ಈ ದಿನ ಸಂಪಾದಕೀಯ | RSS ನಿಷೇಧ ತೆರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆಯೇ?

Date:

Advertisements
ಕೋಮು ಸಂಘಟನೆಯಾದ RSS ನಿಷೇಧ ತೆರವು ಗೊಳಿಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರ. ಆರ್‍ಎಸ್ಎಸ್ ದೇಶದ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ದೇಶದಲ್ಲಿರುವ ಎಲ್ಲಾ ಧರ್ಮಗಳನ್ನು ಗೌರವಿಸುವುದಿಲ್ಲ. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಅಂಗೀಕರಿಸುವುದಿಲ್ಲ… 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದು ಮತ್ತು ಸದಸ್ಯತ್ವ ಪಡೆಯುವುದಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ವಾಪಸ್​ ಪಡೆದಿದೆ. ಈ ಸಂಬಂಧ ಸರ್ಕಾರ ಜುಲೈ 9ರಂದೇ ಹೊರಡಿಸಿದ್ದ ಜ್ಞಾಪನಾ ಪತ್ರವನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ಸಾಮಾಜಿಕ ಜಾಲತಾಣವಾದ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ’58 ವರ್ಷಗಳ ಹಿಂದೆ ಅಸಂವಿಧಾನಿಕವಾಗಿ ಹೊರಡಿಸಲಾಗಿದ್ದ ಆದೇಶವನ್ನು ಈ ಮೂಲಕ ತೆರವುಗೊಳಿಸಲಾಗಿದೆ’ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಸರ್ಕಾರಿ ನೌಕರರು ಆರ್‍ಎಸ್ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಕೇಂದ್ರ ಹೇಳಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ವಾಗತಿಸಿದೆ.

58 ವರ್ಷಗಳ ಹಿಂದೆ, 1966ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಮಾಜಕ್ಕೆ ಕಂಟಕಪ್ರಾಯವಾಗಿದ್ದ ಆರ್‍ಎಸ್ಎಸ್ ಜೊತೆಗೆ ಜಮಾತ್-ಎ-ಇಸ್ಲಾಮಿ ಸಂಘಟನೆಯನ್ನೂ ನಿಷೇಧಿಸಲಾಗಿತ್ತು. ಈಗ ಕೇಂದ್ರದ ಎನ್‌ಡಿಎ ಸರ್ಕಾರ ಆರ್‍ಎಸ್ಎಸ್ ಮೇಲಿದ್ದ ನಿಷೇಧವನ್ನಷ್ಟೇ ತೆರವುಗೊಳಿಸಿ, ಜಮಾತ್-ಎ-ಇಸ್ಲಾಮಿ ಸಂಘಟನೆಯ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Advertisements

ಉತ್ತರ ಪ್ರದೇಶದ ಬಿಎಸ್ಪಿ ನಾಯಕಿ ಮಾಯಾವತಿಯವರು, ‘ಸಾರ್ವಜನಿಕ ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ನಿಷ್ಪಕ್ಷಪಾತವಾಗಿ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರಿ ನೌಕರರು ಕೆಲಸ ಮಾಡುವುದು ಅತ್ಯಗತ್ಯ. ನಿಷೇಧವನ್ನು ತೆಗೆದುಹಾಕುವ ಕೇಂದ್ರದ ನಿರ್ಧಾರವು ರಾಷ್ಟ್ರೀಯ ಹಿತಾಸಕ್ತಿಗಳನ್ನು ಪೂರೈಸುವ ಬದಲು ಆರ್‌ಎಸ್‌ಎಸ್ ಅನ್ನು ಸಮಾಧಾನಪಡಿಸುವ ರಾಜಕೀಯ ಪ್ರೇರಿತ ಕ್ರಮವಾಗಿದೆ’ ಎಂದಿದ್ದಾರೆ.

‘2024ರಲ್ಲಿ ಜೂನ್ 4ರ ನಂತರ ಸ್ವಯಂ ಶೈಲಿಯ ಜೈವಿಕವಲ್ಲದ ಪ್ರಧಾನ ಮಂತ್ರಿ ಮತ್ತು ಆರ್‌ಎಸ್‌ಎಸ್‌ ನಡುವಿನ ಸಂಬಂಧಗಳು ಹದಗೆಟ್ಟವು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಜಾರಿಯಲ್ಲಿದ್ದ ಆರ್‍ಎಸ್ಎಸ್ ನಿಷೇಧವನ್ನು 58 ವರ್ಷಗಳ ನಂತರ ತೆಗೆದುಹಾಕಲಾಗಿದೆ. ನೌಕರರು ಈಗ ಚಡ್ಡಿಯಲ್ಲಿಯೂ ಬರಬಹುದು’ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ವ್ಯಂಗ್ಯವಾಡಿದ್ದಾರೆ.

‘ಆರ್‍ಎಸ್ಎಸ್ ಸಂಘಟನೆ ಯಾವತ್ತಿಗೂ ನಮ್ಮ ದೇಶದ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ದೇಶದಲ್ಲಿರುವ ಎಲ್ಲಾ ಧರ್ಮಗಳನ್ನು ಗೌರವಿಸುವುದಿಲ್ಲ. ಎಲ್ಲಾ ಧರ್ಮದ ಪ್ರಜೆಗಳನ್ನು ಸಮಾನತೆಯಿಂದ ನೋಡುವುದಿಲ್ಲ. ಇದು ಆರ್‍ಎಸ್ಎಸ್ ಸಿದ್ದಾಂತ. ಇಂತಹ ಕೋಮು ಸಂಘಟನೆಯ ಮೇಲಿದ್ದ ನಿಷೇಧ ತೆರವುಗೊಳಿಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರ’ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಟೀಕಿಸಿದ್ದಾರೆ.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಪರ-ವಿರೋಧ ಒತ್ತಟ್ಟಿಗಿರಲಿ. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಬಹುಮತವಿದ್ದಾಗ ನಿಷೇಧ ತೆರವು ಮಾಡಲು ಧೈರ್ಯ ತೋರದೆ, 28 ಪಕ್ಷಗಳನ್ನು ಒಳಗೊಂಡ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಸರ್ಕಾರವಿರುವ ಈಗ ಮಾಡಿದ್ದೇಕೆ? ಆರ್‍ಎಸ್ಎಸ್ ನಿಷೇಧ ತೆರವು ವಿಚಾರ, ಈ ಒಕ್ಕೂಟದಲ್ಲಿರುವ ಪಕ್ಷಗಳ ಒಮ್ಮತದ ನಿರ್ಧಾರವೇ ಅಥವಾ ಬಿಜೆಪಿ – ಪ್ರಧಾನಿ ಮೋದಿಯವರ ಏಕಪಕ್ಷೀಯ ತೀರ್ಮಾನವೇ ಎಂಬುದು ಮೊದಲು ಸ್ಪಷ್ಟವಾಗಬೇಕಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರೈತ ಹೋರಾಟವನ್ನು ಹತ್ತಿಕ್ಕುವುದು, ಒಕ್ಕಲೆಬ್ಬಿಸುವುದು ಒಳ್ಳೆಯದಲ್ಲ

ಏಕೆಂದರೆ, ಆರ್‍ಎಸ್ಎಸ್ ನಿಷೇಧ ತೆರವಿಗಿಂತ ಮುಖ್ಯವಾದ ಸಾವಿರಾರು ಸಮಸ್ಯೆಗಳು ಸರ್ಕಾರದ ಮುಂದಿವೆ. ಅದರಲ್ಲೂ ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ನೀಟ್, ಹಣದುಬ್ಬರ, ಬೆಲೆ ಏರಿಕೆಗಳನ್ನು ಪರಿಹರಿಸಬೇಕಾದ ತುರ್ತಿದೆ. ಈ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ನಿಷೇಧವನ್ನು ಮುನ್ನೆಲೆಗೆ ತರಲಾಗಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಅಲ್ಲದೆ, ಆರ್‍ಎಸ್ಎಸ್ ನಾಯಕ ಭಾಗವತ್‌ರೊಂದಿಗಿನ ಅಸಮಾಧಾನವನ್ನು ಶಮನಗೊಳಿಸಲು; ಮುಂದಿನ ವರ್ಷ ಆಚರಿಸಲಿರುವ ಆರ್‍ಎಸ್ಎಸ್ ಶತಮಾನೋತ್ಸವದ ಪೂರ್ವ ತಯಾರಿಯಾಗಿ ನಿಷೇಧವನ್ನು ತೆರವುಗೊಳಿಸಲಾಗಿದೆಯೇ ಎಂಬ ಅನುಮಾನವೂ ಮೂಡುತ್ತದೆ.

ಆರ್‍ಎಸ್ಎಸ್ ಸದಸ್ಯ ನಾಥೂರಾಂ ಗೋಡ್ಸೆ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಂತರ, ಸಂಘದ ಸಮಾಜಘಾತಕ ಚಟುವಟಿಕೆಗಳ ಮೇಲಿನ ಕಳವಳದಿಂದಾಗಿ ಆರ್‍ಎಸ್ಎಸ್ ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಯಿತು. 1948ರ ಫೆಬ್ರುವರಿಯಲ್ಲಿ ಗಾಂಧಿ ಹತ್ಯೆಯ ನಂತರ ಸರ್ದಾರ್ ವಲ್ಲಭಾಯ್ ಪಟೇಲ್ ಅವರು ಆರ್‍ಎಸ್ಎಸ್ ಅನ್ನು ನಿಷೇಧಿಸಿದ್ದರು.

ಇಂತಹ ನಿಷೇಧಿತ ಸಂಘಟನೆಯನ್ನು ಸರ್ಕಾರಿ ನೌಕರರು ಸೇರುವುದು ಎಷ್ಟು ಸರಿ? ಅಷ್ಟಕ್ಕೂ ಸರ್ಕಾರಿ ನೌಕರರು ಕೆಲಸಕ್ಕೆ ಸೇರುವಾಗ ಸಂವಿಧಾನವೆಂಬ ಪವಿತ್ರ ಗ್ರಂಥದ ಮೇಲೆ ಕೈ ಇಟ್ಟು ಪ್ರಮಾಣವಚನ ಸ್ವೀಕರಿಸುತ್ತಾರೆ. ಆ ಮೂಲಕ ಭಾರತೀಯ ಸೇವಾ ನಿಯಮಕ್ಕೆ ಒಳಪಡುತ್ತಾರೆ.

ಆರ್‍ಎಸ್ಎಸ್ ಎನ್ನುವುದು ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಅಂಗೀಕರಿಸಲು ನಿರಾಕರಿಸುವ ಸಂಘಟನೆ. ಆರ್‌ಎಸ್‌ಎಸ್ ಹಿಂದುತ್ವವನ್ನು ರಾಷ್ಟ್ರದಲ್ಲಿ ಜಾರಿ ಮಾಡುವ ಪ್ರತಿಜ್ಞೆ ಮಾಡುತ್ತದೆ. ಅನ್ಯ ಧರ್ಮದ ಜನರನ್ನು ಪ್ರತ್ಯೇಕಿಸಿ ನೋಡುತ್ತದೆ. ಸಮಾಜದಲ್ಲಿ ದ್ವೇಷಾಸೂಯೆ ಹುಟ್ಟುಹಾಕುತ್ತದೆ. ಸಹಬಾಳ್ವೆ, ಸೌಹಾರ್ದಯುತ ಬದುಕಿಗೆ ಧಕ್ಕೆ ತರುತ್ತದೆ. ಬಹುತ್ವವನ್ನು, ಒಕ್ಕೂಟ ವ್ಯವಸ್ಥೆಯನ್ನು ವಿರೋಧಿಸುತ್ತದೆ.

ಹೀಗಿರುವಾಗ ಯಾವುದೇ ನಾಗರಿಕ ಸೇವಕ- ಸರ್ಕಾರಿ ನೌಕರ ಆರ್‌ಎಸ್‌ಎಸ್ ಸದಸ್ಯನಾಗಿದ್ದರೆ ರಾಷ್ಟ್ರಕ್ಕೆ ನಿಷ್ಠನಾಗಿರಲು ಹೇಗೆ ಸಾಧ್ಯ? ನಿಷೇಧ ತೆರವಿನಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎನ್ನುವ ಕೇಂದ್ರ ಸರ್ಕಾರದ ವಾದ ಎಷ್ಟು ಸರಿ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X