ಈ ದಿನ ಸಂಪಾದಕೀಯ | ಭಾರತದಲ್ಲಿ ಸ್ವತಂತ್ರ ಮಾಧ್ಯಮದ ಪಾಲಿಗೆ ಇದು ಅತ್ಯಂತ ಕರಾಳ ಕಾಲ

Date:

Advertisements
ಲೋಕಸಭಾ ಚುನಾವಣೆ ಹತ್ತಿರವಾದಂತೆ ಪತ್ರಕರ್ತರ ಮೇಲಿನ ದಾಳಿಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾರತ ಸದ್ಯ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ 161ನೇ ಸ್ಥಾನದಲ್ಲಿದೆ. ಇದು ಭಾರತೀಯ ಮಾಧ್ಯಮ ರಂಗದ ಅತ್ಯಂತ ಕರಾಳ ಕಾಲ ಎನ್ನುವುದು ನಿಸ್ಸಂಶಯ.   

‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸದಿದ್ದರೆ, ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ…’ 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ನಂತರ ನರೇಂದ್ರ ಮೋದಿಯವರು ಹೇಳಿದ್ದ ಮಾತಿದು. ಆದರೆ, ವಾಸ್ತವದಲ್ಲಿ ನಡೆದದ್ದು ಅದಕ್ಕೆ ವಿರುದ್ಧವಾದ ಪ್ರಕ್ರಿಯೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ವಿವಿಧ ಸಂಸ್ಥೆಗಳು ಮತ್ತು ಪೊಲೀಸರು ಒಂಬತ್ತು ವರ್ಷಗಳಿಂದ ಸರ್ಕಾರಕ್ಕೆ ವಿರುದ್ಧವಿದ್ದಾರೆ ಎನ್ನಲಾಗುವ ವಿರೋಧ ಪಕ್ಷಗಳ ಮುಖಂಡರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರ ಮೇಲೆ ನಿರಂತರವಾದ ದಾಳಿಗಳನ್ನು ನಡೆಸುತ್ತಿದ್ದಾರೆ. ವಿರೋಧವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ನಡೆಸುತ್ತಲೇ ಬರುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ದೆಹಲಿಯ ನ್ಯೂಸ್ ಕ್ಲಿಕ್ ವೆಬ್ ಪೋರ್ಟಲ್ ಮೇಲೆ ನಡೆದ ದಾಳಿ.

ದೆಹಲಿ ಪೊಲೀಸರು ಅ.3ರಂದು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿ, ಅವರ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದರು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಗಸ್ಟ್ 7ರಂದು ಕಾಂಗ್ರೆಸ್ ಮತ್ತು ನ್ಯೂಸ್ ಕ್ಲಿಕ್ ಪೋರ್ಟಲ್, ಭಾರತ ವಿರೋಧಿ ವಾತಾವರಣವನ್ನು ಸೃಷ್ಟಿಸಲು ಚೀನಾದಿಂದ ನೆರವು ಪಡೆದಿವೆ ಎಂದು ಆರೋಪಿಸಿದ್ದರು. ಅವರ ಆರೋಪಕ್ಕೆ ಮೂಲವಾಗಿದ್ದು ನ್ಯೂಯಾರ್ಕ್ ಟೈಮ್ಸ್‌ನ ಒಂದು ವರದಿ. ಆ ವರದಿ ಆಧರಿಸಿ ದಿಲ್ಲಿ ಪೊಲೀಸರು ಆಗಸ್ಟ್ 17ರಂದು ಎಫ್ಐಆರ್ ದಾಖಲಿಸಿದ್ದರು. ಅದರ ನಂತರ, ಅ.3ರಂದು, 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಿಲ್ಲಿ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ಮಾರನೆಯ ದಿನ, ಅ.4 ರಂದು, ಆಮ್ ಆದ್ಮಿಯ ಸಂಸದ ಸಂಜಯ್ ಸಿಂಗ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ನಡೆದಿದೆ. ಹೀಗೆ ಪ್ರತಿ ಬೆಳಗ್ಗೆ ವಿರೋಧ ಪಕ್ಷಗಳ ಯಾವುದಾದರೊಂದು ಮುಖಂಡನ ಮನೆ ಮೇಲೆ ದಾಳಿ ನಡೆದಿರುತ್ತದೆ. ಇಲ್ಲವೇ ಸರ್ಕಾರದ ನಿರ್ಧಾರಗಳನ್ನು, ಆಡಳಿತವನ್ನು ಟೀಕಿಸುವ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ, ಕಲಾವಿದರ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ.

ನ್ಯೂಸ್ ಕ್ಲಿಕ್‌ ಪ್ರಕರಣದ ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌)ಯಲ್ಲಿ ಯಾರ ಹೆಸರನ್ನೂ ನಮೂದಿಸಿಲ್ಲ. ಪತ್ರಕರ್ತರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅನ್ವಯ ಬಂಧಿಸಲಾಗಿದೆ. ಬಂಧಿತರಿಗೆ ಜಾಮೀನು ಸಿಗದಂತೆ ಯುಎಪಿಎನ ನಾಲ್ಕು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯಾವ ಪುರಾವೆಗಳನ್ನೂ ನೀಡದೇ ಪತ್ರಕರ್ತರ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡಲಾಗಿದೆ. ಆದರೆ, ಬಂಧಿತರ ವಿರುದ್ಧ ಯಾವುದೇ ದೋಷಾರೋಪವನ್ನೂ ಮಾಡಿಲ್ಲ. ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ ಅಡಿ ಬಂಧಿಸಲಾಗಿದ್ದವರ ಮೇಲೆ ಸುಮಾರು ನಾಲ್ಕು ವರ್ಷಗಳವರೆಗೆ ಯಾವ ದೋಷಾರೋಪವನ್ನೂ ಮಾಡಿರಲಿಲ್ಲ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ದೆಹಲಿ ಪೊಲೀಸರ ಬಂಧನ ಕ್ರಮದ ಹಿಂದೆ ಕೇಂದ್ರ ಸರ್ಕಾರದ ಷಡ್ಯಂತ್ರ ಇದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

Advertisements

ನ್ಯೂಸ್ ಕ್ಲಿಕ್ ಮೇಲಿನ ದಾಳಿ ಮತ್ತು ಪತ್ರಕರ್ತರ ಬಂಧನವನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ತನ್ನ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಮಾಧ್ಯಮಗಳ ಮೇಲೆ ದಾಳಿ ಮಾಡುವುದನ್ನು ಕೇಂದ್ರ ಸರ್ಕಾರವು ತಕ್ಷಣ ನಿಲ್ಲಿಸಬೇಕು. ನೈಜ ಸಮಸ್ಯೆಗಳ ಕಡೆ ಗಮನ ಹರಿಸಬೇಕು ಎಂದು ‘ಇಂಡಿಯಾ’ ಒಕ್ಕೂಟ ಟೀಕಿಸಿದೆ. ಮಾಧ್ಯಮ ಹಾಗೂ ಶೈಕ್ಷಣಿಕ ವಲಯ ಸೇರಿದಂತೆ ವಿವಿಧ ವಲಯಗಳ 750 ಮಂದಿ ನ್ಯೂಸ್ ಕ್ಲಿಕ್‌ಗೆ ಬೆಂಬಲ ಸೂಚಿಸಿದ್ದಾರೆ. ವಿವಿಧ ಪತ್ರಕರ್ತರ ಸಂಘಟನೆಗಳೂ ಸರ್ಕಾರದ ಕ್ರಮವನ್ನು ಖಂಡಿಸಿವೆ.

ನ್ಯೂಸ್ ಕ್ಲಿಕ್ ಆರಂಭವಾದಾಗಿನಿಂದಲೂ ಸರ್ಕಾರದ ನೀತಿ ನಿಯಮಗಳು, ಕಾರ್ಯಕ್ರಮಗಳನ್ನು ವಿಮರ್ಶೆ ಮಾಡುತ್ತಿತ್ತು. ಸಮಾಜದ ಅಂಚಿನ ಜನರ ಮೇಲೆ ಸರ್ಕಾರದ ನಿರ್ಧಾರಗಳು ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎನ್ನುವುದನ್ನು ಕುರಿತ ಸುದ್ದಿ ವಿಶ್ಲೇಷಣೆಗಳನ್ನು ಅದು ಪ್ರಕಟಿಸುತ್ತಿತ್ತು. ಹಾಗಾಗಿಯೇ ಅದರ ಮೇಲೆ ದಾಳಿ ಮಾಡಲಾಗಿದೆ ಎನ್ನುವುದು ಎಲ್ಲರೂ ಹೇಳುತ್ತಿರುವ ಮಾತು.   

ಇದು ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು, ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡುತ್ತಿದ್ದ ಸ್ವತಂತ್ರ ಮಾಧ್ಯಮದ ಆತ್ಮಸಾಕ್ಷಿಯ ಮೇಲೆ ನಡೆದ ದಾಳಿ. ಇದು ಅನ್ಯಾಯದ ವಿರುದ್ಧ ಹೋರಾಡಲು ಸಾಧ್ಯವಾಗುವಂತಹ ಮಾಹಿತಿ ಪಡೆಯುವ ಈ ದೇಶದ ಜನರ ಹಕ್ಕಿನ ಮೇಲಿನ ದಾಳಿಯಾಗಿದೆ. ಕಾರ್ಪೊರೇಟ್ ಸ್ವಾಮ್ಯದ ಮಾಧ್ಯಮದ ಯುಗದಲ್ಲಿ, ಕಾರ್ಪೊರೇಟ್ ಪ್ರಭಾವದಿಂದ ಮುಕ್ತವಾದ ಸ್ವತಂತ್ರ ಪತ್ರಿಕೋದ್ಯಮದ ವಿಸ್ತಾರ ಹಾಗೂ ನೆಲೆ ಕಡಿಮೆಯಾಗುತ್ತಿದೆ. ಸತ್ಯ ಹೇಳುವ ಮಾಧ್ಯಮಗಳನ್ನು, ವಾಸ್ತವ ವರದಿ ಮಾಡುವ ಪತ್ರಕರ್ತರನ್ನು ನಾನಾ ರೀತಿಯಲ್ಲಿ ಹತ್ತಿಕ್ಕಲಾಗುತ್ತಿದೆ. ಭಾರತದಲ್ಲಿ ಸರ್ಕಾರವು ಮಾಧ್ಯಮಗಳನ್ನು ಎರಡು ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ; ದ್ವೇಷ ಬಿತ್ತುವ, ಜನರಲ್ಲಿ ಭೇದ ಭಾವ ಮಾಡುವ ಮಾಧ್ಯಮಗಳಿಗೆ ಸನ್ಮಾನ ಮಾಡಿದರೆ, ಸತ್ಯ ಹೇಳುವ ಮಾಧ್ಯಮಗಳನ್ನು ದಮನ ಮಾಡಲಾಗುತ್ತಿದೆ.

ನ್ಯೂಸ್‌ಕ್ಲಿಕ್ ವಿರುದ್ಧದ ಆರೋಪಗಳ ತನಿಖೆ ನ್ಯಾಯಾಲಯದಲ್ಲಿದ್ದರೂ ಮಾಧ್ಯಮಗಳ ಮೇಲೆ ಸರ್ಕಾರ ಹಾಗೂ ಪೊಲೀಸರು ದಾಳಿ ಮಾಡುವುದು, ಅಸಾಂವಿಧಾನಿಕ ರೀತಿಯಲ್ಲಿ ವಿಚಾರಣೆ ನಡೆಸುತ್ತಿರುವುದು ದುರದೃಷ್ಟಕರ. ಇದು ಮಾಧ್ಯಮ ದಮನದ ಅತ್ಯಂತ ಕೆಟ್ಟ ಮಾದರಿ. ತನ್ನ ವಿರೋಧಿಗಳಲ್ಲಿ ಭಯ ಹುಟ್ಟಿಸಲು, ಭಿನ್ನ ಅಭಿಪ್ರಾಯವನ್ನು ದಮನ ಮಾಡಲು ಕೇಂದ್ರ ಸರ್ಕಾರವು ಇಂಥ ಮಾದರಿಯನ್ನು ಅನುಸರಿಸುತ್ತಿದೆ.

ಹತ್ರಾಸ್ ಅತ್ಯಾಚಾರ ಪ್ರಕರಣದ ವರದಿ ಮಾಡಲು ತೆರಳುತ್ತಿದ್ದ ಕೇರಳದ ಪತ್ರಕರ್ತ ಸಿದ್ಧೀಕ್ ಕಪ್ಪನ್ ಅವರನ್ನು ಬಂಧಿಸಿ ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿಟ್ಟಿದ್ದು, ಫ್ಯಾಕ್ಟ್ ಚೆಕ್ ಮೂಲಕ ಬಿಜೆಪಿಯ ಸುಳ್ಳುಗಳ ಫ್ಯಾಕ್ಟರಿಯನ್ನು ಬಯಲು ಮಾಡುತ್ತಿದ್ದ ಆಲ್ಟ್ ನ್ಯೂಸ್‌ನ ಮೊಹಮದ್ ಜುಬೇರ್ ಅವರನ್ನು 23 ದಿನ ಜೈಲಿನಲ್ಲಿಟ್ಟದ್ದು… ಇಂಥ ಹಲವು ಪ್ರಕರಣಗಳು ಈ ಹಿಂದೆ ನಡೆದಿವೆ. ಲೋಕಸಭಾ ಚುನಾವಣೆ ಹತ್ತಿರವಾದಂತೆ ಇಂಥ ದಾಳಿಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾರತ ಸದ್ಯ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ 161ನೇ ಸ್ಥಾನದಲ್ಲಿದೆ. ಇದು ಭಾರತೀಯ ಮಾಧ್ಯಮ ರಂಗದ ಅತ್ಯಂತ ಕರಾಳ ಕಾಲ ಎನ್ನುವುದು ನಿಸ್ಸಂಶಯ.   

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X