ಈ ದಿನ ಸಂಪಾದಕೀಯ | ‘ಕಾಂಗ್ರೆಸ್‌ ಒಂದು ಪಕ್ಷವಾಗುವುದು’ ಯಾವಾಗ?

Date:

Advertisements
ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್‌ ಪಕ್ಷದ ಚುನಾಯಿತ ಅಧ್ಯಕ್ಷರೇ ಆಗಿದ್ದಾರೆ. ಅವರು ಕೇವಲ ನಾಮ್ ಕೆ ವಾಸ್ತೆ ಅಧ್ಯಕ್ಷರಲ್ಲ ಎಂಬುದೂ ಕಾಣುತ್ತಿದೆ. ಆದರೆ, ಅದನ್ನು ದಾಟಿ ಅವರು ಮತ್ತು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಕಾಂಗ್ರೆಸ್ಸನ್ನು ಪಕ್ಷವಾಗಿ ಪುನರ್‌ ರೂಪಿಸುತ್ತಾರಾ ಇಲ್ಲವಾ ಎಂಬುದನ್ನು ನೋಡಬೇಕು. 

ಇಂದಿನ ಪತ್ರಿಕೆಗಳಲ್ಲಿ ಆಶ್ಚರ್ಯಕರವಾದ ಒಂದು ಸುದ್ದಿ ಇದೆ. ಅದು ಮಣಿಶಂಕರ ಅಯ್ಯರ್‌ ಅವರ ಪುಸ್ತಕದಲ್ಲಿ ಪ್ರಕಟವಾಗಿರುವ ಒಂದು ಸಂಗತಿಯ ಕುರಿತಾದದ್ದು. ಅದು ದೇಶದ ಅತಿ ದೊಡ್ಡ ವಿರೋಧ ಪಕ್ಷದ ಇಂದಿನ ಸ್ವರೂಪವನ್ನು ಬಿಚ್ಚಿಡುತ್ತದೆ. ನೇರಾನೇರ ಕೆಲವು ವಿಚಾರಗಳನ್ನು ಮಾತನಾಡುವ, ಅಧಿಕಾರದಲ್ಲಿದ್ದಾಗ ಕಾನೂನು ಹಾಗೂ ಸಂವಿಧಾನವನ್ನು ಎತ್ತಿ ಹಿಡಿದು ದೇಶದ ಒಳಿತಿಗೆ ಚಿಂತಿಸಿದ ‘ಚಿಂತಕ-ರಾಜಕಾರಣಿ’ಗಳಲ್ಲಿ ಮಣಿಶಂಕರ್‌ ಅಯ್ಯರ್‌ ಅವರೂ ಒಬ್ಬರು. ನರೇಂದ್ರ ಮೋದಿಯವರ ಕುರಿತಾಗಿ ದಕ್ಷಿಣ ಭಾರತದಲ್ಲಿ ಚಾಲ್ತಿಯಲ್ಲಿರುವ ಪದಗಳನ್ನು ಬಳಸಿ ಅವರು ಮಾತನಾಡಿದ್ದಕ್ಕಾಗಿ, ಅದನ್ನೇ ಹಿಂದಿ ಪ್ರದೇಶಗಳಲ್ಲಿ ಬಳಸಿ ಒಂದು ನೆರೇಟಿವ್‌ಅನ್ನು ಬಿಜೆಪಿ ಯಂತ್ರಾಂಗ ರೂಪಿಸಿತ್ತು. ಆ ನಂತರ ಅಯ್ಯರ್‌ ಅವರ ಸಾರ್ವಜನಿಕ ಮಾತುಗಳು ಕಡಿಮೆಯಾಗಿತ್ತು.

ಆದರೆ, ಈಗ ಸುದ್ದಿಯಾಗಿರುವುದು ಅದಲ್ಲ; ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ 10 ವರ್ಷಗಳಾಗಿವೆ ಎಂದೂ, ರಾಹುಲ್‌ ಗಾಂಧಿಯವರ ಜೊತೆಗೂ ಈ ಅವಧಿಯಲ್ಲಿ ಏನನ್ನಾದರೂ ಚರ್ಚಿಸುವ ಸಾಧ್ಯತೆಯೇ ಉಂಟಾಗಿಲ್ಲ ಎಂದೂ ಅಯ್ಯರ್‌ ಹೇಳಿದ್ದಾರೆ. 140 ಕೋಟಿ ಜನರಿರುವ ಒಂದು ದೇಶದಲ್ಲಿ ಎಲ್ಲರಿಗೂ ಪ್ರಧಾನಿಗೋ, ವಿರೋಧ ಪಕ್ಷದ ನಾಯಕರಿಗೋ ಹೇಳಬೇಕು ಎನ್ನಿಸಿದರೆ, ಅದೆಲ್ಲವನ್ನೂ ಕೇಳಿಸಿಕೊಳ್ಳುವುದು ಕಷ್ಟ ಎನ್ನುವುದೇನೋ ನಿಜ. ಅದರಲ್ಲೂ ಪ್ರಧಾನಿ ಮೋದಿಯವರಿಗೆ ಯಾರೂ ಸಲಹೆ ಕೊಡಬೇಕೆಂದುಕೊಳ್ಳುವುದಿಲ್ಲ; ರಾಹುಲ್‌ ಗಾಂಧಿಯವರು ಏನು ಮಾಡಬೇಕು ಎಂಬ ಬಗ್ಗೆ ದೇಶದಲ್ಲಿ ಕನಿಷ್ಠ 10 ಕೋಟಿ ಜನರು – ಸದಾಶಯದಿಂದಲೇ – ಚರ್ಚಿಸುತ್ತಾ ಇರುತ್ತಾರೆ. ಇಲ್ಲಿ, ಅಂತಹ ಸಾಮಾನ್ಯ ಜನರ ವಿಚಾರ ಇಲ್ಲ. ಕೇಂದ್ರಮಂತ್ರಿಯಾಗಿದ್ದ ಒಬ್ಬ ಹಿರಿಯ ನಾಯಕರೇ ಮಾತನಾಡುವುದು ಸಾಧ್ಯವಾಗಿಲ್ಲ ಎಂಬ ಆಶ್ಚರ್ಯಕರ ಸಂಗತಿಯಿದು.

ಒಬ್ಬ ನಿರ್ದಿಷ್ಟ ವ್ಯಕ್ತಿಯ ವಿಚಾರದಲ್ಲಿ ಏನು ನಡೆದಿದೆ ಎಂಬುದು ಮತ್ತು ಏಕೆ ಹಾಗಾಯಿತು ಎಂಬುದು ಸಂಬಂಧಪಟ್ಟವರಿಗೆ ಮಾತ್ರ ಗೊತ್ತಿರುತ್ತದಾದ್ದರಿಂದ ಅದನ್ನು ಹೆಚ್ಚು ಚರ್ಚಿಸುವುದು ಸೂಕ್ತವಲ್ಲ. ಆದರೆ, ಯಾವುದು ಮುಖ್ಯವೆಂದರೆ – ಒಂದು ಪಕ್ಷವಾಗಿ – ಕೆಳಗಿನಿಂದ ಮೇಲಕ್ಕೆ ಮತ್ತು ಮೇಲಿನಿಂದ ಕೆಳಕ್ಕೆ ಸಿದ್ಧಾಂತ, ಪ್ರಣಾಳಿಕೆ, ಅಜೆಂಡಾ, ತಂತ್ರಗಾರಿಕೆ ಹರಿಯದ ಮತ್ತು ಕನಿಷ್ಠ ಸಂವಹನವೂ ಇರದ ಯಾವುದಾದರೂ ಪಕ್ಷ ಇದ್ದರೆ, ಅದು ದೇಶದ ಅತಿ ದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್ಸೇ ಆಗಿದೆ. ಆಗ, ಅದು ಒಂದು ನಿರ್ದಿಷ್ಟ ಗುರಿ, ಉದ್ದೇಶ ಮತ್ತು ಯೋಜನೆಗಳ ಮೂಲಕ ವ್ಯವಹರಿಸುವ ಪಕ್ಷ ರಚನೆ ಮತ್ತು ಕಾರ್ಯವಿಧಾನವನ್ನು ಹೇಗೆ ಜಾರಿ ಮಾಡುತ್ತದೆ ಎಂಬ ಪ್ರಶ್ನೆ ಎದುರಾಗುತ್ತದೆ.

Advertisements

ವಾರ್ಷಿಕ ಅಧಿವೇಶನಗಳ ಮೂಲಕ ಸ್ವತಂತ್ರ ಹೋರಾಟದ ಸಂದರ್ಭದಲ್ಲಿ ದೇಶದ ಜನರ ಮುಂದೆ ಬಂದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸು ನಂತರ ಒಂದು ಸಾಮೂಹಿಕ ಆಂದೋಲನವಾಯಿತು. ಆದರೆ, ವಿವಿಧ ಸೈದ್ಧಾಂತಿಕ ಧಾರೆಗಳಿಗೆ ತನ್ನೊಳಗೆ ಅವಕಾಶ ಕಲ್ಪಿಸಿಕೊಟ್ಟು, ಚುನಾವಣೆಗಳ ಮೂಲಕ ಕೇಂದ್ರ ಕಾರ್ಯಕಾರಿ ಸಮಿತಿ ಮತ್ತು ಅಧ್ಯಕ್ಷರನ್ನು ಪ್ರಜಾತಾಂತ್ರಿಕವಾಗಿ ಚುನಾಯಿಸುತ್ತಿತ್ತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟು ನಿವಾರಣೆಗೆ ಆಗಬೇಕಾದ್ದು ಬಹಳಷ್ಟಿದೆ

ದೇಶದ ಸರ್ವೋಚ್ಚ ನಾಯಕರಾಗಿದ್ದ ಜವಹರಲಾಲ್‌ ನೆಹರೂರನ್ನು ಕಾಂಗ್ರೆಸ್ ಪಕ್ಷದೊಳಗೇ ಇರುವವರು ಕಟುವಾಗಿ ಟೀಕಿಸುವುದು ಸಾಧ್ಯವಿತ್ತು. ವಿವಿಧ ಹಂತಗಳಲ್ಲಿ ಚುನಾವಣೆಯ ಮೂಲಕವೇ ಪದಾಧಿಕಾರಿಗಳ ಆಯ್ಕೆ ನಡೆಯುತ್ತಿತ್ತು. ಸಹಜವಾಗಿ, ಈ ಆಯ್ಕೆಯಲ್ಲಿ ಬಲಾಢ್ಯ ಸಮುದಾಯಗಳಿಗೆ ಸೇರಿದವರು ಮತ್ತು ಪಟ್ಟಭದ್ರ ಹಿತಾಸಕ್ತಿಗಳೂ ಮೇಲುಗೈ ಸಾಧಿಸುತ್ತಿದ್ದವು. ಈ ‘ವ್ಯವಸ್ಥೆ’ ಕದಡಿ ಹೋಗಿದ್ದು, ಇಂದಿರಾಗಾಂಧಿಯವರು ಹೊಸ ಪಕ್ಷವನ್ನು ಸ್ಥಾಪಿಸಿದ ಮೇಲೆ. ಆ ನಂತರ ಚುನಾವಣೆಯ ಬದಲಿಗೆ ಅಧ್ಯಕ್ಷೆ ಮತ್ತು ಪ್ರಧಾನಿಯಾಗಿದ್ದ ಶ್ರೀಮತಿ ಗಾಂಧಿಯವರಿಂದ ನೇಮಕ ಮಾತ್ರ ಆಗುತ್ತಿತ್ತು. ಪಕ್ಷದ ರಚನೆಯು ಒಂದು ಸಂಸ್ಥೆ, ಸಂಘಟನೆ ಅಥವಾ ಆಂದೋಲನದ ರೂಪವನ್ನು ಕಳೆದುಕೊಂಡು, ಹೈಕಮಾಂಡ್ ಮೂಲಕ ಎಲ್ಲವೂ ನಿರ್ಧಾರವಾಗಲು ಶುರುವಾಗಿದ್ದು ಆಗ. ಇದು ಚಾರಿತ್ರಿಕ ಸಂದರ್ಭವೊಂದರ ಅನಿವಾರ್ಯತೆಯೆಂದೂ ಸಂಬಂಧಪಟ್ಟವರು ಸಮರ್ಥಿಸಿಕೊಳ್ಳಬಹುದಾದರೂ, ಪಕ್ಷದ ಸ್ವರೂಪವನ್ನು ಕಾಂಗ್ರೆಸ್ಸು ಕಳೆದುಕೊಳ್ಳಲು ಶುರುವಾಗಿದ್ದು ಆಗ.

ಆ ನಂತರ ಅದಕ್ಕೆ ಇನ್ನೊಂದು ದೊಡ್ಡ ಹೊಡೆತ ಬಿದ್ದಿದ್ದು ಸೋನಿಯಾ ಗಾಂಧಿಯವರು ಅಧ್ಯಕ್ಷೆಯಾದಾಗ. ಸ್ವತಃ ದೇಶದ ರಾಜಕಾರಣದಲ್ಲಿ ಮುಖ್ಯ ಸ್ಥಾನ ವಹಿಸಲು ಹಿಂಜರಿಕೆ ಹೊಂದಿದ್ದ ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್ಸಿನಂತಹ ದೊಡ್ಡ ಪಕ್ಷವನ್ನು ನಿಭಾಯಿಸುವ ಸಾಧ್ಯತೆಯೇ ಇರಲಿಲ್ಲ. ಅವರ ಕಚೇರಿಯಷ್ಟೇ ದೇಶದಷ್ಟೇ ದೊಡ್ಡದಿದ್ದ ಪಕ್ಷವನ್ನು ನಿಯಂತ್ರಿಸುತ್ತಿತ್ತು. ಆಶ್ಚರ್ಯವೆಂದರೆ, ಇದೇ ಸೋನಿಯಾ ಗಾಂಧಿಯವರ ಕಾಲದಲ್ಲಿ, ಕಾಂಗ್ರೆಸ್ಸು ಮತ್ತೆ ಅಧಿಕಾರಕ್ಕೆ (ಯುಪಿಎ 1) ಬಂದಿದ್ದಲ್ಲದೇ, 1984ರ ಚುನಾವಣೆಯ ನಂತರ ಒಂದು ಮೈತ್ರಿಕೂಟ ಮತ್ತೆ ಪುನರಾಯ್ಕೆಯೂ (ಯುಪಿಎ 2) ಆಯಿತು. ಕಾಂಗ್ರೆಸ್ಸಿನಲ್ಲಿ ಕೆಲವು ಮೌಲ್ಯಗಳು ಮತ್ತೆ ಮರುಸ್ಥಾಪನೆಯಾದವು. ವಿರೋಧ ಪಕ್ಷಗಳ ಸರ್ಕಾರವನ್ನು ಉರುಳಿಸುವ ಕೆಲಸಕ್ಕೆ ಸೋನಿಯಾ ಅವರ ನೇತೃತ್ವದ ಪಕ್ಷ ಕೈ ಹಾಕಲಿಲ್ಲ; ಮಾತು ಕೊಟ್ಟರೆ ಅದನ್ನು ಯಾವ ಬೆಲೆ ತೆತ್ತಾದರೂ ಉಳಿಸಿಕೊಳ್ಳುವುದು ಒಂದು ಮೌಲ್ಯವಾಗಿ (ಪ್ರತ್ಯೇಕ ತೆಲಂಗಾಣದ ರಚನೆಯಿಂದ ವ್ಯಕ್ತಿಗಳಿಗೆ ಸ್ವಂತ ಹಿತಾಸಕ್ತಿಯಿಂದ ಕೊಟ್ಟ ಭರವಸೆಗಳವರೆಗೆ) ಉಳಿದುಕೊಂಡಿತು. ದೇಶದ ನಾಗರಿಕ ಸಮಾಜವನ್ನೂ (ಎನ್‌ಎಸಿ) ಒಳಗೊಂಡು ಜನಪರ ನೀತಿ ನಿರೂಪಣೆಗಳು (ಆರ್‌ಟಿಐ, ನರೇಗಾ, ಭೂಸ್ವಾಧೀನ ಕಾಯ್ದೆ, ಅರಣ್ಯ ಹಕ್ಕು ಕಾಯ್ದೆ ಇತ್ಯಾದಿ) ಆದವು.

ಇದೇ ಅವಧಿಯಲ್ಲಿ ಪಕ್ಷದ ಸ್ವರೂಪವನ್ನು ಇದು ಕಳೆದುಕೊಂಡಿತು. ವಿಪರ್ಯಾಸವೆಂದರೆ, ಮತ್ತೆ ಪಕ್ಷ ರಚನೆ, ಕಾರ್ಯಕರ್ತರನ್ನು ರೂಪಿಸುವುದು, ತರಬೇತಿ, ಚುನಾವಣೆಗಳ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಮಾತ್ರವಲ್ಲ, ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಯನ್ನೂ ಆಂತರಿಕ ಚುನಾವಣೆಗಳಿಂದ ಆಯ್ಕೆ ಮಾಡುವಂತಹ ಹೊಸ ವಿಧಾನಗಳನ್ನು ಜಾರಿಗೆ ತರಲು ಪ್ರಯತ್ನಿಸಿದ್ದು ರಾಹುಲ್‌ ಗಾಂಧಿ! ಆದರೆ, ಈ ಎಲ್ಲಾ ಸಕಾರಾತ್ಮಕ ಹೆಜ್ಜೆಗಳು 2014ರ ನಂತರ ನಿಂತು ಹೋದವು. ಆಗ ಮತ್ತು 2019ರ ಭೀಕರ ಸೋಲಿನಿಂದ ಪಕ್ಷ ಚೇತರಿಸಿಕೊಳ್ಳಲು 2022ರವರೆಗೆ ಕಾಯಬೇಕಾಯಿತು. ಆದರೆ, ಪಕ್ಷ ರಚನೆಯು ಬಹುತೇಕ ಕುಸಿದು ಬಿದ್ದಿತು.

ಭಾರತ್‌ ಜೋಡೋ ಯಾತ್ರೆಯ ಮುಖಾಂತರ ಕಾಂಗ್ರೆಸ್‌ ಪಕ್ಷಕ್ಕೆ, ವಿರೋಧ ಪಕ್ಷಗಳ ಸ್ಪೇಸ್‌ಗೆ ಮತ್ತು ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಸರ್ವಾಧಿಕಾರದ ವಿರೋಧಿ ಆಂದೋಲನಕ್ಕೆ ಚೈತನ್ಯ ಬಂದಿತು. ಈ ಅವಧಿಯಲ್ಲಿ ನಡೆದ ರೈತ ಆಂದೋಲನ ಮತ್ತು ಸಿಎಎ ವಿರೋಧಿ ಆಂದೋಲನಗಳು ಜನಸಾಮಾನ್ಯರ ಒಳಗಿಂದಲೂ ಅಂತಹ ಎನರ್ಜಿ ಸೃಷ್ಟಿಸಿದ್ದವು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬಹುಮತ ಕಳೆದುಕೊಳ್ಳುವಲ್ಲಿ ಇವೆಲ್ಲದರ ಪಾತ್ರವಿತ್ತು. ಆದರೆ, 99 ಸ್ಥಾನಗಳ ಮುಖಾಂತರ ಮತ್ತೆ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ, ನೈತಿಕ ಶಕ್ತಿಯನ್ನೂ ಪಡೆದುಕೊಂಡ ಕಾಂಗ್ರೆಸ್ಸು ಈಗಲೂ ‘ಒಂದು ಪಕ್ಷ’ವಾಗಿ ವರ್ತಿಸುತ್ತಿಲ್ಲ. ಅಂದರೆ, ಗುರಿ, ಉದ್ದೇಶ, ಸಿದ್ಧಾಂತ, ಯೋಜನೆ, ತಂತ್ರಗಾರಿಕೆ, ಕಾರ್ಯಕ್ರಮಗಳನ್ನು ನಾಯಕತ್ವವು ಮುಂದಿಟ್ಟು, ಅದಕ್ಕೆ ತಕ್ಕುನಾಗಿ ಇಡೀ ಪಕ್ಷವನ್ನು ಅಣಿನೆರೆಸುವುದೇ ಪಕ್ಷ. ಅಂತಹದ್ದೇನೂ ಇಲ್ಲದೇ ಇದ್ದರೆ, ಅದು ನಿರ್ದಿಷ್ಟ ಸಂದರ್ಭದಲ್ಲಿ ಸ್ವಂತ ಹಿತಾಸಕ್ತಿಗಾಗಿ – ಅಧಿಕಾರಕ್ಕಾಗಿ – ಜೊತೆಗೂಡಿರುವವರ ಕೂಟ ಮಾತ್ರವೇ ಆಗಿರುತ್ತದೆ. ಅಂತಹ ಒಂದು ಕೂಟವು ಬಿಜೆಪಿಯನ್ನು ಸೋಲಿಸುವುದೇ ಕಷ್ಟ; ಒಂದು ವೇಳೆ ಬಿಜೆಪಿಯನ್ನು ಚುನಾವಣಾ ವ್ಯವಸ್ಥೆಯ ಸಾಧ್ಯತೆಗಳ ಕಾರಣಕ್ಕೆ ಸೋಲಿಸಿದರೂ, ಆರೆಸ್ಸೆಸ್ಸನ್ನು ಸೋಲಿಸುವುದಂತೂ ಕಷ್ಟ.

ಆರೆಸ್ಸೆಸ್ಸಿನಂತಹ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ, ಪ್ರಜಾತಂತ್ರದ ಹೋರಾಟಗಳಲ್ಲಿ ಭಾಗಿಯಾಗದ, ದೇಶವನ್ನು ಹಿಂದಕ್ಕೊಯ್ಯುವ ಸಂಘಟನೆಯು ತನ್ನ ರಾಜಕೀಯ ವೇದಿಕೆಯ ಮೂಲಕ ಅಧಿಕಾರವನ್ನೂ ಗಳಿಸಿಕೊಂಡಿರುವ ಅಪಾಯ ದೇಶಕ್ಕೆದುರಾಗಿದೆ. ಹೀಗಿರುವಾಗ ಅದನ್ನು ಎದುರಿಸುವ ಬೃಹತ್‌ ಆಂದೋಲನಕ್ಕೆ ನಾಯಕತ್ವ ಕೊಡುವ ಒಂದು ಶಕ್ತಿ ಬೇಕಾಗುತ್ತದೆ. ಅಂತಹ ಶಕ್ತಿಯು ಸೈದ್ಧಾಂತಿಕ ಸ್ಪಷ್ಟತೆ, ಸಂಘಟನಾ ರಚನೆ, ತಂತ್ರಗಾರಿಕೆ ಮತ್ತು ಕಾರ್ಯಕ್ರಮಗಳ ಮುಖಾಂತರ ಬರುತ್ತದೆ. ದೇಶವ್ಯಾಪಿ ಅಂತಹ ಸಾಧ್ಯತೆ ಈ ಸದ್ಯ ಹೊಂದಿರುವುದು ಕಾಂಗ್ರೆಸ್‌ ಮಾತ್ರ. ಆದರೆ, ಅವೆಲ್ಲವನ್ನೂ ಮಾಡಿದಾಗ ಮಾತ್ರ ‘ಪಕ್ಷ’ ಅಸ್ತಿತ್ವದಲ್ಲಿದೆ ಎಂದು ಹೇಳಬಹುದು. ಕಾಂಗ್ರೆಸ್‌ ಇವತ್ತಂತೂ ಅಂತಹ ‘ಪಕ್ಷ’ವಾಗಿ ಅಸ್ತಿತ್ವದಲ್ಲಿಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪೋಕ್ಸೊ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನ್ಯಾಯಾಂಗದ ನಿರಾಸಕ್ತಿ; ಸದನದ ಚರ್ಚೆ ಸ್ವಾಗತಾರ್ಹ

ದೇಶದ ಪ್ರಜಾತಂತ್ರ, ಗಣರಾಜ್ಯದ ದೃಷ್ಟಿಯಿಂದ ಅಂತಹ ‘ಪಕ್ಷ’ ಅಸ್ತಿತ್ವಕ್ಕೆ ಬರಬೇಕು. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್‌ ಪಕ್ಷದ ಚುನಾಯಿತ ಅಧ್ಯಕ್ಷರೇ ಆಗಿದ್ದಾರೆ. ಅವರು ಕೇವಲ ನಾಮ್ ಕೆ ವಾಸ್ತೆ ಅಧ್ಯಕ್ಷರಲ್ಲ ಎಂಬುದೂ ಕಾಣುತ್ತಿದೆ. ಆದರೆ, ಅದನ್ನು ದಾಟಿ ಅವರು ಮತ್ತು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಕಾಂಗ್ರೆಸ್ಸನ್ನು ಪಕ್ಷವಾಗಿ ಪುನರ್‌ ರೂಪಿಸುತ್ತಾರಾ ಇಲ್ಲವಾ ಎಂಬುದನ್ನು ನೋಡಬೇಕು. ಅದರ ಮೇಲೂ ಮುಂದಿನ ನಾಲ್ಕೈದು ವರ್ಷಗಳ ಭಾರತದ ಪ್ರಜಾತಂತ್ರದ ಸ್ವರೂಪ ನಿರ್ಧಾರವಾಗುತ್ತದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X