ಈ ದಿನ ಸಂಪಾದಕೀಯ | ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರಕ್ಕೆ ಅರಿವಾಗುವುದು ಯಾವಾಗ?

Date:

Advertisements
ಪೌಷ್ಟಿಕತೆಯಲ್ಲಿ ಪ್ರಗತಿ ಸಾಧಿಸಲು ವಿಫಲವಾಗಿರುವ ಭಾರತ ಸರ್ಕಾರ, ಐದು ಅಂತಾರಾಷ್ಟ್ರೀಯ ಸಂಸ್ಥೆಗಳು ಸಿದ್ಧಪಡಿಸಿದ 'ಅಪೌಷ್ಟಿಕತೆ' ಕುರಿತ ವರದಿಯನ್ನು ಬಿಡುಗಡೆ ಮಾಡಲು ವಿರೋಧ ವ್ಯಕ್ತಪಡಿಸಿದೆ. ಆದರೆ, ಪೌಷ್ಟಿಕತೆಗೆ ಒತ್ತು ಕೊಡುತ್ತಿಲ್ಲ. ಮೋದಿ ಸರ್ಕಾರವು ಅಪೌಷ್ಟಿಕತೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.

ಗುಜರಾತ್ ಇಡೀ ದೇಶಕ್ಕೆ ಮಾದರಿಯಾಗುತ್ತದೆ. ಇದೇ ಮಾದರಿಯಲ್ಲಿ ದೇಶವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಅವರು 2014ರಲ್ಲಿ ಅಬ್ಬರಿಸಿದ್ದರು. ಆದರೆ, ಗುಜರಾತ್ ಮಾದರಿಯಾಗುವುದೆಂದು ಇಂದಿಗೂ- ಹತ್ತು ವರ್ಷಗಳ ನಂತರವೂ ದೇಶದ ಜನರಲ್ಲಿ ನಂಬಿಕೆ ಹುಟ್ಟಲಿಲ್ಲ. ಬದಲಾಗಿ, ದೇಶಕ್ಕೆ ಯಾವೆಲ್ಲ ವಿಚಾರಗಳಲ್ಲಿ ಗುಜರಾತ್ ಮಾದರಿಯಾಗಬಾರದು ಎಂಬುದೆಲ್ಲ ಎದ್ದು ಕಾಣುತ್ತಿದೆ. ಅದರಲ್ಲಿ, ಅಪೌಷ್ಟಿಕತೆಯೂ ಒಂದು.

ನೀತಿ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿದ 2023-24ರ ‘ಸುಸ್ಥಿರ ಅಭಿವೃದ್ಧಿ ಗುರಿ’ (SDG) ವರದಿಯ ಪ್ರಕಾರ, ಹಸಿವಿನ ವಿರುದ್ಧದ ಹೋರಾಟ ಮತ್ತು ಮಕ್ಕಳಲ್ಲಿ ಪೌಷ್ಟಿಕತೆ ಸುಧಾರಿಸುವಲ್ಲಿ ಗುಜರಾತ್ ದೇಶದಲ್ಲಿಯೇ ಹಿಂದುಳಿದಿದೆ. ಗುಜರಾತಿನಲ್ಲಿ 5 ವರ್ಷದೊಳಗಿನ ಶೇ. 39.7 ಮಕ್ಕಳು ತೂಕಹೀನರಾಗಿದ್ದಾರೆ. ಹಸಿವಿನ ಸೂಚ್ಯಂಕದಲ್ಲಿ ಭಾರತದ ರಾಜ್ಯಗಳ ಪೈಕಿ ಗುಜರಾತ್ 25ನೇ ಸ್ಥಾನದಲ್ಲಿದೆ.

2023-24ರಲ್ಲಿ ಮಾತ್ರವೇ ಗುಜರಾತ್ ಅಪೌಷ್ಟಿಕತೆಯಲ್ಲಿ ಹಿಂದುಳಿದಿಲ್ಲ. ಕಳೆದ 15 ವರ್ಷಗಳಿಂದಲೂ ಗುಜರಾತ್ ಇದೇ ಪರಿಸ್ಥಿತಿಯಲ್ಲಿದೆ. 2012ರಲ್ಲಿಯೂ ಇಡೀ ದೇಶದಲ್ಲೇ ಗುಜರಾತ್ ಕಡಿಮೆ ತೂಕ ಹೊಂದಿರುವ ಹೆಚ್ಚು ಮಕ್ಕಳನ್ನು ಹೊಂದಿದೆ ಎಂದು ಅಂಕಿಅಂಶಗಳು ಹೇಳಿದ್ದವು. ಆಗ, ಅಪೌಷ್ಟಿಕತೆ ಸಮಸ್ಯೆ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, “ತಾಯಿ ತನ್ನ ಮಕ್ಕಳಿಗೆ ಹಾಲುಣಿಸುವಂತೆ ಹೇಳಿದರೆ, ಆಕೆ ಜಗಳವಾಡುತ್ತಾಳೆ. ಹಾಲುಣಿಸಲು ನಿರಾಕರಿಸುತ್ತಾಳೆ. ಮಗುವಿಗೆ ಹಾಲುಣಿಸಿದರೆ, ತಾನು ದಪ್ಪವಾಗುತ್ತೇನೆ ಎನ್ನುತ್ತಾರೆ. ಅವರಿಗೆ ಸೌಂದರ್ಯ ಮುಖ್ಯ. ಆರೋಗ್ಯದ ಬಗ್ಗೆ ಕಾಳಜಿ ಇಲ್ಲ” ಎಂದಿದ್ದರು.

Advertisements

ಅಂದಿನ ಗುಜರಾತ್ ಮುಖ್ಯಮಂತ್ರಿ, ಈಗ ಭಾರತದ ಪ್ರಧಾನಿಯಾಗಿದ್ದಾರೆ. 10 ವರ್ಷಗಳ ಆಡಳಿತವನ್ನೂ ಪೂರೈಸಿದ್ದಾರೆ. ಗುಜರಾತ್ ಅಪೌಷ್ಟಿಕತೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಉಳಿದ ರಾಜ್ಯಗಳು ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿವೆ. ಆದರೆ, ಮೋದಿ ಅವರಿಗೆ ಈ 15 ವರ್ಷಗಳಲ್ಲಿ ಅಪೌಷ್ಟಿಕತೆ ಗಂಭೀರ ಸಮಸ್ಯೆ ಅನ್ನಿಸಿಲ್ಲ. ಗಂಭೀರತೆ ಅರ್ಥವೂ ಆಗಿಲ್ಲ.

ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದೆ. ಮೂರನೇ ಅವಧಿಯ ನೂರು ದಿನಗಳನ್ನು ಪೂರೈಸಿದ ಬಿಜೆಪಿ ಸರ್ಕಾರವು ತಮ್ಮ ಅಜೆಂಡಾ ಮತ್ತು ಹಣಕಾಸು ಸಚಿವರ ಬಜೆಟ್ ಭಾಷಣದಲ್ಲಿ ಒಮ್ಮೆಯೂ ‘ಹಸಿವು’ ಮತ್ತು ‘ಪೌಷ್ಟಿಕತೆ’ ಎಂಬ ಪದಗಳನ್ನು ಉಲ್ಲೇಖಿಸಿಲ್ಲ. ಪೌಷ್ಟಿಕತೆಗೆ ಬಜೆಟ್‌ನಲ್ಲಿ ಆದ್ಯತೆಯನ್ನೂ ನೀಡಲಾಗಿಲ್ಲ. ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುವುದಾ? ಆತಂಕ ವ್ಯಕ್ತಪಡಿಸುವುದಾ?

ಮೋದಿ ಅವರಿಗೆ ಈ ದೇಶದ ಸಾಮಾನ್ಯ ಜನರ ಅಗತ್ಯವಿಲ್ಲ. ತಮ್ಮ ಕೋಮುವಾದಿ ಸಿದ್ದಾಂತವನ್ನು ಒಪ್ಪಿಕೊಂಡು, ತಾವು ಅಧಿಕಾರಕ್ಕೆ ಬರಲು ಮತ ಹಾಕಲು ಮಾತ್ರವೇ ಈ ಜನರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಅದು ಕಳೆದ 10 ವರ್ಷಗಳಲ್ಲಿ ಸಾಬೀತಾಗಿದೆ. ಮೋದಿ ಸರ್ಕಾರ, ಈ ಸುದೀರ್ಘ ಅವಧಿಯಲ್ಲಿ ಜನಪರವಾದ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಅವರ ಯೋಜನೆಗಳು, ಕಾರ್ಯಕ್ರಮಗಳೆಲ್ಲವೂ ತಮ್ಮಿಬ್ಬರು ಗುಜರಾತ್ ಸ್ನೇಹಿತರಾದ ಅಂಬಾನಿ-ಅದಾನಿಗಾಗಿಯೇ ಜಾರಿಯಾಗುತ್ತವೆ.

ಗಮನಾರ್ಹವಾಗಿ, ವಿಶ್ವದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಪ್ರತಿ ಮೂವರು ಮಕ್ಕಳಲ್ಲಿ ಒಬ್ಬರು ಭಾರತದವರಾಗಿದ್ದಾರೆ. ದೀರ್ಘಕಾಲದ ಹಸಿವಿನಿಂದ ಬಳಲುತ್ತಿರುವ ಜನರ ಪ್ರಮಾಣ 2014-16ರಲ್ಲಿ ಶೇ. 10 ಇದ್ದದ್ದು, 2021-23ರ ವೇಳೆಗೆ ಶೇ. 4ಗೆ ಏರಿಕೆಯಾಗಿದೆ. ಮುಖ್ಯವಾಗಿ, ಆದಾಯದ ಅಸಮಾನತೆ, ಹಣದುಬ್ಬರ ಮತ್ತು ನಿರುದ್ಯೋಗದಿಂದಾಗಿ ಶೇ. 70 ಭಾರತೀಯರು ಆರೋಗ್ಯಕರ ಆಹಾರ ಪಡೆಯಲೂ ಸಾಧ್ಯವಾಗುತ್ತಿಲ್ಲ. ವಾರ್ಷಿಕವಾಗಿ, 17 ಲಕ್ಷ ಭಾರತೀಯರು ಆಹಾರ ಸೇವನೆಗೆ ಸಂಬಂಧಿಸಿದ ಕಾಯಿಲೆಗಳಿಂದ ಕೊನೆಯುಸಿರೆಳೆಯುತ್ತಿದ್ದಾರೆ.

‘ಗ್ಲೋಬಲ್ ನ್ಯೂಟ್ರಿಷನ್ ವರದಿ-2024’ ಹೇಳುವಂತೆ, ಮಕ್ಕಳನ್ನು ಹೆರುವ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡುವ ಗುರಿ ಸಾಧಿಸುವಲ್ಲಿ ಭಾರತವು ಯಾವುದೇ ಪ್ರಗತಿ ಸಾಧಿಸಿಲ್ಲ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ. 17 ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ಇದು, ಏಷ್ಯಾದ ಸರಾಸರಿಗಿಂತ ಅಧಿಕವಾಗಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, ಭಾರತದ ಶೇ. 32 ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ, ಶೇ. 35 ಮಕ್ಕಳು ಬೆಳವಣಿಗೆ ಕುಂಠಿತ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ, ಶೇ. 59 ಮಕ್ಕಳು ಮತ್ತು ಶೇ. 53 ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ವಿಷಾಧನೀಯ ಸಂಗತಿ ಎಂದರೆ, ಪ್ರಧಾನಿ ಮೋದಿ ಅವರೇ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ಶೇ. 13 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?

ಅಪೌಷ್ಟಿಕತೆ ಸಮಸ್ಯೆಯು ದೇಶವನ್ನೇ ಕಾಡುತ್ತಿದ್ದರೂ, ಕೇಂದ್ರ ಸರ್ಕಾರ ಪೌಷ್ಟಿಕತೆ ಹೆಚ್ಚಳಕ್ಕೆ ಒತ್ತುಕೊಡುತ್ತಿಲ್ಲ. ಬದಲಾಗಿ, ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿಯನ್ನು ಗಣನೀಯವಾಗಿ ಕಡಿತಗೊಳಿಸಿದೆ. ಇದು, ದೇಶಾದ್ಯಂತ ಅಪೌಷ್ಟಿಕತೆ ಹೆಚ್ಚಳಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ, ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್ಮೆಂಟ್ ಸ್ಕೀಮ್ (ICDS) ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೂ ಬಜೆಟ್‌ನಲ್ಲಿ ಶೇ. 2ರಷ್ಟು ಅನುದಾನ ಕಡಿತವಾಗಿದೆ. ಇದು ಲಕ್ಷಾಂತರ ಮಕ್ಕಳ ಪೌಷ್ಟಿಕತೆಯನ್ನು ಅಪಾಯಕ್ಕೆ ದೂಡಿದೆ.

ಪೌಷ್ಟಿಕತೆಯಲ್ಲಿ ಪ್ರಗತಿ ಸಾಧಿಸಲು ವಿಫಲವಾಗಿರುವ ಭಾರತ ಸರ್ಕಾರ, ಐದು ಅಂತಾರಾಷ್ಟ್ರೀಯ ಸಂಸ್ಥೆಗಳು ಸಿದ್ಧಪಡಿಸಿದ ‘ಅಪೌಷ್ಟಿಕತೆ’ ಕುರಿತ ವರದಿಯನ್ನು ಬಿಡುಗಡೆ ಮಾಡಲು ವಿರೋಧ ವ್ಯಕ್ತಪಡಿಸಿದೆ. ಆದರೆ, ಪೌಷ್ಟಿಕತೆಗೆ ಒತ್ತು ಕೊಡುತ್ತಿಲ್ಲ. ಮೋದಿ ಸರ್ಕಾರವು ಅಪೌಷ್ಟಿಕತೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಆಹಾರ ಧಾನ್ಯಗಳ ಬೆಲೆ ಏರಿಕೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ನಾನು ಈರುಳ್ಳಿಯನ್ನೇ ತಿನ್ನುವುದಿಲ್ಲ. ಬೆಲೆ ಏರಿಕೆ ಸಮಸ್ಯೆ ನನಗಿಲ್ಲ’ ಎನ್ನುತ್ತಾರೆ.

ಇಂತಹ ಆಳುವವರು ಇರುವಾಗ, ಭಾರತವು ಅಪೌಷ್ಟಿಕತೆಯಿಂದ ಹೊರಬರುವುದು ಯಾವಾಗ? ಅಪೌಷ್ಟಿಕತೆ ಸಮಸ್ಯೆ ಇಲ್ಲವಾಗಬೇಕೆಂದರೆ, ಈ ಸಮಸ್ಯೆಯನ್ನು ಮೊದಲು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಪೌಷ್ಟಿಕತೆ ಸುಧಾರಣೆಗೆ ಒತ್ತುಕೊಡಬೇಕು. ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಬೇಕು. ಜಾರಿಗೊಳಿಸಬೇಕು. ಇದೆಲ್ಲವೂ ಮೋದಿ ಆಡಳಿತದಲ್ಲಿ ಯಾವಾಗ ಸಾಧ್ಯವಾಗಬಹುದು?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X