ಈ ದಿನ ಸಂಪಾದಕೀಯ | ಆಗ ಬರ, ಈಗ ನೆರೆ- ಸಂತ್ರಸ್ತರತ್ತ ಧಾವಿಸಲಿ ಸರ್ಕಾರ

Date:

Advertisements
ಸರಕಾರಕ್ಕೆ ಬರವನ್ನು ಎದುರಿಸುವ ಸಾಮರ್ಥ್ಯವೂ ಇಲ್ಲ, ನೆರೆಯನ್ನು ನಿರ್ವಹಿಸುವ ಬುದ್ಧಿವಂತಿಕೆಯೂ ಇಲ್ಲ. ಒಟ್ಟಿನಲ್ಲಿ ಮಳೆ ರೈತರ ಮುಖದಲ್ಲಿ ಸಂಭ್ರಮ ಮೂಡಿಸುತ್ತದೆ ಎನ್ನುವುದು ಮರೆಯಾಗಿ; ಅದು ಅಧಿಕಾರಿಗಳ, ಶಾಸಕರ, ಸಚಿವರ ಮತ್ತು ಗುತ್ತಿಗೆದಾರರ ಸಂಭ್ರಮಕ್ಕೆ ಕಾರಣವಾಗುತ್ತದೆ ಎನ್ನುವುದು ಸರಿ ಏನೋ?

ಮುಂಗಾರಿನ ಮಳೆ ಎನ್ನುವುದು ಕೃಷಿಕರ ಬದುಕಿನಲ್ಲಿ ಸಂಭ್ರಮ ಮೂಡಿಸುವಂಥದ್ದು. ರೈತರು ಕೃಷಿ ಚಟುವಟಿಕೆಗಳಿಗೆ ತೊಡಗುವಂಥದ್ದು, ಬೇಸಾಯದ ಬದುಕಿಗೆ ತೆರೆದುಕೊಳ್ಳುವಂಥದ್ದು. ಆದರೆ, ಈ ಬಾರಿಯ ಮುಂಗಾರು ಮಳೆ ಗ್ರಾಮೀಣ ಜನತೆಯ ಪಾಲಿಗೆ ಸಂಭ್ರಮವಾಗಿ ಉಳಿದಿಲ್ಲ. ಕೃಷಿ ಮತ್ತು ಅದನ್ನು ಅವಲಂಬಿಸಿದವರ ಬದುಕಿಗೆ ಬಂಗಾರವಾಗಲಿಲ್ಲ. ಸಂಭ್ರಮ ತರಲಿಲ್ಲ.

ರಾಜ್ಯದಲ್ಲಿ ದಿಢೀರ್ ಸುರಿದ ಮಳೆಗೆ ಕೇವಲ 15 ದಿನಗಳ ಅಂತರದಲ್ಲಿ ರಾಜ್ಯದ ಜಲಾಶಯಗಳಾದ ಕೆಆರ್‍ಎಸ್, ಕಬಿನಿ, ಹಾರಂಗಿ, ತುಂಗಭದ್ರ, ಆಲಮಟ್ಟಿ, ನಾರಾಯಣಪುರ, ಘಟಪ್ರಭಾ, ಹೇಮಾವತಿ ತುಂಬಿ ತುಳುಕುತ್ತಿವೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಆರ್‍ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೂ ಆಗಿದೆ.

ಸಿದ್ದರಾಮಯ್ಯನವರು ಬಾಗಿನ ಅರ್ಪಿಸಿ ಸಂಭ್ರಮಿಸುವ ಹಿಂದೆ, ಕಳೆದ ವರ್ಷದ ಬರದ ಕರಿ ನೆರಳಿದೆ. ಆ ಬರದ ಬೇಗೆಯಿಂದ ನಾಡು ಬಿಡಿಸಿಕೊಂಡದ್ದು, ಮಳೆ ಸುರಿದದ್ದು, ಹೊಲ-ಗದ್ದೆಗಳಲ್ಲಿ ಹಸಿರು ಕಂಡಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದ್ದು ಆ ಸಂಭ್ರಮಕ್ಕೆ ಕಾರಣವಿರಬಹುದು, ಇರಲಿ. ಆದರೆ, ಈ ಸಲದ ಮುಂಗಾರು ಕಳೆದ ವರ್ಷದ ಬರದ ಬೇಗೆಯನ್ನು ನೀಗಿ, ಕೃಷಿಕರ ಬದುಕನ್ನು ಹಸನುಗೊಳಿಸಬೇಕಾದ್ದು, ಬೆಳೆ ಹಾನಿಯ ಭೀತಿಗೆ ದೂಡಿದೆ. ಮನೆ-ಮಠ-ತೋಟಗಳು ತೇಲತೊಡಗಿವೆ. ಹತ್ತಾರು ಅನನುಕೂಲಗಳನ್ನು ತಂದೊಡ್ಡಿದೆ.

Advertisements

ಇಪ್ಪತ್ತು ವರ್ಷಗಳ ಹಿಂದೆ, ಹೀಗಿರಲಿಲ್ಲ. ಜೂನ್ ಒಂದರಿಂದ ಆರಂಭವಾಗುವ ಮುಂಗಾರು ಮಳೆಯಿಂದ ಸೆಪ್ಟೆಂಬರ್ ವರೆಗೆ, ಕಾಲ ಕಾಲಕ್ಕೆ ಆಗಬೇಕಾದ ಮಳೆಗಳಾಗುತ್ತಿದ್ದವು. ಹಳ್ಳ, ಕಟ್ಟೆ, ಕರೆ, ನದಿ, ಹೊಳೆಗಳು ತುಂಬುತ್ತಿದ್ದವು. ಆ ನಂತರ ಜಲಾಶಯಗಳು ಭರ್ತಿಯಾಗುತ್ತಿದ್ದವು. ವ‍ರ್ಷವೆಲ್ಲ ನೀರಿದ್ದು, ಕೃಷಿಗೆ, ಕುಡಿಯುವ ನೀರಿಗೆ ತೊಂದರೆಯಾಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರದ ಏರುಪೇರಿ(ಗ್ಲೋಬಲ್ ವಾರ್ಮಿಂಗ್)ನಿಂದಾಗಿ, ಕಾಲ ಕಾಲಕ್ಕೆ ಬರುವ ಮಳೆ ಮಾಡು ಸೇರಿ, ಅಕಾಲದಲ್ಲಿ ಸುರಿದು ಸಮಸ್ಯೆ ಸೃಷ್ಟಿಸುತ್ತಿದೆ.

ಆದಕಾರಣ, ಉಡುಪಿ, ಮಂಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬಿಜಾಪುರ, ಬಾಗಲಕೋಟೆ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳ ಜನರ ಜೀವನ ನೀರಿನಲ್ಲಿ ತೇಲತೊಡಗಿದೆ. ಉತ್ತರ ಕನ್ನಡದ ಅಂಕೋಲಾದ ಶಿರೂರು ಗುಡ್ಡ ಕುಸಿದು ಹಲವರು ಕಣ್ಮರೆಯಾಗಿದ್ದಾರೆ. ಬಡ ಮುದುಕಿಯ ಮನೆ, ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಹೋಟೆಲ್, ಕೃಷಿ ಭೂಮಿ- ಇಲ್ಲಿತ್ತ ಎಂಬ ಸಣ್ಣ ಸುಳಿವನ್ನೂ ನೀಡದೆ ಕೊಚ್ಚಿಕೊಂಡು ಹೋಗಿದೆ. ಆ ನೀರಿನಲ್ಲಿಯೇ ಮುದುಕಿಯೊಬ್ಬಳು ಮಡಕೆ ಇಟ್ಟು ಅನ್ನ ಬೇಯಿಸುವ ಚಿತ್ರ, ಕಲ್ಲು ಹೃದಯವನ್ನೂ ಕರಗಿಸುವಂತಿದೆ.

ಆದಾಗ್ಯೂ, ಪ್ರಕೃತಿ ವಿಕೋಪದ ಪರಿಣಾಮವನ್ನು ತಗ್ಗಿಸಲು ತಂತ್ರಜ್ಞಾನಗಳ ಮೊರೆ ಹೋಗುವುದು ಅನಿವಾರ್ಯ. ಆ ವಿಷಯದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ಸಮಾಧಾನಕರವಾಗಿಲ್ಲ. ಇದ್ದುದರಲ್ಲಿಯೇ ಒಂದಷ್ಟು ಮಣ್ಣು ತೆರವುಗೊಳಿಸುವ ಕಾರ್ಯಗಳು ನಡೆದಿವೆ. ಸಂತ್ರಸ್ತರನ್ನು ಬೇರೆಡೆಗೆ ಸಾಗಿಸುವ, ಅವರ ಕುಂದುಕೊರತೆಗಳನ್ನು ಆಲಿಸುವ ಕೆಲಸಗಳಾಗುತ್ತಿವೆ. ಆ ನಿಟ್ಟಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಸ್ಥಳೀಯ ಶಾಸಕ ಸತೀಶ್ ಸೈಲ್ ಅವರ ಕಾಳಜಿಯನ್ನು ಮೆಚ್ಚಲೇಬೇಕಾಗಿದೆ. ಆದರೆ ಇದೇ ಮಾತುಗಳನ್ನು ಮಿಕ್ಕ ಶಾಸಕರಿಗೆ, ಉಸ್ತುವಾರಿ ಸಚಿವರಿಗೆ, ಜಿಲ್ಲಾಡಳಿತಕ್ಕೆ ಮತ್ತು ಈಗತಾನೆ ಗೆದ್ದು ಸಂಸತ್ ಪ್ರವೇಶಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹೇಳುವಂತಿಲ್ಲ. ಆ ಬಗ್ಗೆ ಅವರಿಗೆ ಕಿಂಚಿತ್ತೂ ಅಳುಕಿಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಇದೆಲ್ಲ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಷಡ್ಯಂತ್ರವೇ?

ಮತ್ತೊಂದೆಡೆ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿ, ಬೆಳಗಾವಿ ಜಿಲ್ಲೆಯ ನಲವತ್ತೊಂದು ಸೇತುವೆಗಳು ಮುಳುಗಡೆಯಾಗಿವೆ. ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ, ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಈ ಭಾಗದ ಜನರ ಜಂಜಾಟ ಹೇಳತೀರದಾಗಿದೆ.

ಮುಂಗಾರು ಮಳೆ ಇಂತಹ ಅವಧಿಯಲ್ಲಿಯೇ ಕಾಣಿಸಿಕೊಳ್ಳುತ್ತದೆ ಎನ್ನುವುದು ಕೃಷಿ, ತೋಟಗಾರಿಕೆ, ನೀರಾವರಿ ಇಲಾಖೆಗಳಿಗೆ ತಿಳಿದ ವಿಷಯವೇ ಆಗಿದೆ. ಆದರೆ, ಅದನ್ನು ಎದುರಿಸಲು ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಸಮಸ್ಯೆ ಎದುರಾದಾಗ ಎಚ್ಚರಗೊಂಡು ಓಡಾಡುವುದು, ಒಂದಷ್ಟು ಕಾಳಜಿ ತೋರುವುದು ಎಲ್ಲ ಸರ್ಕಾರಗಳ ಕಣ್ಣೊರೆಸುವ ತಂತ್ರದ ಭಾಗವೇ ಆಗಿಹೋಗಿದೆ.

ಸರಕಾರಕ್ಕೆ ಬರವನ್ನು ಎದುರಿಸುವ ಸಾಮರ್ಥ್ಯವೂ ಇಲ್ಲ, ನೆರೆಯನ್ನು ನಿರ್ವಹಿಸುವ ಬುದ್ಧಿವಂತಿಕೆಯೂ ಇಲ್ಲ. ಬರ ಪರಿಸ್ಥಿತಿಗಿಂತ ಮಳೆ ಸೃಷ್ಟಿಸುವ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಹುದು. ಕಂದಾಯ ಸಚಿವ ಕೃಷ್ಣ ಬೈರೇಗೌಡರು, ಮಳೆ ಆರಂಭವಾದ ದಿನದಿಂದಲೂ ‘ವಿಪತ್ತು ನಿರ್ವಹಣೆಗಾಗಿ 777 ಕೋಟಿ ಹಣವನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಖಾತೆಗಳಿಗೆ ವಿತರಿಸಲಾಗಿದೆ. ಪಂಚಾಯಿತಿ, ಕಂದಾಯ ಇಲಾಖೆ ಅಧಿಕಾರಿಗಳು, ಎಂಜಿನಿಯರುಗಳು, ಅಗ್ನಿಶಾಮಕ ದಳ, ಪೊಲೀಸ್‌ ಹಾಗೂ ಸಣ್ಣ ನೀರಾವರಿ ಇಲಾಖೆ ಸಿಬ್ಬಂದಿ ಟಾಸ್ಕ್‌ಫೋರ್ಸ್‌ನಲ್ಲಿ ಇರಲಿದ್ದಾರೆ’ ಎಂದು ಹೇಳುತ್ತಲೇ ಇದ್ದಾರೆ. ಆದರೆ ಆ ಹಣವನ್ನು ಎದುರಾದ ನೆರೆಗಾಗಿ ಖರ್ಚು ಮಾಡಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು ನೆಲದ ನೋವು ಮರೆತು, ಸಂತ್ರಸ್ತರತ್ತ ಸುಳಿಯದೆ, ಕ್ಷುಲ್ಲಕ ರಾಜಕಾರಣದಲ್ಲಿ ಮುಳುಗೇಳುತ್ತಿದ್ದಾರೆ.

ಈ ನಡುವೆ ‘ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಕಷ್ಟಗಳನ್ನು ಆಲಿಸಬೇಕು, ಅಗತ್ಯ ನೆರವು ಒದಗಿಸಿಕೊಡಬೇಕು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಶಾಸಕರು ಮತ್ತು ಸಚಿವರಲ್ಲಿ ಮನವಿ ಮಾಡಿದ್ದಾರೆ. ಆ ಮನವಿಗೆ ಓಗೊಟ್ಟು ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಶಾಸಕರು ಚುರುಕಾದರೆ, ವಿಪತ್ತು ನಿರ್ವಹಣೆಗೆ ಎತ್ತಿಟ್ಟ 777 ಕೋಟಿ ಹಣ ಕಣ್ಮುಚ್ಚಿ ಬಿಡುವುದರಲ್ಲಿ ಮಾಯವಾಗಲೂಬಹುದು.

ಒಟ್ಟಿನಲ್ಲಿ ಮಳೆ ರೈತರ ಮುಖದಲ್ಲಿ ಸಂಭ್ರಮ ಮೂಡಿಸುತ್ತದೆ ಎನ್ನುವುದು ಮರೆಯಾಗಿ; ಅದು ಅಧಿಕಾರಿಗಳ, ಶಾಸಕರ, ಸಚಿವರ ಮತ್ತು ಗುತ್ತಿಗೆದಾರರ ಸಂಭ್ರಮಕ್ಕೆ ಕಾರಣವಾಗುತ್ತದೆ ಎನ್ನುವುದು ಸರಿ ಏನೋ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X