ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ. ಹಾಗಾಗಿ ಮುಸ್ಲಿಂ ದ್ವೇಷವನ್ನು ಹೆಚ್ಚು ಮಾಡುವ, ಸುಳ್ಳು ಸೃಷ್ಟಿಸಿ ಬೆಂಕಿ ಹಚ್ಚುವ, ಜನರ ನೆಮ್ಮದಿಯ ಬದುಕಿಗೆ ಭಂಗ ತರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿರೋಧ ಒಡ್ಡಬೇಕಾದ ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದೆ. ಹಾಗಾಗಿ ಮಾನವಂತರು ಮುಂದೆ ಬರಬೇಕಿದೆ, ದೇಶವನ್ನು ಉಳಿಸಿಕೊಳ್ಳಬೇಕಿದೆ.
ಕಳೆದ ವಾರ ರಾಜ್ಯಸಭೆ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ, ಕಾಂಗ್ರೆಸ್ಸಿನ ಮೂವರು ಗೆದ್ದ ಸಂಭ್ರಮದಲ್ಲಿ, ವಿಧಾನಸೌಧದಲ್ಲಿ ನಾಸೀರ್ ಹುಸೇನ್ ಪರ ಬೆಂಬಲಿಗರು ‘ನಾಸಿರ್ ಸಾಬ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದರು. ಆ ಘೋಷಣೆಯನ್ನು ಕೆಲ ಮಾಧ್ಯಮಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ತಿರುಚಿ ಪ್ರಕಟಿಸಿದರು.
ಇದು ಆಕಸ್ಮಿಕವಾಗಿ ಆಗಿದ್ದೇ? ಇಲ್ಲ, ಉದ್ದೇಶಪೂರ್ವಕವಾಗಿಯೇ ಮಾಡಿದ್ದು.
ಕೆಲ ಸುದ್ದಿ ಮಾಧ್ಯಮಗಳಲ್ಲಿ ಅದು ಪ್ರಕಟವಾಗುತ್ತಿದ್ದಂತೆಯೇ, ಬಿಜೆಪಿಯ ನಾಯಕರು ಆ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ‘ಸರ್ಕಾರ ದೇಶ ದ್ರೋಹಿಗಳ ಪರವಿದೆ, ಕಿಡಿಗೇಡಿಗಳ ರಕ್ಷಣೆಗೆ ನಿಂತಿದೆ, ಮುಸ್ಲಿಮರ ತುಷ್ಟೀಕರಣದಿಂದಲೇ ಹೀಗೆಲ್ಲ ಆಗುತ್ತಿದೆ’ ಎಂದು ಬೊಬ್ಬೆ ಹಾಕಿದರು.
ಸುದ್ದಿ ಮಾಧ್ಯಮಗಳು ಮತ್ತು ಬಿಜೆಪಿ ನಾಯಕರ ಹಂಚುವಿಕೆಯಿಂದ ‘ಪಾಕಿಸ್ತಾನ್ ಜಿಂದಾಬಾದ್’ ರಾಷ್ಟ್ರವ್ಯಾಪಿ ಸುದ್ದಿಯಾಯಿತು. ದೇಶದ ಜನ, ಕರ್ನಾಟಕದ ಶಕ್ತಿಕೇಂದ್ರವಾದ ವಿಧಾನಸೌಧದಲ್ಲಿ ನಡೆಯಬಾರದ್ದು ನಡೆದುಹೋಗಿದೆ ಎಂಬ ನಿಲುವಿಗೆ ಬರುವಂತಾಯಿತು. ಇದು ಚುನಾವಣಾ ಸಮಯವಾದ್ದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು.
ಕಾಂಗ್ರೆಸ್ ವಲಯದಲ್ಲಿ ಗೆದ್ದ ಸಂಭ್ರಮವೆಲ್ಲ ಮಾಯವಾಗಿ, ಹಿಂದು-ಮುಸ್ಲಿಂ ಗಲಭೆಗೆ ಕಾರಣವಾಗಬಹುದೇ ಎಂಬ ಆತಂಕದ ವಾತಾವರಣ ನಿರ್ಮಾಣವಾಯಿತು. ಘಟನೆಗೆ ಸಾಕ್ಷಿಯಾಗಿ ನೂರಾರು ಜನರಿದ್ದರೂ, ಯಾರಿಗೂ ಕೇಳದ ‘ಪಾಕಿಸ್ತಾನ್ ಜಿಂದಾಬಾದ್’ ಕೆಲ ಸುದ್ದಿ ಮಾಧ್ಯಮಗಳ ವರದಿಗಾರರಿಗೆ ಕೇಳಿದ್ದು, ಅದು ಸುದ್ದಿಯಾಗಿದ್ದು, ಕಾಡ್ಗಿಚ್ಚಿನಂತೆ ಹಬ್ಬಿದ್ದು ಹೇಗೆ ಎನ್ನುವ ಬಗ್ಗೆ ಯಾರೂ ಯೋಚಿಸಲಿಲ್ಲ.
ಬದಲಿಗೆ ಸರ್ಕಾರ, ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕುರಿತ ಧ್ವನಿ ಪರೀಕ್ಷೆ ಪರಿಶೀಲನೆಗಾಗಿ ಎಫ್ಎಸ್ಎಲ್ ಸಂಸ್ಥೆಗೆ ಕ್ಯಾಮರಾ ಫುಟೇಜ್ ರವಾನಿಸಿ ವರದಿ ಕೇಳಿತು. ಘಟನೆ ಜರುಗಿ ನಾಲ್ಕೈದು ದಿನಗಳೇ ಕಳೆದರೂ, ಕಾಂಗ್ರೆಸ್ ಸರ್ಕಾರ ನಿಜ ಸಂಗತಿ ಏನು ಎನ್ನುವುದನ್ನು ನಾಡಿನ ಜನತೆಯ ಮುಂದಿಡದೆ ದಿನದೂಡಿತು. ಪ್ರತಿಪಕ್ಷ ಬಿಜೆಪಿಗೆ, ಬಿಜೆಪಿ ಪರವಿರುವ ಪತ್ರಕರ್ತರಿಗೆ ಇದು ಮತ್ತೊಂದು ಸುಳ್ಳಿಗೆ ಅವಕಾಶ ಕಲ್ಪಿಸಿಕೊಟ್ಟಿತು.
ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿಯ ನಿರ್ದೇಶಕರು, ಇಲ್ಲಿಯವರೆಗೆ ಸರ್ಕಾರಕ್ಕೆ ಅಧಿಕೃತ ವರದಿಯನ್ನೇ ಕೊಟ್ಟಿಲ್ಲ. ಆಗಲೇ ಬಿಜೆಪಿ ನಾಯಕರು, ‘ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲಾಗಿದೆ, ಅದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದೆ’ ಎಂದು ದಾಖಲೆಯ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಬಿಜೆಪಿ ನಾಯಕರ ಸುದ್ದಿಗೇ ಕಾಯುತ್ತಿದ್ದ ಗೋದಿ ಮೀಡಿಯಾದ ಪತ್ರಕರ್ತರು ಯಥಾವತ್ತಾಗಿ ಎತ್ತಿಕೊಂಡು, ಸರ್ಕಾರವನ್ನು ಶೂಲಕ್ಕೇರಿಸಿದರು.
ಅಸಲಿಗೆ ಆ ಎಫ್ಎಸ್ಎಲ್ ವರದಿ ‘ಕ್ಲೂ4 ಎವಿಡೆನ್ಸ್’ ಎಂಬ ಖಾಸಗಿ ತನಿಖಾ ಸಂಸ್ಥೆಯದ್ದು. ಆ ವರದಿಯನ್ನು ‘ಸಂವಾದ ಫೌಂಡೇಷನ್’ ಎಂಬ ಮತ್ತೊಂದು ಖಾಸಗಿ ಸಂಸ್ಥೆ ಮಾಡಿಸಿದ್ದು. ಆ ವರದಿಯಲ್ಲಿಯೂ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ.
ವರದಿ ಮಾಡಿಸಿರುವ ಸಂವಾದ ಸಂಸ್ಥೆ, ಸಂಘಪರಿವಾರದ ಕಂಕುಳ ಕೂಸು. ಹಿಂದುತ್ವ ಸಾರುತ್ತಲೇ ಮುಸ್ಲಿಂ ದ್ವೇಷವನ್ನು ನಾಜೂಕಾಗಿ ಬಿತ್ತುವ ಸಂಸ್ಥೆ. ಕ್ಲೂ4 ಎವಿಡೆನ್ಸ್ ಸಂಸ್ಥೆಯ ಮಾಲೀಕ ಬಿ.ಎನ್. ಫಣೀಂದ್ರ ಕೂಡ ಹಿಂದುತ್ವ ಪರ ಒಲವುಳ್ಳ, ಅಂಥದ್ದೇ ಹಲವಾರು ಪೋಸ್ಟ್ ಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ವ್ಯಕ್ತಿ. ಇವರಿಬ್ಬರ ಸುಳ್ಳು ಎಫ್ಎಸ್ಎಲ್ ವರದಿಯನ್ನು ಸರ್ಕಾರದ ಅಧಿಕೃತ ವರದಿ ಎಂದು ಎದೆಯುಬ್ಬಿಸಿ ಹೇಳಿದ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಿಜೆಪಿ ನಾಯಕರಿಗೆ ಬೇಕಾಗಿರುವುದು ಏನು? ಬಿಜೆಪಿಗರ ಸುಳ್ಳನ್ನು ಸತ್ಯವೆಂದು ಸಾರಿದ ಪತ್ರಕರ್ತರಿಗೆ ಸಿಕ್ಕಿದ್ದು ಏನು? ಸುಳ್ಳನ್ನು ಸುಲಭವಾಗಿ ನಂಬುವ ಜನರಿಂದ ಆಗುವ ಪರಿಣಾಮವೇನು?
ದೇಶ ವಿಭಜನೆಯಾಗಿ 75 ವರ್ಷ ಕಳೆದರೂ, ಮುಸ್ಲಿಮೇತರ ಸಮುದಾಯಕ್ಕೆ ಸೇರಿದ ಬಹುತೇಕರ ರಕ್ತದಲ್ಲಿ ಮುಸ್ಲಿಂ ದ್ವೇಷ ಅಂತರ್ಗತವಾಗಿ ಹರಿಯುತ್ತಲೇ ಇದೆ. ಹಲವಾರು ನಾಯಕರ ತ್ಯಾಗ-ಬಲಿದಾನದಿಂದ ಬಡತನ, ಹಸಿವು, ಅವಮಾನಗಳನ್ನು ಕಳಚಿಕೊಂಡ ದೇಶ ಭರವಸೆಯ ಬದುಕಿನತ್ತ; ಅಭಿವೃದ್ಧಿಯತ್ತ ಹೆಜ್ಜೆ ಹಾಕತೊಡಗಿತ್ತು. ಮುಸ್ಲಿಂ ದ್ವೇಷ ಹಿನ್ನೆಲೆಗೆ ಸರಿದಿತ್ತು. ಸೌಹಾರ್ದ, ಸಹಬಾಳ್ವೆ ಮುನ್ನೆಲೆಗೆ ಬಂದಿತ್ತು. ಬಹುತ್ವ ಭಾರತದ ಬೆಳಕಾಗಿತ್ತು.
ಆದರೆ, 1990ರಲ್ಲಿ ಬಾಬರಿ ಮಸೀದಿ ಬೀಳಿಸುವ ಮೂಲಕ ಮುಸ್ಲಿಮೇತರ ಸಮುದಾಯಕ್ಕೆ ಸೇರಿದ ಬಹುತೇಕರ ರಕ್ತದಲ್ಲಿ ಹರಿಯುತ್ತಿದ್ದ ಮುಸ್ಲಿಂ ದ್ವೇಷವನ್ನು ಬಡಿದೆಬ್ಬಿಸಲಾಯಿತು. ಅದಕ್ಕೆ ಬೇಕಾದ ಹತಾರಗಳನ್ನು ಬಳಸಿ, ಅನುಮಾನ ಬಿತ್ತಲಾಯಿತು. ದ್ವೇಷಾಸೂಯೆ ಕೆರಳುವಂತೆ ಮಾಡಲಾಯಿತು. ಇದರ ಫಲವಾಗಿ 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಿತು. ಆ ನಂತರ ಬಿಜೆಪಿಯ ವರಸೆಯೇ ಬದಲಾಯಿತು. ಮೋದಿಯವರ ಮಾತಿಗೆ, ಮೋಡಿಗೆ ದೇಶವೇ ಮರುಳಾಗುವಂತಹ ಸುಳ್ಳಿನ ಸಾಮ್ರಾಜ್ಯ ಸೃಷ್ಟಿಸಲಾಯಿತು. ಅದರಲ್ಲಿ ಹೆಚ್ಚಿನ ಪಾಲು ಸುದ್ದಿ ಮಾಧ್ಯಮಗಳಿಗೇ ಸಲ್ಲುತ್ತದೆ.
ಸದ್ಯಕ್ಕೆ ಸುದ್ದಿ ಮಾಧ್ಯಮಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ, ನಿಜ. ವೃತ್ತಿಪರತೆ, ನೈತಿಕತೆ ಮರೆಯಾಗಿದೆ, ನಿಜ. ಪ್ರಭುತ್ವವನ್ನು ಪ್ರಶ್ನಿಸುವ, ಜನರ ಪರವಾಗಿ ನಿಲ್ಲುವವರ ಸಂಖ್ಯೆ ಕ್ಷೀಣವಾಗಿದೆ, ಅದೂ ನಿಜ. ಆದರೆ, ಈ ಮಟ್ಟದಲ್ಲಿ, ಸಾರಾಸಗಟಾಗಿ ಒಂದು ಪಕ್ಷದ ಪರವಾಗಿ ವಕ್ತಾರಿಕೆ ವಹಿಸಿಕೊಳ್ಳುವಷ್ಟು, ಸುದ್ದಿಗಳನ್ನು ತಿರುಚುವಷ್ಟು, ಸುಳ್ಳು ಸುದ್ದಿಗಳನ್ನೇ ಸತ್ಯವೆಂದು ಸಾರುವಷ್ಟು ಭಂಡಧೈರ್ಯ ಬಂದಿರಲಿಲ್ಲ.
ಆ ಭಂಡಧೈರ್ಯ ಬಂದದ್ದು ಸಂಘ ಪರಿವಾರದ ಸಹಕಾರದಿಂದ; ಬಿಜೆಪಿಗೆ ಸಿಕ್ಕ ಅಧಿಕಾರದಿಂದ; ಅಧಿಕಾರದಿಂದ ಹರಿದ ಹಣದ ಹೊಳೆಯಿಂದ.
ಅಧಿಕಾರದ ರುಚಿ ಕಂಡಿರುವ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ. ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಇಂತಹ ಸಮಯದಲ್ಲಿ ಸಣ್ಣ ಸಂಗತಿಯೂ ದೊಡ್ಡ ಅವಕಾಶವನ್ನು ಕಲ್ಪಿಸಿಕೊಡಬಲ್ಲದು ಎಂಬುದನ್ನು ಹಿಂದಿನ ಹಲವಾರು ಘಟನೆಗಳೇ ಸಾಬೀತು ಮಾಡಿವೆ. ಮುಸ್ಲಿಂ ದ್ವೇಷವನ್ನು ಹೆಚ್ಚು ಮಾಡುವ, ಸುಳ್ಳು ಸೃಷ್ಟಿಸಿ ಬೆಂಕಿ ಹಚ್ಚುವ, ಜನರ ನೆಮ್ಮದಿಯ ಬದುಕಿಗೆ ಭಂಗ ತರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜೊತೆಗೆ ದೇಶದ ಜನತೆಯ ಮುಸ್ಲಿಂ ಮಾನಸಿಕತೆಯೂ ಸುಳ್ಳರ ನೆರವಿಗೆ ನಿಂತಿದೆ. ಪ್ರತಿರೋಧ ಒಡ್ಡಬೇಕಾದ ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದೆ. ಹಾಗಾಗಿ ಮಾನವಂತರು ಮುಂದೆ ಬರಬೇಕಿದೆ, ದೇಶವನ್ನು ಉಳಿಸಿಕೊಳ್ಳಬೇಕಿದೆ.
