ಈ ದಿನ ಸಂಪಾದಕೀಯ | ‘ಪ್ರಸಾದ ಬೇಡ ಬಸ್ ಬೇಕು’ ಎಂದ ಬಾಲಕಿಯ ಮನವಿಯಲ್ಲಿದೆ ಮಹತ್ವದ ಸಂದೇಶ

Date:

Advertisements
ಸಾಮಾಜಿಕ ನ್ಯಾಯದ ಹರಿಕಾರರರೆಂದೇ ಬಿಂಬಿತವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರೊ. ನಂಜುಂಡಸ್ವಾಮಿ ಅವರಿಂದ ರಾಜಕೀಯ ದೀಕ್ಷೆ ಪಡೆದವರು. ಅಂಬೇಡ್ಕರ್ ಚಿಂತನೆಯನ್ನು ಅರಿತು ಅರಗಿಸಿಕೊಂಡವರು. ಪುಟ್ಟ ಬಾಲಕಿಯ ‘ತೀರ್ಥ ಪ್ರಸಾದ ಬೇಡ, ಬಸ್ ಬೇಕು’ ಎಂಬ ಮನವಿಯನ್ನು ಅರ್ಥ ಮಾಡಿಕೊಂಡರೆ; ಪ್ರೊಫೆಸರ್  – ಅಂಬೇಡ್ಕರ್ ಕನಸಿದ ನಾಡನ್ನು ಕಟ್ಟಬಹುದು. ಬಡವರ ಬದುಕನ್ನು ಬಂಗಾರವಲ್ಲದಿದ್ದರೂ, ಘನತೆಯಿಂದ ಬದುಕುವಂತೆ ಮಾಡಬಹುದು.

‘ನಮ್ಮ ವ್ಯಾಸಂಗಕ್ಕಾಗಿ ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಿ’ ಎಂದು ಬೆಂಗಳೂರು ಹೊರವಲಯದ ತಾವರೆಕೆರೆ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ವಾಸವಿರುವ 8ನೇ ತರಗತಿ ವಿದ್ಯಾರ್ಥಿನಿ ವಿ.ವೈ. ಹರ್ಷಿನ್, ಸಾರಿಗೆ ಇಲಾಖೆಯ ವ್ಯವಸ್ಥಾಪಕರಿಗೆ, ಸಾರಿಗೆ ಸಚಿವರಿಗೆ, ಶಿಕ್ಷಣ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾಳೆ.

ಈಕೆಯ ಮನವಿಯಲ್ಲಿ ಇದಷ್ಟೇ ಅಲ್ಲ, ಇನ್ನೊಂದು ಮಹತ್ವದ, ಚಿಂತನೆಗೆ ಅರ್ಹವಾದ ವಿಚಾರವೂ ಅಡಗಿದೆ. ಅದೇನೆಂದರೆ, ‘ಸುಮನಹಳ್ಳಿ ಕಡೆಯಿಂದ ಕಡಬಗೆರೆಯ ರಾಯರ ಕಾಮಧೇನು ದೇವಾಲಯಕ್ಕೆ ಪ್ರತಿ ಗಂಟೆಗೆ ಒಂದರಂತೆ ಬಸ್ ಬಿಡಲಾಗುತ್ತದೆ. ನಮಗೆ ದೇವಸ್ಥಾನದ ತೀರ್ಥ ಪ್ರಸಾದ ಬೇಡ, ನಮಗೆ ಉನ್ನತ ವ್ಯಾಸಂಗಕ್ಕಾಗಿ ಬಸ್‌ಗಳು ಬೇಕಾಗಿವೆ. ಡಾ. ಅಂಬೇಡ್ಕರ್ ಅವರ ಆಶೀರ್ವಾದದಿಂದ ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಸುರಕ್ಷತೆ ಸಿಗುವಂತೆ ಆಗಿದೆ. ಹಾಗಾಗಿ, ಡಾ. ಅಂಬೇಡ್ಕರ್ ಹೆಸರಿನಲ್ಲಿ ಪ್ರತಿ ಜಿಲ್ಲೆ, ತಾಲೂಕು, ಹಳ್ಳಿ ಮಕ್ಕಳಿಗಾಗಿ ವಿಶೇಷ ಬಸ್ ಗಳನ್ನು ಆರಂಭಿಸಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾಳೆ.

ಈ ಪತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರಾದರೂ ಕಣ್ತೆರೆದು ನೋಡುವಂತೆ ಮಾಡಿದೆ. ಹಾಗೆಯೇ ಪತ್ರ ಗಮನಿಸಿದ ಸಾರಿಗೆ ಅಧಿಕಾರಿಗಳು, ‘ಸುಮನಹಳ್ಳಿಯಿಂದ ನೇರವಾಗಿ ಶ್ರೀನಗರಕ್ಕೆ ಬಸ್ ಇಲ್ಲ, ನಾಯಂಡಹಳ್ಳಿಯಲ್ಲಿ ಬಸ್ ಬದಲಿಸಿ, ಮಾರ್ಕೆಟ್ ಮೂಲಕ ಮತ್ತೊಂದು ರೂಟ್‌ನಲ್ಲಿ ಪ್ರಯಾಣ ಮಾಡಿ’ ಎಂದೆಲ್ಲ ಸಮಜಾಯಿಷಿ ನೀಡಿದ್ದಾರೆ. ಅಲ್ಲಿಗೆ ಅವರ ಕರ್ತವ್ಯ ಮುಗಿದಿದೆ.

Advertisements

ಆದರೆ, ಈ ಪುಟ್ಟ ಬಾಲಕಿ ಮಾಡಿಕೊಂಡಿರುವ ಮನವಿ, ಬಸ್ ವ್ಯವಸ್ಥೆ ಕಲ್ಪಿಸುವುದಕ್ಕೆ ಸಂಬಂಧಿಸಿದ್ದಾದರೂ, ಅದಕ್ಕೂ ಮೀರಿದ ಚಿಂತನೆ ಅದರಲ್ಲಿದೆ ಎಂಬುದು ನಮ್ಮ ಅಧಿಕಾರಶಾಹಿಗೆ ಅರ್ಥವಾದಂತಿಲ್ಲ. ಹೆಣ್ಣುಮಕ್ಕಳು ಧೈರ್ಯವಾಗಿ ತಲೆ ಎತ್ತಿ ಓಡಾಡಲು, ಸರಿ-ತಪ್ಪುಗಳನ್ನು ಅರ್ಥೈಸಿಕೊಳ್ಳಲು, ಆರ್ಥಿಕವಾಗಿ ಸದೃಢರಾಗಲು, ಸ್ವಾವಲಂಬಿಗಳಾಗಿ ಬದುಕಲು ಶಿಕ್ಷಣ ಬಲ ಕೊಡುತ್ತದೆ. ಆರ್ಥಿಕವಾಗಿ ಸದೃಢವಾದ ಕುಟುಂಬಕ್ಕೆ ಸೇರಿದ ಮಕ್ಕಳಿಗೆ ಹೇಗೋ ಶಿಕ್ಷಣ, ಸವಲತ್ತು, ಸುರಕ್ಷತೆ ಸಿಗುತ್ತದೆ. ಆದರೆ ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಬದುಕೇ ಕಷ್ಟವಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಿಗೆ ಶಾಲೆಯ ಮೆಟ್ಟಿಲು ಹತ್ತುವುದೇ ಕಡು ಕಷ್ಟದ ಕೆಲಸವಾಗಿದೆ.

8ನೇ ತರಗತಿ ವಿದ್ಯಾರ್ಥಿನಿ ವಿ.ವೈ. ಹರ್ಷಿನ್ ಕೂಡ ಅಂಥದ್ದೇ ಮನೆಯ ಹೆಣ್ಣುಮಗಳು. ಆಕೆಯ ಪೋಷಕರು ಕಷ್ಟದ ಬದುಕಿನಲ್ಲಿಯೂ ಆಕೆಯನ್ನು ಶಾಲೆಗೆ ಕಳುಹಿಸುತ್ತಿರಬಹುದು. ಆಕೆ ತನ್ನ ಕಷ್ಟವನ್ನು ಸಮಾಜದ ಕಷ್ಟವಾಗಿ ನೋಡುವ ಗುಣ ಹೊಂದಿರುವುದರಿಂದ, ಶಾಲಾ ಮಕ್ಕಳ ಕಷ್ಟವನ್ನು ಸಮಾಜದ ಮುಂದಿಟ್ಟಿದ್ದಾಳೆ. ಸರ್ಕಾರದ ಗಮನ ಸೆಳೆದಿದ್ದಾಳೆ.

ಕೊರೋನಾ ನಂತರ ದೇಶದಲ್ಲಿ ಬಡವರ ಸಂಖ್ಯೆ ದ್ವಿಗುಣಗೊಂಡಿದೆ. ಅದಕ್ಕೆ ಪೂರಕವಾಗಿ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ ಬೆನ್ನಿಗೆ ಬಿದ್ದು ಕಾಡುತ್ತಿವೆ. ಶಿಕ್ಷಣ ಎನ್ನುವುದು ವ್ಯಾಪಾರಿ ಸರಕಾಗಿದೆ, ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಅಂಗಡಿಗಳಾಗಿವೆ, ಶಿಕ್ಷಣ ದುಬಾರಿಯಾಗಿ ಉಳ್ಳವರ ಸ್ವತ್ತಾಗಿದೆ.

ಇಂತಹ ಸ್ಥಿತಿಯಲ್ಲಿ ಬಡವರ ಮಕ್ಕಳು ಶಿಕ್ಷಣ ಕಲಿಯುವುದು ಬಹಳ ಕಷ್ಟವಿದೆ. ಅವರು ಸರ್ಕಾರಿ ಶಾಲೆ-ಕಾಲೇಜನ್ನು ಹಾಗೂ ಸರ್ಕಾರಿ ಸಾರಿಗೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಪೈಪೋಟಿಯ ಯುಗದಲ್ಲಿ, ವೇಗೋತ್ಕರ್ಷದ ಕಾಲದಲ್ಲಿ ಮಕ್ಕಳು ಬಸ್ ಹಿಡಿದು ಶಾಲೆಗೆ ಹೋಗುವುದು, ತಿರುಗಿ ಸುರಕ್ಷಿತವಾಗಿ ಮನೆಗೆ ತಲುಪುವುದು- ನೆನಸಿಕೊಂಡರೇ ಮೈ ನಡುಗುತ್ತದೆ.

ರಾಜ್ಯದಲ್ಲಿ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉತ್ತಮ ಮತ್ತು ಗುಣಾತ್ಮಕ ಶಿಕ್ಷಣ ಒದಗಿಸಬೇಕಾದ ಜವಾಬ್ದಾರಿ ಸರ್ಕಾರದ್ದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಕೂಡ ಅನೇಕ ಸವಲತ್ತುಗಳನ್ನು ಒದಗಿಸುತ್ತಿದೆ. ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ, ಚಿಕ್ಕಿ, ಬಾಳೇಹಣ್ಣು, ಹಾಲು, ರಾಗಿ ಮಾಲ್ಟ್, ಸಮವಸ್ತ್ರ, ಸೈಕಲ್, ಲ್ಯಾಪ್ ಟಾಪ್, ವಿದ್ಯಾರ್ಥಿ ವೇತನ, ವಸತಿ ನಿಲಯ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಅದಕ್ಕಾಗಿ ಈ ಬಾರಿಯ 2024-25ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚಿನ ಅನುದಾನ, 44,422 ಕೋಟಿಗಳನ್ನು ಮೀಸಲಿಡಲಾಗಿದೆ. ಆಯವ್ಯಯದಲ್ಲಿ ಶಾಲಾ ಶಿಕ್ಷಣಕ್ಕೆ ಅತಿ ಹೆಚ್ಚಿನ ಹಣ ನೀಡಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಅದು ಸರಿಯಾದ ಮಾರ್ಗದಲ್ಲಿ ವಿನಿಯೋಗವಾಗುತ್ತಿದೆಯೇ ಎನ್ನುವುದನ್ನು ನೋಡಬೇಕಾಗಿದೆ.

ಹಿಂದೊಮ್ಮೆ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು, ‘ನಮ್ಮ ಹಳ್ಳಿ ಜನ ಹೇಗೆ ಬದುಕುತ್ತಿದ್ದಾರೆ ಅನ್ನುವುದು ಕುರ್ಚಿ ಮೇಲೆ ಕೂತವರಿಗೆ ಕಾಣುವುದಿಲ್ಲ. ಅಂಥಾ ಕಷ್ಟದಲ್ಲೂ ಓದುವ ಮಕ್ಕಳಿಗೆ ಹೆಚ್ಚಿನ ಸವಲತ್ತು, ಸಹಕಾರ ನೀಡಬೇಕಿರುವುದು ಸರ್ಕಾರದ ಕರ್ತವ್ಯ’ ಎಂದಿದ್ದರು.

ಸಾಮಾಜಿಕ ನ್ಯಾಯದ ಹರಿಕಾರರರೆಂದೇ ಬಿಂಬಿತವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರೊ. ನಂಜುಂಡಸ್ವಾಮಿ ಅವರಿಂದ ರಾಜಕೀಯ ದೀಕ್ಷೆ ಪಡೆದವರು. ‘ಶಿಕ್ಷಣ ಎನ್ನುವುದು ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲೆತ್ತಲು ಇರುವ ಸಾಧನ’ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯನ್ನು ಅರಿತು ಅರಗಿಸಿಕೊಂಡವರು.

ಅಷ್ಟೇ ಅಲ್ಲ, ಗ್ರಾಮೀಣ ಭಾಗದಿಂದ ಬಂದವರು. ಬಡತನದಲ್ಲಿ ಶಿಕ್ಷಣ ಪಡೆದು ಕಷ್ಟವನ್ನು ಕಂಡುಂಡವರು. ಮುಖ್ಯಮಂತ್ರಿಗಳು ಕೊಂಚ ಸಹಾನುಭೂತಿಯಿಂದ ಆ ಪುಟ್ಟ ಬಾಲಕಿಯ ‘ತೀರ್ಥ ಪ್ರಸಾದ ಬೇಡ, ಬಸ್ ಬೇಕು’ ಎಂಬ ಮನವಿಯನ್ನು ಆಲಿಸಿ, ಅರ್ಥ ಮಾಡಿಕೊಂಡರೆ; ಪ್ರೊಫೆಸರ್ ಹಾಗೂ ಅಂಬೇಡ್ಕರ್ ಕನಸಿದ ನಾಡನ್ನು ಕಟ್ಟಬಹುದು. ಬಡವರ ಬದುಕನ್ನು ಬಂಗಾರವಲ್ಲದಿದ್ದರೂ, ಬಡವರು ಘನತೆಯಿಂದ ಬದುಕುವಂತೆ ಮಾಡಬಹುದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X