ಮೂವತ್ನಾಲ್ಕರ ಹರೆಯದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಸರಿಯಾಗಿದೆ. ಒಬ್ಬ ಆಟಗಾರ ತನ್ನೆಲ್ಲ ಪ್ರತಿಭೆಯನ್ನು ಸೋಸಿ ಬಸಿದಿಟ್ಟು ಆಡುವ ಕಾಲ ಮುಗಿದಿದೆ ಎಂದು ಆತನಿಗೇ ಅನ್ನಿಸಿದಾಗ, ವಿದಾಯ ಹೇಳುವುದು ಸರಿಯಾದ ನಿರ್ಧಾರ.
‘ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದೇನೆ, ಅದು ಸುಲಭವಲ್ಲ. ಆದರೆ ಸರಿಯಾದ ನಿರ್ಧಾರ ಎನಿಸುತ್ತದೆ. ನಾನು ನನ್ನಲ್ಲಿದ್ದ ಎಲ್ಲವನ್ನೂ ಅದಕ್ಕೆ ನೀಡಿದ್ದೇನೆ, ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಅದು ನನಗೆ ಹಿಂತಿರುಗಿಸಿದೆ. ಆಟಕ್ಕಾಗಿ, ನಾನು ಮೈದಾನ ಹಂಚಿಕೊಂಡ ಜನರೊಂದಿಗೆ ಮತ್ತು ದಾರಿಯುದ್ದಕ್ಕೂ ನನ್ನನ್ನು ನೋಡುವಂತೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಕೃತಜ್ಞತೆ ಹೇಳುತ್ತೇನೆ’ ಎಂದಿದ್ದಾರೆ ಭಾರತ ಕ್ರಿಕೆಟ್ ತಂಡದ ಆಕರ್ಷಕ ಆಟಗಾರ ವಿರಾಟ್ ಕೊಹ್ಲಿ.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ, ಈವರೆಗೆ 123 ಪಂದ್ಯಗಳ 210 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿರುವ ಅವರ ಬ್ಯಾಟ್‌ನಿಂದ 7 ದ್ವಿಶತಕ, 30 ಶತಕ, 31 ಅರ್ಧಶತಕಗಳು ಸಿಡಿದಿವೆ. ಅವರ ನಾಯಕತ್ವದಲ್ಲಿ ಭಾರತ ತಂಡ ಆಡಿದ 68 ಪಂದ್ಯಗಳಲ್ಲಿ 40 ಪಂದ್ಯಗಳಲ್ಲಿ ಜಯ ಗಳಿಸಿದೆ. ಆ ಮೂಲಕ ಕೊಹ್ಲಿ ಭಾರತ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಹಾಗೆಯೇ, 2025 ಜನವರಿ 3ರಂದು ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯವಾಡಿದ್ದರು.
ಮೂವತ್ನಾಲ್ಕರ ಹರೆಯದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಸರಿಯಾಗಿದೆ. ಒಬ್ಬ ಆಟಗಾರ ತನ್ನೆಲ್ಲ ಪ್ರತಿಭೆಯನ್ನು ಸೋಸಿ ಬಸಿದಿಟ್ಟು ಆಡುವ ಕಾಲ ಮುಗಿದಿದೆ ಎಂದು ಆತನಿಗೇ ಅನ್ನಿಸಿದಾಗ, ವಿದಾಯ ಹೇಳುವುದು ಸರಿಯಾದ ನಿರ್ಧಾರ. ಅದು ಆತನ ದೇಹ ಮತ್ತು ಮನಸ್ಸಿಗೆ ಕೊಡುವ ಮರ್ಯಾದೆ.
ಇದನ್ನು ಓದಿದ್ದೀರಾ?: ಒಳಮೀಸಲಾತಿಯಲ್ಲಿ ‘ದಲಿತ ಕ್ರಿಶ್ಚಿಯನ್’ ಪ್ರಶ್ನೆಗೆ ‘ತಾಯ್ಗಣ್ಣು’ ಅಗತ್ಯ
ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ದೇಹ ಮತ್ತು ಮನಸ್ಸು ಮಾಗುತ್ತದೆ. ಹೊಸಗಾಲದ ಹುರುಪಿನ ಹುಡುಗರ ವೇಗಕ್ಕೆ ಹೊಂದಿಕೊಂಡು ಆಡುವುದು ಕಷ್ಟವಾಗುತ್ತದೆ. ವೇಗದ ಬೌಲಿಂಗ್‌ಗೆ ಕಣ್ಣು ಹೊಂದಿಸಿಕೊಳ್ಳುವುದು ಕಡುಕಷ್ಟದ ಕೆಲಸವಾಗುತ್ತದೆ. ಆಗ ಆಟ ಸಹಜವಾಗಿಯೇ ಕೈ ಕೊಡುತ್ತದೆ. ಅದು ಒಬ್ಬ ಅಪ್ರತಿಮ ಆಟಗಾರನಿಗೆ ಅತ್ಯಂತ ಮುಜುಗರ ತರುವ ಕ್ಷಣ. ಇದನ್ನು ನೀವು ಇದೇ ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಯವರ ಆಟದಲ್ಲಿ ಕಾಣಬಹುದು.
1970, 80, 90ರ ದಶಕದಲ್ಲಿ ಕ್ರಿಕೆಟ್ ಆಟ ಎನ್ನುವುದು ನಿಜಕ್ಕೂ ಜಂಟಲ್‌ಮನ್ಸ್ ಪ್ಲೇ ಆಗಿತ್ತು. ಕಲಾತ್ಮಕ ಆಟಕ್ಕೆ, ಪ್ರತಿಭಾನ್ವಿತ ಆಟಗಾರರಿಗೆ ಬೆಲೆ ಇತ್ತು. ಆಟಕ್ಕೊಂದು ಸೊಗಸಿತ್ತು. ಐವತ್ತು ಓವರ್‍ಗಳ ಏಕದಿನ ಪಂದ್ಯಗಳ ಆಟ ಜನಪ್ರಿಯತೆ ಗಳಿಸುತ್ತಿದ್ದ ದಿನಗಳಲ್ಲಿ, ಟೆಸ್ಟ್ ಕ್ರಿಕೆಟ್ ಆಡುವುದು ಬಹಳ ಮುಖ್ಯವಾಗಿತ್ತು. ಅದು ಆಟಗಾರರ ಸಹನೆ, ತಾಳ್ಮೆ ಬೇಡುತ್ತಿತ್ತು. ಇನ್ನಿಂಗ್ಸ್ ಕಟ್ಟುವ ಕಲೆ ಕಲಿಸುತ್ತಿತ್ತು. ಆಟಗಾರರನ್ನು ಪಳಗಿಸುವ ಆಟದ ಮಾದರಿಯಾಗಿತ್ತು. ಪರಿಪೂರ್ಣ ಆಟಗಾರನಾಗಿ ಹೊರಹೊಮ್ಮುವ ವೇದಿಕೆಯಾಗಿತ್ತು.
ಪ್ರೇಕ್ಷಕರು ಕೂಡ ಆಟವನ್ನು ಆಟವನ್ನಾಗಿಯೇ ನೋಡಿ, ಮೆಚ್ಚಿ ಮಾತನಾಡುತ್ತಿದ್ದರು. ಪತ್ರಿಕೆಗಳು ಎಷ್ಟು ಬೇಕೋ ಅಷ್ಟು ಮಾಹಿತಿ ಮಾತ್ರ ಉಣಬಡಿಸುತ್ತಿದ್ದವು. ಆದರೆ 90ರ ದಶಕದಲ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಸಚಿನ್ ತೆಂಡೂಲ್ಕರ್ ಎಂಬ ಆಟಗಾರನ ಆಗಮನವಾಯಿತು. ಆಟದ ವೈಭವದ ದಿನಗಳು ಗತ ಸೇರಿ, ದಾಖಲೆಗಾಗಿ ಆಡುವ, ಜನಪ್ರಿಯತೆ ಗಳಿಸುವ, ಆ ಜನಪ್ರಿಯತೆಯನ್ನು ಅಡವಿಟ್ಟು ಜಾಹೀರಾತು ಜಗತ್ತಿನಲ್ಲಿ ಹಣ ಗಳಿಸುವ ಹೊಸ ಮಾದರಿ ಚಾಲ್ತಿಗೆ ಬಂದಿತು.
ಈ ಮಾದರಿಯ ಮಾಡಿಫೈಡ್ ತಳಿಯೇ ವಿರಾಟ್ ಕೊಹ್ಲಿ. ಸಚಿನ್ ಮಾದರಿ ಕೊಹ್ಲಿಗೆ ಅನುಕೂಲಕರ ಮಾರ್ಗವನ್ನು ತೆರೆದಿಟ್ಟಿತ್ತು. ಆಟದ ಶೈಲಿಯಿಂದ ಹಿಡಿದು, ಮೈದಾನದಲ್ಲಿ ಆಟಗಾರರೊಂದಿಗೆ ಬೆರೆಯುವವರೆಗೆ; ಆಡಳಿತ ಮಂಡಳಿಯೊಂದಿಗೆ ವ್ಯವಹರಿಸುವುದರಿಂದ ಹಿಡಿದು ಜಾಹೀರಾತು ಜಗತ್ತಿನ ಕೋಟಿಗಟ್ಟಲೆ ವ್ಯವಹಾರದವರೆಗೆ- ವಿರಾಟ್ ಕೊಹ್ಲಿಯದೇ ಆದ ಹೊಸ ವಿಧಾನವಿದೆ. ಅಲ್ಲಿ ಆತನ ಅಪ್ರತಿಮ ಆಟವಿದೆ, ಸಹಆಟಗಾರರನ್ನು ಅಪ್ಪಿಕೊಳ್ಳುವ ಪ್ರೀತಿಯಿದೆ, ಯಾರೊಂದಿಗೂ ಶತ್ರುತ್ವ ಕಟ್ಟಿಕೊಳ್ಳದ ವ್ಯವಹಾರ ಗುಣವಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಸೋಷಿಯಲ್ ಮೀಡಿಯಾ ಮ್ಯಾನೇಜ್ ಮಾಡುವ ಕಲೆ ಕರಗತವಾಗಿದೆ. ಇದಕ್ಕೆ ಕಳಶವಿಟ್ಟಂತೆ, ಸಿನೆಮಾ ಜಗತ್ತಿನ ಅನುಷ್ಕಾ ಶರ್ಮಾ ಎಂಬ ಮಡದಿಯ ಗ್ಲಾಮರಸ್ ಜೊತೆಗೂಡಿದೆ.
ಟೆಸ್ಟ್, ಒನ್ ಡೇ ಮತ್ತು ಟಿ20- ಈ ಮೂರರಲ್ಲೂ ದಾಖಲೆ ನಿರ್ಮಿಸಿದ ಕೊಹ್ಲಿ ಕೊರಳಲ್ಲಿ ಅದೃಷ್ಟವೂ ಜೋತುಬಿದ್ದಿದೆ. ಆಟ, ಹಣ, ಚಾಲ್ತಿ, ಜನಪ್ರಿಯತೆ ಮತ್ತು ಸಂತೃಪ್ತ ಕುಟುಂಬ- ಎಲ್ಲವೂ ಯಥೇಚ್ಛವಾಗಿದೆ. ಈ ಹೊತ್ತಿನಲ್ಲಿಯೇ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಇದನ್ನು ಓದಿದ್ದೀರಾ?: ಶಿಮ್ಲಾ ಒಪ್ಪಂದದತ್ತ ಕಣ್ಣು ಹಾಯಿಸಬೇಕಿದೆ ಭಾರತ-ಪಾಕ್
ಕೊಹ್ಲಿಯ ವಿದಾಯಕ್ಕೆ, ‘ಒಂದು ಸ್ಮರಣೀಯ ಟೆಸ್ಟ್ ಯುಗಕ್ಕೆ ತೆರೆ ಬಿದ್ದಿದೆ. ಆದರೆ, ನಿಮ್ಮ ಪರಂಪರೆ ಜೀವಂತವಾಗಿರುತ್ತದೆ. ನಿಮ್ಮ ಆಟದ ಧೈರ್ಯ ಮತ್ತು ಅಪ್ರತಿಮ ಉತ್ಸಾಹಕ್ಕಾಗಿ ಮುಂದಕ್ಕೂ ಬಾಳಲಿದೆ. ನೀವು ಟೆಸ್ಟ್ ಕ್ರಿಕೆಟ್ ಕೇವಲ ಆಡಿದ್ದಲ್ಲ, ಈ ಮಾದರಿಯ ಕ್ರಿಕೆಟ್ ಅನ್ನೇ ಉನ್ನತೀಕರಿಸಿದ್ದೀರಿ. ಥ್ಯಾಂಕ್ ಯೂ ವಿರಾಟ್ ಕೊಹ್ಲಿ’ ಎಂದು ಸಹಆಟಗಾರರು ಹರಸಿದ್ದಾರೆ.
ವಿದಾಯದ ಬಗ್ಗೆ ನೋವನ್ನನುಭವಿಸುವುದರ ಜೊತೆಗೇ ವಿದಾಯದ ಅನಿವಾರ್ಯತೆಯನ್ನು ಅರಿಯದ ಮನುಷ್ಯ ನಾಶವಾಗುತ್ತಾನೆ. ಸಮರ್ಪಣೆ ಮತ್ತು ಸ್ವಾತಂತ್ರ್ಯ ಇವೆರಡರ ಅರ್ಥ ಅರಿತವನು ಮಾತ್ರ ವಿದಾಯದ ನೋವು ಮತ್ತು ಪ್ರಯೋಗದ ರೋಮಾಂಚನ ಎರಡನ್ನೂ ಅನುಭವಿಸುತ್ತಾನೆ ಎನ್ನುವ ಲಂಕೇಶರ ವಿದಾಯದ ವ್ಯಾಖ್ಯಾನ ನೆನಪಾಗುತ್ತಿದೆ. ಕೊಹ್ಲಿಯ ವಿದಾಯ, ಆತನಿಗೆ ಕೊಡಬೇಕಾದ್ದನ್ನೆಲ್ಲ ಕೊಟ್ಟಿದೆ; ಹಾಗೆಯೇ ಹೊಸಬರಿಗೆ ಅವಕಾಶದ ಬಾಗಿಲನ್ನೂ ತೆರೆದಿದೆ.
