ಹಿಂದೂ ಕಾರ್ಯಕರ್ತರಿಗೆ ಭಾಗವತರು ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಅದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ರಾಜಕಾರಣದ ಭಾಗವೇ ಹೊರತು ಬೇರೇನಿಲ್ಲ. ಕಣ್ಣೊರೆಸುವ ತಂತ್ರವೇ ಹೊರತು, ಸಾಮರಸ್ಯ, ಸೌಹಾರ್ದ, ಸಹಬಾಳ್ವೆಯ ಸದಾಶಯವಲ್ಲ...
ಇತ್ತೀಚೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ‘ದೇಶದಲ್ಲಿ ಮಂದಿರ – ಮಸೀದಿ ವಿವಾದಗಳು ಹೆಚ್ಚಾಗುತ್ತಿವೆ. ರಾಮ ಮಂದಿರ ನಿರ್ಮಾಣದ ಬಳಿಕ ವಿವಾದ ಸೃಷ್ಟಿಸಿ ಹಿಂದೂ ನಾಯಕರಾಗಲು ಹೋಗುತ್ತಿದ್ದಾರೆ. ಇದರಿಂದ ದಿನಕ್ಕೊಂದು ಮಂದಿರ – ಮಸೀದಿ ವಿವಾದ ಸೃಷ್ಟಿಯಾಗುತ್ತಿದೆ. ಇದನ್ನೆಲ್ಲಾ ಒಪ್ಪಲು ಆಗುತ್ತಾ? ಇದು ಮುಂದುವರಿಯಬಾರದು. ನಮ್ಮ ದೇಶ ಸಾಮರಸ್ಯದಿಂದ ಕೂಡಿದೆ ಎಂಬುದನ್ನು ವಿಶ್ವಕ್ಕೆ ಸಾರಬೇಕು’ ಎಂದು ಹೇಳಿದ್ದಾರೆ.
ಮೋಹನ್ ಭಾಗವತ್ ಬಾಯಿಯಿಂದ ಬಂದ, ‘ನಮ್ಮ ದೇಶ ಸಾಮರಸ್ಯದಿಂದ ಕೂಡಿದೆ ಎಂಬುದನ್ನು ವಿಶ್ವಕ್ಕೆ ಸಾರಬೇಕು’ ಎನ್ನುವುದು ಸರಿ. ಏಕೆಂದರೆ, ದೇಶದಲ್ಲಿ ದಿನಬೆಳಗಾದರೆ, ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ, ಅಣ್ಣ-ತಮ್ಮಂದಿರ ನಡುವೆ ಸಾಮರಸ್ಯ ಎನ್ನುವುದು ಸಮಾಧಿಯಾಗಿ; ಕಾದಾಟ-ಕಲಹ-ಕೊಲೆ ನಿತ್ಯ ನಿರಂತರವಾಗಿದೆ. ದೇಶದ ಪರಿಸ್ಥಿತಿ ಹೀಗಿದ್ದರೂ, ಸಾಮರಸ್ಯದ ಬದುಕು ಸತ್ತುಹೋಗಿದ್ದರೂ, ಆರ್‌ಎಸ್‌ಎಸ್ ಮುಖ್ಯಸ್ಥರು ವಿಶ್ವಕ್ಕೆ ಸಾಮರಸ್ಯ ಸಂದೇಶ ಸಾರುತ್ತಲೇ ಬಂದಿದ್ದಾರೆ. ಪ್ರಧಾನಿ ಮೋದಿಯವರು ಭಾರತವನ್ನು ‘ವಿಶ್ವಗುರು’ವನ್ನಾಗಿ ಮಾಡಲು ತಮ್ಮ ಬುದ್ಧಿ-ಶಕ್ತಿ-ಶ್ರಮ ಸುರಿಯುತ್ತಲೇ ಇದ್ದಾರೆ.
ಅಸಲಿಗೆ, 1992ರ ಡಿಸೆಂಬರ್ 6ರಂದು ಸಾವಿರಾರು ಕರಸೇವಕರು- ಆರ್‌ಎಸ್‌ಎಸ್, ವಿಎಚ್‌ಪಿ, ಶ್ರೀರಾಮಸೇನೆ, ಸಂತರು, ಸ್ವಾಮೀಜಿಗಳು, ಭಕ್ತರು- ಬಾಬರಿ ಮಸೀದಿಯನ್ನು ಧ್ವಂಸ ಮಾಡಿದಾಗಲೇ ದೇಶದ ಸಾಮರಸ್ಯ, ಸೌಹಾರ್ದ, ಸಹಬಾಳ್ವೆ ಸಮಾಧಿಯಾಗಿತ್ತು. ತ್ಯಾಗ-ಬಲಿದಾನಗಳಿಂದ ಹೋರಾಡಿ ದೇಶವನ್ನು ಬ್ರಿಟಿಷರಿಂದ ಬಿಡಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರರು, ಈ ಸಾಮರಸ್ಯದ ಬದುಕಿಗಾಗಿಯೇ ಹಂಬಲಿಸಿದ್ದರು. ಹಿಂದು-ಮುಸ್ಲಿಮರಷ್ಟೇ ಅಲ್ಲ, ಏಳು ಧರ್ಮಗಳ ಜನ ಒಂದಾಗಿ ಬದುಕುವಂತಹ ಬಹುತ್ವ ಭಾರತವನ್ನು ಕಟ್ಟಿಕೊಟ್ಟಿದ್ದರು. ಆದರೆ, ಆರ್‌ಎಸ್‌ಎಸ್ ಮತ್ತು ಬಿಜೆಪಿ 1992ರಿಂದ 2014ರವರೆಗೆ, ಅಧಿಕಾರ ಹಿಡಿಯಬೇಕೆಂಬ ಹಠಕ್ಕೆ ಬಿದ್ದು ದೇಶವಾಸಿಗಳ ನಡುವೆ ದ್ವೇಷಾಸೂಯೆ ಬಿತ್ತಿದರು, ಕೋಮು ಗಲಭೆ ಸೃಷ್ಟಿಸಿದರು, ನೆತ್ತರು ಹರಿಸಿದರು. ಕೊನೆಗೆ, 2014ರಲ್ಲಿ ಅಧಿಕಾರವನ್ನೂ ಹಿಡಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಾಬಾಸಾಹೇಬರು ಮನುಸ್ಮೃತಿಯನ್ನು ಸುಟ್ಟ ದಿನ
2014ರಿಂದ 2024ವರೆಗೆ ದೇಶದಲ್ಲಿ ಬಿಜೆಪಿಯೇ ಆಳ್ವಿಕೆ ನಡೆಸುತ್ತಿದ್ದರೂ, ಮೂರನೇ ಬಾರಿಗೆ ಮೋದಿಯವರು ಪ್ರಧಾನಿಯಾಗಿ ಪ್ರತಿಷ್ಠಾಪಿಸಲ್ಪಟರೂ, ಬಾಬರಿ ಮಸೀದಿ ಜಾಗದಲ್ಲಿ ಶ್ರೀರಾಮ ಮಂದಿರ ತಲೆ ಎತ್ತಿದರೂ, ಇವತ್ತಿಗೂ ಮುಸ್ಲಿಂ ದ್ವೇಷ ಮರೆಯಾಗಿಲ್ಲ. ಜನರನ್ನು ಧರ್ಮ-ಜಾತಿಯ ಹೆಸರಲ್ಲಿ ವಿಭಜಿಸುವ ದುಷ್ಕೃತ್ಯ ನಿಂತಿಲ್ಲ. ಸಾಮರಸ್ಯದ ಬದುಕು ಸಾಧ್ಯವಾಗಿಲ್ಲ.
ಅಂದರೆ, 1992ರಿಂದ ಇಲ್ಲಿಯವರೆಗೆ, ಕಳೆದ 32 ವರ್ಷಗಳ ಕಾಲ ದೇಶದ ಜನರ ನಡುವಿನ ಸಾಮರಸ್ಯದ ಬದುಕಿಗೆ ಕೊಳ್ಳಿ ಇಡುವವರಿಗೆ ಕುಮ್ಮಕ್ಕು ಕೊಡುತ್ತಲೇ ಬರಲಾಗಿದೆ. ಅದನ್ನು ಧರ್ಮದ ಕೆಲಸ ಎಂದು ಬಲವಾಗಿ ನಂಬಿಸಲಾಗಿದೆ. ಆ ಅಂಧ ಭಕ್ತರು ಬೆಳೆದು ಬೆಟ್ಟವಾಗಿದ್ದಾರೆ. ಮನುಷ್ಯ ಸಂವೇದನೆಯನ್ನು ಕಳೆದುಕೊಂಡಿದ್ದಾರೆ. ಈಗ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ದೇಶದಲ್ಲಿ ಮಂದಿರ – ಮಸೀದಿ ವಿವಾದಗಳು ಹೆಚ್ಚಾಗುತ್ತಿವೆ. ನಾಯಕರಾಗಲು ಹೋಗುತ್ತಿದ್ದಾರೆ. ಇದನ್ನೆಲ್ಲಾ ಒಪ್ಪಲು ಆಗುವುದಿಲ್ಲ ಎಂದರೆ ಬೆಳೆದು ನಿಂತ ಭೂತಗಳು ಸುಮ್ಮನಿರಲು ಸಾಧ್ಯವೇ?
ಆ ತಕ್ಷಣವೇ, ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರನಾಥ್ ಸರಸ್ವತಿ ಅವರು ‘ಧಾರ್ಮಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಧಾರ್ಮಿಕ ಗುರುಗಳು ನಿರ್ಧರಿಸುತ್ತಾರೆ. ಅವರ ತೀರ್ಮಾನವನ್ನು ಸಂಘ ಮತ್ತು ವಿಎಚ್‌ಪಿ ಒಪ್ಪಿಕೊಳ್ಳಬೇಕು’ ಎಂದು ಮೋಹನ್ ಭಾಗವತರಿಗೆ ಫರ್ಮಾನು ಹೊರಡಿಸಿದ್ದಾರೆ.
ಮತ್ತೊಬ್ಬ ಹಿಂದೂ ಧಾರ್ಮಿಕ ಜಗದ್ಗುರು ರಾಮಭದ್ರಾಚಾರ್ಯ ಅವರು, ‘ಮೋಹನ್ ಭಾಗವತ್ ಏನು ಹೇಳಿದ್ದಾರೋ ಅದು ಅವರ ವೈಯಕ್ತಿಕ ಅಭಿಪ್ರಾಯ, ಅದಕ್ಕೂ ನಮಗೂ ಸಂಬಂಧ ಇಲ್ಲ. ಅವರು ಮುನ್ನಡೆಸುತ್ತಿರುವುದು ಸಂಘವನ್ನ, ಹಿಂದೂ ಧರ್ಮವನ್ನಲ್ಲ’ ಎಂದು ಎಚ್ಚರಿಸಿದ್ದಾರೆ.
ಮುಂದುವರೆದು ‘ಎಲ್ಲಿ ಪುರಾತನ ಹಿಂದೂ ದೇಗುಲಗಳು ಸಿಗುತ್ತವೋ ಅವುಗಳನ್ನು ಪುನರ್ ಪ್ರತಿಷ್ಠಾಪಿಸುವುದು ನಮ್ಮ ಜವಾಬ್ದಾರಿ. ಅದನ್ನು ನಾವು ಮಾಡೇ ಮಾಡ್ತೀವಿ. ಇದೇನು ಹೊಸ ಚಿಂತನೆಯಲ್ಲ. ಸಾಂಸ್ಕೃತಿಕ ಹಾಗೂ ಧಾರ್ಮಿಕ ರಕ್ಷಣೆಯ ಭಾಗವಾಗಿ ಈ ಕೆಲಸವನ್ನು ನಾವು ಮಾಡುತ್ತೇವೆ. ತೊಡಕಾದರೆ, ನ್ಯಾಯಾಲಯ, ಚುನಾವಣೆ ಹಾಗೂ ಭಕ್ತರ ಬೆಂಬಲದಿಂದ ನಾವು ಬಗೆಹರಿಸಿಕೊಳ್ಳುತ್ತೇವೆ’ ಎಂದು ಮೋಹನ್ ಭಾಗವತರಿಗೆ ಸೆಡ್ಡು ಹೊಡೆದಿದ್ದಾರೆ.
ಅಷ್ಟೇ ಅಲ್ಲ, ‘ಹಲವಾರು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲಾಗುತ್ತಿದೆ. ಇದು ಸತ್ಯ. ಹಿಂದೂಗಳ ನೋವನ್ನು ಭಾಗವತರು ಅನುಭವಿಸುತ್ತಿಲ್ಲ. ಅವರಿಗೆ ಹಿಂದೂಗಳ ಕಷ್ಟ ಅರ್ಥವಾಗುತ್ತಿಲ್ಲ’ ಎಂದು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹವಾಮಾನ ವೈಪರೀತ್ಯ, ಸಾಮೂಹಿಕ ವಲಸೆ ಮತ್ತು ಅಭಿವೃದ್ಧಿ ಮಂತ್ರ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಗಾಗ- ಅತಿ ಎನಿಸಿದಾಗ- ಪರಿಸ್ಥಿತಿ ಹದಗೆಟ್ಟಾಗ- ಪ್ರಧಾನಿ ನರೇಂದ್ರ ಮೋದಿಯವರಿಗೆ ಬುದ್ಧಿಮಾತುಗಳನ್ನು ಹೇಳುತ್ತಾರೆ. ಅವರು ಆ ಮಾತುಗಳನ್ನು ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ಅದೇ ರೀತಿ ಈಗ ಹಿಂದೂ ಕಾರ್ಯಕರ್ತರಿಗೆ ಎಚ್ಚರಿಕೆ ಕೊಡುವುದು ಕೂಡ. ಇದೆಲ್ಲವೂ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ರಾಜಕಾರಣದ ಭಾಗವೇ ಹೊರತು ಬೇರೇನಿಲ್ಲ. ಕಣ್ಣೊರೆಸುವ ತಂತ್ರವೇ ಹೊರತು, ಸಾಮರಸ್ಯ, ಸೌಹಾರ್ದ, ಸಹಬಾಳ್ವೆಯ ಸದಾಶಯವಲ್ಲ.
ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಬಣ್ಣವಿಲ್ಲದ ಬೀದಿನಾಟಕವನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕಾಗಿದೆ. ಭಾರತೀಯರ ಮನಸ್ಸು ಬೆಸೆಯುವತ್ತ, ಮನುಷ್ಯತ್ವದ ಅಂತರ್ಜಲ ಬತ್ತದಂತೆ ನೋಡಿಕೊಳ್ಳುವತ್ತ ಯೋಚಿಸಬೇಕಾಗಿದೆ.
