ಕಳೆದ ವಾರವಷ್ಟೇ ಸಿದ್ದರಾಮಯ್ಯನವರು ಸ್ವಾಮೀಜಿಗಳ ಸಮೂಹದಿಂದ ಸನ್ಮಾನಿತರಾಗಿದ್ದರು. ಯಡಿಯೂರಪ್ಪನವರು ಪ್ರತಿ ಮಠಕ್ಕೆ ವರ್ಷಕ್ಕೆ ಇಂತಿಷ್ಟು ಎಂದು ಅನುದಾನ ವಿತರಿಸಿದ್ದರು. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್‍ರಂತೂ ಕಂಡ ಕಂಡ ಸ್ವಾಮೀಜಿಗಳ ಕಾಲಿಗೆ ಬೀಳುತ್ತಲೇ ಬಂದವರು. ಈಗ, ‘ಸ್ವಾಮೀಜಿಗಳು ರಾಜಕೀಯದಿಂದ ದೂರವಿರಿ’ ಎಂದರೆ ಕೇಳುತ್ತಾರೆಯೇ?
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಇನ್ನುಮುಂದೆ ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟು ಅವರಿಗೆ ಒಳ್ಳೆಯದಾಗಲಿ ಎಂದು ಹರಸಬೇಕು’ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದಾರೆ.
ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಬಹಿರಂಗವಾಗಿಯೇ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಆಯ್ಕೆ ಶಾಸಕರಿಗೆ ಸಂಬಂಧಿಸಿದ ಪಕ್ಷದ ಆಂತರಿಕ ವಿಚಾರ. ‘ಮುಖ್ಯಮಂತ್ರಿ ಬದಲಾವಣೆ’ ಎನ್ನುವುದು ಪಕ್ಷದೊಳಗಿನ ಬೂದಿ ಮುಚ್ಚಿದ ಕೆಂಡ. ಈಗ ಆ ಕೆಂಡವನ್ನು ಒಕ್ಕಲಿಗರ ಸ್ವಾಮೀಜಿ ಕೆದಕಿದ್ದಾರೆ, ಗಾಳಿ ಹಾಕಿದ್ದಾರೆ. ಇದರಿಂದ ನಿಜಕ್ಕೂ ಕೆರಳಿ ಕೆಂಡವಾಗಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲ, ಅವರ ಬೆಂಬಲಿತ ಸಚಿವರು ಮತ್ತು ಶಾಸಕರು.
ಸಾರ್ವಜನಿಕ ಸಮಾರಂಭವಾದ್ದರಿಂದ ಸ್ಥಿಮಿತ ಕಳೆದುಕೊಳ್ಳದ ಸಿದ್ದರಾಮಯ್ಯನವರು, ಅಪಾರ ತಾಳ್ಮೆ ಮತ್ತು ಸಹನೆಯಿಂದಲೇ, ‘ಪಕ್ಷ ಹಾಗೂ ಸರ್ಕಾರದಲ್ಲಿ ಯಾವುದೇ ಬದಲಾವಣೆಯ ನಿರ್ಧಾರಗಳನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ’ ಎಂದು ಹೇಳಿದ್ದಾರೆ.
ಒಂದು ಸಮುದಾಯಕ್ಕೆ ಸೀಮಿತರಾದ ಸ್ವಾಮೀಜಿಯೊಬ್ಬರು ಹೀಗೆ ಸಾರ್ವಜನಿಕವಾಗಿ ಮುಖ್ಯಮಂತ್ರಿಗಳಿಗೆ ಹೇಳುವ ಭಂಡತನ ಬಂದಿದ್ದಾದರೂ ಎಲ್ಲಿಂದ ಮತ್ತು ಹೇಗೆ? ಅದು ಜಾತಿ ಅಹಂಕಾರವೇ? ಬಲಾಢ್ಯ ಸಮುದಾಯ ತಮ್ಮ ಬೆನ್ನಿಗಿದೆ ಎಂಬ ಭ್ರಮೆಯೇ? ಎರಡೂ ಸತ್ಯ. ಇದಕ್ಕಿಂತಲೂ ಇನ್ನೂ ಒಂದು ಮುಖ್ಯವಾದ ವಿಚಾರವೆಂದರೆ, ರಾಜಕಾರಣಿಗಳ ಓಲೈಕೆ, ಸಲುಗೆ ಮತ್ತು ಸಹಕಾರ. ಇದು ಖಾವಿದಾರಿಗಳಾದ ಸ್ವಾಮೀಜಿಗಳಿಗೆ ಎಲ್ಲಿಲ್ಲದ ಧೈರ್ಯ ತಂದಿದೆ. ಎಲ್ಲೆ ಮೀರಿ ಮಾತನಾಡುವಂತೆ ಮಾಡಿದೆ.
ಈಗ ಎಲ್ಲೆ ಮೀರಿ ಮಾತನಾಡುತ್ತಿರುವ ಒಕ್ಕಲಿಗರ ಸ್ವಾಮೀಜಿಯತ್ತ ನೋಡುವುದಾದರೆ, ಅವರಿಗೂ ಬಡ ಒಕ್ಕಲಿಗರಿಗೂ ಸಂಬಂಧವಿಲ್ಲ. ಅವರನ್ನು ಸರ್ಕಾರಿ ಸಮಾರಂಭಕ್ಕೆ ಆಹ್ವಾನಿಸುವ ಅಗತ್ಯವೂ ಇರಲಿಲ್ಲ. ಆದರೂ ಆಹ್ವಾನಿಸಿದ್ದಾರೆ, ಆ ಮೂಲಕ ಒಕ್ಕಲಿಗ ಸಮುದಾಯವನ್ನು ಓಲೈಸಲು ಹವಣಿಸಿದ್ದಾರೆ. ಅವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಅಣಕಿಸಿದ್ದಾರೆ.
ಈ ಅಣಕ-ಅವಮಾನಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ರಾಜಕಾರಣಿಗಳೇ ಕಾರಣಕರ್ತರು. ಪ್ರತಿ ಚುನಾವಣೆ ಎದುರಾದಾಗಲೆಲ್ಲ ಈ ರಾಜಕಾರಣಿಗಳು ಮಠಕ್ಕೆ ಹೋಗುವುದು, ಸ್ವಾಮೀಜಿಗಳನ್ನು ಭಕ್ತಿಭಾವದಿಂದ ಕಂಡು ಕಾಲಿಗೆ ಬೀಳುವುದು, ನಜರು ಅರ್ಪಿಸುವುದು, ಅವರು ಆಶೀರ್ವದಿಸುವುದು, ಅದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿ ಪ್ರಚಾರ ಪಡೆಯುವುದು- ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದು ಅಪ್ಪಟ ಕೊಡು-ಕೊಳ್ಳುವ ವ್ಯವಹಾರ. ಅಧಿಕಾರಕ್ಕೇರಲು ಸ್ವಾಮೀಜಿಗಳ ಸಹಕಾರ ಬಯಸುವುದು, ಅಧಿಕಾರಸ್ಥ ರಾಜಕಾರಣಿಗಳಿಂದ ಸ್ವಾಮೀಜಿಗಳು ಮಠ ಮತ್ತು ಸಮುದಾಯದ ನೆಪದಲ್ಲಿ ಅನುಕೂಲ ಪಡೆಯುವುದು ನಡೆದುಕೊಂಡು ಬಂದಿದೆ.
1994ರಲ್ಲಿ ಜನತಾದಳದ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಆಗಲೇಬೇಕೆಂಬ ಹಠಕ್ಕೆ ಬಿದ್ದಿದ್ದರು. ರಾಜ್ಯ ಸುತ್ತಾಡಿ ಹತ್ತು ಹಲವು ಸಭೆ ಸಮಾರಂಭಗಳ ಮೂಲಕ ಮತ ಕ್ರೋಡೀಕರಿಸುತ್ತಿದ್ದರು. ಅದರ ಮುಂದುವರೆದ ಭಾಗವಾಗಿ ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸುವ ಒಂದು ಸಮಾರಂಭ- ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಏರ್ಪಾಡಾಗಿತ್ತು. ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯವರು ಆ ಬೃಹತ್ ಸಮಾವೇಶವನ್ನು ಉದ್ದೇಶಿಸಿ, ‘ಒಕ್ಕಲಿಗರೆಲ್ಲ ಒಂದಾಗಿ, ಜನತಾದಳದ ಎಚ್.ಡಿ.ದೇವೇಗೌಡರನ್ನು ಬೆಂಬಲಿಸಬೇಕು, ಅವರು ಈ ರಾಜ್ಯದ ಮುಖ್ಯಮಂತ್ರಿಗಳಾಗಬೇಕು’ ಎಂದು ಕರೆ ಕೊಟ್ಟರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸಮುದಾಯದ ಸ್ವಾಮೀಜಿಯನ್ನು ಹೀಗೆ ರಾಜಕಾರಣಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ ಎಂದು ದೇವೇಗೌಡರೂ ಯೋಚಿಸಲಿಲ್ಲ; ಒಕ್ಕಲಿಗರೆಲ್ಲ ದೇವೇಗೌಡರನ್ನು ಬೆಂಬಲಿಸಿ ಎನ್ನುವುದು ಎಷ್ಟು ಸೂಕ್ತ ಎಂದು ಸರ್ವಸಂಘ ಪರಿತ್ಯಾಗಿಗಳಾದ ಸ್ವಾಮೀಜಿಯೂ ಚಿಂತಿಸಲಿಲ್ಲ. ಇಬ್ಬರಲ್ಲೂ ಇದ್ದದ್ದು ಸ್ವಹಿತಾಸಕ್ತಿ. ಇಬ್ಬರಿಗೂ ಬಳಕೆಯಾದದ್ದು ಸಮುದಾಯ. ಒಬ್ಬರು ಅಧಿಕಾರಕ್ಕೇರಿದರು, ಇನ್ನೊಬ್ಬರು ಮಠದ ಶಾಖೆಗಳ ಸಾಮ್ರಾಜ್ಯ ವಿಸ್ತರಿಸುತ್ತಾ ಹೋದರು.
ಮುಖ್ಯಮಂತ್ರಿಗಳಾದ ದೇವೇಗೌಡರು ಕೆಲವೇ ವರ್ಷಗಳಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಬಿಟ್ಟು, ಯಾರಿಗೂ ಗೊತ್ತಿಲ್ಲದ ಚಂದ್ರಶೇಖರನಾಥ ಸ್ವಾಮೀಜಿಯವರನ್ನು ಮುನ್ನೆಲೆಗೆ ತಂದರು. ಅವರಿಗಾಗಿ ಮೈಸೂರು ರಸ್ತೆಯಲ್ಲಿ ವಿಶ್ವಒಕ್ಕಲಿಗ ಮಹಾಸಂಸ್ಥಾನ ಸ್ಥಾಪಿಸಿ, ಮಠಾಧಿಪತಿ ಮಾಡಿದರು. ಬಾಲಗಂಗಾಧರನಾಥರಿಗೆ ಪರ್ಯಾಯವಾಗಿ ಮತ್ತೊಬ್ಬ ಸ್ವಾಮೀಜಿಯನ್ನು ಹುಟ್ಟುಹಾಕಿದರು, ಮತ್ತೊಂದು ಮಠ ಕಟ್ಟಿದರು.
ಇಷ್ಟೆಲ್ಲ ಮಾಡಿದ್ದು ಒಕ್ಕಲಿಗ ಸಮುದಾಯದ ಏಳ್ಗೆಗಾಗಿ ಅಲ್ಲ. ಅವರ ಸ್ವಾರ್ಥ ರಾಜಕಾರಣಕ್ಕೆ. ಇವತ್ತು ಸಾರ್ವಜನಿಕವಾಗಿ ಸಿದ್ದರಾಮಯ್ಯನವರಿಗೆ ‘ಸ್ಥಾನ ಬಿಟ್ಟುಕೊಡಿ’ ಎಂದು ಕೇಳುತ್ತಿರುವವರು ಬೇರಾರೂ ಅಲ್ಲ, ದೇವೇಗೌಡರು ಹುಟ್ಟುಹಾಕಿದ ಅದೇ ಸ್ವಾಮೀಜಿಯವರು.
ಈ ಸತ್ಯ ಗೊತ್ತಿರುವ ಸಚಿವ ಕೆ.ಎನ್. ರಾಜಣ್ಣ, ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಶಿವಕುಮಾರ್ ಸಹೋದರ ಸುರೇಶ್ ಸೋಲಲು ಕಾರಣ ಇದೇ ಸ್ವಾಮೀಜಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಗಿ ಈ ಮಠವನ್ನು ನಿರ್ಮಾಣ ಮಾಡಲಾಗಿತ್ತು. ಚಂದ್ರಶೇಖರನಾಥರನ್ನು ಮಠದ ಪೀಠಾಧ್ಯಕ್ಷರನ್ನಾಗಿಸಲಾಗಿತ್ತು. ಆ ಋಣ ಇವರ ಮೇಲಿದೆ. ಹಾಗಾಗಿ ಇವರು ಡಿಕೆ ಸುರೇಶ್ ವಿರುದ್ಧ ನಿಂತಿದ್ದ ಗೌಡರ ಅಳಿಯ ಡಾ. ಮಂಜುನಾಥ್ ಗೆಲುವಿಗೆ ಶ್ರಮ ಹಾಕಿ ಗೆಲ್ಲಿಸಿದ್ದಾರೆ. ಆ ತಪ್ಪನ್ನು ಮುಚ್ಚಿಕೊಳ್ಳಲು ಈಗ ಎಲ್ಲರ ಮುಂದೆ ಡಿಕೆಶಿಯವರಿಗೆ ಮುಖ್ಯಮಂತ್ರಿ ಪಟ್ಟ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ನೇರವಾಗಿ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?
ಇದು ಮಠ ಮತ್ತು ಸ್ವಾಮೀಜಿಗಳನ್ನು ಓಲೈಸುವುದರಿಂದ ಆದ ಅನಾಹುತ. ರಾಜಕಾರಣಕ್ಕೆ ದೇವರು ಧರ್ಮವನ್ನು ಎಳೆದು ತಂದದ್ದರಿಂದ ಆದ ಅವಘಡ. ಇದನ್ನು ಎಲ್ಲ ಪಕ್ಷದ ರಾಜಕಾರಣಿಗಳು ಪ್ರಜ್ಞಾಪೂರ್ವಕವಾಗಿ ಮಾಡಿಕೊಂಡು ಬಂದಿದ್ದಾರೆ. ತಮ್ಮ ರಾಜಕೀಯ ಬೆಳವಣಿಗೆಗೆ ಬಳಸಿಕೊಂಡಿದ್ದಾರೆ. ಪ್ರಜೆಗಳೇ ಪ್ರಭುಗಳು ಎನ್ನುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಡಿಗಡಿಗೂ ಅವಮಾನಿಸಿದ್ದಾರೆ.
ಕಳೆದ ವಾರವಷ್ಟೇ ಸಿದ್ದರಾಮಯ್ಯನವರು ಸ್ವಾಮೀಜಿಗಳ ಸಮೂಹದಿಂದ ಸನ್ಮಾನಿತರಾಗಿದ್ದರು. ಯಡಿಯೂರಪ್ಪನವರು ಪ್ರತಿ ಮಠಕ್ಕೆ ವರ್ಷಕ್ಕೆ ಇಂತಿಷ್ಟು ಎಂದು ಅನುದಾನ ವಿತರಿಸಿದ್ದರು. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್‍ರಂತೂ ಕಂಡ ಕಂಡ ಸ್ವಾಮೀಜಿಗಳ ಕಾಲಿಗೆ ಬೀಳುತ್ತಲೇ ಬಂದವರು. ಈಗ, ‘ಸ್ವಾಮೀಜಿಗಳು ರಾಜಕೀಯದಿಂದ ದೂರವಿರಿ’ ಎಂದರೆ ಕೇಳುತ್ತಾರೆಯೇ?
ರಾಜಕಾರಣಿಗಳು ಒಂದು ಜಾತಿಗೆ ಸೇರಿದವರಾದರೂ, ಅವರಿಗೆ ಅವರ ಜಾತಿಯ ಮತದಾರರಷ್ಟೇ ಮತ ನೀಡಿ ಗೆಲ್ಲಿಸುವುದಿಲ್ಲ. ಹಾಗಾಗಿ ಗೆದ್ದವರು, ಅಧಿಕಾರಕ್ಕೇರಿದವರು ಅಸಹಾಯಕ ಜಾತಿಗಳಿಗೆ ಅವಮಾನವಾಗದ ರೀತಿಯಲ್ಲಿ ಉದಾರಿಯಾಗಿರಬೇಕು. ಅವರ ನೊಂದ ಮನಸ್ಸಿಗೆ ಇನ್ನಷ್ಟು ನೋವಾಗದಂತೆ ವರ್ತಿಸಬೇಕು. ಅವರು ಕೂಡ ತಮ್ಮಷ್ಟಕ್ಕೆ ತಾವಿರಲು ಯತ್ನಿಸುವ ಜನ ಎನ್ನುವುದನ್ನು ಅರಿಯಬೇಕು. ಪ್ರತಿಯೊಬ್ಬ ರಾಜಕಾರಣಿಯೂ ಈ ಜಾತ್ಯತೀತ ಗುಣವನ್ನು ಅಳವಡಿಸಿಕೊಳ್ಳಬೇಕು. ಹಾಗೆಯೇ ಸ್ವಾಮೀಜಿಗಳು ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ತಮ್ಮ ಮಾತು ನಡೆಯುತ್ತದೆ ಎಂದಾಗ, ಅವಕಾಶವಂಚಿತ ಶೋಷಿತ ಸಮುದಾಯಗಳಿಗೆ ಅಧಿಕಾರ ನೀಡಿ ಎನ್ನುವ ಮೂಲಕ ದೊಡ್ಡವರಾಗಬೇಕು.