ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಪ್ರಜ್ಞಾವಂತರು ಸಿದ್ದಪಡಿಸಿರುವ ವೇದಿಕೆಗೆ ಬಂದು ಮುಕ್ತ ಮನಸ್ಸಿನಿಂದ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ವಾದವನ್ನು ಮಂಡಿಸಬೇಕು. ಇಲ್ಲವಾದರೆ ತಮ್ಮ ಹೇಳಿಕೆ ಸುಳ್ಳಿನ ಕಂತೆ ಎಂದು ರಾಜ್ಯದ ಜನ ನಿರ್ಧರಿಸುತ್ತಾರೆ
ಒಂದು ಕಡೆ ಕರ್ನಾಟಕಕ್ಕೆ ಜಿಎಸ್‌ಟಿ ತೆರಿಗೆ ಪಾಲು ಬಾಕಿ ಕೊಡುವುದಕ್ಕೆ ಏನೇನೂ ಉಳಿಸಿಲ್ಲ. ಎಲ್ಲ ಕೊಟ್ಟಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಲೇ ಇದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ ಸಹಿತ ವಿಧಾನಸಭೆ ಅಧಿವೇಶನ, ಪ್ರೆಸ್‌ಮೀಟ್, ಪ್ರಚಾರಸಭೆ ಹೀಗೆ ಎಲ್ಲೆಂದರಲ್ಲಿ ಹೇಳುತ್ತಲೇ ಬಂದಿದ್ದಾರೆ. ರಾಜ್ಯದ ಜನ ಗೊಂದಲಕ್ಕೆ ಬಿದ್ದಿದ್ದಾರೆ. ಅದಕ್ಕೊಂದು ಅಂತ್ಯ ಹಾಡಲೇಬೇಕಿದೆ. ಯಾರ ವಾದ ಸರಿ ಎಂಬುದು ತಿಳಿಯುವ ಹಕ್ಕು ಈ ರಾಜ್ಯದ ಜನರಿಗೆ ಇದೆ.
ಇತ್ತೀಚೆಗೆ ಕರ್ನಾಟಕಕ್ಕೆ ಬಂದಿದ್ದ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಯಾವುದೇ ತೆರಿಗೆ ಬಾಕಿ ಇಲ್ಲ, ಹಣಕಾಸು ಆಯೋಗ ಅಂತಹ ಯಾವುದೇ ಭರವಸೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಮತ್ತೆ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ಮಧ್ಯೆ ರಾಜ್ಯ ಸರ್ಕಾರ ಹೇಳುತ್ತಿರುವ ಅಂಕಿಅಂಶಗಳ ಬಗ್ಗೆ ಮತ್ತು ಸಚಿವರ ವಾದದ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರುವಂತೆ ನಾಗರಿಕ ವೇದಿಕೆ ನಿರ್ಮಲಾ ಸೀತಾರಾಮನ್ ಮತ್ತು ಕೃಷ್ಣ ಭೈರೇಗೌಡ ಅವರಿಗೆ ಆಹ್ವಾನ ನೀಡಿದೆ.
ಬೆಂಗಳೂರಿನಲ್ಲಿ ಗಾಂಧಿಭವನದಲ್ಲಿ ಶನಿವಾರ(ಏ.6) ಸಂಜೆ 5.30ಕ್ಕೆ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧಗೊಂಡಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡರು ಸಂವಾದದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ನಿರ್ಮಲಾ ಸೀತಾರಾಮನ್ ಬರುವುದನ್ನು ಇನ್ನೂ ಖಾತ್ರಿಪಡಿಸಿಲ್ಲ. ರಾಜ್ಯದಿಂದ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿರುವ ಸಚಿವೆಗೆ ಜನರ ಗೊಂದಲ ನಿವಾರಿಸುವ ಜವಾಬ್ದಾರಿ ಇದೆ.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಿತ ಕಾಯುವುದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಚುನಾವಣೆಯಲ್ಲಿ ಗೆದ್ದು ದೇಶದ ಚುಕ್ಕಾಣಿ ಹಿಡಿದ ಮೇಲೆ ಎಲ್ಲ ರಾಜ್ಯಗಳನ್ನೂ ಸಮಾನವಾಗಿ ನೋಡಬೇಕು. ಎಲ್ಲ ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವುದು ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ವಿಪರೀತ ರಾಜಕೀಯ ತಂತ್ರಗಾರಿಕೆಯ ಪರಿಣಾಮ ತಮ್ಮ ಪಕ್ಷದ ಸರ್ಕಾರ ಇದ್ದ ರಾಜ್ಯಗಳಿಗೆ ಹೆಚ್ಚು ರಕ್ಷಣೆ ಕೊಡುವುದು, ಬೇರೆ ಪಕ್ಷಗಳ ಸರ್ಕಾರ ಇದ್ದ ರಾಜ್ಯಗಳನ್ನು ನಿರ್ಲಕ್ಷ್ಯ ಮಾಡುವುದು, ಯೋಜನೆಗಳಿಗೆ ಅನುಮತಿ ಕೊಡದಿರುವುದು, ಜಿಎಸ್‌ಟಿ ಪಾಲು ಕೊಡದಿರುವುದು ಮುಂತಾದ ಜನದ್ರೋಹದ ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಮೋದಿಯವರಿಗೆ ಮತ ಹಾಕಿದ ಜನರ ಯೋಗಕ್ಷೇಮಕ್ಕಿಂತ ಎಲ್ಲ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಖ್ಯವಾಗಿದೆ.
ಕಳೆದ ವಾರ ಚನ್ನಪಟ್ಟಣದ ಚುನಾವಣಾ ಸಭೆಯಲ್ಲಿ ಭಾಗವಹಿಸಿದ್ದ ಗೃಹಸಚಿವ ಅಮಿತ್ ಶಾ ಹಸಿಹಸಿ ಸುಳ್ಳು ಹೇಳಿ ಹೋಗಿದ್ದಾರೆ. ರಾಜ್ಯಸರ್ಕಾರ ಮೂರು ತಿಂಗಳು ತಡವಾಗಿ ಬರ ಪರಿಹಾರಕ್ಕೆ ಮನವಿ ಮಾಡಿದೆ. ಹಾಗಾಗಿ ಪರಿಹಾರ ಬಿಡುಗಡೆ ಮಾಡಲು ಚುನಾವಣಾ ನೀತಿಸಂಹಿತೆ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ. ಎಲ್ಲ ಕಷ್ಟಕ್ಕೂ ಕಾಂಗ್ರೆಸ್ ಕಾರಣ, ರಾಜ್ಯ ಸರ್ಕಾರವೇ ಕಾರಣ ಎಂದು ದೂರುವ ಚಾಳಿ ಮುಂದುವರಿದಿದೆ.
ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಕಳೆದ ಅಕ್ಟೋಬರ್‌ನಲ್ಲಿಯೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಮೂರು ಬಾರಿ ಪತ್ರ ಬರೆದಿತ್ತು. ಕೇಂದ್ರದಿಂದ ಬರ ಅಧ್ಯಯನ ತಂಡವೂ ಬಂದಿತ್ತು. ಬರ ಪರಿಸ್ಥಿತಿಯ ಬಗ್ಗೆ ಸಿಎಂ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡ ಖುದ್ದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಸಭೆ ಕರೆಯುವುದಾಗಿ ಭರವಸೆ ಕೊಟ್ಟ ಅಮಿತ್ ಶಾ ಅವರು ಬರ ಪರಿಹಾರ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು ಇದುವರೆಗೆ ಒಂದೇ ಒಂದು ಸಭೆ ನಡೆಸಲಿಲ್ಲ. ಪರಿಹಾರವನ್ನೂ ನೀಡಿಲ್ಲ. ಈಗ ಮತ ಕೇಳಲು ಬಂದು ಸುಳ್ಳು ಹೇಳಿ ಹೋಗಿದ್ದಾರೆ. ಇವರ ಈ ಆಷಾಢಭೂತಿತನವನ್ನು ರಾಜ್ಯದ ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ.
ಒಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿದೆ ಯಾವುದೇ ಯೋಜನೆ, ಅನುದಾನ, ಪರಿಹಾರದ ಕುರಿತು ಮಾತುಕತೆ ನಡೆಸಿದರೂ ಅದಕ್ಕೊಂದು ದಾಖಲೆ ಇರುತ್ತದೆ. ಸರ್ಕಾರ ಅದರ ಬಗ್ಗೆ ಹೆಜ್ಜೆ ಹೆಜ್ಜೆಗೂ ಮಾಧ್ಯಮಗಳಿಗೆ ಮಾಹಿತಿ ಕೊಡುತ್ತದೆ. ಅಷ್ಟೇ ಅಲ್ಲ ರಾಜ್ಯದ ಜನರಿಗೆ ವಿರೋಧಪಕ್ಷದವರಿಗೆ ಎಲ್ಲರಿಗೂ ಗೊತ್ತಿರುತ್ತದೆ. ಆದರೂ ಒಂದು ಒಕ್ಕೂಟ ಸರ್ಕಾರದ ಪ್ರತಿನಿಧಿಗಳು ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಿದ್ದಾರೆ ಅಂದರೆ ಅವರ ಭಂಡತನ ಹದ್ದು ಮೀರಿದ್ದು. ಅದಕ್ಕೆ ಸರಿಯಾಗಿ ರಾಜ್ಯದ ಬಿಜೆಪಿ ಸಂಸದರು, ಶಾಸಕರು, ಮಾಜಿಗಳು ಎಲ್ಲರೂ ಸೇರಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸುವುದು ಬಿಟ್ಟು ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಾ ಗ್ಯಾರಂಟಿಗಳನ್ನು ಗೇಲಿ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಥವಾ ಸಿದ್ದರಾಮಯ್ಯ ಅವರು ಮೋದಿ ಸರ್ಕಾರದಿಂದ ಕೇಳುತ್ತಿರುವುದು ಕೇವಲ ಒಂದು ವರ್ಷದ ಬಾಕಿ ಅಲ್ಲ. ರಾಜ್ಯ- ಕೇಂದ್ರ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ನಾಲ್ಕು ವರ್ಷದಲ್ಲಿ ಜಿಎಸ್‌ಟಿ ಬಾಕಿ, ನೆರೆ ಪರಿಹಾರವನ್ನು ಕೊಟ್ಟಿಲ್ಲ. ಆಗ ಇದ್ದ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ, ಬೊಮ್ಮಾಯಿ, ಕಂದಾಯ ಸಚಿವರು ರಾಜ್ಯದ ಪರ ಕೆಲಸ ಮಾಡಿಲ್ಲ. ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇದ್ದಾಗಲೂ, ತಮ್ಮದೇ ಪಕ್ಷದ 25, ಮೈತ್ರಿಪಕ್ಷ ಜೆಡಿಎಸ್‌ನ ಒಬ್ಬ ಸಂಸದರಿದ್ದಾಗಲೂ ಅನುದಾನ ತಂದಿಲ್ಲ. ನ್ಯಾಯವಾಗಿ ಬರಬೇಕಿರುವ ಅನುದಾನವನ್ನು ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದು ಬಿಟ್ಟು ರಾಜ್ಯದ ಹಿತಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿರುವುದು ರಾಜ್ಯಕ್ಕೆ ಸಾಮೂಹಿಕವಾಗಿ ದ್ರೋಹ ಮಾಡುತ್ತಿದ್ದಾರೆ. ತಾವು ಅಧಿಕಾರದಲ್ಲಿ ಇದ್ದಾಗಲೂ ಕೇಂದ್ರದಿಂದ ಬರಬೇಕಿರುವ ಪಾಲನ್ನು ಕೇಳಿಲ್ಲ, ಈಗ ಕಾಂಗ್ರೆಸ್ ಸರ್ಕಾರ ಕೇಳಲು ಹೋದರೆ ಅದಕ್ಕೂ ಬೆಂಬಲ ಕೊಡುತ್ತಿಲ್ಲ. ಒಟ್ಟಿನಲ್ಲಿ ತಮಗೆ ರಾಜ್ಯದ ಹಿತ ಮುಖ್ಯ ಅಲ್ಲ ಎಂಬುದನ್ನು ರಾಜ್ಯ ಬಿಜೆಪಿ ನಾಯಕರು ಸಾಬೀತುಪಡಿಸುತ್ತಿದ್ದಾರೆ. ನಮ್ಮ ರಾಜ್ಯದ ಬಗ್ಗೆ ಕೇಂದ್ರದವರು ಹೇಳುವ ಸುಳ್ಳನ್ನು ಸಮರ್ಥಿಸಲು ನಮ್ಮಲ್ಲೇ ಎರಡು ವಿಪಕ್ಷಗಳು ಇವೆ.
ನರೇಂದ್ರ ಮೋದಿ ಅವರು ಚುನಾವಣೆಯ ಸಮಯದಲ್ಲಿ ರಾಜ್ಯಕ್ಕೆ ಬಂದು ಗಲ್ಲಿಗಲ್ಲಿಗಳಲ್ಲಿ ಸುತ್ತಾಡಿ ಮತ ಯಾಚನೆ ಮಾಡುತ್ತಾರೆ. ಆದರೆ, ರಾಜ್ಯಕ್ಕೆ ಕೊಡಬೇಕಿರುವ ಜಿಎಸ್‌ಟಿ ತೆರಿಗೆ ಪಾಲು ಕೊಟ್ಟರೆ ಅವರು ಗಲ್ಲಿ ಸುತ್ತುವ ಅಗತ್ಯವೇ ಬರುವುದಿಲ್ಲ. ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಕಾಂಗ್ರೆಸ್ ಸರ್ಕಾರ ಕೇಂದ್ರದ ಅನುಮತಿ ಕೋರಿದೆ. ಮೋದಿ ಸರ್ಕಾರ ಅನುಮತಿ ಕೊಟ್ಟಿಲ್ಲ. ಆದರೆ ರಾಜ್ಯದ ಬಿಜೆಪಿ ನಾಯಕರು ಮೇಕೆದಾಟು ಯೋಜನೆ ಯಾಕೆ ಶುರು ಮಾಡಿಲ್ಲ ಅಂತ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ಈಗ ಮೇಕೆದಾಟು ಯೋಜನೆಯನ್ನು ಮರೆತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯ, ಸಚಿವರ ಸುಳ್ಳುಗಳನ್ನು ಬಹಿರಂಗಪಡಿಸವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರಜ್ಞಾವಂತರು ಬಹಿರಂಗ ಚರ್ಚೆಗೆ ವೇದಿಕೆ ಸಿದ್ದಪಡಿಸಿರುವುದು ಸರಿಯಾದ ಕ್ರಮ. ನಿರ್ಮಲಾ ಸೀತಾರಾಮನ್ ಅವರು ಮುಕ್ತಮನಸ್ಸಿನಿಂದ ಬಂದು ಚರ್ಚೆಯಲ್ಲಿ ತಮ್ಮ ವಾದವನ್ನು ಮಂಡಿಸಬೇಕು. ಇಲ್ಲವಾದರೆ ತಮ್ಮ ಹೇಳಿಕೆ ಸುಳ್ಳಿನ ಕಂತೆ ಎಂದು ರಾಜ್ಯದ ಜನ ನಿರ್ಧರಿಸುತ್ತಾರೆ.
