ಹತ್ತು ಹದಿನೈದು ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ಇದೇ ರೀತಿಯ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಅತಿಯಾಗಿತ್ತು. ಸಾಲ ಪಡೆದು ತೀರಿಸಲಾಗದ ಬಡವರು ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿತ್ತು. ಆಗ ಆಂಧ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್‌ಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿತ್ತು.
ಸಣ್ಣ ಸಾಲಕ್ಕೆ ಭರಿಸಲಾರದ ಬಡ್ಡಿ, ಮರುಪಾವತಿಯ ಕಂತು ಹೆಚ್ಚಳ, ಕಟ್ಟದಿದ್ದರೆ ನಾನಾ ಕಿರುಕುಳ, ಊರು ತೊರೆಯುವುದು, ಮನೆ ಬಾಗಿಲಿಗೆ ನೋಟಿಸ್, ಮಾನ ಹರಾಜು, ಆತ್ಮಹತ್ಯೆ- ಇದು ಇತ್ತೀಚೆಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರತಿದಿನ ಪ್ರಕಟವಾಗುತ್ತಿರುವ ಸುದ್ದಿಗಳು.
ಆದರೆ ಆಳುವ ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಜನರನ್ನು ಹೆದರಿಸಿ ಕಿರುಕುಳ ನೀಡುವುದನ್ನು ನಾವು ಸಹಿಸುವುದಿಲ್ಲ. ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ವ್ಯವಹಾರಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎನ್ನುವ ಯಥಾಪ್ರಕಾರದ ಹೇಳಿಕೆಗಳನ್ನು ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ.
ಕಾನೂನು ಕ್ರಮ ಕೈಗೊಳ್ಳಬೇಕಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ‘ಮೈಕ್ರೋ ಫೈನಾನ್ಸ್‌ಗೆ ಕಡಿವಾಣ ಹಾಕಲು ಬಿಲ್ ತರುವ ವಿಚಾರ ಪ್ರಗತಿಯಲ್ಲಿದೆ. ಫೈನಾನ್ಸ್ ವಂಚನೆ ತಡೆಗೆ ಹಣಕಾಸು ಇಲಾಖೆ ದಾರಿ ಹುಡುಕಬೇಕು. ಮೋಸ ಹೋದವರು ದೂರು ಕೊಟ್ರೆ ತನಿಖೆ ಮಾಡ್ತೀವಿ’ ಎಂದು ಜಾರಿಕೆಯ ಉತ್ತರ ನೀಡಿದ್ದಾರೆ.
ದೂರು ಕೊಡಬೇಕಾದ ರಾಮನಗರದ ಅರವತ್ತು ವರ್ಷದ ಬಡವಿ ಯಶೋದಮ್ಮ, ಸಾಲ ಕಟ್ಟಲಾಗದೆ, ಫೈನಾನ್ಸ್‌ನವರ ಕಿರುಕುಳ ತಾಳಲಾರದೆ, ಸರೀಕರ ಎದುರು ತಲೆ ಎತ್ತಿಕೊಂಡು ತಿರುಗಲಾರದೆ ನೇಣಿಗೆ ಶರಣಾಗಿದ್ದಾರೆ. ನೊಂದವರ ರಕ್ಷಣೆಗೆ ನಿಲ್ಲಬೇಕಾದ ಪೊಲೀಸರು, ಬಲಿಷ್ಠ ಫೈನಾನ್ಸ್‌ನವರ ಬೆನ್ನಿಗೆ ನಿಂತು, ಬೆಳಗಾವಿ ಜಿಲ್ಲೆಯ ನಾಗನೂರು ಗ್ರಾಮದ ಶಂಕರಪ್ಪ ಎಂಬ ಬಡರೈತನ ಮನೆಗೆ ಮಧ್ಯರಾತ್ರಿ ನುಗ್ಗಿ, 45 ದಿನಗಳ ಮಗು ಮತ್ತು ಬಾಣಂತಿಯನ್ನು ಮನೆಯಿಂದ ಹೊರಗೆ ಹಾಕಿ, ಮನೆಗೆ ಬೀಗ ಜಡಿದಿದ್ದಾರೆ. ಪೊಲೀಸರು ಮತ್ತು ಫೈನಾನ್ಸ್‌ನವರೆಂಬ ರಾಕ್ಷಸರ ಹಿಂಸೆಗಿಂತ ಕೊರೆಯುವ ಚಳಿಯೇ ವಾಸಿ ಎಂದು ಆ ಬಡ ಕುಟುಂಬ ಬೀದಿಯಲ್ಲಿಯೇ ಮಲಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕೊಲ್ಕತ್ತಾದ ಭೀಭತ್ಸ ರೇಪ್-ಹತ್ಯೆ ತನಿಖೆಯಲ್ಲಿ ಸಿಬಿಐ ವಿಫಲವಾಯಿತೇ?
ರಾಜ್ಯದ ಪ್ರತಿ ಹಳ್ಳಿಗೂ ಮನೆ ಮನೆಗೂ ಮೈಕ್ರೋ ಫೈನಾನ್ಸ್‌ಗಳು ದಾಳಿ ಇಟ್ಟಿವೆ. ಒಂದೊಂದು ಊರಿನಲ್ಲಿ ಹತ್ತು ಹದಿನೈದು ಮೈಕ್ರೋ ಫೈನಾನ್ಸ್ ಕಂಪನಿಗಳು ಬಹಳ ಬಿರುಸಿನಿಂದ ಕಾರ್ಯಾಚರಿಸುತ್ತಿವೆ. ಅಮಾಯಕರನ್ನು ಸಾಲ ಮತ್ತು ಬಡ್ಡಿಯ ಬಲೆಯೊಳಗೆ ಬೀಳಿಸಿಕೊಳ್ಳಲು ಸಾಲದ ವಿಧಾನವನ್ನು ಸರಳಗೊಳಿಸಿವೆ. ಆಧಾರ್ ಕಾರ್ಡನ್ನೇ ಆಧಾರವಾಗಿಟ್ಟುಕೊಂಡು, ನಿಂತ ನಿಲುವಿನಲ್ಲಿಯೇ ಸಾಲ ಕೊಡುತ್ತಿವೆ. ಸಾಲ ಸಿಗುವ ದಾರಿ ಸುಲಭವಾದಂತೆಲ್ಲ ಗ್ರಾಮೀಣ ಭಾಗದ ಸಣ್ಣ ವ್ಯಾಪಾರಸ್ಥರು, ಮಹಿಳೆಯರು, ದಿನಗೂಲಿ ಕಾರ್ಮಿಕರು, ಬಡವರು ಅಗತ್ಯಕ್ಕಿಂತಲೂ ಹೆಚ್ಚು ಸಾಲ ಮಾಡುತ್ತಿದ್ದಾರೆ. ಆದರೆ ತೀರಿಸುವ ಮಾರ್ಗ ಕಾಣದೆ ಕಂಗಾಲಾಗುತ್ತಿದ್ದಾರೆ.
ಸುಲಭವಾಗಿ ಸಾಲ ಕೊಡುವ ಖಾಸಗಿ ಹಣಕಾಸಿನ ಸಂಸ್ಥೆಗಳು ಬಡ್ಡಿಯ ವಿವರ ನೀಡುವುದಿಲ್ಲ. ಸಾಲ ಪಡೆಯುವ ಬಡವರು ಅದನ್ನು ಕೇಳುವಷ್ಟು ಧೈರ್ಯವಿರುವುದಿಲ್ಲ, ವಿದ್ಯಾವಂತರಾಗಿರುವುದಿಲ್ಲ. ಒಂದೊಂದು ಸಂಸ್ಥೆ ಒಂದೊಂದು ರೀತಿಯ ಬಡ್ಡಿ, ಚಕ್ರಬಡ್ಡಿಗಳನ್ನು ವಿಧಿಸುತ್ತವೆ. ಮರುಪಾವತಿಗೆ, ಬಡ್ಡಿವಸೂಲಿಗೆ ಅತ್ಯಂತ ಅಮಾನವೀಯ ದಾರಿಯನ್ನು ಹುಡುಕಿಕೊಂಡಿವೆ. ಸಾಲ ಪಡೆದವರ ಮನೆಯ ಮುಂದೆ ಮೊದಲಿಗೆ ಫೈನಾನ್ಸ್ ಕಂಪೆನಿಯ ಸಿಬ್ಬಂದಿ ನಿಲ್ಲುತ್ತಾರೆ. ಮೇಲಧಿಕಾರಿಗಳು ಹೇಳಿದ ಕಿಡಿಗೇಡಿ ಕೃತ್ಯಗಳನ್ನು ಜಾರಿಗೆ ತರುತ್ತಾರೆ. ಅದಾಗದಿದ್ದರೆ ಸ್ಥಳೀಯ ರೌಡಿಗಳನ್ನು, ವಕೀಲರನ್ನು, ಪೊಲೀಸರನ್ನು ಮುಂದಿಟ್ಟುಕೊಂಡು ರಂಪ-ರಾದ್ಧಾಂತ ಮಾಡುತ್ತಾರೆ. ಮನೆ ಬಾಗಿಲಿಗೆ ನೋಟಿಸ್ ಅಂಟಿಸುತ್ತಾರೆ. ಮಾನ ಮರ್ಯಾದೆಗೆ ಅಂಜುವ ಅಳುಕುವ ಬಡವರು ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನು ಕೆಲವರು ಕಿರುಕುಳಕ್ಕೆ ಹೆದರಿ ಮನೆಗಳಿಗೆ ಬೀಗ ಹಾಕಿ ಕುಟುಂಬಸಮೇತ ಊರು ತೊರೆಯುತ್ತಿದ್ದಾರೆ. ಇದು ಪ್ರತಿನಿತ್ಯ ಸುದ್ದಿಯಾಗುತ್ತಿದೆ.
ಹತ್ತು ಹದಿನೈದು ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ಇದೇ ರೀತಿಯ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಅತಿಯಾಗಿತ್ತು. ಸಾಲ ಪಡೆದು ತೀರಿಸಲಾಗದ ಬಡವರು ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿತ್ತು. ಆಗ ಆಂಧ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್‌ಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನದಿಂದಾಗಿ ದೊಡ್ಡಮಟ್ಟದಲ್ಲಿ ಮೈಕ್ರೋ ಫೈನಾನ್ಸ್‌ಗಳು ಆಂಧ್ರದಿಂದ ಕಾಲ್ಕಿತ್ತವು. ಅಂತಹ ಅನೇಕ ಮೈಕ್ರೋ ಫೈನಾನ್ಸ್‌ಗಳು ಈಗ ಕರ್ನಾಟಕದತ್ತ ವಲಸೆ ಬಂದಿವೆ, ತಮ್ಮ ಅಂಗಡಿಗಳನ್ನು ತೆರೆದಿವೆ, ಜನರ ಜೀವ ಹಿಂಡುತ್ತಿವೆ.
ಇಂತಹ ಪರಿಸ್ಥಿತಿ ಉದ್ಭವಿಸಲು ಪರೋಕ್ಷವಾಗಿ ಸರ್ಕಾರ, ಸಹಕಾರಿ ವಲಯ ಮತ್ತು ಜನಪ್ರತಿನಿಧಿಗಳೂ ಕಾರಣಕರ್ತರಾಗಿದ್ದಾರೆ. ಹೇಗೆಂದರೆ, ಸಾಲ ಸೌಲಭ್ಯ ನೀಡುವ ಸರ್ಕಾರಿ ಸಂಸ್ಥೆಗಳು, ಸಹಕಾರಿ ಬ್ಯಾಂಕ್‌ಗಳು, ಪತ್ತಿನ ಸಂಘಗಳು, ಸ್ತ್ರೀಶಕ್ತಿ ಸಂಘಗಳು ಬಲಾಢ್ಯ ಜಾತಿ ಜನರ ಕಪಿಮುಷ್ಟಿಯಲ್ಲಿವೆ. ಇಲ್ಲವೇ ಶಾಸಕರ, ಸಚಿವರ ಹಿಂಬಾಲಕರ ಆಡುಂಬೊಲಗಳಾಗಿವೆ. ಹೀಗಾಗಿ ಈ ಸಂಸ್ಥೆಗಳಿಂದ ಸಿಗುವ ಸಾಲ ಸೌಲಭ್ಯಗಳು ಬಲಾಢ್ಯರಿಗೆ ಮತ್ತು ಬೆಂಬಲಿಗರಿಗೆ ಮಾತ್ರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಕೇಂದ್ರ ಸರ್ಕಾರ ಕೂಡ ನಬಾರ್ಡ್ ಸಾಲ ಸೌಲಭ್ಯವನ್ನು ನಿರಾಕರಿಸಿದೆ. ರಾಜ್ಯ ಸರ್ಕಾರಕ್ಕೆ ದೂರಲು ಅದೇ ನೆಪವಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕುಸಿಯುತ್ತಿರುವ ಸಾಮ್ರಾಜ್ಯದ ಹೊಸ ಅಧಿಪತಿ ಡೊನಾಲ್ಡ್ ಟ್ರಂಪ್
ಇದು ಸಹಜವಾಗಿಯೇ ಆರ್ಥಿಕವಾಗಿ ಹಿಂದುಳಿದ ಜನಕ್ಕೆ, ಅದರಲ್ಲೂ ಬಡವರಿಗೆ ಬೇರೆ ದಾರಿ ಇಲ್ಲದಂತೆ ಮಾಡಿದೆ. ಅವರು ಸುಲಭದಲ್ಲಿ ಸಾಲ ಸಿಗುವ ಮೈಕ್ರೋ ಫೈನಾನ್ಸ್‌ಗಳಿಗೆ ಗಿರಾಕಿಗಳಾಗುತ್ತಿದ್ದಾರೆ. ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ.
ಇಲ್ಲಿ ಸರ್ಕಾರ ಜೀವಂತವಿದೆಯೇ? ಇದ್ದರೆ, ಆದಷ್ಟು ಬೇಗ ಕಾಯ್ದೆ ಕಾನೂನುಗಳ ಮೂಲಕ ಮೈಕ್ರೋ ಫೈನಾನ್ಸ್‌ಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ಬಡವರಿಗೆ ಬದುಕುವ ಧೈರ್ಯ ತುಂಬಲಿ.
