ಈ ದಿನ ಸಂಪಾದಕೀಯ | ಭಾರತದ ಹಸಿದ ಹೊಟ್ಟೆಗಳು ಹೇಳುತ್ತಿರುವ ಕುಬೇರರ ಕಥೆ

Date:

Advertisements

ಮೋದಿ ಅಧಿಕಾರಕ್ಕೆ ಬಂದ ನಂತರ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕಾಗಿದ್ದ ಹಣವನ್ನು ಕಡಿತಗೊಳಿಸಿ, ಉದ್ದಿಮೆದಾರರಿಗೆ ಹಲವು ವಿಶೇಷ ಸೌಕರ್ಯ ಕಲ್ಪಿಸಿ, ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿದರು. ಇಂಥ ಉಪಕ್ರಮಗಳಿಂದ ಭಾರತದಲ್ಲಿನ ಶ್ರೀಮಂತರ ಸಂಖ್ಯೆ ಮತ್ತು ಶ್ರೀಮಂತರ ಸಂಪತ್ತಿನ ಪ್ರಮಾಣ ಹೆಚ್ಚಾಗಿದೆ ಎನ್ನುವುದು ಹಲವು ವರದಿಗಳಲ್ಲಿ ಪ್ರತಿಬಿಂಬಿತವಾಗಿದೆ.

ಭಾರತದ ಜನ ನಿಜಕ್ಕೂ ಗಾಬರಿಗೊಳ್ಳುವಂಥ ಎರಡು ವರದಿಗಳು ಈ ವಾರ ಬಿಡುಗಡೆಯಾಗಿವೆ. ಒಂದನೆಯದಾಗಿ, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿದಿದೆ. ಅದರ ಕಾರಣವನ್ನು ವಿವರಿಸುವಂತೆ, ಭಾರತದಲ್ಲಿ ಅಂಬಾನಿ, ಅದಾನಿಗಳಂಥ ಕುಬೇರರ ಮತ್ತು ಅವರ ಸಂಪತ್ತಿನ ವಿವರಗಳನ್ನು ಫೋರ್ಬ್ ಶ್ರೀಮಂತರ ಪಟ್ಟಿ ಹೊರಗಡೆವಿದೆ. ಇವೆರಡೂ ಭಾರತ ಯಾವ ದಿಕ್ಕಿನಲ್ಲಿ ದಾಪುಗಾಲಿಡುತ್ತಿದೆ ಎನ್ನುವುದನ್ನು ಸಂಕೇತಿಸುತ್ತವೆ.

125 ದೇಶಗಳಿಗೆ ಸಂಬಂಧಿಸಿದ ಪ್ರಸಕ್ತ ಸಾಲಿನ ಜಾಗತಿಕ ಹಸಿವು ಸೂಚ್ಯಂಕ-2023 ರಲ್ಲಿ ಭಾರತವು 111ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 121 ರಾಷ್ಟ್ರಗಳ ಪೈಕಿ ಭಾರತ 107ನೇ ಸ್ಥಾನದಲ್ಲಿತ್ತು. ವಿಶೇಷ ಎಂದರೆ, ಈ ವಿಷಯದಲ್ಲಿ ಭಾರತದ ನೆರೆಯ ರಾಷ್ಟ್ರಗಳ ಪೈಕಿ ಪಾಕಿಸ್ತಾನ 102ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 81, ನೇಪಾಳ-69, ಹಾಗೂ ಶ್ರೀಲಂಕಾ 60ನೇ ಸ್ಥಾನದಲ್ಲಿವೆ. ಹಸಿವಿನ ಸೂಚ್ಯಂಕಕ್ಕೆ ಸಂಬಂಧಿಸಿ ಭಾರತದ ಅಂಕ ಶೇ.27.8ರಷ್ಟಿದೆ. ಇದು ದೇಶದಲ್ಲಿ ಹಸಿವಿನ ಮಟ್ಟ ಗಂಭೀರವಾಗಿರುವುದನ್ನು ತೋರಿಸುತ್ತದೆ. ಭಾರತದಲ್ಲಿ ತಮ್ಮ ಎತ್ತರಕ್ಕೆ ತಕ್ಕಷ್ಟು ತೂಕ ಹೊಂದಿಲ್ಲದ ಅಪೌಷ್ಟಿಕ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿದ್ದು, ಶೇ.18.7ರಷ್ಟಿದೆ. ಇದು ಜಗತ್ತಿನಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ ಎಂದು ಜಾಗತಿಕ ಹಸಿವು ಸೂಚ್ಯಂಕ ವರದಿ ತಿಳಿಸಿದೆ. ದೇಶದಲ್ಲಿ 5 ವರ್ಷದ ಒಳಗಿನ ಮಕ್ಕಳ ಮರಣ ಪ್ರಮಾಣ ಶೇ.58.1 ಇದ್ದರೆ, ವಯಸ್ಕ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಮಾಣವೂ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

Advertisements

ಯಥಾಪ್ರಕಾರ ಮೋದಿ ಸರ್ಕಾರ, ಜಾಗತಿಕ ಹಸಿವು ಸೂಚ್ಯಂಕದ ವರದಿಯನ್ನು ತಳ್ಳಿ ಹಾಕಿದೆ. ‘ಸೂಚ್ಯಂಕವು ಗಂಭೀರವಾದ ಕ್ರಮಶಾಸ್ತ್ರೀಯ ಸಮಸ್ಯೆಗಳಿಂದ ಬಳಲುತ್ತಿದೆ ಮತ್ತು ದುರುದ್ದೇಶ ಹೊಂದಿದೆ’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆ. ಈ ಹಿಂದೆಯೂ ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತದ ರ್‍ಯಾಂಕ್ ಕುಸಿದಿದೆ ಎಂದಾಗ, ಜಾಗತಿಕ ಬಡತನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿದಾಗ, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ತಜ್ಞರ ಸಮಿತಿ ವರದಿ ನೀಡಿದಾಗಲೂ ಭಾರತ ಅದೆಲ್ಲವನ್ನು ನಿರಾಕರಿಸಿ, ಆ ವರದಿಗಳು ದೋಷಯುಕ್ತ ಎಂದು ಹೇಳಿತ್ತು.

ವಿಚಿತ್ರವೆಂದರೆ, ಕೇವಲ ವಿದೇಶಗಳ ವರದಿಗಳನ್ನಷ್ಟೇ ಅಲ್ಲ, ಕೇಂದ್ರ ಸರ್ಕಾರಕ್ಕೆ ವಿರುದ್ಧವಾದ ದೇಶದೊಳಗಿನ ಸಂಸ್ಥೆಗಳ ವರದಿಗಳನ್ನೂ ಕೂಡ ಮೋದಿ ಸರ್ಕಾರ ಹೀಗೆಯೇ ನಿರಾಕರಿಸಿದೆ. 2015-16ಕ್ಕೆ ಹೋಲಿಸಿದರೆ, 2019-20ರಲ್ಲಿ ರಕ್ತಹೀನತೆಯಿಂದ ಬಳಲುವವರ ಪ್ರಮಾಣ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಂಸ್ಥೆ ಹೇಳಿತ್ತು. ಆ ವರದಿಯನ್ನು ಸಿದ್ಧಪಡಿಸಿದ್ದ ಸಂಸ್ಥೆಯ ಮುಖ್ಯಸ್ಥನ ವಿರುದ್ಧ ಹಲವು ಕೇಸುಗಳು ದಾಖಲಾಗಿ, ಆತ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಹೋಗುವಂತೆ ಮಾಡಲಾಯಿತು.

ಜಾಗತಿಕ ಹಸಿವು ಸೂಚ್ಯಂಕ ಬಿಡುಗಡೆಯಾದ ಆಸುಪಾಸಿನಲ್ಲೇ ಫೋರ್ಬ್ಸ್‌ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಅದನ್ನು ನೋಡಿದರೆ, ಭಾರತದಲ್ಲಿ ಯಾಕೆ ಬಡತನ ಮತ್ತು ಹಸಿವು ಹೆಚ್ಚಾಗುತ್ತಿದೆ ಎನ್ನುವುದು ತಿಳಿಯುತ್ತದೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ 92 ಬಿಲಿಯನ್‌ ಡಾಲರ್‌ನೊಂದಿಗೆ ಭಾರತದ ನಂ 1 ಶ್ರೀಮಂತರೆನಿಸಿದರೆ, ಗೌತಮ್ ಅದಾನಿ ಎರಡನೇ ಸ್ಥಾನ ಪಡೆದಿದ್ದಾರೆ. ಭಾರತದ 100 ಕುಬೇರರ ಒಟ್ಟು ಆಸ್ತಿ ಮೌಲ್ಯ 2023ರಲ್ಲಿ 799 ಬಿಲಿಯನ್ ಡಾಲರ್ ಆಗಿದೆ.

ಆಕ್ಸ್‌ಫಾಮ್ ಸ್ವಯಂಸೇವಾ ಸಂಸ್ಥೆಯ ‘ಶ್ರೀಮಂತರ ಬದುಕು: ಭಾರತದ ಕಥೆ’ ಎನ್ನುವ ವರದಿ ಭಾರತದಲ್ಲಿ ಹೆಚ್ಚುತ್ತಿರುವ ಅಸಮಾನತೆ, ಬಡವರ ಮತ್ತು ಶ್ರೀಮಂತರ ನಡುವಿನ ಕಂದಕ ಹಿರಿದಾಗುತ್ತಿರುವುದರ ಬಗ್ಗೆ ಗಮನ ಸೆಳೆದಿತ್ತು. ಅದರ ಪ್ರಕಾರ, ಭಾರತದ ಕೇವಲ ಶೇ.5ರಷ್ಟು ಮಂದಿ ಶ್ರೀಮಂತರು ದೇಶದ ಶೇ.60ರಷ್ಟು ಸಂಪತ್ತಿನ ಮಾಲೀಕರಾಗಿದ್ದಾರೆ. ಅದರಲ್ಲೂ 2012ರಿಂದ 2021ರವರೆಗಿನ ಲೆಕ್ಕಾಚಾರದ ಪ್ರಕಾರ, ದೇಶದ ಶೇ.1ರಷ್ಟು ಮಂದಿಯ ಕೈಯಲ್ಲಿ ಶೇ.40ರಷ್ಟು ಸಂಪತ್ತಿದೆ. ಇದರ ಹಿಂದೆ ಭಾರತದ ಅಸಮಾನ ಆರ್ಥಿಕ ಸಾಮಾಜಿಕ ರಚನೆ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿವೆ ಎನ್ನುವುದು ಗುಟ್ಟಿನ ವಿಚಾರವೇನಲ್ಲ. ಮೋದಿ ಅಧಿಕಾರಕ್ಕೆ ಬಂದ ನಂತರ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕಾಗಿದ್ದ ಹಣವನ್ನು ಕಡಿತಗೊಳಿಸಿ, ಉದ್ದಿಮೆದಾರರಿಗೆ ಹಲವು ವಿಶೇಷ ಸೌಕರ್ಯ ಕಲ್ಪಿಸಿ, ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿದರು. ಇಂಥ ಉಪಕ್ರಮಗಳಿಂದ ಭಾರತದಲ್ಲಿನ ಕುಬೇರರ ಸಂಖ್ಯೆ ಮತ್ತು ಶ್ರೀಮಂತರ ಸಂಪತ್ತಿನ ಪ್ರಮಾಣ ಹೆಚ್ಚಾಗಿದೆ ಎನ್ನುವುದು ಹಲವು ವರದಿಗಳಲ್ಲಿ ಪ್ರತಿಬಿಂಬಿತವಾಗಿದೆ.

ಶ್ರೀಮಂತರ ಸಂಖ್ಯೆ ಹೆಚ್ಚಳ ಮತ್ತು ಬಡವರ ಹೆಚ್ಚಳ ಎರಡೂ ನೇರ ಸಂಬಂಧವನ್ನು ಹೊಂದಿವೆ. ಇವು ಸರ್ಕಾರಗಳ ಆದ್ಯತೆಗಳನ್ನೂ ತೋರಿಸುತ್ತವೆ. ಸರ್ಕಾರಗಳು ತಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳದಿದ್ದರೆ, ಜನ ಸರ್ಕಾರಗಳನ್ನು ಬದಲಿಸುವುದು ಅನಿವಾರ್ಯವಾಗುತ್ತದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X