ಈ ದಿನ ಸಂಪಾದಕೀಯ | ಯಾರು ಹಸಿದಿದ್ದರು, ಯಾವುದು ಹಳಸಿತ್ತು?

Date:

Advertisements
ದೇವೇಗೌಡರಾಗಲಿ, ಮೋದಿಯವರಾಗಲಿ ಜನರಿಂದ ಮೇಲೆದ್ದು ಬಂದ ಜನನಾಯಕರು. ಪ್ರಜಾಪ್ರಭುತ್ವ, ಸಂವಿಧಾನವನ್ನು ಬಳಸಿಕೊಂಡು ಬೆಳೆದವರು. ದಶಕಗಟ್ಟಲೆ ಅಧಿಕಾರವನ್ನು ಅನುಭವಿಸಿದವರು. ಆದರೆ ತಮ್ಮನ್ನು ಬೆಳೆಸಿದ ಜನರನ್ನೇ ದೂರವಿಟ್ಟು, ದೇಶಕ್ಕಾಗಿ ಒಂದಾಗಿದ್ದೇವೆ ಎಂದರೆ- ದೇಶವೆಂದರೆ ಬರೀ ಮಣ್ಣಲ್ಲ ಎನ್ನುವುದನ್ನು ತಿಳಿಸಿ ಹೇಳಬೇಕಾಗಿದೆ

ಜಾತ್ಯತೀತ ಜನತಾದಳ ಎಂಬ ಕರ್ನಾಟಕದ ಪ್ರಾದೇಶಿಕ ಪಕ್ಷ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಎಂಬ ಮೈತ್ರಿಕೂಟದ ಭಾಗವಾಗಿದೆ. ಕಾವೇರಿ ನದಿ ಹರಿದುಹೋಗಿ ಸಮುದ್ರ ಸೇರಿದೆ. ಪ್ರಾದೇಶಿಕ ಅಸ್ಮಿತೆಯನ್ನು ಅಳಿಸಿಕೊಂಡಿದೆ, ತನ್ನತನವನ್ನು ತಾನೇ ಕಳೆದುಕೊಂಡಿದೆ. ಇದನ್ನು ಕೆಲವರು ದೈತ್ಯರಿಬ್ಬರ ಸಮಾಗಮ ಎಂಬರ್ಥದಲ್ಲಿ ನೋಡುತ್ತಿದ್ದಾರೆ. ಕರ್ನಾಟಕದ ಎರಡು ಬಲಿಷ್ಠ ಜಾತಿಗಳಾದ ಒಕ್ಕಲಿಗ-ಲಿಂಗಾಯತರ ಒಗ್ಗೂಡುವಿಕೆ ಎಂದು ಅರ್ಥೈಸಲಾಗುತ್ತಿದೆ. ಒಟ್ಟಿನಲ್ಲಿ ಪರ-ವಿರೋಧ ಚರ್ಚೆಗೆ ಗುರಿ ಮಾಡಿದೆ.

ದೆಹಲಿಯ ದೊರೆಗಳ ನಡುವೆ ಕೈ ಕಟ್ಟಿ ನಿಂತಿದ್ದ ಕುಮಾರಸ್ವಾಮಿ, ಬೆಂಗಳೂರಿಗೆ ಬರುತ್ತಲೇ, ಹೊಸ ಉತ್ಸಾಹ, ಹುಮ್ಮಸ್ಸು ಕುದುರಿಸಿಕೊಂಡಿದ್ದಾರೆ. ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಅವರ ಅದೃಷ್ಟಕ್ಕೆ, ಅವರ ಪಕ್ಷದ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಕಾವೇರಿ ವಿವಾದ ಭುಗಿಲೆದ್ದು ವರದಾನವಾಗಿ ಒದಗಿಬಂದಿದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ರಚನಾತ್ಮಕವಾಗಿ, ತರ್ಕಬದ್ಧವಾಗಿ ಟೀಕಿಸಲಾಗದೆ ಒಳಗೊಳಗೇ ಒದ್ದಾಡುತ್ತಿದ್ದ ಬಿಜೆಪಿಗೆ; ಸಂಘಪರಿವಾರದ ಸಂಚಿನಿಂದ ನಾಲ್ಕಾರು ಗುಂಪುಗಳಾಗಿ ಒಡೆದು ಚೂರಾಗಿರುವ ಬಿಜೆಪಿಗೆ; ನಾಯಕರಿಲ್ಲದ ನರಳಾಡುತ್ತಿರುವ ಬಿಜೆಪಿಗೆ ಕುಮಾರಣ್ಣ- ಕಷ್ಟದಲ್ಲಿ ಕೈ ಹಿಡಿದ ಕೃಷ್ಣನಂತೆ ಕಾಣತೊಡಗಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೇಳಿಕೆಗಳು ಸಿಡಿಗುಂಡುಗಳಂತೆ ಸಿಡಿಯತೊಡಗಿವೆ. ಗೋದಿ ಮೀಡಿಯಾಗಳು ವಿಸ್ತಾರವಾಗಿ ವರದಿ ಮಾಡುತ್ತಾ ಪ್ರಚಾರ ಕೊಡುತ್ತಿವೆ.

ಇಲ್ಲಿ ಯಾರು ಹಸಿದಿದ್ದಾರೆ, ಯಾವುದು ಹಳಸಿದೆ ಎಂಬುದನ್ನು ನಾಡಿನ ಜನತೆಯೇ ಅರ್ಥಮಾಡಿಕೊಳ್ಳಬೇಕಾಗಿದೆ. 

Advertisements

ಇವತ್ತು ದೇಶದ ಮೂವತ್ತೇಳು ಪ್ರಾದೇಶಿಕ ಪಕ್ಷಗಳು ಎನ್‌ಡಿಎ ಭಾಗವಾಗಿವೆ. ಅಧಿಕಾರ ಹಂಚಿಕೊಂಡಿವೆ, ಸುರಕ್ಷಿತ ವಲಯದಲ್ಲಿವೆ. ಪ್ರಾದೇಶಿಕ ಪಕ್ಷಗಳನ್ನು ಆಪೋಶನ ತೆಗೆದುಕೊಂಡ ಬಿಜೆಪಿ ಅವುಗಳ ಬೆಂಬಲದಿಂದ ಬಲಿಷ್ಠವಾಗಿದೆ. ಒಕ್ಕೂಟದ ನಾಯಕತ್ವದ ನೇತೃತ್ವ ವಹಿಸಿದೆ. ಮೋದಿಯವರು ಪ್ರಧಾನಿಯಾಗಿ ಹತ್ತು ವರ್ಷಗಳನ್ನು ಪೂರೈಸುತ್ತಿದ್ದಾರೆ. ಹಾಗೆಯೇ 2024ರಲ್ಲಿ ಎದುರಾಗುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ತಮ್ಮ ಗೆಲುವಿನ ಓಟಕ್ಕೆ ತೊಡರುಗಾಲಾಗಬಹುದಾದ ಪಕ್ಷಗಳನ್ನು, ನಾಯಕರನ್ನು ಚಿಲ್ಲರೆ ಆಮಿಷ ತೋರಿ ಒಕ್ಕೂಟಕ್ಕೆ ಸೆಳೆದುಕೊಳ್ಳುತ್ತಿದ್ದಾರೆ. ಸೇರದಿದ್ದರೆ ಐಟಿ, ಇಡಿ, ಸಿಬಿಐಗಳ ಮೂಲಕ ಬೇಟೆಯಾಡುತ್ತಿದ್ದಾರೆ. ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಬಲಿ ಹಾಕುತ್ತಿದ್ದಾರೆ. ಬಲಿಬಿದ್ದವರನ್ನು ಬಗಲಲ್ಲಿಟ್ಟುಕೊಂಡು ಬಲ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬೀಗುತ್ತಿದ್ದಾರೆ. ಭಾರತ ನಮ್ಮದು ಎನ್ನುತ್ತಿದ್ದಾರೆ. 

ಈ ಬೇಟೆಗೆ, ಬಲಿಗೆ ಬೆಚ್ಚಿಬಿದ್ದ ಕರ್ನಾಟಕದ ಮಣ್ಣಿನ ಮಗ ಎಚ್ ಡಿ ದೇವೇಗೌಡ, ʻಪಕ್ಷದ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ, ಅದೆಲ್ಲವನ್ನು ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆʼ ಎಂದಿದ್ದಾರೆ. ವಯಸ್ಸು ಮತ್ತು ಆರೋಗ್ಯದ ನೆಪ ಮುಂದೆ ಮಾಡಿ ಕುಮಾರಸ್ವಾಮಿಯವರನ್ನು ಮುಂದೆ ಬಿಟ್ಟಿದ್ದಾರೆ. ಆ ಮೂಲಕ, ತಮ್ಮ ಪುತ್ರ ಕುಮಾರಸ್ವಾಮಿ 2006ರಲ್ಲಿ ಬಿಜೆಪಿಯ ಜೊತೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದಾಗ, ಕುಮಾರಸ್ವಾಮಿ ತಪ್ಪು ಮಾಡಿದ್ದಾರೆ, ನನ್ನ ಸಹಮತವಿಲ್ಲ ಎಂದಿದ್ದವರು; ಈಗ ಈ ವಯಸ್ಸಿನಲ್ಲಿ ನನಗೇನಾಗಬೇಕಾಗಿದೆ, ಪಕ್ಷ ಮತ್ತು ಕಾರ್ಯಕರ್ತರ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮೂಲಕ, ತಾವೀಗಲೂ ತತ್ವ-ಸಿದ್ಧಾಂತಕ್ಕೆ ಬದ್ಧ ಎಂದು ತೋರಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ದೇವೇಗೌಡರು ಈಗ 90ರ ಗಡಿ ದಾಟಿದ್ದಾರೆ. 1962ರಲ್ಲಿ ಹರದನಹಳ್ಳಿಯ ಹೈದನಾಗಿ, ಬಡ ಕೃಷಿಕನ ಮಗನಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿ, ಮೊತ್ತ ಮೊದಲ ಬಾರಿಗೆ ಗೆದ್ದು ಶಾಸಕರಾದವರು. ನಂತರ ನಿಜಲಿಂಗಪ್ಪನವರ ನೇತೃತ್ವದ ಕಾಂಗ್ರೆಸ್ ಸೇರಿ, ದೇವರಾಜ ಅರಸು ಅವರನ್ನು ಸಮರ್ಥವಾಗಿ ಎದುರಿಸಿದ ವಿರೋಧ ಪಕ್ಷದ ನಾಯಕರಾಗಿ, ಜೆಪಿ, ಮೊರಾರ್ಜಿ, ಮಧುಲಿಮಯೆಗೆ ಮನಸೋತು ಜನತಾ ಪಕ್ಷದ ಭಾಗವಾದವರು. ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ, ಜೆ ಎಚ್ ಪಟೇಲ್ ಅವರ ಜೊತೆ ಗುದ್ದಾಡಿ ಗೆದ್ದವರು. ಜನತಾ ಸರ್ಕಾರದಲ್ಲಿ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ, ಸಿಕ್ಕ ಸಣ್ಣ ಅವಕಾಶದಲ್ಲಿಯೇ, ಹತ್ತು ತಿಂಗಳಲ್ಲಿಯೇ ಮೆಚ್ಚುವಂತಹ ಆಡಳಿತ ಕೊಟ್ಟವರು. ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳ ಕುರಿತ ಅಪಾರ ಅನುಭವವುಳ್ಳವರು. ತಮ್ಮ ಸುದೀರ್ಘ ರಾಜಕಾರಣದಲ್ಲಿ ಕೊಂಚವಾದರೂ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಬದ್ಧರಾಗಿ ಬದುಕಿದವರು. ಇವತ್ತಿನ ಅಡ್ಡಡ್ಡ ನುಂಗುವ ರಾಜಕಾರಣಿಗಳಿಗೆ ಹೋಲಿಸಿದರೆ, ತಕ್ಕಮಟ್ಟಿಗೆ ಪ್ರಾಮಾಣಿಕತೆ ಉಳಿಸಿಕೊಂಡವರು.

ಇಂತಹ ದೇವೇಗೌಡರು ಕಳೆದ 60 ವರ್ಷಗಳಿಂದ ರಾಜಕಾರಣವನ್ನೇ ಬದುಕಾಗಿಸಿಕೊಂಡಿದ್ದಾರೆ, ಹೋರಾಟದ ಹಾದಿಯಲ್ಲಿ ಬಿದ್ದುಎದ್ದಿದ್ದಾರೆ, ದೇಶದ ಆಗುಹೋಗುಗಳನ್ನು ಹತ್ತಿರದಿಂದ ಕಂಡಿದ್ದಾರೆ. ಇಂತಹ ಹಿರಿತನದ, ದೊರೆತನದ ಗೌಡರು, ತಾವು ರಾಜಕಾರಣಕ್ಕೆ ಬಂದ 40 ವರ್ಷಗಳ ನಂತರ, 2002ರಲ್ಲಿ ರಾಜಕಾರಣಕ್ಕೆ ಬಂದ ಮೋದಿಯವರನ್ನು ʻಮಹಾನ್ ನಾಯಕʼ ಎಂದು ಮೆಚ್ಚುತ್ತಾರೆಂದರೆ- ಇದನ್ನು ದೇಶಕ್ಕಾಗಿ ದೈತ್ಯರ ಸಮಾಗಮ ಎಂದು ಕರೆಯಲಾಗುತ್ತದೆಯೇ?

ಭಾರತದ ಬಹುತ್ವವನ್ನು, ಒಕ್ಕೂಟ ವ್ಯವಸ್ಥೆಯನ್ನು ದಿನವೂ ಧ್ವಂಸ ಮಾಡುತ್ತಿರುವ ಸಂಘಪರಿವಾರದ ಸಂಚನ್ನು ಅರ್ಥ ಮಾಡಿಕೊಳ್ಳದೆ ಇದ್ದರೆ; ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವುದನ್ನು ಕಂಡೂ ಕಾಣದಂತಿದ್ದರೆ; ಒಂದು ವರ್ಷ ಕಾಲ ದೇಶದ ಕೃಷಿಕರು ದೆಹಲಿಯಲ್ಲಿ ಪ್ರತಿಭಟಿಸಿ, ನೂರಾರು ರೈತರು ಪ್ರಾಣ ಕಳೆದುಕೊಂಡಿದ್ದನ್ನೂ ಮರೆತರೆ; ಬಡವರನ್ನು ಹರಿದು ಮುಕ್ಕುತ್ತಿರುವ ಕಾರ್ಪೊರೇಟ್ ಕುಳಗಳ ಕೈಗೆ ದೇಶ ಕೊಡುತ್ತಿರುವುದು ನಮಗೆ ತಿಳಿಯದೇ ಹೋದರೆ; ಧರ್ಮದ ಹೆಸರಲ್ಲಿ ದೇಶಕ್ಕೆ ಬೆಂಕಿ ಹಚ್ಚುತ್ತಿರುವ ಬಿಜೆಪಿಯ ಅಧಿಕಾರದಾಹವನ್ನು ಅರಿಯದೇ ಹೋದರೆ- ಇದನ್ನು ಸ್ವಾರ್ಥ ಸಾಧನೆಗಾಗಿ ಸಮ್ಮಿಲನ ಎನ್ನದಿರಲು ಸಾಧ್ಯವೇ?

ದೇವೇಗೌಡರಾಗಲಿ, ಮೋದಿಯವರಾಗಲಿ ಜನರಿಂದ ಮೇಲೆದ್ದು ಬಂದ ಜನನಾಯಕರು. ಪ್ರಜಾಪ್ರಭುತ್ವ, ಸಂವಿಧಾನವನ್ನು ಬಳಸಿಕೊಂಡು ಬೆಳೆದವರು. ದಶಕಗಟ್ಟಲೆ ಅಧಿಕಾರವನ್ನು ಅನುಭವಿಸಿದವರು. ಆದರೆ ತಮ್ಮನ್ನು ಬೆಳೆಸಿದ ಜನರನ್ನೇ ದೂರವಿಟ್ಟು, ದೇಶಕ್ಕಾಗಿ ಒಂದಾಗಿದ್ದೇವೆ ಎಂದರೆ- ದೇಶವೆಂದರೆ ಬರೀ ಮಣ್ಣಲ್ಲ ಎನ್ನುವುದನ್ನು ತಿಳಿಸಿ ಹೇಳಬೇಕಾಗಿದೆ.

ಹಾಗೆಯೇ ಇಲ್ಲಿ ಹಸಿದವರಾರು, ಹಳಸಿಕೊಂಡವರಾರು ಎಂಬುದನ್ನು ಅರಿಯಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X