿಧಿಸಿ ಪತ್ರ ಬರೆದಿದೆ. ಇದು ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರದ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆ ಸಜ್ಜಾಗುವ ಲಕ್ಷಣ ಕಾಣುತ್ತಿದೆ.
ಇದರ ಮುಂದುವರಿಕೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೇಂದ್ರ ಸರ್ಕಾರದ ಅನ್ಯಾಯದ ತೆರಿಗೆ ಹಂಚಿಕೆ ಕುರಿತು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೆ ‘ನಮ್ಮ ತೆರಿಗೆ ನಮ್ಮ ಹಕ್ಕು’ ಅಭಿಯಾನದಡಿ ಪತ್ರ ಬರೆದಿದ್ದಾರೆ. ಕರ್ನಾಟಕ ಮತ್ತು ತಲಾವಾರು ಜಿಎಸ್ಡಿಪಿ ಅಧಿಕವಾಗಿರುವ ರಾಜ್ಯಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಗಾಗಿ ಅನ್ಯಾಯಕ್ಕೊಳಗಾಗುತ್ತಿವೆ. ಅಸಮಾನ ತೆರಿಗೆ ಹಂಚಿಕೆಯಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಈ ಅನ್ಯಾಯವು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಈ ನಿಟ್ಟಿನಲ್ಲಿ ಹಣಕಾಸಿನ ಒಕ್ಕೂಟದ ಸಮಸ್ಯೆಗಳ ಕುರಿತು ಒಟ್ಟಾಗಿ ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ.
ಮೋದಿ ನೇತೃತ್ವದ ಮೈತ್ರಿಕೂಟ ಸರ್ಕಾರ ವಿರೋಧ ಪಕ್ಷಗಳ ರಾಜ್ಯಗಳ ವಿರುದ್ಧ ದ್ವೇಷ ಮತ್ತು ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂಬುದು ಮೇಲಿನ ಹಲವಾರು ವಿಷಯಗಳಿಂದ ಸ್ಪಷ್ಟವಾಗುತ್ತದೆ. ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಭಗ್ನಗೊಳಿಸುವ ಈ ನೀತಿಯಿಂದ ಪ್ರಜಾಪ್ರಭುತ್ವದ ಬುನಾದಿಯೇ ದುರ್ಬಲಗೊಳ್ಳುತ್ತದೆ. ಈಗಲಾದರೂ ಪ್ರಾದೇಶಿಕ ಪಕ್ಷಗಳು, ವಿರೋಧ ಪಕ್ಷಗಳು ಆಡಳಿತವಿರುವ ರಾಜ್ಯಗಳು ಒಗ್ಗಟ್ಟಾಗಿ ಒಕ್ಕೂಟ ವ್ಯವಸ್ಥೆಯ ಪರವಾಗಿ ಜನಾಂದೋಲನ ರೂಪಿಸದಿದ್ದರೆ, ಮುಂದಿನ ದಿನಗಳಲ್ಲಿ ಪ್ರಶ್ನಿಸುವ ಹಕ್ಕನ್ನೂ ಕಳೆದುಕೊಳ್ಳಬೇಕಾಗುತ್ತದೆ.
