ಈ ದಿನ ಸಂಪಾದಕೀಯ | ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷಗಿರಿ; ಸರ್ಕಾರಕ್ಕೆ ಇರಲಿ ಎಚ್ಚರ

Date:

Advertisements
ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಅಡ್ಡಂಡ ಕಾರ್ಯಪ್ಪರಂಥ ಕೆಲವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಕೆಲವು ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮುಂದುವರೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇಂಥವರನ್ನು ಸರ್ಕಾರ ಹೊರಗೆ ಕಳಿಸಬೇಕಿದೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅನೇಕ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡುತ್ತಿದ್ದಾರೆ. ಹಾಗೆ ಭೇಟಿ ಮಾಡುವವರ ಪೈಕಿ ಹೆಚ್ಚಿನವರು ಕಾಂಗ್ರೆಸ್ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ಬಯಸುವವರು ಎನ್ನಲಾಗುತ್ತಿದೆ. ವಿವಿಧ ನಿಗಮ ಮಂಡಳಿ ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷರಾಗಲು ಬಯಸಿದವರು, ವಿಧಾನ ಪರಿಷತ್ ಸದಸ್ಯರಾಗಲು ಹೊರಟವರು ಎಲ್ಲರೂ ಈ ಪಟ್ಟಿಯಲ್ಲಿದ್ದಾರೆ. ಅವರ ಪೈಕಿ ಕೆಲವರು ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರಾಗಿದ್ದವರೂ ಇದ್ದಾರೆ. ಅದಕ್ಕಿಂತಲೂ ವಿಚಿತ್ರ ಎಂದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಅದರೊಂದಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಗುರುತಿಸಿಕೊಂಡಿದ್ದ ಚಂದ್ರಶೇಖರ ಕಂಬಾರರಂಥವರೂ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಹಾಗೆ ಭೇಟಿಯಾದವರ ಪೈಕಿ ಹೆಚ್ಚಿನವರು ಈ ಬಾರಿ ನಿಗಮ ಮಂಡಳಿ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರಾಗಲು ಹೊರಟವರ ಯಾದಿಯಲ್ಲಿದ್ದಾರೆ ಎನ್ನುವ ಮಾತುಗಳಿವೆ.         

ಇದರ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯುತ್ತಿದೆ. ಈ ಬಾರಿ ಹೊಸ ಮುಖಗಳಿಗೆ ಆದ್ಯತೆ ಕೊಡಬೇಕೆಂಬ ಒತ್ತಾಯ ಕೇಳಿಬರತೊಡಗಿದೆ. ಅದರಲ್ಲೂ ಸೈದ್ಧಾಂತಿಕವಾಗಿ ಸ್ಪಷ್ಟತೆ ಮತ್ತು ಬದ್ಧತೆ ಇರುವ, ತಮ್ಮ ಬದುಕಿನಲ್ಲಿ ಜನಪರ ಮೌಲ್ಯಗಳನ್ನು ಕೊಂಚವಾದರೂ ಅಳವಡಿಸಿಕೊಂಡಿರುವವರಿಗೆ ಆದ್ಯತೆ ನೀಡಬೇಕೆಂದು ಕೆಲವರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದ ಪುಢಾರಿಗಳಂತೆ ಇರುವವರನ್ನು ನೇಮಕ ಮಾಡಬಾರದೆನ್ನುವ ಕೂಗು ಜೋರಾಗಿದೆ.

ಒಂದು ನಾಡಿನ ಶಿಕ್ಷಣ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷಗಿರಿ ಎಷ್ಟು ಮುಖ್ಯ ಎನ್ನುವುದನ್ನು ಈ ಹಿಂದಿನ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಅವುಗಳ ಅಧ್ಯಕ್ಷರಾಗಿ ನೇಮಕವಾಗಿದ್ದವರು, ಅವರು ಮಾಡಿದ ಕೆಲಸಗಳನ್ನು ನೋಡಿದರೆ ಮನದಟ್ಟಾಗುತ್ತದೆ. ಆಗ ಅಧ್ಯಕ್ಷರಾಗಿದ್ದ ಬಹುತೇಕರು ಅಕಾಡೆಮಿ, ಪ್ರಾಧಿಕಾರಗಳನ್ನು ಆರ್‌ಎಸ್‌ಎಸ್‌ಮಯ ಮಾಡಿದ್ದರು. ಸರ್ಕಾರದ ಹಣ ಖರ್ಚು ಮಾಡಿ ಸಂಘ ಪರಿವಾರದ ಸಿದ್ಧಾಂತವನ್ನು ಹರಡಿದ್ದರು.

Advertisements

ರಂಗಾಯಣದ ನಿರ್ದೇಶಕರಾಗಿದ್ದ ಅಡ್ಡಂಡ ಕಾರ್ಯಪ್ಪ ಅವರಂತೂ ಬಿಜೆಪಿಯ ಹಿಡನ್ ಅಜೆಂಡಾವನ್ನು ನೇರವಾಗಿ ಕೃತಿರೂಪಕ್ಕಿಳಿಸಿದ್ದರು. ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆಗೆ ತಂದರೆಂದು ಅದರ ವಿರುದ್ಧವಾಗಿ ‘ಟಿಪ್ಪು ನಿಜ ಕನಸುಗಳು’ ಎನ್ನುವ ನಾಟಕ ಬರೆದು ಅದನ್ನು ರಂಗಾಯಣದ ಮೂಲಕ ಪ್ರಯೋಗಿಸಿದ್ದರು. ಮುಸ್ಲಿಮರ ಬಗ್ಗೆ, ಟಿಪ್ಪು ಬಗ್ಗೆ ಸುಳ್ಳುಗಳನ್ನು ಹರಡುವ ಆ ಪುಸ್ತಕವನ್ನು ನಿಷೇಧಿಸಬೇಕೆನ್ನುವ ಕೂಗೆದ್ದಿತು. ಕೊನೆಗೆ ಆ ವಿವಾದ ಕೋರ್ಟ್ ಮೆಟ್ಟಿಲೇರಿತ್ತು.     

ಸಾಹಿತ್ಯ ಅಕಾಡೆಮಿಯಲ್ಲೂ ಇಂಥದ್ದೇ ಸ್ಥಿತಿ. ವೃತ್ತಿಯಿಂದ ಪ್ರಾಧ್ಯಾಪಕರೂ ಪ್ರವೃತ್ತಿಯಿಂದ ಆರ್‌ಎಸ್‌ಎಸ್‌ ಪ್ರಚಾರಕರೂ ಆದ ಬಿ ವಿ ವಸಂತಕುಮಾರ್ ಅವಧಿಯಲ್ಲಿ ಅಲ್ಲಿ ಹೆಚ್ಚು ಮನ್ನಣೆ ಪಡೆದವರು ಜಿ ಬಿ ಹರೀಶ್ ತರಹದ ಮನುವಾದದ ಪ್ರಸಾರಕರು. ಮಾಧ್ಯಮ ಅಕಾಡೆಮಿಯಲ್ಲಿ ಪ್ರಶಸ್ತಿ ಪುರಸ್ಕಾರ ಸಿಕ್ಕಿದ್ದು ಕೂಡ ಇಂಥವರಿಗೇ; ಜನಪರ ಮೌಲ್ಯಗಳಿಗೆ ವಿರುದ್ಧವಾದ ಹಾಗೂ ಕಾಂಗ್ರೆಸ್‌ನ ತತ್ವ ಸಿದ್ಧಾಂತವನ್ನು ನಖಶಿಖಾಂತ ವಿರೋಧಿಸುವ ಹರಿಪ್ರಕಾಶ್ ಕೋಣೆಮನೆ, ಅಜಿತ್ ಹನುಮಕ್ಕನವರ್, ಶಂಕರಾಚಾರ್ಯರ ಬಗ್ಗೆ, ವೇದ ಪುರಾಣಗಳ ಬಗ್ಗೆ ಬರೆಯುವುದನ್ನೇ ಪತ್ರಿಕೋದ್ಯಮ ಎಂದುಕೊಂಡಿರುವ ಸೂರ್ಯಪ್ರಕಾಶ್ ಪಂಡಿತ್ ಮುಂತಾದವರಿಗೆ ಪ್ರಶಸ್ತಿಯನ್ನು ಕೊಡಲಾಯಿತು. ಸರ್ಕಾರದ ಬಹುತೇಕ ಎಲ್ಲ ಅಕಾಡೆಮಿ, ಪ್ರಾಧಿಕಾರಗಳದ್ದೂ ಇದೇ ಕಥೆ. ಸರ್ಕಾರದ ಅಡಿಯಲ್ಲಿ ಬಾರದ ಬೆಂಗಳೂರು ಪ್ರೆಸ್ ಕ್ಲಬ್‌ನಂಥ ಕಡೆ ಕೂಡ ಮೋದಿಯವರನ್ನು ಮೆಚ್ಚಿ ಕೊಂಡಾಡುವ ಪ್ರಕಾಶ್ ಬೆಳವಾಡಿಯಂಥವರಿಗೆ, ಎಂದೋ ಒಂದು ಕಾಲದಲ್ಲಿ ಅಲ್ಪಾವಧಿಗೆ ಪತ್ರಕರ್ತರಾಗಿದ್ದರು ಎನ್ನುವ ನೆಪ ಹುಡುಕಿ, ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಲ್ಲೆಲ್ಲೂ ಸಂಘದ ಸಿದ್ಧಾಂತ ಹರಡುವವರೇ ಸಲ್ಲತೊಡಗಿದ್ದರು.

ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಅಡ್ಡಂಡ ಕಾರ್ಯಪ್ಪರಂಥ ಕೆಲವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಹೊರಹೋಗಿದ್ದಾರೆ. ಕೆಲವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮುಂದುವರೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇಂಥವರು ಕಾಂಗ್ರೆಸ್ ಸರ್ಕಾರಕ್ಕೂ ಈ ನಾಡಿಗೂ ಹೆಚ್ಚು ಅಪಾಯಕಾರಿಗಳು. ಇಂಥ ಎಲ್ಲರನ್ನೂ ಸಿದ್ದರಾಮಯ್ಯನವರು ಹೊರಗೆ ಕಳಿಸಿ, ನಿಜವಾದ ಅರ್ಥದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು ಆಚರಣೆಗೆ ತರುವಂಥ ಪ್ರಾಮಾಣಿಕರನ್ನು ಹಾಗೂ ದಕ್ಷರನ್ನು ಅಕಾಡೆಮಿ, ಪ್ರಾಧಿಕಾರಗಳಿಗೆ ತರಬೇಕಾಗಿದೆ. ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿರುವ ಕಾಂಗ್ರೆಸ್‌, ಅದರ ತತ್ವ ಸಿದ್ಧಾಂತಗಳನ್ನೂ ಜನಮಾನಸದಲ್ಲಿ ಸೋಲಿಸಲು ಕಾರ್ಯೋನ್ಮುಖವಾಗಬೇಕಿದೆ; ಸಂವಿಧಾನವಿರೋಧಿ ಶಕ್ತಿಗಳನ್ನು ಸರ್ವ ರೀತಿಯಲ್ಲೂ ಸದೆಬಡಿಯಬೇಕಾಗಿದೆ.                                     

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X