ಅರ್ನಬ್ ಗೋಸ್ವಾಮಿ, ಅಮಿತ್ ಮಾಳವೀಯ ಮತ್ತು ಬಿಜೆಪಿ ಭಕ್ತರಿಗೆ ಬೇಕಿದ್ದು ಟರ್ಕಿಯಲ್ಲ. ಟರ್ಕಿ ಎಂಬ ಕಲ್ಪಿತ ಶತ್ರು ರಾಷ್ಟ್ರದಲ್ಲಿರುವ ಕಾಂಗ್ರೆಸ್ ಕಚೇರಿ ಮತ್ತು ಆ ದೇಶಕ್ಕೂ ರಾಹುಲ್ ಗಾಂಧಿಗೂ ಇರುವ ಸಂಬಂಧ. ಆ ಮೂಲಕ ರಾಹುಲ್ ಗಾಂಧಿಯ ಚಾರಿತ್ರ್ಯಹರಣ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ 26 ಅಮಾಯಕ ಪ್ರವಾಸಿಗರ ಹತ್ಯೆಯಾದ ನಂತರ ದೇಶವನ್ನಾಳುವ ದೊರೆಗಳು ಎಚ್ಚೆತ್ತುಕೊಂಡರು. ಉಗ್ರರನ್ನು ಹುಡುಕಿ ಸದೆಬಡಿಯಲು ಉಗ್ರರ ತಾಣಗಳನ್ನು ಹುಡುಕತೊಡಗಿದರು. ಅದು ಆ ಕ್ಷಣಕ್ಕೆ ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸವಾದ್ದರಿಂದ, ದೇಶದ ಜನರ ಗಮನ ಉಗ್ರರ ಮೇಲಿತ್ತು. ಸಹಜವಾಗಿಯೇ ಅದು ಉಗ್ರರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನವನ್ನು ಗುರಿ ಮಾಡಿತ್ತು.
ಭಾರತದ ಸೇನೆ ಒಂಭತ್ತು ಉಗ್ರ ನೆಲೆಗಳನ್ನು ಗುರುತಿಸಿ ದಾಳಿ ಮಾಡಿತ್ತು. ಅದಾದ ನಂತರ ಜಾಗತಿಕ ಮಟ್ಟದಲ್ಲಿ ಭಾರತ-ಪಾಕಿಸ್ತಾನವೆಂಬ ಎರಡು ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸುವ ಸಂದರ್ಭ ಸೃಷ್ಟಿಯಾಯಿತು. ಆಗ ಭಾರತದ ಪರ ಅಮೆರಿಕ ನಿಲುವು ತಾಳಬಹುದೆಂಬ ಗಾಳಿ ಬೀಸತೊಡಗಿತು. ಅದು ಸಹಜವಾಗಿಯೇ ಪಾಕಿಸ್ತಾನದ ಪರ ಚೀನಾ ನಿಲ್ಲುವಂತಾಯಿತು. ಮುಂದುವರೆದು ಟರ್ಕಿ, ಇರಾನ್ ದೇಶಗಳು ಕೂಡ ಪಾಕಿಸ್ತಾನವನ್ನು ಬೆಂಬಲಿಸಿದವು.
ಎರಡು ದೇಶಗಳ ನಡುವೆ ಯುದ್ಧ ಎಂದಾಗ, ಜಾಗತಿಕ ಮಟ್ಟದಲ್ಲಿ ದೇಶಗಳು ಪರ-ವಿರೋಧ ನಿಲುವು ತಾಳುವುದು ಸಹಜ. ಇದು ಪ್ರಪಂಚದ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ನಡೆಯುವ ವಿದ್ಯಮಾನ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಾನು-ಭಾಸ್ತಿ ಜೋಡಿ- ಕನ್ನಡಕ್ಕೆ ಬೂಕರ್ ಗೆದ್ದ ಮೋಡಿ
ಉಗ್ರರ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಆಮದು-ರಫ್ತು ವ್ಯವಹಾರ, ಸಿಂಧು ನದಿ ಒಪ್ಪಂದ, ದೇಶದಲ್ಲಿದ್ದ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ವಾಪಸ್ ಕಳುಹಿಸುವಂತಹ ಕೆಲವು ಕಠಿಣ ನಿರ್ಧಾರಗಳನ್ನು ಭಾರತ ಸರ್ಕಾರ ತೆಗೆದುಕೊಂಡಿತ್ತು. ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿರುವ ಟರ್ಕಿ ವಿರುದ್ಧವೂ ಭಾರತ ಸರ್ಕಾರ ಇದೇ ರೀತಿಯ ನಿಲುವು ತಾಳುವ; ಟರ್ಕಿಯೊಂದಿಗೆ ವ್ಯವಹಾರ, ಪ್ರವಾಸಕ್ಕೆ ಬಹಿಷ್ಕಾರ ಹಾಕುವ ಬಗ್ಗೆ ಚರ್ಚೆಯಾಗತೊಡಗಿತು. ಇದು ಕೂಡ ಪರ-ವಿರೋಧದ ಪ್ರಶ್ನೆ ಎದುರಾದಾಗ ನಡೆಯುವ ಸಹಜ ಬೆಳವಣಿಗೆ.
ಅದು ಇತ್ತೀಚಿನ ಉಕ್ರೇನ್-ರಷ್ಯಾ ಹಾಗೂ ಇಸ್ರೇಲ್-ಹಮಾಸ್ ಯುದ್ಧದಲ್ಲೂ ನಡೆದಿತ್ತು. ಸುದ್ದಿ ಮಾಧ್ಯಮಗಳಿಗೆ ಈ ಬೆಳವಣಿಗೆ ಹೊಸದಲ್ಲ. ಅದು ಗೊತ್ತಿದ್ದೂ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ, ಅಗೆದು ತೆಗೆಯುವ ‘ತನಿಖೆ’ಗೆ ಇಳಿದರು. ಟರ್ಕಿಯ ಇಸ್ತಾನ್‍ಬುಲ್‍ನಲ್ಲಿರುವ ಕಾಂಗ್ರೆಸ್ ಕೇಂದ್ರವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್‍ಸಿ) ಕಚೇರಿಯಾಗಿದೆ. ಶತ್ರು ರಾಷ್ಟ್ರದೊಂದಿಗೆ ರಾಹುಲ್ ಗಾಂಧಿ ಮಿತ್ರತ್ವ ಹೊಂದಿದ್ದಾರೆ. ಇದು ದೇಶದ್ರೋಹದ ಕೆಲಸ ಎಂದು ವಿಚಿತ್ರ ಹಾವಭಾವಗಳಿಂದ, ದೊಡ್ಡ ಗಂಟಲಿನಲ್ಲಿ ಕೂಗಾಡಿ ನರೇಟಿವ್ ಬಿಲ್ಡ್ ಮಾಡಿದರು.
ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ‘ಸ್ಫೋಟಿಸಿದ’ ಸುದ್ದಿಯ ವಿಡಿಯೋ ತುಣುಕನ್ನು ಅನಾಮತ್ತಾಗಿ ಎತ್ತಿಕೊಂಡ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅದನ್ನು ʼಎಕ್ಸ್ʼ ಖಾತೆಯಲ್ಲಿ ಹಂಚಿಕೊಂಡರು. ಬಿಜೆಪಿ ನಾಯಕರು, ಕಾರ್ಯಕರ್ತರು, ಭಕ್ತರು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು.
ಒಂದು ಕಡೆ ಜವಾಬ್ದಾರಿಯುತ ಸ್ಥಾನದಲ್ಲಿರುವ ರಿಪಬ್ಲಿಕ್ ಟಿವಿಯ ಸಂಪಾದಕ, ಮತ್ತೊಂದು ಕಡೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಜಾಲತಾಣ ವಿಭಾಗದ ಮುಖ್ಯಸ್ಥ- ಇಬ್ಬರೂ ಸೇರಿ, ಕ್ಷಣಮಾತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದೇಶದ್ರೋಹಿಯ ಪಟ್ಟ ಕಟ್ಟಿದ್ದರು.
ಅಸಲಿಗೆ ಅರ್ನಬ್ ಗೋಸ್ವಾಮಿ, ಅಮಿತ್ ಮಾಳವೀಯ ಮತ್ತು ಬಿಜೆಪಿ ಭಕ್ತರಿಗೆ ಬೇಕಿದ್ದು ಟರ್ಕಿಯಲ್ಲ. ಟರ್ಕಿ ಎಂಬ ಕಲ್ಪಿತ ಶತ್ರು ರಾಷ್ಟ್ರದಲ್ಲಿರುವ ಕಾಂಗ್ರೆಸ್ ಕಚೇರಿ ಮತ್ತು ಆ ದೇಶಕ್ಕೂ ರಾಹುಲ್ ಗಾಂಧಿಗೂ ಇರುವ ಸಂಬಂಧ. ಆ ಮೂಲಕ ರಾಹುಲ್ ಗಾಂಧಿಯ ಚಾರಿತ್ರ್ಯಹರಣ.
ವಿಪರ್ಯಾಸಕರ ಸಂಗತಿ ಎಂದರೆ, ಟರ್ಕಿಯ ಇಸ್ತಾಂಬುಲ್ ಕಾಂಗ್ರೆಸ್ ಸೆಂಟರ್ ಅನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಚೇರಿ ಎಂದು ಬಿಂಬಿಸುವ ಪ್ರಯತ್ನವನ್ನು ರಿಪಬ್ಲಿಕ್ ಅರ್ನಬ್ ಗೋಸ್ವಾಮಿ ಮಾಡಿದ್ದರು. ಆ ಹಸೀ ಸುಳ್ಳನ್ನು ಬಿಜೆಪಿಯ ಅಮಿತ್ ಮಾಳವೀಯ, ವಿವೇಚಿಸದೆ ಪ್ರಪಂಚಕ್ಕೆ ಹಂಚಿದ್ದರು.
ಈಗ ಸುಳ್ಳು ಮಾಹಿತಿ ನೀಡಿದ ಆರೋಪದಡಿ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಯುವ ಕಾಂಗ್ರೆಸ್‍ನ ಕಾನೂನು ಘಟಕದ ಮುಖ್ಯಸ್ಥ ಬಿ.ಎನ್.ಶ್ರೀಕಾಂತ್ ಸ್ವರೂಪ್ ದೂರು ನೀಡಿದ್ದಾರೆ. ಇದು ಭಾರತದ ರಾಷ್ಟ್ರೀಯ ಪಕ್ಷವೊಂದರ ಕುರಿತು ದೇಶದ ಪ್ರಜೆಗಳಲ್ಲಿ ತಪ್ಪು ಭಾವನೆ ಮೂಡಿಸುವ ಸಂಚಿನ ಭಾಗವಾಗಿದೆ ಎಂದು ದೂರಲಾಗಿದೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಅಮಿತ್ ಮಾಳವೀಯರ ಕೃತ್ಯವು ಭಾರತೀಯ ನಾಗರಿಕರನ್ನು ವಂಚಿಸಲು, ರಾಜಕೀಯ ಸಂಸ್ಥೆಯನ್ನು ಟೀಕಿಸಲು, ರಾಷ್ಟ್ರೀಯ ಭಾವನೆಗಳನ್ನು ದುರುಪಯೋಗಪಡಿಸಲು, ಸಾರ್ವಜನಿಕ ಗಲಭೆಗಳನ್ನು ಪ್ರಚೋದಿಸಲು, ರಾಷ್ಟ್ರೀಯ ಭದ್ರತೆ ಮತ್ತು ಪ್ರಜಾಪ್ರಭುತ್ವದ ಸಮಗ್ರತೆಯನ್ನು ಹಾಳುಮಾಡಲು ನಡೆಸಿದ ಸಂಚಿನ ಭಾಗವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ದುರದೃಷ್ಟಕರ ಸಂಗತಿ ಎಂದರೆ, ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ‘ಫೈರ್ ಬ್ರ್ಯಾಂಡ್’ ಎನಿಸಿಕೊಂಡಿರುವುದೇ ಇಂತಹ ಕೃತ್ಯಗಳಿಂದ. ಈತನ ಸುಳ್ಳುಸುದ್ದಿಗಳು ಹಣ ಗಳಿಸುವ ಆಸೆಯಾಚೆಗೂ ಸಮಾಜವನ್ನು ವಿಭಜಿಸುವ, ಮನುಷ್ಯ-ಮನುಷ್ಯರ ನಡುವೆ ಗೋಡೆ ಕಟ್ಟುವ ಸಾಧನವಾಗಿ ಬಳಕೆಯಾಗುತ್ತಿರುವುದು ವರ್ತಮಾನದ ದುರಂತ.
ದೇಶವನ್ನಾಳುವ ದೊರೆಯೇ ಮಹಾನ್ ಸುಳ್ಳುಗಾರನಾಗಿರುವಾಗ, ಅರ್ನಬ್ ಎಂಬ ಪತ್ರಕರ್ತ ಸುಳ್ಳು ಸುದ್ದಿ ಸೃಷ್ಟಿಸುವಾಗ, ಅದನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಪ್ರಪಂಚಕ್ಕೆ ಹಂಚುವಾಗ- ರಾಹುಲ್ ಗಾಂಧಿ ದೇಶದ್ರೋಹಿ ಆಗದೇ ಇರಲು ಸಾಧ್ಯವೇ?
ಇದನ್ನು ಓದಿದ್ದೀರಾ?: ಕನ್ನಡದ ಹಿರಿಮೆಯನ್ನು ಬಾನೆತ್ತರಕ್ಕೆ ಏರಿಸಿದ ಬಾನು ಮುಷ್ತಾಕ್
ದೇಶದ ಜನ ಸುಳ್ಳಿಗೆ ಬಲಿಯಾಗಿ ಮೂರನೇ ಬಾರಿಗೆ ಮೋದಿಯವರನ್ನು ಆಯ್ಕೆ ಮಾಡಿಕೊಂಡಿರಬಹುದು. ಅರ್ನಬ್ ಗೋಸ್ವಾಮಿ ಎಂಬ ಪತ್ರಕರ್ತನನ್ನು ದೇಶದ ಯುವಪೀಳಿಗೆ ಪತ್ರಕರ್ತರು ಮಾದರಿಯನ್ನಾಗಿ ಸ್ವೀಕರಿಸಿರಬಹುದು. ಬಿಜೆಪಿ ಅಧಿಕಾರ ಬಳಸಿ ಅರ್ನಬ್ ಗೋಸ್ವಾಮಿ ಮತ್ತು ಅಮಿತ್ ಮಾಳವೀಯರ ಮೇಲಿನ ಕೇಸು ಕೂಡ ಖೈದಾಗುವಂತೆ ನೋಡಿಕೊಳ್ಳಬಹುದು.
ಆದರೆ, ದೇಶವನ್ನು ಮುನ್ನಡೆಸುವ, ಪ್ರಜಾಪ್ರಭುತ್ವಕ್ಕೆ ಬೆಲೆ ತರುವ, ಸಂವಿಧಾನ ಸಂರಕ್ಷಿಸುವ ರಾಜಕೀಯ ನಾಯಕರು, ಜವಾಬ್ದಾರಿಯುತ ಪತ್ರಕರ್ತರು, ಅದನ್ನು ಬೆಂಬಲಿಸುವ ಮಾನವಂತರು ಇನ್ನೂ ಇದ್ದಾರೆ. ‘ಬಲಿಷ್ಠ’ರೆನಿಸಿಕೊಂಡವರು ಬೆತ್ತಲಾಗುತ್ತಿದ್ದಾರೆ.
