ಈ ದಿನ ಸಂಪಾದಕೀಯ | ಸರಕಾರಕ್ಕೆ ಇಕ್ಕಟ್ಟು ತಂದ ಖಾಸಗಿ ಮೀಸಲು ಸಮಸ್ಯೆ

Date:

Advertisements
ಸಿದ್ದರಾಮಯ್ಯನವರು ಖಾಸಗಿ ಮೀಸಲು ಪ್ರಸ್ತಾಪಿಸಿ, ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಆದವರು ರಾಜ್ಯವನ್ನು ಸಮಸ್ಟಿ ದೃಷ್ಟಿಯಿಂದ ನೋಡಬೇಕಾಗುತ್ತದೆ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವ ಜೊತೆಗೆ ವಲಸಿಗರನ್ನೂ ಒಳಗೊಂಡಂತೆ ಹಾಗೂ ಉದ್ಯಮಗಳೂ ಹೊರ ರಾಜ್ಯಕ್ಕೆ ಹೋಗದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.

‘ರಾಜ್ಯದ ಖಾಸಗಿ ಉದ್ದಿಮೆಗಳ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ ನೀಡುವ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸರ್ಕಾರದ ನಡೆ ಸಹಜವಾಗಿಯೇ ಕನ್ನಡಿಗರಿಗೆ ಖುಷಿಯ ವಿಷಯವಾಗಿತ್ತು. ಕೆಲವು ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಕಂಡು ಅಭಿನಂದನೆ ಅರ್ಪಿಸಿದ್ದೂ ಆಯಿತು.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಉದ್ಯಮ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಅದರಲ್ಲೂ ಕನ್ನಡಿಗರೇ ಆದ ಮಣಿಪಾಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಮೋಹನ್ ದಾಸ್ ಪೈ, ‘ಇದು ತಾರತಮ್ಯದಿಂದ ಕೂಡಿದ ಮತ್ತು ಪ್ರತಿಗಾಮಿ ಸ್ವರೂಪದ ಮಸೂದೆ’ ಎಂದು ಸರ್ಕಾರದ ವಿರುದ್ಧ ತಿರುಗಿಬಿದ್ದರು. ಮುಂದುವರೆದು, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ‘ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಐಟಿ ಸೇವೆಯಲ್ಲಿ ನಮ್ಮ ಅಗ್ರಸ್ಥಾನಕ್ಕೆ ಧಕ್ಕೆ ಮಾಡಿಕೊಳ್ಳಲಾಗದು. ಪ್ರತಿಭಾನ್ವಿತರ ಆಯ್ಕೆಗೆ ಅವಕಾಶವಿರಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಷ್ಟೇ ಅಲ್ಲ, ಐಟಿ ಉದ್ಯಮಿಗಳ ಒಕ್ಕೂಟವಾದ ನ್ಯಾಸ್ಕಾಂ, ‘ಕರ್ನಾಟಕದ ವಿಧೇಯಕ ನಿರಾಶದಾಯಕ ಮತ್ತು ಕಳವಳಕಾರಿ. ಸ್ಥಳೀಯವಾಗಿ ಕೌಶಲ್ಯಯುತ ಸಿಬ್ಬಂದಿ ಕೊರತೆಯಾದರೆ ಕಂಪನಿಗಳು ರಾಜ್ಯ ತೊರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ಸರ್ಕಾರ ಈ ವಿಧೇಯಕ ಹಿಂಪಡೆಯಬೇಕು’ ಎಂಬ ಬಹಿರಂಗ ಎಚ್ಚರಿಕೆಯನ್ನೂ ಕೊಟ್ಟಿದ್ದಾಯಿತು.

Advertisements

ಐಟಿ-ಬಿಟಿಯಲ್ಲಿ ಕರ್ನಾಟಕ ನಂಬರ್ ವನ್ ಸ್ಥಾನದಲ್ಲಿದೆ. ಬೆಂಗಳೂರನ್ನು ಸ್ಟಾರ್ಟ್ ಅಪ್ ಹಬ್, ಸಿಲಿಕಾನ್ ವ್ಯಾಲಿ ಅಂತೆಲ್ಲ ಕರೆಯಲಾಗುತ್ತದೆ. ಇದು ರಾಷ್ಟ್ರೀಯ ಉತ್ಪನ್ನ(ಜಿಡಿಪಿ) ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವಾಗ ಹೆಮ್ಮೆಯಿಂದ ಹೇಳಿಕೊಳ್ಳುವ ವಿಚಾರವಾಗಿದೆ. ಹಾಗೆಯೇ ಐಟಿ ಉದ್ಯಮ ಹುಲುಸಾಗಿ ಬೆಳೆಯಲು ಸರ್ಕಾರ ನೆಲ, ಜಲ, ತೆರಿಗೆ, ವಿದ್ಯುತ್, ಸಾರಿಗೆಯಂತಹ ಮೂಲಭೂತ ಸೌಕರ್ಯಗಳನ್ನು ಕೇಳಿದಂತೆಲ್ಲ ಒದಗಿಸಿಕೊಡಲಾಗಿದೆ. ಕಾಯ್ದೆ-ಕಾನೂನುಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬದಲಿಸಲಾಗಿದೆ.

ಆದರೆ ಕನ್ನಡಿಗರಿಗೆ ಉದ್ಯೋಗ ನೀಡುವ ಸಂದರ್ಭ ಎದುರಾದಾಗ, ಕನ್ನಡಿಗರಲ್ಲಿ ಗುಣಮಟ್ಟವಿಲ್ಲ, ಪ್ರತಿಭೆಯಿಲ್ಲ, ಕೌಶಲ್ಯವಿಲ್ಲ ಎಂಬರ್ಥದಲ್ಲಿ ಮಾತನಾಡಲಾಗುತ್ತದೆ. ಇದು ಅತ್ಯಂತ ಆಘಾತಕಾರಿ ನಡೆಯಾಗಿದೆ. ಕರ್ನಾಟಕ ರಾಜ್ಯಕ್ಕೆ ಎದುರಾದ ಈ ಸಂದಿಗ್ಧ ಸಂದರ್ಭವನ್ನು ಬಳಸಿಕೊಳ್ಳಲು ಯತ್ನಿಸಿರುವ ಪಕ್ಕದ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್, ‘ಕರ್ನಾಟಕ ಐಟಿ ಕಂಪನಿಗಳು ವಿಶಾಖಪಟ್ಟಣಕ್ಕೆ ಬರಬೇಕು. ಅನುಕೂಲ ಮಾಡಿಕೊಡಲಿದ್ದೇವೆ’ ಎಂದಿರುವುದು ನಿಜಕ್ಕೂ ಅವಕಾಶವಾದಿ ನಡೆಯಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಗ್ಯಾರಂಟಿ ಯೋಜನೆಗಳಿಗೆ ಮೀಸಲು ನಿಧಿ ಬಳಕೆಯನ್ನು ತಕ್ಷಣ ತಡೆಯಬೇಕು

ಸರ್ಕಾರದ ಖಾಸಗಿ ಮೀಸಲಿನ ನಡೆಗೆ ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂದರೆ; ಐಟಿ ಉದ್ಯಮಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹೀಗೆ ಒಟ್ಟೊಟ್ಟಿಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾದ್ದರಿಂದ ವಿಚಲಿತಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಂಚ ಹಿಂಜರಿದಿದ್ದಾರೆ. ಆ ತಕ್ಷಣವೇ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಡಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಇದು ವಿಪಕ್ಷಗಳಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿಕ್ಕ ಅನಾಯಾಸ ಅವಕಾಶವಾಗಿದೆ, ಅದು ಒತ್ತಟ್ಟಿಗಿರಲಿ.

ಏತನ್ಮಧ್ಯೆ, ಈ ಎಲ್ಲ ಬೆಳವಣಿಗೆಗಳ ನಡುವೆಯೇ ಬುಧವಾರ ಸಂಜೆಯ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಖಾಸಗಿ ಕೈಗಾರಿಕೆಗಳು, ಇತರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 75 ಮೀಸಲಾತಿ ನಿಗದಿಪಡಿಸುವ ಮಸೂದೆಗೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ಎಂಬತ್ತರ ದಶಕದಲ್ಲಿಯೇ ರಚನೆಯಾದ ಸರೋಜಿನಿ ಮಹಿಷಿ ವರದಿಯಲ್ಲಿ ಸ್ಥಳೀಯರಿಗೆ ಸರಕಾರಿ ಹಾಗೂ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಬೇಕೆನ್ನುವ ಸ್ಪಷ್ಟ ಬೇಡಿಕೆ ಇದೆ. ಆದರೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವ ನಿಟ್ಟಿನಲ್ಲಿ ಯಾವ ಸರ್ಕಾರವೂ ಈವರೆಗೆ ಖಡಕ್ ಕ್ರಮ ಕೈಗೊಂಡಿದ್ದಿಲ್ಲ. ಅದರಲ್ಲೂ ಐಟಿ-ಬಿಟಿ, ಕಾರ್ಪೊರೇಟ್ ವಲಯಗಳಲ್ಲಿ ಉದ್ಯೋಗ ಮೀಸಲಿಡಿ ಎಂದು ಕೇಳುವ ಧೈರ್ಯ ಕೂಡ ಮಾಡಿದ್ದಿಲ್ಲ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಮುಂದಾಗಿದೆ. ಹಾಗೆಯೇ ಸಮಸ್ಯೆಯೂ ಎದುರಾಗಿದೆ. ಇಂಥದ್ದೇ ಸಮಸ್ಯೆ 2012-13ರಲ್ಲಿ ಪಕ್ಕದ ತಮಿಳುನಾಡು ಸರ್ಕಾರಕ್ಕೂ ಎದುರಾಗಿತ್ತು. ಕಡಿಮೆ ಸಂಬಳಕ್ಕೆ ಸುಲಭಕ್ಕೆ ಸಿಗುವ ವಲಸಿಗರ ಸಂಖ್ಯೆ ಹೆಚ್ಚಾದಾಗ, ಸ್ಥಳೀಯರಿಗೆ ಉದ್ಯೋಗ ಸಿಗದಿದ್ದಾಗ, ತಮಿಳರು ಆತಂಕಕ್ಕೊಳಗಾಗಿದ್ದರು. ಆಗ ತಮಿಳುನಾಡು ಸರ್ಕಾರ ಖಾಸಗಿ ಮೀಸಲಾತಿಯನ್ನು ಅಲ್ಲಿಯೂ ಅಳವಡಿಸಿತ್ತು. ಪರ-ವಿರೋಧ ಚರ್ಚೆಗಳಿಗೂ ಅವಕಾಶ ನೀಡಿತ್ತು. ಕೊನೆಗೆ ಭಾಷಾಪ್ರೇಮಿಗಳಾದ ತಮಿಳರು ಮೇಲುಗೈ ಸಾಧಿಸುವಲ್ಲಿ ಸಫಲರಾದರು.

ಜಾಗತೀಕರಣದ ನಂತರ, ವಲಸೆ ಎನ್ನುವುದು ಜಾಗತಿಕ ವಿದ್ಯಮಾನವಾಗಿದೆ. ಇದರಿಂದ ಯಾವ ದೇಶವೂ ತಪ್ಪಿಸಿಕೊಳ್ಳಲಾಗಿಲ್ಲ. ವಲಸೆಯಿಂದ ಆರ್ಥಿಕ ಚಲನಶೀಲತೆಯೂ ಇದೆ, ಸಾಮಾಜಿಕ ಸಮಸ್ಯೆಯೂ ಇದೆ. ಅಸ್ಮಿತೆಯ ಪ್ರಶ್ನೆಯೂ ಎದುರಾಗಲಿದೆ. ರಾಜ್ಯದ ಮಟ್ಟಿಗೆ ನೋಡುವುದಾದರೆ, ಒಂದು ಕಡೆ ಐಟಿ ಉದ್ಯಮಗಳಿಗೆ ಮೂಲಸೌಕರ್ಯ ಒದಗಿಸಿಕೊಟ್ಟರೂ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 50 ಮೀಸಲಾತಿ ಕೇಳಲಿಕ್ಕಾಗದಿರುವುದು. ಮತ್ತೊಂದು ಕಡೆ, ಸ್ಥಳೀಯರು ಮಾಡಲಿಚ್ಛಿಸದ ಡಿ ದರ್ಜೆ ಉದ್ಯೋಗಗಳನ್ನು, ಅತ್ಯಂತ ಕಡಿಮೆ ಸಂಬಳಕ್ಕೆ ಮಾಡುವ ಹೊರರಾಜ್ಯದ ವಲಸೆ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು.

ಮುಖ್ಯಮಂತ್ರಿಯಾದವರು ರಾಜ್ಯವನ್ನು ಸಮಷ್ಟಿ ದೃಷ್ಟಿಯಿಂದ ನೋಡಬೇಕಾಗುತ್ತದೆ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವ ಜೊತೆಗೆ ವಲಸಿಗರನ್ನೂ ಒಳಗೊಂಡಂತೆ ಹಾಗೂ ಉದ್ಯಮಗಳೂ ಹೊರ ರಾಜ್ಯಕ್ಕೆ ಹೋಗದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಕನ್ನಡಿಗರ ಹಿತ ಕಾಯಲು ಆಡಳಿತಪಕ್ಷ ಮತ್ತು ವಿರೋಧಪಕ್ಷಗಳು ರಾಜಕೀಯವನ್ನು ಬದಿಗಿಟ್ಟು ಪರಸ್ಪರ ಸಮಾಲೋಚನೆ ನಡೆಸಿ ಒಮ್ಮತದ ಹೆಜ್ಜೆ ಮುಂದಿಡುವುದು ಸೂಕ್ತ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X