ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

Date:

Advertisements
ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು ಹೊಡೆಯುವುದಿರಲಿ, ಪಾಕಿಸ್ತಾನದ ಬೆದರಿಕೆಗೂ ತಿರುಗೇಟು ನೀಡಲಾಗದೆ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೀಡಾಗುತ್ತಿದ್ದಾರೆ. ಇಂತಹ ಹೀನಾಯ ಸ್ಥಿತಿಗೆ ಭಾರತ ಎಂದೂ ಹೋಗಿರಲಿಲ್ಲ; ಇಂತಹ ದುರ್ಬಲ ಪ್ರಧಾನಿಯನ್ನು ದೇಶ ಹಿಂದೆಂದೂ ಕಂಡಿರಲಿಲ್ಲ. 

ಆಪರೇಷನ್‌ ಸಿಂಧೂರ್‌ ನಂತರ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅಮೆರಿಕ ಹೋಗಿಬರುವುದು ಹೆಚ್ಚಾಗುತ್ತಿದೆ. ಅಮೆರಿಕ ಪಾಕಿಸ್ತಾನಕ್ಕೆ ಆತಿಥ್ಯ ನೀಡುವುದು ತಪ್ಪಲ್ಲ, ಆತಿಥ್ಯದ ನೆಪದಲ್ಲಿ ಅವರಾಡುವ ಕಿಡಿಗೇಡಿ ಮಾತುಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಒದಗಿಸುತ್ತಿರುವುದು ತಪ್ಪು.

‘ಪಾಕಿಸ್ತಾನ ಪರಮಾಣು ರಾಷ್ಟ್ರ. ನಾವು ಪತನಗೊಳ್ಳುತ್ತಿದ್ದೇವೆ ಎಂದು ಯಾರಾದರೂ ಭಾವಿಸಿದರೆ ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸಿಯೇ ನಾವು ಪತನವಾಗುತ್ತೇವೆ. ಕಾಶ್ಮೀರ ಪಾಕಿಸ್ತಾನದ ಕಂಠರಕ್ತನಾಳ’ ಎಂದು ಮುನೀರ್ ಹೇಳಿರುವುದು ಭಾರತವನ್ನು ಉದ್ದೇಶಿಸಿಯೇ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.  

ಅಷ್ಟೇ ಅಲ್ಲ, ‘ಸಿಂಧೂ ಜಲ ಮಾರ್ಗದಲ್ಲಿ ಭಾರತ ಅಣೆಕಟ್ಟು ನಿರ್ಮಿಸಿದರೆ ಅದು ಪಾಕಿಸ್ತಾನಕ್ಕೆ ನೀರಿನ ಹರಿವನ್ನು ತಡೆಯಬಹುದು. ಹಾಗೇನಾದರೂ ಡ್ಯಾಂ ನಿರ್ಮಿಸಿದರೆ ನಾವು ಬಾಂಬ್ ಸಿಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಆಸ್ತಿಯಲ್ಲ. ಅದು ನಮಗೂ ಸೇರಿದ್ದು’ ಎಂದು ಮುನೀರ್ ಅಮೆರಿಕದ ನೆಲದಲ್ಲಿ ನಿಂತು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಮುನೀರ್‌ ಬೆದರಿಕೆಯೊಡ್ಡಿದ ಮಾರನೇ ದಿನ ಪಾಕಿಸ್ತಾನದ ಪ್ರಭಾವಿ ಯುವ ರಾಜಕಾರಣಿ ಬಿಲಾವಲ್‌ ಭುಟ್ಟೋ, ‘ಸಿಂಧೂ ನದಿ ನೀರು ಬಿಡುಗಡೆ ಮಾಡದಿದ್ದರೆ, ಯುದ್ಧ ಘೋಷಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ. ನಂತರ ಪ್ರಧಾನಿ ಶೆಹಭಾಜ್‌ ಶರೀಫ್‌ ಕೂಡ ಯುದ್ಧ ಅನಿವಾರ್ಯವಾಗಬಹುದು ಎಂದು ಅಬ್ಬರಿಸಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ, ಯುವ ರಾಜಕಾರಣಿ ಮತ್ತು ಪ್ರಧಾನಿ- ಮೂವರೂ ಹೀಗೆ ಬಾಯಿಗೆ ಬಂದಂತೆ ಉದ್ಧಟತನದ ಹೇಳಿಕೆಗಳನ್ನು ಕೊಡುತ್ತಿದ್ದರೂ, ಅವು ಭಾರತವನ್ನು ಗುರಿ ಮಾಡುವಂತಿದ್ದರೂ, ಪ್ರಧಾನಿ ಮೋದಿಯವರು ಮಾತನಾಡುತ್ತಿಲ್ಲ. ಏಕೆ ಎಂದು ಕೇಳಿದರೆ ಅದು ದೇಶದ್ರೋಹವಾಗಬಹುದು!

‘ಪಾಕಿಸ್ತಾನವು ಸುಧಾರಿತ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿದೆ. ಇದು ಅತ್ಯಂತ ಅಸ್ಥಿರವಾದ ದೇಶವಾಗಿರುವುದರಿಂದ, ಅದೇ ಜಗತ್ತಿಗೆ ನಿಜವಾದ ಬೆದರಿಕೆ ಮತ್ತು ಅತ್ಯಂತ ಗಂಭೀರ ವಿಚಾರ’ ಎಂದು ಭಾಷಾತಜ್ಞ, ಲೇಖಕ ಮತ್ತು ಚಿಂತಕ ಡಾ. ನೋಮ್ ಚಾಮ್ಸ್ಕಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದರು.

ಅವರು ಹೇಳಿದ ಮಾತು ಈಗ ನಿಜವಾಗತೊಡಗಿದೆ. ಪಾಕಿಸ್ತಾನದ ಸ್ಥಿತಿಯೂ ಚಿಂತಾಜನಕವಾಗಿದೆ. ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಧಃಪತನದ ಹಾದಿಯಲ್ಲಿದೆ. ಸದ್ಯಕ್ಕೆ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವಿದ್ದರೂ, ಚುನಾಯಿತ ಸರ್ಕಾರವಿದ್ದರೂ, ದೇಶದಲ್ಲಿ ಅರಾಜಕತೆ ಇದೆ. ಪಾಕಿಸ್ತಾನ ಸ್ವತಂತ್ರ ದೇಶವಾದ ನಂತರ ಜನರಿಂದ ಆಯ್ಕೆಯಾದ ಪ್ರಧಾನಿಗಳಾರೂ ಪೂರ್ಣಾವಧಿ ಪೂರೈಸಿಲ್ಲ. ದಿಢೀರ್‌ ಉದ್ಭವಿಸಿದ ರಾಜಕೀಯ ಅಸ್ಥಿರತೆಯ ದುರುಪಯೋಗಪಡೆದುಕೊಂಡ ಸೇನಾ ಮುಖ್ಯಸ್ಥರು, ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಮಿಲಿಟರಿ ಆಡಳಿತವನ್ನು ಜಾರಿಗೆ ತಂದಿದ್ದಾರೆ. ಮಹತ್ವದ ನಿರ್ಧಾರಗಳನ್ನು ಸೇನಾ ಮುಖ್ಯಸ್ಥರೇ ತೆಗೆದುಕೊಳ್ಳುತ್ತಿದ್ದಾರೆ.  

ಇಂತಹ ದಿಕ್ಕೆಟ್ಟ ದೇಶ ಬಲಿಷ್ಠ ಭಾರತವನ್ನು ಬೆದರಿಸುವುದೇ? ಈ ರೀತಿ ಬೆದರಿಸಲು ಪಾಕಿಸ್ತಾನಕ್ಕೆ ಇರುವ ಧೈರ್ಯವಾದರೂ ಯಾವುದು?

1950ರಿಂದಲೇ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಾ ಬಂದಿದೆ ಅಮೆರಿಕ. ಪಾಕಿಸ್ತಾನದ ಮಿಲಿಟರಿ ಮೇಲೆ ಹಿಡಿತ ಸಾಧಿಸಿದೆ. ಇದಕ್ಕೆ ಪ್ರತಿಫಲವಾಗಿ ಅಮೆರಿಕ, ಪಾಕಿಸ್ತಾನದ ಮಿಲಿಟರಿ ಬಲ ಬಳಸಿಕೊಂಡು, ರಷ್ಯಾ ಹಿಡಿತದಲ್ಲಿದ್ದ ಅಫಘಾನಿಸ್ತಾನವನ್ನು ಬಿಡುಗಡೆಗೊಳಿಸಿದೆ. ಮಧ್ಯಪ್ರಾಚ್ಯ ದೇಶಗಳ ಮೇಲೆ ಸವಾರಿ ಮಾಡುತ್ತಿದೆ. ಇದೇ ರೀತಿ 1960ರಿಂದಲೇ ಚೀನಾ ಕೂಡ ಪಾಕಿಸ್ತಾನಕ್ಕೆ ಹೇರಳ ಧನಸಹಾಯ ನೀಡಿ ಬೆಂಬಲಕ್ಕೆ ನಿಂತಿದೆ. ಈ ಬೆಂಬಲದ ಹಿಂದೆ ಚೀನಾದ ಸಾಮ್ರಾಜ್ಯಶಾಹಿ ವಿಸ್ತರಣೆ ಇದೆ. ಜಾಗತಿಕ ವ್ಯಾಪಾರ-ವಹಿವಾಟು ಅಡಗಿದೆ.

ಪಾಕಿಸ್ತಾನವನ್ನು ಬೆಂಬಲಿಸುತ್ತಿರುವ ಹಿಂದೆ ಅಮೆರಿಕ ಮತ್ತು ಚೀನಾ ದೇಶಗಳ ಹಿತಾಸಕ್ತಿ ಅಡಗಿದೆ. ಆ ದೇಶಗಳು ಹೇಳಿದಂತೆ ಕೇಳುತ್ತ, ಅವುಗಳಿಂದ ಅನುಕೂಲ ಪಡೆಯುತ್ತಿರುವ ಪಾಕಿಸ್ತಾನ, ಎಲ್ಲೆ ಮೀರಿ ವರ್ತಿಸುತ್ತಿದೆ. ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಆಹ್ವಾನಿಸುತ್ತಿದೆ.

ದುರದೃಷ್ಟಕರ ಸಂಗತಿ ಎಂದರೆ, ಭಾರತ ನೆರೆಯ ರಾಷ್ಟ್ರಗಳಾದ ಚೀನಾ, ನೇಪಾಳ, ಭೂತಾನ್‌, ಬಾಂಗ್ಲಾ, ಶ್ರೀಲಂಕಾ, ಫಿಲಿಪೈನ್ಸ್‌, ಲಕ್ಷ್ಮದ್ವೀಪ ಮತ್ತು ಪಾಕಿಸ್ತಾನಗಳಿಂದ ಅಂತರ ಕಾಯ್ದುಕೊಂಡಿದೆ. ವಿದೇಶಾಂಗ ನೀತಿಯನ್ನು ಕೆಡಿಸಿಕೊಂಡಿದೆ. ಇದರ ಪರಿಣಾಮವಾಗಿ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನದ ಪರ ಟರ್ಕಿ ಮತ್ತು ಚೀನಾ ನಿಂತರೆ; ಭಾರತವನ್ನು ಯಾವೊಂದು ರಾಷ್ಟ್ರವೂ ಬೆಂಬಲಿಸಲಿಲ್ಲ. ಆದರೂ ಭಾರತ ಬುದ್ಧಿ ಕಲಿಯಲಿಲ್ಲ.  

ಏಕೆಂದರೆ, ಭಾರತ ಸ್ವತಂತ್ರವಾದ ನಂತರದಲ್ಲೂ ಗುಲಾಮಗಿರಿ ಮಾನಸಿಕತೆಯಿಂದ ಬಿಡುಗಡೆ ಹೊಂದಲೇ ಇಲ್ಲ. ಈಗಲೂ ಭಾರತ ಸ್ನೇಹಹಸ್ತ ಚಾಚುವುದು ಮತ್ತು ಗುರುತಿಸಿಕೊಳ್ಳಲು ಇಷ್ಟಪಡುವುದು ಇಂಗ್ಲಿಷ್‌ ಬಲ್ಲ ಬಿಳಿಚರ್ಮದ ಅಮೆರಿಕದೊಂದಿಗೆ. ಅದರಲ್ಲೂ ಪ್ರಧಾನಿ ಮೋದಿಯವರು, ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರನ್ನು ಆಪ್ತಮಿತ್ರ ಎಂದು ಅಪ್ಪಿಕೊಳ್ಳುತ್ತಾರೆ. ಅವರು ಕಸಕ್ಕಿಂತ ಕಡೆಯಾಗಿ ಕಂಡರೂ; ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸಿ ಎಂದು ಹೂಂಕರಿಸಿದರೂ; ನಿಲ್ಲಿಸದಿದ್ದರೆ ವ್ಯಾಪಾರ ಬಂದ್‌ ಮಾಡುವುದಾಗಿ ಬೆದರಿಸಿದರೂ; ಶೇ. 50 ತೆರಿಗೆ ಹೇರಿದರೂ; ಅದರಿಂದ ವಜ್ರ ಉದ್ಯಮ ಕುಸಿತ ಕಂಡರೂ- ಮಾತನಾಡದೆ ಮೌನಕ್ಕೆ ಜಾರಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಅಷ್ಟೇ ಅಲ್ಲ, ಪಾಕಿಸ್ತಾನದ ಸೇನಾ ಮುಖ್ಯಸ್ಥನನ್ನು ಅಮೆರಿಕಕ್ಕೆ ಕರೆದು, ಭಾರತದ ವಿರುದ್ಧ ಮಾತನಾಡಲು ಅನುವು ಮಾಡಿಕೊಡುವ ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತವನ್ನು ಬಹಿರಂಗವಾಗಿಯೇ ಅವಮಾನಿಸುತ್ತಿದ್ದಾರೆ. ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಬ್ರಿಕ್ಸ್ ಒಕ್ಕೂಟದೊಂದಿಗೆ ಗುರುತಿಸಿಕೊಳ್ಳುವ ಚೀನಾ ಕೂಡ, ಭಾರತದಿಂದ ಅಂತರ ಕಾಯ್ದುಕೊಂಡು, ಪಾಕಿಸ್ತಾನದ ಪುಸಲಾವಣೆಯಲ್ಲಿ ನಿರತವಾಗಿದೆ. ನೆರೆಯ ರಾಷ್ಟ್ರಗಳನ್ನು ತೆಕ್ಕೆಗೆ ತೆಗೆದುಕೊಂಡು ಬಲಗೊಳ್ಳುತ್ತಿದೆ.   

ಬಲಿಷ್ಠ ಭಾರತ, ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು ಹೊಡೆಯುವುದಿರಲಿ, ಪಾಕಿಸ್ತಾನದ ಬೆದರಿಕೆಗೂ ತಿರುಗೇಟು ನೀಡಲಾಗದೆ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೀಡಾಗುತ್ತಿದ್ದಾರೆ. ಇಂತಹ ಹೀನಾಯ ಸ್ಥಿತಿಗೆ ಭಾರತ ಎಂದೂ ಹೋಗಿರಲಿಲ್ಲ; ಇಂತಹ ದುರ್ಬಲ ಪ್ರಧಾನಿಯನ್ನು ದೇಶ ಹಿಂದೆಂದೂ ಕಂಡಿರಲಿಲ್ಲ. ಮೋದಿ, ಬಿಜೆಪಿ ಮತ್ತು ಸಂಘಪರಿವಾರದ ಪಾಕಿಸ್ತಾನ ವಿರುದ್ಧದ ವೀರಾವೇಶದ ಭಾಷಣಗಳು ಚುನಾವಣೆಗಷ್ಟೇ ಸೀಮಿತವೇ; ಚುನಾವಣೆಗಳನ್ನು ಗೆಲ್ಲುವುದಕ್ಕಾಗಿಯೇ… ಗೊತ್ತಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

ಈ ದಿನ ಸಂಪಾದಕೀಯ | ಮತಗಳ್ಳತನದ ಆರೋಪಕ್ಕೆ ಮೋದಿ ಸರ್ಕಾರವೇ ಉತ್ತರದಾಯಿ

ನಿನ್ನೆ ದೆಹಲಿಯಲ್ಲಿ ನಡೆದ ರಾಹುಲ್‌ ಪತ್ರಿಕಾಗೋಷ್ಠಿಯ ನಂತರ ಮಹಾರಾಷ್ಟ್ರ ಯಾಕೆಂದರೆ ಅಲ್ಲಿ...

Download Eedina App Android / iOS

X