ಈ ದಿನ ಸಂಪಾದಕೀಯ | ಪುಲ್ವಾಮಾ ದುರಂತದ ಸ್ಫೋಟಕ ಸತ್ಯಗಳು- ಸರ್ಕಾರ ಮೌನ ಮುರಿಯಬೇಕು

Date:

Advertisements
ದೇಶಭಕ್ತಿಯನ್ನು, ಭದ್ರತಾ ಪಡೆಗಳನ್ನು ವೈಭವೀಕರಿಸುವ, ರಾಷ್ಟ್ರವಾದ, ರಾಷ್ಟ್ರೀಯ ಸುರಕ್ಷತೆ ಕುರಿತು ತನ್ನಂತೆ ಕಾಳಜಿ ಮಾಡುವ ಪಕ್ಷ ಮತ್ತೊಂದಿಲ್ಲ ಎನ್ನುವ ಬಿಜೆಪಿ ಮತ್ತು ಮೋದಿಯವರ ಸರ್ಕಾರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉತ್ಸಾಹವನ್ನು ಯಾಕೆ ತೋರಿಸಿಲ್ಲ?

ನಾಲ್ಕು ವರ್ಷಗಳ ಹಿಂದೆ ಕಾಶ್ಮೀರದ ಪುಲ್ವಾಮದಲ್ಲಿ ಆರ್.ಡಿ.ಎಕ್ಸ್. ವಿಸ್ಫೋಟದ ಭಯಾನಕ ದಾಳಿಯಲ್ಲಿ ಸಿ.ಆರ್.ಪಿ.ಎಫ್.ನ ನಲವತ್ತು ಮಂದಿ ಯೋಧರು ಹುತಾತ್ಮರಾದರು. 2019ರ ಫೆಬ್ರವರಿ 14ರಂದು ಈ ದುರ್ಘಟನೆ ಜರುಗಿತ್ತು. ಹನ್ನೊಂದು ದಿನಗಳ ನಂತರ ಫೆಬ್ರವರಿ 26ರಂದು ಭಾರತೀಯ ಸೇನೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು.

ಅಲ್ಲಿಂದ ಒಂದು ತಿಂಗಳ ತರುವಾಯ ಲೋಕಸಭಾ ಚುನಾವಣೆಗಳು ನಡೆದವು. ಮೋದಿಯವರ ಬಿಜೆಪಿ ಮುನ್ನೂರು ಸೀಟುಗಳ ಸಂಖ್ಯೆಯನ್ನು ದಾಟಿತ್ತು. ಬಿಜೆಪಿ ನೇತೃತ್ವದ ಎನ್.ಡಿ.ಎ.ಮೈತ್ರಿಕೂಟ 353 ಸೀಟುಗಳ ಘನವಿಜಯ ಗಳಿಸಿತ್ತು.

ನೋಟು ರದ್ದು, ಕೋವಿಡ್ ಸಾವುಗಳು, ಕೋವಿಡ್ ಲಾಕ್ ಡೌನ್ ಹಿನ್ನೆಲೆಯ ಮಹಾವಲಸೆ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯ ಸಂಕಟಗಳು ತಳಮಳಗಳು ಮೋದಿ ಸರ್ಕಾರದ ಕೂದಲನ್ನೂ ಕೊಂಕಿಸಲಿಲ್ಲ. ಚುನಾವಣಾ ಚರ್ಚೆಯ ಈ ವಿಷಯಗಳು ಹಠಾತ್ತನೆ ಮೂಲೆಗುಂಪಾಗಿದ್ದವು. ದೇಶಭಕ್ತಿ, ರಾಷ್ಟ್ರವಾದ ರಾಷ್ಟ್ರೀಯ ಭದ್ರತೆಯ ವಿಷಯಗಳು ಚುನಾವಣಾ ವಿಷಯಗಳಾಗಿ ಹೋಗಿದ್ದವು. ‘ನಮ್ಮನ್ನು ಕೆಣಕಿದವರ ಮನೆಗೆ ನುಗ್ಗಿ ಹೊಡೆಯುತ್ತೇವೆ’ ಎಂಬುದಾಗಿ ಬಾಲಾಕೋಟ್ ದಾಳಿಯನ್ನು ವೈಭವೀಕರಿಸಲಾಯಿತು. ಹಿಂದು-ಮುಸ್ಲಿಮ್ ಧೃವೀಕರಣ ಜೋರು ಜಬರುದಸ್ತಿನಿಂದ ನಡೆಯಿತು. ಜನಸಾಮಾನ್ಯರ ಸಂಕಟಗಳು ಸಮಸ್ಯೆಗಳ ಚುನಾವಣಾ ವಿಷಯಗಳು ಈ ಬಿರುಗಾಳಿಯಲ್ಲಿ ತರಗೆಲೆಗಳಂತೆ ಕೊಚ್ಚಿ ಹೋಗಿದ್ದವು.

Advertisements

ಆದರೆ ನಮ್ಮ ಗಡಿಗಳನ್ನು ಕಾಯುತ್ತಿದ್ದ ನಲವತ್ತು ಮಂದಿ ಯೋಧರು ಹುತಾತ್ಮರಾದರಲ್ಲ. ಈ ದಾಳಿ-ದುರಂತ ನಡೆದದ್ದಾದರೂ ಹೇಗೆ ಮತ್ತು ಯಾಕೆ ಎಂಬುದರ ತನಿಖೆ ಈವರೆಗೆ ನಡೆದಿಲ್ಲ. ಈ ಹುತಾತ್ಮರ ಕುಟುಂಬಗಳಿಗೆ ಸರ್ಕಾರ ಪರಿಹಾರವನ್ನೇನೋ ಪಾವತಿ ಮಾಡಿದೆ. ಬಾಲಾಕೋಟ್ ಗೆ ನುಗ್ಗಿ ಪಾಕಿಸ್ತಾನವನ್ನು ‘ಶಿಕ್ಷಿಸಿದೆ’. ಆದರೆ ಪುಲ್ವಾಮ ದುರಂತಕ್ಕೆ ಕಾರಣಗಳ ಪತ್ತೆ ಹಚ್ಚಲಾಯಿತೇ? ನಮ್ಮ ವ್ಯವಸ್ಥೆಯೊಳಗೆ ಬೇಜವಾಬ್ದಾರಿ ತೋರಿ ಈ ದುರಂತಕ್ಕೆ ಅವಕಾಶ ನೀಡಿದವರನ್ನು ಗುರುತಿಸಿ ಶಿಕ್ಷಿಸಲಾಯಿತೇ?

2019ರ ಲೋಕಸಭಾ ಚುನಾವಣೆಗೆ ಮುನ್ನ ಮೋದಿ ಸರ್ಕಾರದ ಪುಲ್ವಾಮಾ ವೈಫಲ್ಯವನ್ನು ಪ್ರಶ್ನಿಸಿದವರಿಗೆ ದೇಶದ್ರೋಹಿಗಳ ಹಣೆಪಟ್ಟಿ ಹಚ್ಚಿ ಹೀಗಳೆಯಲಾಯಿತು. ಬಾಲಾಕೋಟ್ ದಾಳಿಗಳ ಬಳಸಿ ಪುಲ್ವಾಮ ಸಂಗತಿಗಳ ಹತ್ತಿಕ್ಕಲಾಯಿತು.

ಈ ದುರಂತ ಜರುಗಿದಾಗ ಸತ್ಯಪಾಲ್ ಮಲಿಕ್ ಜಮ್ಮು-ಕಾಶ್ಮೀರದ ರಾಜ್ಯಪಾಲರು. ಇದೇ ಮಲಿಕ್ ಇದೀಗ ಪುಲ್ವಾಮ ದಾಳಿ-ದುರಂತದ ತನಿಖೆಯ ಆಗ್ರಹಕ್ಕೆ ಮತ್ತೆ ಜೀವ ನೀಡಿದ್ದಾರೆ. ದಾಳಿಯ ದಿನ ಮುಸ್ಸಂಜೆಯ ತನಕ ಪ್ರಧಾನಿಯವರು ಉತ್ತರಾಖಂಡದ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಡಿಸ್ಕವರಿ ಛಾನೆಲ್ ಗಾಗಿ ‘ಮ್ಯಾನ್ ವರ್ಸಸ್ ವೈಲ್ಡ್’ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಚಿತ್ರೀಕರಣದ ನಂತರ ಮೋದಿಯವರು ತಮಗೆ ದೂರವಾಣಿ ಕರೆ ಮಾಡಿದರು. ‘ಈ ದಾಳಿಯ ಹಿಂದೆ ನಮ್ಮ ದೋಷಗಳು-ವೈಫಲ್ಯಗಳೂ ಅಡಗಿವೆ ಸಾಹೇಬರೇ, 900ಕ್ಕೂ ಹೆಚ್ಚು ಸಿ.ಆರ್.ಪಿ.ಎಫ್.ಯೋಧರನ್ನು ಸಾಗಿಸಲು ಐದು ವಿಮಾನಗಳನ್ನು ಒದಗಿಸಿದ್ದರೆ ಈ ದುರಂತ ನಡೆಯುತ್ತಲೇ ಇರಲಿಲ್ಲ’ ಎಂದು ಮೋದಿಯವರಿಗೆ ಮಲಿಕ್ ವಿವರಿಸಿದರು. ಪ್ರತಿಯಾಗಿ ಈ ಕುರಿತು ‘ಹೆಚ್ಚು ಮಾತಾಡದೆ ಮೌನ ವಹಿಸುವಂತೆ’ ಮೋದಿಯವರು ಸೂಚನೆ ನೀಡಿದರೆಂಬ ಸಂಗತಿಯನ್ನು ಮಲಿಕ್ ಬಯಲು ಮಾಡಿದ್ದಾರೆ.

ಪ್ರಧಾನಿಯ ನಂತರ ಫೋನ್ ಮಾಡಿದ ರಾಷ್ಟ್ರೀಯ ಸುರಕ್ಷತಾ ಸಲಹೆಗಾರ ಅಜಿತ್ ಡೋವಲ್ ಕೂಡ ಈ ಕುರಿತು ಮೌನ ತಳೆಯುವಂತೆ ತಮಗೆ ಸೂಚಿಸಿದ್ದಾಗಿಯೂ, ದಾಳಿ ದುರಂತಕ್ಕೆ ಪಾಕಿಸ್ತಾನವನ್ನು ಹೊಣೆಯಾಗಿಸುವ ನಿಲುವನ್ನು ತಳೆಯಬೇಕಿದೆ, ನೀವು ಸುಮ್ಮನಿದ್ದುಬಿಡಿ ಎಂಬುದು ಮೋದಿ-ಡೋವಲ್ ಸೂಚನೆಯಾಗಿತ್ತೆಂದೂ ಮಲಿಕ್ ವಿವರಿಸಿದ್ದಾರೆ.

‘ದಿ ವೈರ್’ ಸುದ್ದಿ ಸಂಸ್ಥೆಯ ಕರಣ್ ಥಾಪರ್ ಅವರಿಗೆ ಕೆಲ ದಿನಗಳ ಹಿಂದೆ ನೀಡಿರುವ ಸುದೀರ್ಘ ಸಂದರ್ಶನದಲ್ಲಿ ಈ ಸೋಜಿಗದ ಸಂಗತಿಯನ್ನು ಬಯಲು ಮಾಡಿದ್ದಾರೆ.

ನಮ್ಮ 900ಕ್ಕೂ ಹೆಚ್ಚು ಯೋಧರು ವಿಮಾನಗಳ ಬದಲು 78 ಬಸ್ಸುಗಳಲ್ಲಿ ಪಯಣಿಸಬೇಕಾದ ಅನಿವಾರ್ಯವನ್ನು ಪಾಕಿಸ್ತಾನ ಭಯೋತ್ಪಾದನೆಯ ದಾಳಿಗೆ ಬಳಸಿಕೊಂಡಿತು. ಹೀಗಾಗಿ ಪಾಕಿಸ್ತಾನವನ್ನು ಕಟಕಟೆಯಲ್ಲಿ ನಿಲ್ಲಿಸಿದ್ದು ಸರಿ. ಆದರೆ ಯೋಧರನ್ನು ಸಾಗಿಸಲು ಗೃಹಮಂತ್ರಾಲಯ ಐದು ವಿಮಾನಗಳನ್ನು ಒದಗಿಸಲು ಯಾಕೆ ನಿರಾಕರಿಸಿತ್ತು? ಭದ್ರತಾ ಪಡೆಗಳ ಚಲನವಲನಕ್ಕೆ ಒಂದು ಗೊತ್ತಾದ ವಿಧಿವಿಧಾನ (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸೀಜರ್) ಇರುತ್ತದೆ. ಈ ವಿಧಾನದ ಪ್ರಕಾರ ಭದ್ರತಾ ಪಡೆಗಳ ಪಯಣ ಮದುವೆ ಮೆರವಣಿಗೆಯಂತೆ ಸಾಲುಸಾಲಾಗಿ ನಡೆಯುವುದಿಲ್ಲ. ರಸ್ತೆ ಮಾರ್ಗದ ಪಯಣ ಸುರಕ್ಷಿತವಲ್ಲ. ಹಾಗೆ ಮಾಡಲೇಬೇಕಾಗಿ ಬಂದಾಗ ಪಡೆಗಳನ್ನು ಹೊತ್ತ ವಾಹನಗಳು ಹಾದು ಸಾಗುವ ತನಕ ಇತರೆ ವಾಹನಗಳನ್ನು ದೂರ ದೂರದಲ್ಲಿ ನಿಲ್ಲಿಸಲಾಗುತ್ತದೆ. ಅಂತಹ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ಹೀಗಿದ್ದಾಗ ನಮ್ಮ ಯೋಧರನ್ನು ಹೊತ್ತ 78 ಬಸ್ಸುಗಳು ಮದುವೆ ದಿಬ್ಬಣದಂತೆ, ಅಪಾಯವನ್ನು ಕೈಬೀಸಿ ಕರೆಯುವಂತೆ ಮೆರವಣಿಗೆಯಲ್ಲಿ ಹೊರಟಿದ್ದಾದರೂ ಹೇಗೆ? ಪುಲ್ವಾಮ ದಾಳಿಗೆ ಬಳಕೆಯಾದ 300 ಕೇಜಿಗಳಷ್ಟು ಭಾರೀ ಪ್ರಮಾಣದ ಆರ್.ಡಿ.ಎಕ್ಸ್. ಎಲ್ಲಿಂದ ಬಂತು? ಅದನ್ನು ಹೊತ್ತಿದ್ದ ಕಾರು ಆ ಪ್ರದೇಶದಲ್ಲಿ ಹತ್ತಾರು ದಿನಗಳಿಂದ ಯಾಕೆ ನಿರಾತಂಕವಾಗಿ ಓಡಾಡುತ್ತಿತ್ತು? ಯೋಧರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಬಸ್ಸುಗಳ ಮೇಲೆ ಭಯೋತ್ಪಾದಕರ ದಾಳಿ ನಡೆಯಬಹುದು ಎಂಬ ಬೇಹುಗಾರಿಕೆ ವರದಿಗಳನ್ನು ಯಾಕಾಗಿ ನಿರ್ಲಕ್ಷಿಸಲಾಯಿತು?

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸೌಲಭ್ಯ ಕಲ್ಪಿಸಿದ್ದ ಸಂವಿಧಾನದ 370ನೆಯ ಪರಿಚ್ಛೇದವನ್ನು ರದ್ದು ಮಾಡಿದ ತೀವ್ರ ತಳಮಳದ ದಿನಗಳಲ್ಲಿಯೂ ಅಲ್ಲಿನ ರಾಜ್ಯಪಾಲರು ಅವರೇ ಆಗಿದ್ದರು.ಕಾಶ್ಮೀರ-ಪಾಕ್ ಉಗ್ರವಾದಿಗಳಿಂದ ಮಲಿಕ್ ಅವರಿಗೆ ಜೀವಭಯವಿರುವುದು ಸ್ವಾಭಾವಿಕ. ಆದರೆ ರಾಜ್ಯಪಾಲರ ಹುದ್ದೆಯಿಂದ ಬಿಡುಗಡೆ ಮಾಡಿದ ನಂತರ ಝಡ್ ಪ್ಲಸ್ ಭದ್ರತೆಯನ್ನು ಅವರಿಂದ ವಾಪಸು ಪಡೆಯಲಾಗಿದೆ. ಸರ್ಕಾರಿ ನಿವಾಸದ ಸೌಲಭ್ಯವನ್ನೂ ಕಿತ್ತುಕೊಳ್ಳಲಾಗಿದೆ. ಸತ್ತರೆ ಸಾಯಲಿ ಬಿಡು ಎಂಬುದು ಸರ್ಕಾರದ ಧೋರಣೆ ಎಂದು ಮಲಿಕ್ ನೋವಿನಿಂದ ಹೇಳಿದ್ದಾರೆ.

ಈ ನಡುವೆ ಆಳುವವರ ಮಡಿಲಲ್ಲಿ ಆಡುವ ಮುಖ್ಯಧಾರೆಯ ಸಮೂಹ ಮಾಧ್ಯಮಗಳು ಈ ಸಂದರ್ಶನ ಕುರಿತು ಗಾಢ ಮೌನ ತಳೆದಿವೆ. ‘ಗೋದಿ ಮೀಡಿಯಾ’ದ ಗುಲಾಮಗಿರಿಗೆ ಮತ್ತೊಂದು ಜೀವಂತ ನಿದರ್ಶನವಿದು. ದೇಶಭಕ್ತಿಯನ್ನು, ಭದ್ರತಾ ಪಡೆಗಳನ್ನು ವೈಭವೀಕರಿಸುವ, ರಾಷ್ಟ್ರವಾದ, ರಾಷ್ಟ್ರೀಯ ಸುರಕ್ಷತೆ ಕುರಿತು ತನ್ನಂತೆ ಕಾಳಜಿ ಮಾಡುವ ಪಕ್ಷ ಮತ್ತೊಂದಿಲ್ಲ ಎನ್ನುವ ಬಿಜೆಪಿ ಮತ್ತು ಮೋದಿಯವರ ಸರ್ಕಾರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉತ್ಸಾಹವನ್ನು ಯಾಕೆ ತೋರಿಸಿಲ್ಲ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X