ಪಟನಾ ನಂತರ ಪ್ರತಿಪಕ್ಷಗಳ ಏಕತೆಯ ದಿಸೆಯಲ್ಲಿ ಎರಡನೆಯ ಸಭೆ ಇದೀಗ ಬೆಂಗಳೂರಿನಲ್ಲಿ ಜರುಗಿದೆ. ಪಟನಾ ಸಮಾವೇಶದ ಹೊತ್ತಿನಲ್ಲಿ ಹದಿನೈದು ಪಕ್ಷಗಳು ಕಲೆತಿದ್ದವು. ಈಗ ಅವುಗಳ ಸಂಖ್ಯೆ 26ಕ್ಕೆ ಏರಿದೆ. ಆದರೆ ಪಟನಾ ಸಮಾವೇಶದ ನಂತರ ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಹೋಳಾಗಿರುವುದು ಗಣನೀಯ ಹಿನ್ನಡೆ
ದೇಶದ ರಾಜಕಾರಣಕ್ಕೆ ಕಾವೇರತೊಡಗಿದೆ. 2024ರ ಲೋಕಸಭಾ ಚುನಾವಣೆಗಳ ತಯಾರಿ ಭರದಿಂದ ಜರುಗಿದೆ. ಪ್ರತಿಪಕ್ಷಗಳ ಬೆಂಗಳೂರು ಸಮಾವೇಶ ವಿರೋಧ ಪಕ್ಷಗಳ ಹೊಸ ಒಕ್ಕೂಟಕ್ಕೆ ಜನ್ಮ ನೀಡಿದೆ. INDIA – (INDIA NATIONAL DEVELOPMENTAL INCLUSIVE ALLIANCE) ಅರ್ಥಾತ್ ಭಾರತ ರಾಷ್ಟ್ರೀಯ ಅಭಿವೃದ್ಧಿಶೀಲ ಸರ್ವಸಮ್ಮಿಳಿತ ಒಕ್ಕೂಟ. ಈ ವಿದ್ಯಮಾನದ ಮಹತ್ವವನ್ನು ಮುಂಬರುವ ದಿನಗಳು ಸಾರಲಿವೆ.
ಹಿಂದೆಯೂ ಪ್ರತಿಪಕ್ಷಗಳ ಏಕತೆಯಲ್ಲಿ ಬೆಂಗಳೂರು ಐತಿಹಾಸಿಕ ಪಾತ್ರ ವಹಿಸಿದ್ದುಂಟು. 1977ರಲ್ಲಿ ‘ಇಂದಿರಾ ಹಠಾವೋ ದೇಶ ಬಚಾವೋ’ ಘೋಷಣೆ ನೀಡಿದ್ದು ಬೆಂಗಳೂರು ಪ್ರತಿಪಕ್ಷಗಳ ಸಮ್ಮೇಳನ. 1989ರಲ್ಲೂ ವಿಪಿ ಸಿಂಗ್ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಇಳಿಸುವ ದಿಸೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು. 2014 ಮತ್ತು 2019ರ ಮೋದಿ ಘನವಿಜಯದ ಇತಿಹಾಸ 2024ರಲ್ಲೂ ಮರುಕಳಿಸುವುದೇ ಅಥವಾ ಅಚ್ಚರಿಯ ಬದಲಾವಣೆ ಕಾಣಸಿಗುವುದೇ ಕಾದು ನೋಡಬೇಕಿದೆ. ಕಳೆದ ಎರಡೂ ಲೋಕಸಭಾ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಚೆದುರಿ ಚೆಲ್ಲಾಪಿಲ್ಲಿಯಾಗಿದ್ದವು.
ಕಡು ಕೋಮುವಾದಿ ರಾಜಕಾರಣದ ವಿಜೃಂಭಣೆಯ ನಡುವೆ ಪ್ರತಿಪಕ್ಷಗಳು ನಿಸ್ತೇಜವಾಗಿ ಅಡ್ಡ ಮಲಗಿರುವ ದಿನಗಳಿವು. ಪ್ರತಿಪಕ್ಷಗಳು ಮತ್ತು ಅವುಗಳ ನಾಯಕರು ಹಾಗೂ ಬಿಜೆಪಿ ವಿರೋಧಿಗಳನ್ನು ಭ್ರಷ್ಟರು, ದೇಶದ್ರೋಹಿಗಳು ಎಂದು ಹಣೆಪಟ್ಟಿ ಹಚ್ಚಿ ಅವರ ಮೇಲೆ ಮೊಕದ್ದಮೆಗಳನ್ನು ಹೂಡಿ ಜೈಲಿಗೆ ತಳ್ಳುವುದು, ಹೆಸರಿಗೆ ಮಸಿ ಬಳಿಯುವುದು ‘ಮೋಶಾ’ ಆಡಳಿತದ ಹೆಗ್ಗುರುತೇ ಆಗಿ ಹೋಗಿದೆ. ಆಪಾದನೆಗಳು ರುಜುವಾತಾಗುತ್ತವೋ ಇಲ್ಲವೋ ಎಂಬ ಕುರಿತು ಜೋಡೀ ತಲೆ ಕೆಡಿಸಿಕೊಳ್ಳುತ್ತಿಲ್ಲ. ತನಿಖೆಯ ಕಾಲದಲ್ಲಿ ಸಂದೇಹದ ಕರಿನೆರಳು- ಬಂಧನ- ಕಳಂಕ- ಜೈಲುವಾಸದ ಪ್ರಕ್ರಿಯೆಯನ್ನೇ ಕಿರುಕುಳ ಮತ್ತು ಶಿಕ್ಷೆಯ ಅಸ್ತ್ರದಂತೆ ಬಳಸಿ ಬಡಿಯಲಾಗುತ್ತಿದೆ. ಜನತಂತ್ರದ ಮೌಲ್ಯಗಳನ್ನು ಕಾಲ ಕಸವಾಗಿಸಿರುವ ಕುತ್ಸಿತ ವಿದ್ಯಮಾನವಿದು.
ಸಮೂಹ ಮಾಧ್ಯಮಗಳನ್ನು, ಅಂತರ್ಜಾಲ ಆಧಾರಿತ ಸಾಮಾಜಿಕ ಮಾಧ್ಯಮಗಳನ್ನು ಕೈವಶ ಮಾಡಿಕೊಂಡು ಜನತೆಯ ಒಪ್ಪಿಗೆಯನ್ನು ತಮಗೆ ಬೇಕಾದಂತೆ ಎರಕ ಹೊಯ್ದು ತಯಾರಿಸಿ, ಅಂತಹ ಅನುಮೋದನೆಯನ್ನು ಮುಂದಿಟ್ಟುಕೊಂಡೇ ಜನತಂತ್ರವನ್ನು ತೆಳುವಾಗಿಸುವ, ಸಹಬಾಳ್ವೆಯ ಭಾರತದ ಬುಡವನ್ನು ಕಡಿಯುವ ಕೆಲಸ ನಿರಾತಂಕವಾಗಿ ಮುಂದುವರೆದಿದೆ. ಹಿಂದುತ್ವವಾದದ ಆಕ್ರಮಣಕಾರಿ ಅಲಗು ಮುಂಬರುವ ದಿನಗಳಲ್ಲಿ ಮತ್ತಷ್ಟು ಮೊನಚು ಪಡೆಯುವುದು ನಿಶ್ಚಿತ. ಅಲ್ಪಸಂಖ್ಯಾತರ ಪೌರ ಹಕ್ಕುಗಳನ್ನು ಮೊಟಕು ಮಾಡಿ ಅವರನ್ನು ಇನ್ನಷ್ಟು ಅಂಚಿಗೆ ತಳ್ಳುವ ಪ್ರಕ್ರಿಯೆ ಹೊಸ ಹುರುಪು ಪಡೆಯುತ್ತಲೇ ಇದೆ. ಸಂವಿಧಾನವನ್ನು ತಿದ್ದುಪಡಿ ಮಾಡುವ ಮಾತುಗಳು ಕೃತಿಗಿಳಿದರೂ ಆಶ್ಚರ್ಯವಿಲ್ಲ.
ಎಲ್ಲ ಸಂಕಟಗಳನ್ನು ಮರೆಸುವಂತಹ ಶಕ್ತಿಶಾಲಿ ಅರಿವಳಿಕೆಯಲ್ಲಿ ಜನಮಾನಸವನ್ನು ಕಟ್ಟಿ ಹಾಕಿದೆ ಬಿಜೆಪಿ. ಈ ಮಂತ್ರಮುಗ್ಧತೆಯನ್ನು ಒಡೆಯಬೇಕಿದ್ದರೆ ಪ್ರತಿಪಕ್ಷಗಳು ತಮ್ಮ ಸ್ವಾರ್ಥ ಸಣ್ಣತನ ಸಮೀಪನೋಟ ಅಹಮಿಕೆಗಳನ್ನು ಬದಿಗೊತ್ತಿ ಒಟ್ಟಾಗಬೇಕಿದೆ.
ಈ ನಡುವೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತನ್ನು ದೇಶದ ಪ್ರತಿಪಕ್ಷಗಳು ತಡವಾಗಿಯಾದರೂ ಗುರುತಿಸಿವೆ. ಜನತಂತ್ರವನ್ನು ಜೀವಂತ ಇರಿಸಬಲ್ಲ ಒಳ್ಳೆಯ ಸೂಚನೆಯಿದು. 2019ರಲ್ಲಿ ನಡೆದಿದ್ದ ಪ್ರಯತ್ನಗಳಿಗಿಂತ ಹೆಚ್ಚು ಸದೃಢವಾದ ಪ್ರಯತ್ನ ಎಂದೇ ಹೇಳಬಹುದು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿ, ಜೆಡಿಎಸ್ ಮತ್ತು ಪ್ರಾದೇಶಿಕ ಅಸ್ಮಿತೆ
ಪಟನಾ ನಂತರ ಪ್ರತಿಪಕ್ಷಗಳ ಏಕತೆಯ ದಿಸೆಯಲ್ಲಿ ಎರಡನೆಯ ಸಭೆ ಇದೀಗ ಬೆಂಗಳೂರಿನಲ್ಲಿ ಜರುಗಿದೆ. ಪಟನಾ ಸಮಾವೇಶದ ಹೊತ್ತಿನಲ್ಲಿ ಹದಿನೈದು ಪಕ್ಷಗಳು ಕಲೆತಿದ್ದವು. ಈಗ ಅವುಗಳ ಸಂಖ್ಯೆ 26ಕ್ಕೆ ಏರಿದೆ. ಆದರೆ ಪಟನಾ ಸಮಾವೇಶದ ನಂತರ ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಹೋಳಾಗಿರುವುದು ಗಣನೀಯ ಹಿನ್ನಡೆ. ಈ ಪ್ರತಿಪಕ್ಷಗಳಲ್ಲಿ ವಿರೋಧಾಭಾಸಗಳು ಹಲವಾರಿವೆ. ಆದರೆ 2024ರ ಚುನಾವಣೆಗಳು ಪ್ರತಿಪಕ್ಷಗಳ ಪಾಲಿಗೆ ಅಳಿವು ಉಳಿವಿನ ಹೋರಾಟ. ವಿಧಾನಸಭಾ ಚುನಾವಣೆಗಳಲ್ಲಿ ಪರಸ್ಪರ ಕಡು ರಾಜಕೀಯ ಹಗೆಗಳಾಗಿ ಕಾದಾಡುವ ಪಕ್ಷಗಳು ಇಲ್ಲಿವೆ.
ಆದರೂ ಪ್ರತಿಪಕ್ಷಗಳ ಈ ಚಲನೆ ಬಿಜೆಪಿಯ ನೆಮ್ಮದಿಯನ್ನು ಕದಡಿರುವುದು ನಿಚ್ಚಳ. ‘ಏಕ್ ಅಕೇಲಾ ಸಬ್ ಪೇ ಭಾರೀ…’ (ಎಲ್ಲ ಪ್ರತಿಪಕ್ಷಗಳು ಸೇರಿದರೂ ಮೋದಿಯವರ ತೂಕವನ್ನು ಸರಿಗಟ್ಟಲಾಗದು) ಎಂಬ ಅತಿವಿಶ್ವಾಸ ಎಲ್ಲಿ ಹಾರಿ ಹೋಯಿತು? ಬಿಜೆಪಿಯು ಚುನಾವಣೆ ಗೆಲ್ಲಬೇಕಿದ್ದರೆ ಮೋದಿ ಮ್ಯಾಜಿಕ್ನ ಭರವಸೆಯೊಂದೇ ಸಾಲದು ಎಂಬ ಆರ್.ಎಸ್.ಎಸ್. ಹೇಳಿಕೆಯ ಅರ್ಥವೇನು? ಬಿಜೆಪಿ ಅಧೀರವಾಯಿತೇ ಅಥವಾ ಯಾವುದನ್ನೂ ಹಗುರವಾಗಿ ಪರಿಗಣಿಸುವುದು ಬೇಡವೆಂಬ ವಿವೇಕ ಮೂಡಿತೇ? ಹೀಗಾಗಿಯೇ ಒಂದೆಡೆ ಪ್ರತಿಪಕ್ಷಗಳನ್ನು ಒಡೆದು ದುರ್ಬಲಗೊಳಿಸುತ್ತ ಮತ್ತೊಂದೆಡೆ ತಾನೇ ಮೂಲೆಗುಂಪು ಮಾಡಿದ್ದ ಎನ್ಡಿಎಗೆ ಮರುಜೀವ ನೀಡಿದೆ. 38 ಪಕ್ಷಗಳು ತನ್ನೊಂದಿಗಿವೆ ಎಂಬ ಪಟ್ಟಿ ನೀಡಿದೆ.
ಸಮಾವೇಶದ ಆರಂಭದಲ್ಲೇ ಕಾಂಗ್ರೆಸ್ ಪಕ್ಷ ಅತ್ಯಂತ ಮಹತ್ವದ ಮಾತುಗಳನ್ನು ಆಡಿದೆ. ಅಧಿಕಾರ ಕೈವಶ ಮಾಡಿಕೊಳ್ಳಬೇಕೆಂಬ ಆಸಕ್ತಿಯಾಗಲಿ, ಪ್ರಧಾನಿ ಹುದ್ದೆಯನ್ನು ಪಡೆಯಲೇಬೇಕೆಂಬ ಆಸಕ್ತಿಯಾಗಲೀ ತನಗೆ ಇಲ್ಲವೆಂದು ಕಾಂಗ್ರೆಸ್ ಸಾರಿದೆ. ಸಂವಿಧಾನ, ಜನತಂತ್ರ, ಜಾತ್ಯತೀತವಾದ, ಹಾಗೂ ಸಾಮಾಜಿಕ ನ್ಯಾಯದ ರಕ್ಷಣೆಗಾಗಿ ಈ ಹೋರಾಟವೆಂದು ಸ್ಪಷ್ಟಪಡಿಸಿದೆ. ತಾನು ದೊಡ್ಡಣ್ಣನಾಗಿ ಇತರರ ಕಾಲು ತುಳಿಯುವುದಿಲ್ಲವೆಂಬ ಭರವಸೆಯಿದು. ಈ ಅಂಶವು ಮುಂಬರುವ ದಿನಗಳಲ್ಲಿ ಪ್ರತಿಪಕ್ಷಗಳ ಏಕತೆಯನ್ನು ಕಟೆದು ನಿಲ್ಲಿಸುವಲ್ಲಿ ಗಣನೀಯ ಪಾತ್ರ ವಹಿಸಬಲ್ಲದು.
ಮೋಶಾ ಅವರ ಕೋಮುವಾದಿ ರಾಜಕಾರಣ, ಸಾಂಸ್ಕೃತಿಕ ರಾಷ್ಟ್ರೀಯತೆ, ಭಾವೋನ್ಮಾದ, ಹಿಂದೂ ಅಸ್ಮಿತೆಯ ಪ್ರಬಲ ಸವಾಲುಗಳಿಗೆ ಅಭಿವೃದ್ಧಿ ರಾಜಕಾರಣ ಮತ್ತು ಜನಕಲ್ಯಾಣ ಕಾರ್ಯಕ್ರಮಗಳು ಮಾತ್ರವೇ ಉತ್ತರವೆಂದು ಭಾವಿಸಿವೆ. ಈ ಭಾವನೆಯ ಆಚೆಗೂ ತಮ್ಮ ಚಿಂತನೆಯನ್ನು ವಿಸ್ತರಿಸಬೇಕಿದೆ. ಆಶೋತ್ತರಗಳ ಭಾರತವನ್ನು ಉದ್ದೇಶಿಸಿ ಮಾತಾಡುವುದು ಅತ್ಯಗತ್ಯ.
ತಮ್ಮ ಮುಂದೆ ಮೈಚಾಚಿರುವುದು ದುರ್ಗಮವಾದ ಏರುದಾರಿ. ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಹಾದಿ ಸುಲಭವಲ್ಲ ಎಂಬ ಕಟುಸತ್ಯವನ್ನು ಪ್ರತಿಪಕ್ಷಗಳು ಮರೆತು ಮೈಮರೆಯುವಂತಿಲ್ಲ.
