ಆನ್‌ಲೈನ್ ಗೇಮಿಂಗ್(Online Gaming) ಮತ್ತು ಬೆಟ್ಟಿಂಗ್ ದಂಧೆ(Betting) ಎನ್ನುವುದು ಅಪ್ಪಟ ಕಾನೂನುಬಾಹಿರ ಜೂಜಾಟ. ರಾಜ್ಯ ಸರ್ಕಾರ ಇದರ ವಿರುದ್ಧ ಕಟ್ಟುನಿಟ್ಟಿನ ಕಾಯ್ದೆ ರೂಪಿಸುವ, ನಿಯಂತ್ರಿಸುವ-ನಿಷೇಧಿಸುವ ಅಗತ್ಯವಿದೆ. ಜನ ಕೂಡ ಜಾಗೃತರಾಗಬೇಕಾಗಿದೆ.
ಗದಗಿನ ಶಿರಹಟ್ಟಿಯಲ್ಲಿ ಪುಟ್ಟ ಪಾತ್ರೆ ಅಂಗಡಿ ಇಟ್ಟುಕೊಂಡಿದ್ದ, ನೆಮ್ಮದಿಯ ಬದುಕು ಸಾಗಿಸುತ್ತಿದ್ದ ಜಗದೀಶ ಹಳೇಮನಿ ಎಂಬ ವ್ಯಕ್ತಿ, ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾದರು. ದುಶ್ಚಟಗಳಿಲ್ಲದ ಸ್ನೇಹಜೀವಿ ಜಗದೀಶರನ್ನು ಹತ್ತಿರದಿಂದ ಬಲ್ಲವರಿಗೆಲ್ಲ ಆಘಾತವಾಗಿತ್ತು. ಆನಂತರ, ಅವರು ಬರೆದಿಟ್ಟ ಡೆತ್ ನೋಟ್, ಆತ್ಮಹತ್ಯೆ ಹಿಂದಿನ ಸತ್ಯ ಸಂಗತಿಯನ್ನು ಬಿಚ್ಚಿಟ್ಟಿತ್ತು.
ಸಣ್ಣ ವ್ಯಾಪಾರಿಯಾದ ಜಗದೀಶ ಹಳೇಮನಿ, ಆನ್ಲೈನ್ನಲ್ಲಿ ಹಣ ಕಟ್ಟಿ ಆಡುವ ಜೂಜಾಟಕ್ಕೆ ಬಿದ್ದಿದ್ದರು. ಅಂಗಡಿಯಲ್ಲಿ, ಮನೆಯಲ್ಲಿ ಕೂತು ಆಟವಾಡಿದರೆ ಮನೆಯವರಿಗೆ ಗೊತ್ತಾಗುತ್ತದೆಂದು ಹೋಟೆಲ್ ರೂಮ್ ಮಾಡಿದ್ದರು. ಆನ್‌ಲೈನ್ ಗೇಮ್ ಚಟವಾಗಿ ಅಪಾರ ಹಣ ಕಳೆದುಕೊಂಡಿದ್ದರು. ಸಾಲ ಮಾಡಿದ್ದರು. ಮನೆಯವರಿಗೆ ತಿಳಿದರೆ ಸಮಸ್ಯೆಯಾಗುತ್ತದೆಂದು ಆತ್ಮಹತ್ಯೆಗೆ ಶರಣಾಗಿದ್ದರು. ಬೇರೆಯವರು ತನ್ನ ಹಾದಿ ತುಳಿಯದಿರಲಿ ಎಂದು ಡೆತ್ ನೋಟ್‌ನಲ್ಲಿ ಆನ್‌ಲೈನ್ ಗೇಮಿಂಗ್ ನಿಷೇಧಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
ಜಗದೀಶರಿಗೆ ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ಜಗದೀಶರನ್ನು ಕಳೆದುಕೊಂಡ ಕುಟುಂಬ ಈಗ ಬೀದಿ ಪಾಲಾಗಿದೆ. ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ದಂಧೆಯ ಜಾಲಕ್ಕೆ ಸಿಲುಕಿ, ಹಣ ಕಳೆದುಕೊಂಡವರ, ಆತ್ಮಹತ್ಯೆ ಮಾಡಿಕೊಂಡವರ ಪಟ್ಟಿ ಬೆಳೆಯುತ್ತಲೇ ಇದೆ. ಕಟ್ಟುನಿಟ್ಟಿನ ಕಾಯ್ದೆ-ಕಾನೂನುಗಳಿಲ್ಲದ ಕಾರಣ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ಫೈಲ್ ಪೇರಿಸುತ್ತಿದ್ದಾರೆ.
ಜಾಗತೀಕರಣದ ನಂತರ ದೇಶ ತಂತ್ರಜ್ಞಾನದತ್ತ ಹೊರಳಿದಾಗ, ಇಂಟರ್ನೆಟ್, ಸ್ಮಾರ್ಟ್ ಫೋನ್‌ಗಳು ಕಾಲಿಟ್ಟಾಗ- ಗೇಮಿಂಗ್ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು ಬಳುವಳಿಯಾಗಿ ಬಂದವು. ಆ ಮೂಲಕ ಆನ್‌ಲೈನ್ ಗೇಮಿಂಗ್ ಜಾಲ ವಿಸ್ತರಿಸಿಕೊಂಡಿತು. ಡಿಜಿಟಲ್ ಪೇಮೆಂಟ್ ಆ್ಯಪ್‌ಗಳು ಬಳಕೆಗೆ ಬಂದ ಮೇಲೆ, ನಗದುರಹಿತ ಚಲಾವಣೆ ಹೆಚ್ಚಾದಂತೆ, ಆನ್‌ಲೈನ್ ಗೇಮಿಂಗ್-ಬೆಟ್ಟಿಂಗ್ ದಂಧೆ ಕೂಡ ಹೆಚ್ಚಾಯಿತು. ನಿಯಂತ್ರಣ ಮೀರಿ ಬೆಳೆಯಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪಕ್ಷಾಂತರಿಗಳನ್ನು ಶಿಕ್ಷಿಸುವ ಅಧಿಕಾರವನ್ನು ಜನ ತಮ್ಮ ಕೈಗೇ ತೆಗೆದುಕೊಳ್ಳಬೇಕಿದೆ
ಅದಕ್ಕೆ ತಕ್ಕಂತೆ ಯುವಜನತೆಯ ಮನಸ್ಸು ಕದಿಯಲು, ಹಾದಿ ತಪ್ಪಿಸಲು, ಪ್ರಭಾವಿಸಲು ಸೆಲೆಬ್ರೆಟಿಗಳು, ಕ್ರೀಡಾಪಟುಗಳು, ನಟ ನಟಿಯರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇವುಗಳ ಪ್ರಚಾರಕರಾದರು. ಅದರಲ್ಲೂ ಪ್ರಧಾನಿ ಮೋದಿಯವರೇ ಪೇ ಟಿಎಂ ಆ್ಯಪ್‌ಗೆ ರಾಯಭಾರಿಯಾದರು. ಈ ಕಾಳದಂಧೆಯ ರೂವಾರಿಗಳು, ಲ್ಯಾಪ್‌ಟಾಪ್, ಮೊಬೈಲ್ ಮೂಲಕ ಆನ್‌ಲೈನ್ ಜೂಜಾಟವಾಡಿ ಸುಲಭವಾಗಿ ಮತ್ತು ಶೀಘ್ರವಾಗಿ ಹಣ ಗಳಿಸಬಹುದು ಎಂಬ ಆಸೆ ಬಿತ್ತಿ, ಹಣದ ಬೆಳೆ ತೆಗೆದರು. ಈ ನಿಟ್ಟಿನಲ್ಲಿ ಈಗಿನ ಆನ್‌ಲೈನ್ ಲೋಕದಲ್ಲಿ ಹಲವು ರೀತಿಯ ಬೆಟ್ಟಿಂಗ್ ಆ್ಯಪ್‌ಗಳು ಚಾಲ್ತಿಯಲ್ಲಿದ್ದು, ದಿನಕ್ಕೆ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತಿದೆ. ಬೃಹತ್ ಜಾಲವಾಗಿ ವ್ಯಾಪಿಸಿಕೊಂಡಿದೆ.
ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ದಂಧೆಯಲ್ಲಿ ಬಡವರಷ್ಟೇ ಅಲ್ಲ, ಮಧ್ಯಮವರ್ಗ, ಮೇಲ್ಮಧ್ಯಮವರ್ಗ, ಶ್ರೀಮಂತರು, ಅಧಿಕಾರಿಗಳು, ರಾಜಕಾರಣಿಗಳು, ರೌಡಿಗಳು, ಪೊಲೀಸರೂ ಇದ್ದಾರೆ. ಇವರೊಂದಿಗೆ ಆನ್‌ಲೈನ್ ಬುಕ್ಕಿಗಳು, ಮ್ಯಾಚ್ ಫಿಕ್ಸರ್‍ಗಳು, ಮಾಫಿಯಾ ಡಾನ್‌ಗಳೂ ಶಾಮೀಲಾಗಿದ್ದಾರೆ. ಇವರಿಗೆ ಈಗ ನಡೆಯುತ್ತಿರುವ ಐಪಿಎಲ್ ಟಿ20 ಕ್ರಿಕೆಟ್ ಹಬ್ಬದಂತೆ ಕಾಣುತ್ತಿದೆ.
ಕ್ರಿಕೆಟ್ ಪ್ರೇಮಿಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಭರಪೂರ ಮನರಂಜನೆ ನೀಡುವ ಆಟ; ಆಟಗಾರರಿಗೆ ಹಣ-ಪ್ರಚಾರ-ಖ್ಯಾತಿ ತರುವ ಆಟ. ಆದರೆ, ಪ್ರತಿ ಬಾಲ್-ರನ್‌ಗಳ ಮೇಲೆ ಹಣ ಕಟ್ಟುವವರಿಗೆ ಇದು ಜೂಜಾಟ. ಸಣ್ಣದಾಗಿ ಶುರುವಾದ ಜೂಜಾಟ ಈಗ ಕೋಟ್ಯಂತರ ರೂಪಾಯಿಗಳ ಕೈ ಬದಲಾಗುವ ದಂಧೆಯಾಗಿ ಮಾರ್ಪಾಡಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮುಸ್ಲಿಮರು, ನಂತರ ಕ್ರೈಸ್ತರು… ಆನಂತರ?
ಈ ಜೂಜಾಟ ಮೊದಲು ನಗರ, ಪಟ್ಟಣಗಳಲ್ಲಿ ಮಾತ್ರವಿತ್ತು. ಈಗ ಪ್ರತಿಯೊಬ್ಬನ ಕೈಯಲ್ಲಿ ಮೊಬೈಲ್ ಇದ್ದು, ಹಳ್ಳಿಗಳಿಗೂ ಹಬ್ಬಿದೆ. ಪ್ರತಿ ಬಾರಿಯ ಐಪಿಎಲ್‌ನಲ್ಲೂ ಕೋಟಿಗಟ್ಟಲೆ ಬೆಟ್ಟಿಂಗ್ ವ್ಯವಹಾರ ಅವ್ಯಾಹತವಾಗಿ ನಡೆಯುತ್ತದೆ. ಹಾಗೆಯೇ ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತವೆ.
ಈ ಹಿಂದಿನ ಬಿಜೆಪಿ ಸರ್ಕಾರ ಸೆಪ್ಟೆಂಬರ್ 2021ರಂದು ರಾಜ್ಯದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್ ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಅಕ್ಟೋಬರ್ 10, 2021ರಿಂದ ಬ್ಯಾನ್ ಮಾಡಿತ್ತು. ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಕಂಪನಿಗಳು ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲು ಹತ್ತಿದವು. ಹೈಕೋರ್ಟಿನ ವಿಭಾಗೀಯಪೀಠ ಫೆಬ್ರವರಿ 2022ರಲ್ಲಿ ಸರ್ಕಾರದ ಕ್ರಮ ಸಂವಿಧಾನಬದ್ಧವಾಗಿಲ್ಲ. ಆನ್‌ಲೈನ್ ಗೇಮಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ. ಸಂವಿಧಾನಬದ್ಧವಾದ ಶಾಸನ ರೂಪಿಸಲು ಸರ್ಕಾರ ಸ್ವತಂತ್ರವಿದೆ ಎಂದಿತು. ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಅದಿನ್ನೂ ಇತ್ಯರ್ಥಕ್ಕೆ ಬಾಕಿ ಇದೆ.
ಜೊತೆಗೆ ಕೇಂದ್ರ ಸರ್ಕಾರ ಕೂಡ, ಇದು ರಾಜ್ಯಪಟ್ಟಿಯಲ್ಲಿ ಬರುವ ವಿಚಾರವಾಗಿದ್ದು, ರಾಜ್ಯಗಳ ಮಟ್ಟದಲ್ಲೇ ಕಾನೂನು ತರಬೇಕು ಎಂದಿದೆ. ಇದರ ನಡುವೆಯೇ, 1,410 ಆನ್‌ಲೈನ್ ಗೇಮಿಂಗ್ ಆ್ಯಪ್/ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ. ಹಲವು ರಾಜ್ಯಗಳಲ್ಲಿ ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸಲಾಗಿದ್ದರೆ, ಕೆಲವು ರಾಜ್ಯಗಳಲ್ಲಿ ಕಾನೂನುಬದ್ಧಗೊಳಿಸಲಾಗಿದೆ. ತಮಿಳುನಾಡು ಸರ್ಕಾರ ಆರ್‌ಎಂಜಿ ಆನ್‌ಲೈನ್ ಗೇಮ್ಸ್ ಅನ್ನು ನಿಷೇಧಿಸಿದ್ದು, ಕಠಿಣ ನಿಯಮಗಳನ್ನು ಪ್ರಕಟಿಸಿದೆ. ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಆ್ಯಪ್‌ಗಳ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾದಳ (ಎಸ್‌ಐಟಿ) ರಚನೆಗೆ ತೆಲಂಗಾಣ ಸರ್ಕಾರ ಮುಂದಾಗಿದೆ. ಆದರೆ, ಇಲ್ಲಿಯೂ ಕಾನೂನಿನಲ್ಲಿ ಸ್ಪಷ್ಟತೆಯ ಕೊರತೆ ಇದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪತ್ರಿಕೋದ್ಯಮದ ಪಾವಿತ್ರ್ಯವನ್ನು ಪಾತಾಳಕ್ಕಿಳಿಸಿದ ‘ಪತ್ರಕರ್ತರು’!
ಏತನ್ಮಧ್ಯೆ ‘ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ದಂಧೆಯ ಹಾವಳಿ ಹೆಚ್ಚುತ್ತಿದೆ. ನಗರ ಪ್ರದೇಶಗಳಿಂದ ಗ್ರಾಮೀಣ ಭಾಗಕ್ಕೂ ಹರಡುತ್ತಿದೆ. ಇವುಗಳಿಗೆ ಕಡಿವಾಣ ಹಾಕಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಈ ದಂಧೆಯನ್ನು ತಡೆಯಲು ಹಲವು ಕಾಯ್ದೆಗಳಿವೆ. ಆದಾಗ್ಯೂ, ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಶೀಘ್ರವೇ ಹೊಸ ಮಾನದಂಡಗಳನ್ನು ರೂಪಿಸಲಾಗುತ್ತದೆ’ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ದಂಧೆ ಎನ್ನುವುದು ಅಪ್ಪಟ ಕಾನೂನುಬಾಹಿರ ಜೂಜಾಟ. ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಮಧ್ಯಮವರ್ಗದವರ ಬದುಕನ್ನು ಮೂರಾಬಟ್ಟೆ ಮಾಡಿದೆ. ಯುವ ಜನತೆಯನ್ನು ದಾರಿ ತಪ್ಪಿಸುತ್ತಿದೆ. ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಗೃಹ ಇಲಾಖೆಗೆ ಸವಾಲಾಗಿದೆ. ರಾಜ್ಯ ಸರ್ಕಾರ ಇದರ ವಿರುದ್ಧ ಕಟ್ಟುನಿಟ್ಟಿನ ಕಾಯ್ದೆ ರೂಪಿಸುವ, ನಿಯಂತ್ರಿಸುವ-ನಿಷೇಧಿಸುವ ಅಗತ್ಯವಿದೆ. ಜನ ಕೂಡ ಜಾಗೃತರಾಗಬೇಕಾಗಿದೆ.
