ಭಾರತೀಯರಿಗೆ ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಸದ್ಯಕ್ಕೆ 'ಪ್ರಬಲ ವ್ಯಕ್ತಿ'ಗಳಂತೆ ಗೋಚರಿಸುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಅವರ ದಾಳಿ, ಕ್ರೌರ್ಯ, ಹಿಂಸೆಯನ್ನು ಬೆಂಬಲಿಸುತ್ತಿದ್ದಾರೆ. ಇದು, ಆಘಾತಕಾರಿ ಮಾತ್ರವಲ್ಲ, ಅನಾಹುತಕಾರಿಯೂ ಹೌದು.
ಅಮೆರಿಕದಲ್ಲಿರುವ ಭಾರತೀಯರು ಸಂಪ್ರದಾಯವಾದಿ ರಿಪಬ್ಲಿಕನ್ ಪಕ್ಷಕ್ಕೆ ವಿರುದ್ಧವಾಗಿದ್ದಾರೆ. ಅವರು ಅಮೆರಿಕದಲ್ಲಿ ಹೆಚ್ಚು ಉದಾರವಾದಿ ಡೆಮಾಕ್ರಾಟ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಟ್ರಂಪ್ ಮತ್ತೆ ಅಧಿಕಾರಕ್ಕೆ ಬರಬಾರದೆಂದು ಬಯಸುತ್ತಿದ್ದಾರೆ. ಆದರೆ, ಇದಕ್ಕೆ ವಿರುದ್ಧವಾಗಿ ಭಾರತದಲ್ಲಿರುವ ಭಾರತೀಯರ ಪೈಕಿ, ಬಲಪಂಥೀಯ, ಸಂಪ್ರದಾಯವಾದಿ ಹಾಗೂ ಮತೀಯವಾದಿಗಳು ಟ್ರಂಪ್‌ಅನ್ನು ಬೆಂಬಲಿಸುತ್ತಿದ್ದಾರೆ. ಇಡೀ ಭಾರತವೇ ಟ್ರಂಪ್ ಪರವಾಗಿದೆ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ.
2019ರಲ್ಲಿ ಪ್ರಧಾನಿ ಮೋದಿಯನ್ನು ಅಮೆರಿಕಗೆ ಕರೆಸಿಕೊಂಡಿದ್ದ ಅಂದಿನ ಅಧ್ಯಕ್ಷ ಟ್ರಂಪ್, ‘ಹೌಡಿ ಮೋದಿ’ ಕಾರ್ಯಕ್ರಮ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ, 2020ರಲ್ಲಿ ಕೊರೋನ ಸಂದರ್ಭದ ನಡುವೆಯೋ ಟ್ರಂಪ್‌ಅನ್ನು ಭಾರತಕ್ಕೆ ಕರೆಸಿಕೊಂಡಿದ್ದ ಮೋದಿ, ಗುಜರಾತ್‌ನಲ್ಲಿ ‘ನಮಸ್ತೆ ಟ್ರಂಪ್’ ಸಮಾರಂಭ ನಡೆಸಿದ್ದರು. ಮೋದಿ-ಟ್ರಂಪ್ ಸ್ನೇಹದ ಹೊರತಾಗಿಯೂ, 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರು ಟ್ರಂಪ್ ವಿರುದ್ಧ ಮತ ಚಲಾಯಿಸಿದರು. ಡೆಮಾಕ್ರಾಟ್ ಪಕ್ಷದ ಪರವಾಗಿ ತಮ್ಮ ದೃಢ ಬೆಂಬಲವನ್ನು ಪ್ರದರ್ಶಿಸಿದರು. ಇದು 2024ರ ಅಧ್ಯಕ್ಷೀಯ ಚುನಾವಣೆಯಲ್ಲೂ ಮುಂದೆವರೆಯಲಿದೆ. ಏಕೆಂದರೆ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಭಾರತೀಯ ಮೂಲದವರಾಗಿದ್ದಾರೆ.
ಅಮೆರಿಕದಲ್ಲಿ ಅಸ್ತಿತ್ವದಲ್ಲಿರುವ ಸ್ಥಿರತೆ ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಟ್ರಂಪ್, ಇತರ ದೇಶಗಳಿಂದ ಅಮೆರಿಕಗೆ ವಲಸೆ ಬರುವುದನ್ನು ವಿರೋಧಿಸುತ್ತಿದ್ದಾರೆ. ಮಾತ್ರವಲ್ಲದೆ, ಕಟುವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಇದು, ಭಾರತೀಯ ಅಮೆರಿಕನ್ನರು ಡೊನಾಲ್ಡ್ ಟ್ರಂಪ್ ವಿರುದ್ಧ ಒಂದಾಗಲು, ಗಟ್ಟಿಗೊಳ್ಳಲು ಮತ್ತೊಂದು ಕಾರಣವಾಗಿದೆ.
ಆದರೂ ಭಾರತದಲ್ಲಿನ ಅನೇಕರು, ಮುಖ್ಯವಾಗಿ ಬಲಪಂಥೀಯ ವಾದಿಗಳು ವಿದೇಶಗಳಲ್ಲಿರುವ ತಮ್ಮದೇ ಜನರ ರಾಜಕೀಯ ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿದ್ದಾರೆ. ಭಾರತೀಯರ ಸೈದ್ಧಾಂತಿಕ ಆದ್ಯತೆಗಳು ವಿದೇಶಿ ಭಾರತೀಯರ ನಿಲುವುಗಳಿಗೆ ವಿರುದ್ಧವಾಗಿವೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಗೋಪಾಲ್ ಜೋಶಿ ಪ್ರಕರಣ ಮತ್ತು ಮಾರಿಕೊಂಡ ಮಾಧ್ಯಮಗಳು
ಭಾರತೀಯ ಅಮೆರಿಕನ್ನರು ಯುಎಸ್‌ನಲ್ಲಿ ಬಹುಸಂಸ್ಕೃತಿ, ಸಮಾನ ಅವಕಾಶಗಳು, ಸಮಾನ ವ್ಯವಸ್ಥೆ, ಸ್ಥಿರತೆ ಮತ್ತು ಸಮಾಜದ ಅಗತ್ಯವನ್ನು ಗುರುತಿಸುತ್ತಿದ್ದಾರೆ. ಈ ಎಲ್ಲ ಅಗತ್ಯಗಳನ್ನು ಡೆಮಾಕ್ರಾಟ್‌ಗಳು ಪ್ರತಿನಿಧಿಸುತ್ತಿದ್ದಾರೆ. ಇವೆಲ್ಲವೂ ತಮ್ಮ ಭರವಸೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಚುನಾವಣೆ ನಂತರ ತಮ್ಮ ಭರವಸೆಗಳಿಗೆ ಡೆಮಾಕ್ರಾಟ್‌ಗಳು ಬದ್ಧರಾಗಿರುತ್ತಾರೋ ಇಲ್ಲವೋ, ಅದು ಮತ್ತೊಂದು ಪ್ರಶ್ನೆ. ಆದರೆ, ಸದ್ಯದ ಪರಿಸ್ಥಿತಿಗೆ ಟ್ರಂಪ್ ಅವರು ವಲಸೆ ವಿರೋಧಿ ನೀತಿಗಳ ಮುಂದೆ, ಭಾರತೀಯ ಅಮೆರಿಕನ್ನರಿಗೆ ಡೆಮಾಕ್ರಾಟ್ ಪಕ್ಷವು ಏಕೈಕ ಆಯ್ಕೆಯಾಗಿದೆ. ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವು ನೇಟಿವಿಸಂ, ಬಿಳಿ-ಬಹುಮತವಾದ ಹಾಗೂ ಅಲ್ಪಸಂಖ್ಯಾತರ ನಿರಾಕರಣೆಯನ್ನು ಪ್ರತಿನಿಧಿಸುತ್ತಿದೆ. ಅಲ್ಪಸಂಖ್ಯಾತರ ಶ್ರೇಣಿಯಲ್ಲಿ, ಇಸ್ಲಾಮಿಕ್ ದೇಶಗಳು ಮತ್ತು ಕರಿಯರು ಭಾರತೀಯ ಅಮೆರಿಕನ್ನರಿಗಿಂತ ಹೆಚ್ಚು ತಾರತಮ್ಯಕ್ಕೆ ಒಳಗಾಗಿದ್ದಾರೆ. ಆದರೆ, ಈ ತಾರತಮ್ಯಕ್ಕೆ ಭಾರತೀಯರು ಹೊರತಾಗಿಲ್ಲ ಎಂಬುದು ಗಮನಾರ್ಹ.
ಆದರೆ, ಇದೇ ಸಮಯದಲ್ಲಿ, ಭಾರತದಲ್ಲಿ ಆಡಳಿತಾರೂಢ ಮೋದಿ ಸರ್ಕಾರವು ಹುಸಿ ಘೋಷಣೆಗಳೊಂದಿಗೆ ‘ಬ್ಯಾಕ್ ಹೋಮ್’ ಎಂಬ ಕರೆಕೊಡುತ್ತಿದೆ. ಆದರೆ, ಆ ಕರೆ ವಿದೇಶಗಳಲ್ಲಿನ ಭಾರತೀಯರಲ್ಲಿ ಯಾವುದೇ ಭರವಸೆ ಹುಟ್ಟುಹಾಕಿಲ್ಲ. ಮೋದಿ, ಬಿಜೆಪಿ ಹಾಗೂ ಸಂಘಪರಿವಾರವು ‘ವಿಶ್ವಗುರು’ (ಜಾಗತಿಕ ವ್ಯವಹಾರಗಳಲ್ಲಿ ನಾಯಕತ್ವದ ಪಾತ್ರ), ‘ಅಮೃತ್ ಕಾಲ’, ‘ವಿಕ್ಷಿತ್ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಹಾಗೂ ಇತರ ನಿರೂಪಣೆಗಳ ಮೂಲಕ ಮೋದಿ ಸರ್ಕಾರವು ಭಾರೀ ಅಭಿವೃದ್ಧಿ ಪಥದಲ್ಲಿದೆ ಎಂಬುದನ್ನು ಹೇಳುತ್ತಿದೆ. ಆದರೆ, ಈ ಮಾತುಗಳನ್ನು ಭಾರತದಲ್ಲಿರುವ ಭಾರತೀಯರು ನಂಬುತ್ತಿದ್ದರೂ, ಹೊರಗಿರುವ ಭಾರತೀಯರು ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಮೋದಿ ಅವರ ಈ ಎಲ್ಲ ಘೋಷಣೆಗಳು ಸದ್ಯಕ್ಕೆ ‘ಜುಮ್ಲಾ’ಗಳೆಂದು ಅರಿತುಕೊಂಡಿದ್ದಾರೆ.
ಭಾರತದಲ್ಲಿ- ಉದಾರತೆ, ಪ್ರಜಾಪ್ರಭುತ್ವ ಹಾಗೂ ನೈತಿಕತೆ ವಿಚಾರದಲ್ಲಿ ಡೆಮಾಕ್ರಾಟ್ ಪಕ್ಷಕ್ಕಿಂತ ರಿಪಬ್ಲಿಕನ್ ಪಕ್ಷವು ಭಾರತಕ್ಕೆ ಹೆಚ್ಚು ನೆರವು ನೀಡುತ್ತದೆ ಎಂಬ ವಾದವನ್ನು ಮುನ್ನೆಲೆಗೆ ತರಲಾಗಿದೆ. ಕಳೆದೆರಡು ದಶಕಗಳಲ್ಲಿ, ಈ ದೃಷ್ಟಿಕೋನವನ್ನು ಹೆಚ್ಚಾಗಿ ಬೆಂಬಲಿಸಲಾಗುತ್ತಿದೆ. ವಿಶೇಷವಾಗಿ ಜಾರ್ಜ್ ಡಬ್ಲ್ಯೂ ಬುಷ್ ಮತ್ತು ಡೊನಾಲ್ಡ್ ಟ್ರಂಪ್‌ರಂತಹ ನಾಯಕರು ಕಾಕತಾಳೀಯವಾಗಿ ಭಾರತದ ಸಾಂಪ್ರದಾಯಿಕ ಶತ್ರುವಾದ ಪಾಕಿಸ್ತಾನದ ಮೇಲೆ ಕಟುವಾಗಿದ್ದಾರೆ. ಆದರೆ, ಡೆಮಾಕ್ರಾಟ್‌ಗಳು ಹೆಚ್ಚು ಸಂಯಮದಿಂದ ಯೋಚಿಸಿ ಮುಂದಡಿ ಇಡುತ್ತಿದ್ದಾರೆ.
ಆದ್ದರಿಂದಲೇ, ಪಾಕಿಸ್ತಾನ ಅಥವಾ ಚೀನಾದ ವಿಚಾರದಲ್ಲಿ ರಿಪಬ್ಲಿಕನ್ನರು ಹೆಚ್ಚು ಕಟ್ಟುನಿಟ್ಟಾಗಿರುವ ಕಾರಣ, ‘ಶತ್ರುವಿನ ಶತ್ರು ಮಿತ್ರ’ ಎಂಬ ಸರಳ ಸಮೀಕರಣದೊಂದಿಗೆ ರಿಪಬ್ಲಿಕನ್ನರನ್ನು ಹಿಂದುತ್ವವಾದಿ, ಸಂಘಪರಿವಾರದ ಅನುಯಾಯಿಗಳು ಬೆಂಬಲಿಸುತ್ತಿದ್ದಾರೆ.
ಇನ್ನು, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಚಾರದಲ್ಲಿಯೂ ಭಾರತೀಯರ ಧೋರಣೆ ಇಸ್ರೇಲ್ ನಡೆಗಳನ್ನು ಬೆಂಬಲಿಸುತ್ತಿದೆ. ನೆತನ್ಯಾಹು ಅವರ ಉಗ್ರಗಾಮಿ ಮತ್ತು ಆಕ್ರಮಣಕಾರಿ ನಿಲುವುಗಳು ಭಾರತದಲ್ಲಿನ ಅನೇಕರಿಗೆ ಇಷ್ಟವಾಗುತ್ತಿದೆ. ಅವರನ್ನು ಪ್ರೀತಿಸುವಂತೆ ಮಾಡುತ್ತಿದೆ. ಗಾಜಾ ಪಟ್ಟಿಯ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ಎಸಗಿದ ಕ್ರೌರ್ಯ; ಲೆಬನಾನ್, ಇರಾನ್ ಮೇಲಿನ ಇಸ್ರೇಲಿ ದಾಳಿಗಳು ಬಹುಸಂಖ್ಯಾತ ಭಾರತೀಯರಿಗೆ ಆದರ್ಶವಾಗಿ ಕಾಣುತ್ತಿವೆ. ಈವರೆಗೆ, ಪ್ಯಾಲೆಸ್ತೀನಿಯರು ಸೇರಿದಂತೆ 50,000 ಮಂದಿಯನ್ನು ಇಸ್ರೇಲ್ ಹತ್ಯೆಗೈದಿದೆ. ಇಸ್ರೇಲ್ ಕ್ರೌರ್ಯದಿಂದ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ನಿಲುವುಗಳು ಭಾರತದ ಸಾರ್ವಭೌಮ ನಿಲುವಿಗೆ ವಿರುದ್ಧವಾಗಿವೆ. ಆದರೆ, ನೆತನ್ಯಾಹು ಅವರ ಕ್ರೌರ್ಯದ ಪ್ರಹಾರವನ್ನು ಬಹುಸಂಖ್ಯಾತ ಭಾರತೀಯರು ಒಳಗೊಳಗೇ ಬೆಂಬಲಿಸುತ್ತಿದ್ದಾರೆ. ಈ ಧೋರಣೆಯು ಭಾರತದ ಘೋಷಿತ ನಿಲುವನ್ನು ಅಪಹಾಸ್ಯ ಮಾಡುತ್ತಿದೆ.
ಪ್ಯಾರಿಸ್ ಹವಾಮಾನ ಒಪ್ಪಂದದ ಕುರಿತು ಈ ಹಿಂದೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ”ಭಾರತವನ್ನು ನೋಡಿ. ಅದು ಹೊಲಸು. ಅಲ್ಲಿನ ಗಾಳಿಯೂ ಕೊಳಕು” ಎಂದಿದ್ದರು. ಇತ್ತೀಚೆಗೆ, ಅಮೆರಿಕ-ಭಾರತ ವ್ಯಾಪಾರ ಸಂಬಂಧದ ಕುರಿತು ಮಾತನಾಡಿದ್ದ ಟ್ರಂಪ್, ಭಾರತವನ್ನು ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ದುರುಪಯೋಗ ಮಾಡಿಕೊಳ್ಳುವವರು ಎಂದು ಬಣ್ಣಿಸಿದ್ದಾರೆ. ಆದರೂ, ಅನೇಕ ಭಾರತೀಯರು ಡೊನಾಲ್ಡ್ ಟ್ರಂಪ್ ಅವರನ್ನು ಕ್ಷಮಿಸುತ್ತಿದ್ದಾರೆ. ಇದಕ್ಕೆ ಏಕೈಕ ಕಾರಣ, ಟ್ರಂಪ್ ಮತ್ತು ಮೋದಿ- ಅನುಸರಿಸುವ ಒಂದೇ ಸಿದ್ದಾಂತ. ಅದು ಬಲಪಂಥೀಯ ಸಿದ್ದಾಂತ.
ಡೊನಾಲ್ಡ್ ಟ್ರಂಪ್ ಅವರ ಪ್ರಚಾರವು ಹೆಚ್ಚು ದ್ವೇಷಪೂರಿತ ಮತ್ತು ಧ್ರುವೀಕರಣದಿಂದ ಕೂಡಿದೆ. ಇದು ಭಾರತದ ಅನೇಕರಿಗೆ ಹೆಚ್ಚು ಪ್ರಿಯ ಮತ್ತು ಆದ್ಯತೆಯಾಗುತ್ತಿದೆ. ಪ್ರಮುಖ ಅಂಶವೆಂದರೆ, ಭಾರತೀಯ ಅಮೆರಿಕನ್ನರ ಆರ್ಥಿಕ ಮೌಲ್ಯವು ಸಾಪೇಕ್ಷ ಶಾಂತಿವಾದವನ್ನು ಪ್ರತಿಬಿಂಬಿಸುತ್ತದೆ. ಅವರು ಡೊನಾಲ್ಡ್ ಟ್ರಂಪ್ ಅವರ ವಲಸಿಗ-ವಿರೋಧಿ ನಿರೂಪಣೆಯನ್ನು ಖಂಡಿಸುತ್ತದೆ.
ಹೀಗಾಗಿಯೇ, ಭಾರತೀಯ ಅಮೆರಿಕನ್ನರಿಗೆ ಡೆಮಾಕ್ರಾಟ್‌ಗಳು ಉತ್ತಮವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಸೈದ್ಧಾಂತಿಕ ನಿಲುವುಗಳು ವೈವಿಧ್ಯತೆಗಳನ್ನು ಒಳಗೊಂಡಿದೆ. ಡೆಮಾಕ್ರಾಟ್‌ಗಳು ಅಂತರ್ಗತವಾಗಿ ಬಹುಪಕ್ಷೀಯತೆ ಬೆಂಬಲಿಸುತ್ತಾರೆ. ಚರ್ಚೆಗೆ ಹೆಚ್ಚು ತೆರೆದುಕೊಳ್ಳುತ್ತಿದ್ದಾರೆ. ಇದು, ಭಾರತೀಯ ಅಮೆರಿಕನ್ನರ ಮೆಚ್ಚುಗೆಗೆ ಕಾರಣವಾಗಿದೆ.
ಆದರೆ, ಇಲ್ಲಿನ ಭಾರತೀಯರು ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಅಥವಾ ಇತರ ಯಾವುದೇ ‘ಪ್ರಬಲ ವ್ಯಕ್ತಿ’ಯನ್ನು ಇಷ್ಟಪಡುತ್ತಿದ್ದಾರೆ. ಅವರ ದಾಳಿ, ಕ್ರೌರ್ಯ, ಹಿಂಸೆಯನ್ನು ಬೆಂಬಲಿಸುತ್ತಿದ್ದಾರೆ. ಇದು, ಆಘಾತಕಾರಿ ಮಾತ್ರವಲ್ಲ, ಅನಾಹುತಕಾರಿಯೂ ಹೌದು.
