ಇಡೀ ಪ್ರಕರಣಕ್ಕೆ ಕೋಮುವಾದಿ ತಿರುವು ನೀಡಿ ಪುರೋಲಾದ ಮುಸಲ್ಮಾನರನ್ನು ಬೆದರಿಸಲಾಗಿದೆ. ಮುಸಲ್ಮಾನರು ಅಂಗಡಿಗಳು-ಮನೆಗಳನ್ನು ಖಾಲಿ ಮಾಡಿಸಿ ಊರು ಬಿಡಿಸಲಾಗುತ್ತಿದೆ. ಜಿಲ್ಲಾಡಳಿತ ಮೂಕಪ್ರೇಕ್ಷಕನಾಗಿದೆ. ಮೇ 28ರಂದು ಹಿಂದೂ ರಕ್ಷಾ ಅಭಿಯಾನವು ಪುರೋಲಾದಲ್ಲಿ ಪ್ರದರ್ಶನವೊಂದನ್ನು ನಡೆಸಿತು. ‘ಮುಸಲ್ಮಾನಮುಕ್ತ ಉತ್ತರಾಖಂಡ’ದ ಘೋಷಣೆಗಳನ್ನು ಕೂಗಲಾಯಿತು
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮನೋಹರ ಪರ್ವತ ಪಟ್ಟಣ ಪುರೋಲಾ. ಹಿಮದ ಹೊದಿಕೆ ಹೊದ್ದ ಪರ್ವತಗಳು, ದಟ್ಟ ದೇವದಾರು ಮತ್ತು ಶಂಕುಧಾರಿ ವೃಕ್ಷಗಳ ಅಡವಿಗಳ ಪ್ರಾಕೃತಿಕ ವಾತಾವರಣ. ಜನಪ್ರಿಯ ಪ್ರವಾಸಿತಾಣ. ಹಿಂದಿ ಮತ್ತು ಗಢವಾಲಿ ಇಲ್ಲಿ ಆಡುವ ಭಾಷೆಗಳು.
‘ದೇವಭೂಮಿಯನ್ನು ಉಳಿಸಿ, ಜಿಹಾದಿಗಳನ್ನು ಓಡಿಸಿ’ ಎಂಬ ಘೋಷಣೆಯ ರಣಕೇಕೆ ಇತ್ತೀಚಿನ ದಿನಗಳಲ್ಲಿ ಪುರೋಲಾದಿಂದ ಹೊರಟು ರಾಜ್ಯಾದ್ಯಂತ ಅನುರಣಿಸತೊಡಗಿದೆ. ‘ಮುಸಲ್ಮಾನಮುಕ್ತ ಉತ್ತರಾಖಂಡ’ದ ತಹತಹವನ್ನು ಬಡಿದು ಎಬ್ಬಿಸಲಾಗುತ್ತಿದೆ.
ಪುರೋಲಾದ ಈ ದ್ವೇಷಮಯ ವಿದ್ಯಮಾನಕ್ಕೆ ನಿರ್ದಿಷ್ಟ ವಿನ್ಯಾಸವನ್ನು ಗುರುತಿಸಲಾಗಿದೆ. ಈ ವಿನ್ಯಾಸವನ್ನು ಉತ್ತರಾಖಂಡದ ಉದ್ದಗಲಕ್ಕೆ ಹೆಣೆಯಲಾಗುತ್ತಿದೆ. 2021ರ ಡಿಸೆಂಬರ್ ತಿಂಗಳಲ್ಲಿ ಹರಿದ್ವಾರದಲ್ಲಿ ಜರುಗಿದ ಧರ್ಮ ಸಂಸತ್ತಿನಲ್ಲಿ ಜನಾಂಗೀಯ ಹತ್ಯೆಯ ಕರೆ ನೀಡಲಾಗಿತ್ತು. ಅಂದಿನಿಂದಲೂ ದೇವಭೂಮಿಯ ಸ್ಥಾಪನೆ ಮತ್ತು ಮುಸಲ್ಮಾನರ ಉಚ್ಚಾಟನೆಯ ಕೂಗುಗಳು ಕೇಳಿ ಬರುತ್ತಲೇ ಇವೆ.
ಕಳೆದ ಮೇ 26ರಂದು ಪುರೋಲಾದಲ್ಲಿ ಹಿಂದೂ ಅಪ್ರಾಪ್ತ ವಯಸ್ಕ ಹುಡುಗಿಯೊಬ್ಬಳು ಇಬ್ಬರು ಹುಡುಗರೊಂದಿಗೆ ಇದ್ದದ್ದನ್ನು ಹಿಂದೂ ಗುಂಪೊಂದು ಕಂಡು ರೊಚ್ಚಿಗೆದ್ದಿತ್ತು. ಇಬ್ಬರು ಹುಡುಗರ ಪೈಕಿ ಒಬ್ಬನು ಮುಸಲ್ಮಾನನಾಗಿದ್ದುದೇ ಈ ಆಕ್ರೋಶಕ್ಕೆ ಕಾರಣ. ಲವ್ ಜಿಹಾದ್ ಬಣ್ಣ ಬಳಿಯಲಾಯಿತು. ಹುಡುಗಿಯನ್ನು ಅಪಹರಿಸಲಾಗಿದೆ ಎಂದು ವದಂತಿ ಹಬ್ಬಿಸಲಾಯಿತು. ಆದರೆ ಹುಡುಗಿ ತನ್ನ ಮನೆಯಲ್ಲಿದ್ದಾಳೆ. ಹುಡುಗರು ಪೊಲೀಸ್ ವಶದಲ್ಲಿದ್ದಾರೆ.
ಇಡೀ ಪ್ರಕರಣಕ್ಕೆ ಕೋಮುವಾದಿ ತಿರುವು ನೀಡಿ ಪುರೋಲಾದ ಮುಸಲ್ಮಾನರನ್ನು ಬೆದರಿಸಲಾಗಿದೆ. ಮುಸಲ್ಮಾನರು ಅಂಗಡಿಗಳು-ಮನೆಗಳನ್ನು ಖಾಲಿ ಮಾಡಿಸಿ ಊರು ಬಿಡಿಸಲಾಗುತ್ತಿದೆ. ಜಿಲ್ಲಾಡಳಿತ ಮೂಕಪ್ರೇಕ್ಷಕನಾಗಿದೆ. ಮೇ 28ರಂದು ಹಿಂದೂ ರಕ್ಷಾ ಅಭಿಯಾನವು ಪುರೋಲಾದಲ್ಲಿ ಪ್ರದರ್ಶನವೊಂದನ್ನು ನಡೆಸಿತು. ‘ಮುಸಲ್ಮಾನಮುಕ್ತ ಉತ್ತರಾಖಂಡ’ದ ಘೋಷಣೆಗಳನ್ನು ಕೂಗಲಾಯಿತು. ಪ್ರತಿಭಟನಾಕಾರರು ಮುಸಲ್ಮಾನರ ಅಂಗಡಿಗಳ ನಾಮಫಲಕಗಳನ್ನು ಒಡೆದು ಹಾಕಿದರು. ಹಲವು ಅಂಗಡಿಗಳ ಮೇಲೆ ಹಿಟ್ಲರನ ಕಾಲದ ಜರ್ಮನಿಯಲ್ಲಿ ಯಹೂದಿಗಳ ಮನೆಗಳು ಮತ್ತು ಅಂಗಡಿಗಳ ಮೇಲೆ ಬರೆದಂತೆಯೇ ಕಪ್ಪು ಬಣ್ಣದ ಕ್ರಾಸ್ (x) ಬರೆಯಲಾಯಿತು.
‘ಲವ್ ಜಿಹಾದ್’ ಜೊತೆ ಜೊತೆಗೆ ಹಿಂದೂಗಳ ಜಮೀನನ್ನು ಕಬಳಿಸುವ ‘ಜಮೀನು ಜಿಹಾದ್’ನಲ್ಲೂ ಮುಸಲ್ಮಾನರು ತೊಡಗಿದ್ದಾರೆ ಎಂಬ ಮತ್ತೊಂದು ಗುಮ್ಮನನ್ನು ಬಡಿದೆಬ್ಬಿಸಲಾಗಿದೆ. ಉತ್ತರಾಖಂಡದ ಬಿಜೆಪಿ ಸರ್ಕಾರವೇ ಈ ಅಪಪ್ರಚಾರದ ಮುಂಚೂಣಿಯಲ್ಲಿದೆ. ‘ದಿ ವೈರ್’ ಅಂತರ್ಜಾಲ ಸುದ್ದಿತಾಣ ಮಾಹಿತಿ ಹಕ್ಕಿನ ಮೇರೆಗೆ ಇತ್ತೀಚೆಗೆ ಉತ್ತರಾಖಂಡ ಸರ್ಕಾರಕ್ಕೆ ಕೇಳಿ ಪಡೆದ ಮಾಹಿತಿ ಈ ಜಿಹಾದ್ ಗಳ ಮಿಥ್ಯೆಯ ಟೊಳ್ಳನ್ನು ಬಯಲಿಗೆಳೆದಿದೆ.
ಪ್ರಶ್ನೆ- ‘ಜಮೀನು ಜಿಹಾದ್’ ಪದಪುಂಜವನ್ನು ಉತ್ತರಾಖಂಡ ಸರ್ಕಾರ ಹೇಗೆ ವ್ಯಾಖ್ಯಾನಿಸುತ್ತದೆ?
ಉತ್ತರ-ಮಾಹಿತಿ ಲಭ್ಯವಿಲ್ಲ.
ಪ್ರಶ್ನೆ-ಕಳೆದ ಐದು ವರ್ಷಗಳಲ್ಲಿ ‘ಜಮೀನು ಜಿಹಾದ್’ನ ಎಷ್ಟು ಪ್ರಕರಣಗಳು ಉತ್ತರಾಖಂಡದಲ್ಲಿ ವರದಿಯಾಗಿವೆ?
ಉತ್ತರ-ಮಾಹಿತಿ ಲಭ್ಯವಿಲ್ಲ.
ಪ್ರಶ್ನೆ-ಮಾರಾಟಗಾರರು ಮತ್ತು ಖರೀದಿದಾರರ ಧರ್ಮಗಳನ್ನು ಆಧರಿಸಿ ಜಮೀನು ಮಾರಾಟ-ಖರೀದಿಯ ಮಾಹಿತಿಯನ್ನು ಉತ್ತರಾಖಂಡ ಸರ್ಕಾರ ಹೊಂದಿದೆಯೇ?
ಉತ್ತರ- ಇಲ್ಲ.
ಪ್ರಶ್ನೆ-ಜಮೀನು ಜಿಹಾದ್ ಪ್ರಕರಣಗಳ ಜಿಲ್ಲಾವಾರು ಮತ್ತು ವರ್ಷವಾರು ಅಂಕಿ ಅಂಶಗಳು- ಮಾಹಿತಿಯನ್ನು ದಯವಿಟ್ಟು ಒದಗಿಸಿ.
ಉತ್ತರ- ಮಾಹಿತಿ ಲಭ್ಯವಿಲ್ಲ.
ಪ್ರಶ್ನೆ- ಜಮೀನು ಜಿಹಾದ್ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಮೇಲೆ ಯಾವ ಕಾನೂನು ಕ್ರಮಗಳನ್ನು ಜರುಗಿಸಲಾಗಿದೆ?
ಉತ್ತರ- ಮಾಹಿತಿ ಲಭ್ಯವಿಲ್ಲ.
ನೀವು (ಮುಸಲ್ಮಾನರು) ನಮ್ಮ ಜೊತೆ ಇರಬೇಕಿದ್ದರೆ ಮೊದಲು ಖುರಾನ್ ಪಠಣ ಮತ್ತು ನಮಾಜ್ ಸಲ್ಲಿಸುವುದನ್ನು ನಿಲ್ಲಿಸಬೇಕು. ಮುಸಲ್ಮಾನರಿಂದ ಹಿಂದೂಗಳು ಏನನ್ನೂ ಖರೀದಿಸಕೂಡದು. ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಅವರನ್ನು ನಾಶ ಮಾಡಿದರೆ ಇಸ್ಲಾಮ್ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ ಎಂಬುದು ಹಿಂದೂ ಧಾರ್ಮಿಕ ತಲೆಯಾಳುಗಳು, ಆಧ್ಯಾತ್ಮಿಕ ಗುರುಗಳು ಆಡಿರುವ ಮಾತುಗಳು.
ಉತ್ತರಾಖಂಡದಲ್ಲಿ ಇತ್ತೀಚೆಗೆ ಬಿಜೆಪಿ ಸರ್ಕಾರ ಮತ್ತೆ ಆರಿಸಿ ಬಂದಿತ್ತು. ನೆರೆಯ ಹಿಮಾಚಲ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿತ್ತು. ಹೊಸ ಪಿಂಚಣಿ ಯೋಜನೆಯನ್ನು ಕೈಬಿಟ್ಟು ಹಳೆಯದನ್ನೇ ಜಾರಿಗೆ ತರುವ ಭರವಸೆಯನ್ನು ಈಡೇರಿಸಲು ಹಿಮಾಚಲದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಉದ್ಯೋಗಗಳನ್ನು ಸೃಷ್ಟಿಸುವ ಕ್ರಮಗಳನ್ನೂ ಕೈಗೊಂಡಿದೆ. ಉತ್ತರಾಖಂಡದಲ್ಲಿ ಹಳೆಯ ಪಿಂಚಣಿ ಯೋಜನೆ ಮತ್ತು ಉದ್ಯೋಗಗಳಿಗಾಗಿ ಹಾಹಾಕಾರ ಏಳುತ್ತಿದೆ. ‘ಲವ್ ಜಿಹಾದ್’ ಮತ್ತು ‘ಜಮೀನು ಜಿಹಾದ್’ ಕೂಗುಗಳು ಗಟ್ಟಿಯಾಗುತ್ತಿರುವುದಕ್ಕೂ ಜನರ ಹಾಹಾಕಾರಕ್ಕೂ ಸಂಬಂಧವಿದ್ದರೆ ಯಾವ ಆಶ್ಚರ್ಯವೂ ಇಲ್ಲ.
ಉತ್ತರಾಖಂಡದಲ್ಲಿ ಪರಿಸ್ಥಿತಿ ಹದಗೆಡುತ್ತಲೇ ನಡೆದಿದೆ. ಪುರೋಲಾ ಕೋಮುವಾದಿ ಪ್ರಕರಣವನ್ನು ಆಧರಿಸಿ ಕೋಮುವಾದಿ ಸಂಘಟನೆಗಳು ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿವೆ.
ದ್ವೇಷ ಭಾಷಣಗಳಲ್ಲಿ ತೊಡಗಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಉತ್ತರಾಖಂಡ, ದೆಹಲಿ ಹಾಗೂ ಹಿಮಾಚಲ ಪ್ರದೇಶಕ್ಕೆ ಸುಪ್ರೀಮ್ ಕೋರ್ಟು 2022ರ ಡಿಸೆಂಬರ್ ತಿಂಗಳಿನಲ್ಲೇ ನಿರ್ದೇಶನ ನೀಡಿತ್ತು. ದ್ವೇಷ ಭಾಷಣಗಳು ನಮ್ಮ ದೇಶದ ಜಾತ್ಯತೀತ ಹಂದರವನ್ನೇ ಹರಿದು ಹಾಕುವ ಗಂಭೀರ ಅಪರಾಧಗಳು ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು. ಆನಂತರ ತನ್ನ ಈ ನಿರ್ದೇಶನವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಿತ್ತು. ದೂರುಗಳಿಗಾಗಿ ಕಾಯದೆ ದ್ವೇಷಭಾಷಣಗಳ ವಿರುದ್ಧ ಕೇಸು ದಾಖಲಿಸಿಕೊಳ್ಳಬೇಕು ಎಂದು ಸೂಚಿಸಿತ್ತು.
ಆದರೆ ಪುರೋಲಾದಲ್ಲಿ ಕಳೆದ ಎರಡು ವಾರಗಳಿಂದ ಅನಾವರಣಗೊಳ್ಳುತ್ತಿರುವ ಕಳವಳಕಾರಿ ವಿದ್ಯಮಾನವು ಉತ್ತರಾಖಂಡ ರಾಜ್ಯ ಸರ್ಕಾರ ಮತ್ತು ಪೊಲೀಸರು ಈ ದೇಶದ ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ ಎಂಬ ಅಂಶವನ್ನು ಸಾರಿ ಹೇಳಿದೆ. ದ್ವೇಷವನ್ನು ಬಿತ್ತಿ ಬೆಳೆ ತೆಗೆದು ಅದರ ವ್ಯಾಪಾರ ಮಾಡುವುದು ಆತ್ಮಘಾತಕ ಮತ್ತು ಸಮಾಜಘಾತಕ. ಈ ವ್ಯಾಪಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಶಕ್ತಿಗಳು ಈ ಕಟು ಸತ್ಯವನ್ನು ತುರ್ತಾಗಿ ಮನಗಾಣಬೇಕಿದೆ.
