ಈ ದಿನ ಸಂಪಾದಕೀಯ | ಅಭಿಮಾನ ಅಂಧಾಭಿಮಾನವಾಗದಿರಲಿ; ಬಡವರ ಮಕ್ಕಳು ಬಲಿಯಾಗದಿರಲಿ

Date:

Advertisements
ರಾಜಕುಮಾರ್ ಅವರಿಗಿದ್ದ ಅಭಿಮಾನಿ ಬಳಗ ಬಹಳ ದೊಡ್ಡದು. ಅದನ್ನು ಅವರು ಕನ್ನಡ ಭಾಷೆ ಹಾಗೂ ಕಲೆ-ಸಂಸ್ಕೃತಿ ಬೆಳವಣಿಗೆಗೆ; ನಾಡಿನ ಒಳಿತಿಗೆ ನಾಜೂಕಾಗಿ ಬಳಸಿಕೊಂಡರು. ಈ ಕಾಲದ ನಟ-ನಟಿಯರು ರಾಜ್ ರ ಉದಾತ್ತ ನಡೆಯತ್ತ ನೋಡಬೇಕಾಗಿದೆ. ಅವರಿಟ್ಟ ಹೆಜ್ಜೆಯಲ್ಲಿ ಮುಂದಡಿ ಇಡಬೇಕಾಗಿದೆ. ಅಭಿಮಾನಿಗಳು ಕೂಡ ಸಿನೆಮಾವನ್ನು ಕೇವಲ ಮನರಂಜನೆ ಎಂದು ಭಾವಿಸಬೇಕಾಗಿದೆ. ನಟ-ನಟಿಯರನ್ನು ಮನುಷ್ಯರೆಂದು ಪರಿಗಣಿಸಬೇಕಾಗಿದೆ. ಈ ಜೀವ-ಜೀವನ ದೊಡ್ಡದು ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ.

ಕನ್ನಡ ಚಿತ್ರರಂಗದ ನಾಯಕ ನಟ ಯಶ್, ಜನವರಿ 8ಕ್ಕೆ, 38ನೇ ವಸಂತಕ್ಕೆ ಕಾಲಿಟ್ಟ ಕ್ಷಣದಲ್ಲಿಯೇ, ದೂರದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಎಂಬ ಪುಟ್ಟ ಹಳ್ಳಿಯ ನಾಲ್ವರು ಯುವಕರ ಪ್ರಾಣಪಕ್ಷಿ ಅಭಿಮಾನದ ಆಕಾಶಕ್ಕೆ ಹಾರಿಹೋಗಿತ್ತು.

ಯಶ್ ಅಭಿಮಾನಿಗಳಾದ ಆ ಗ್ರಾಮದ ಯುವಕರ ಗುಂಪು, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು, ನಟನ ಆಳೆತ್ತರದ ಕಟೌಟ್ ಮಾಡಿಸಿ, ಅದನ್ನು ಗ್ರಾಮದ ಅಂಬೇಡ್ಕರ್ ಸರ್ಕಲ್ ನಲ್ಲಿ ಕಟ್ಟಲು ಮಧ್ಯರಾತ್ರಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಕಟೌಟ್ ಕಟ್ಟುವ ಭರಾಟೆಯಲ್ಲಿ ವಿದ್ಯುತ್ ತಂತಿ ತಗುಲಿ, ಮೂವರು- ಹನಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಸ್ಥಳದಲ್ಲಿಯೇ ಮೃತಪಟ್ಟರು. ಕೆಳಗೆ ಕಟೌಟ್ ಹಿಡಿದುಕೊಂಡಿದ್ದ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬುವವರಿಗೆ ಗಂಭೀರ ಗಾಯಗಳಾಗಿ, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಹುಟ್ಟುಹಬ್ಬದ ಸಂಭ್ರಮದಲ್ಲಿ ಮಿಂದೇಳಬೇಕಾದ ಗ್ರಾಮಕ್ಕೆ ಸಾವಿನ ಸೂತಕ ಸುತ್ತಿಕೊಂಡಿತು.

ವಯಸ್ಸಿಗೆ ಬಂದ ಯುವಕರು, ಮನೆಯ ಜವಾಬ್ದಾರಿ ಹೊತ್ತುಕೊಳ್ಳುವ ವಯಸ್ಸಿನಲ್ಲಿ ಈ ರೀತಿ ಬೀದಿ ಹೆಣವಾಗಿ ಹೋಗುವುದು- ಹೋದವರಿಗಲ್ಲ, ಇದ್ದವರಿಗೆ ಭಾರೀ ನೋವು, ಸಂಕಟ ಮತ್ತು ಸಮಸ್ಯೆಯನ್ನು ತಂದೊಡ್ಡುತ್ತದೆ. ಮನೆಯ ಮಾಳಿಗೆಯೇ ಕುಸಿದು ಬಿದ್ದಂತಾಗುತ್ತದೆ. ಅದರಲ್ಲೂ ಅವರು ಬಡವರಾದರೆ, ಆ ಮನೆಯ ಸ್ಥಿತಿಯನ್ನು ಊಹಿಸಿಕೊಳ್ಳುವುದೂ ಕಷ್ಟವಾಗುತ್ತದೆ.

Advertisements

ಸಿನೆಮಾ ಎಂಬುದು ಮಾಯಾಲೋಕ, ಅಮಲಿನ ಲೋಕ. ಅದು ಎಲ್ಲ ಕಾಲಕ್ಕೂ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದು ಮೈ ಮರೆಸುತ್ತದೆ.  ಅದರಲ್ಲೂ ಮೊಲೆ-ಮೀಸೆ ಮೂಡುತ್ತಿದ್ದ ವಯಸ್ಸಿನಲ್ಲಿ ನಟ-ನಟಿಯರ ಬಗೆಗಿನ ಅಭಿಮಾನ ಅತಿರೇಕಕ್ಕೆ ಹೋಗುತ್ತದೆ. ಹುಚ್ಚು ವ್ಯಸನವಾಗಿ ಪರಾಕಾಷ್ಠೆ ಮುಟ್ಟುತ್ತದೆ. ಇಂತಹ ಸ್ಥಿತಿಯಲ್ಲಿದ್ದ ನಮ್ಮ ಸೂರಣಗಿಯ ಯುವಕರು, ಮನೆಯ ಆರ್ಥಿಕ ಸ್ಥಿತಿಯನ್ನು ಸೈಡಿಗೆ ಸರಿಸಿ, ನಟನ ಮೇಲಿನ ಅಪ್ಪಟ ಅಭಿಮಾನವನ್ನು ಅಟ್ಟಕ್ಕೇರಿಸಿ ಸಂಭ್ರಮಿಸುವ ಹೊತ್ತಿನಲ್ಲಿಯೇ ಉರಿದುಹೋಗಿದ್ದಾರೆ.

ಈ ಯುವಕರ ಮನೆಯ ಸ್ಥಿತಿಗತಿ ಅವಲೋಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಲಾ ಎರಡು ಲಕ್ಷ ಪರಿಹಾರ ಘೋಷಿಸಿದ್ದಾರೆ. ಆದರೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ‘ಎರಡು ಲಕ್ಷ ಯಾವುದಕ್ಕೂ ಸಾಲುವುದಿಲ್ಲ, ದುಡಿಯುವ ಮಕ್ಕಳು ಮೃತರಾಗಿರುವುದರಿಂದ ಕುಟುಂಬ ನಿರ್ವಹಣೆಗೆ ಕಷ್ಟವಾಗಲಿದೆ. ಹೀಗಾಗಿ ಮೃತರ ಕುಟುಂಬಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಎರಡು ಎಕರೆ ಜಮೀನು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಹಾಗೆಯೇ ಸುದ್ದಿ ತಿಳಿದ ತಕ್ಷಣ ನಟ ಯಶ್, ಸೂರಣಗಿಗೆ ಬಂದು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲ, ‘ನನ್ನ ಬರ್ತ್​ಡೇಯಿಂದ ಯಾರಿಗೂ ತೊಂದರೆ ಆಗುವುದು ಬೇಡ. ನನಗೆ ಇವು ಇಷ್ಟ ಆಗಲ್ಲ. ಅಭಿಮಾನ ಇರಲಿ, ಅದು ಅತಿಯಾಗಬಾರದು. ನನಗೆ ಕಟೌಟ್​ ಕಟ್ಟುವುದು, ಬೈಕ್​ ಚೇಸ್ (ಬಿಂಕದಕಟ್ಟಿ ಗ್ರಾಮದ ನಿಖಿಲ್ ಎಂಬ ಮತ್ತೊಬ್ಬ ಯುವಕನ ಸಾವು) ಮಾಡುವುದು ಹಿಡಿಸಲ್ಲ. ನನಗೆ ನೀವು ತೋರಿಸುವ ಅಭಿಮಾನ ಎಂದರೆ ಒಳ್ಳೇ ಕೆಲಸ ಮಾಡುವುದು. ಇನ್ನೊಮ್ಮೆ ಈ ರೀತಿ ಮಾಡಬೇಡಿ. ನಿಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ, ನಮ್ಮ ಬಗ್ಗೆ ಜಾಸ್ತಿ ಚಿಂತೆ ಮಾಡಬೇಡಿ’ ಎಂದಿದ್ದಾರೆ.

ನಟ ಯಶ್ ಕೂಡ, ಬಡ ಕುಟುಂಬದಿಂದ ಕಷ್ಟಪಟ್ಟು ಮೇಲೆ ಬಂದವರು. ಹಸಿವು-ಅವಮಾನಗಳನ್ನು ಅನುಭವಿಸಿದವರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸ್ಟಾರ್ ಆಗಿ ಬೆಳೆದವರು. ಅಂತಹ ಹಿನ್ನೆಲೆಯಿಂದ ಬಂದ ಯಶ್ ಮಾತಿನಲ್ಲಿ ನಿಜಕಾಳಜಿ ಇರಬಹುದು. ಆತನಿಗೆ ಈ ಘಟನೆಯಿಂದ ನಿಜಕ್ಕೂ ನೋವಾಗಿರಬಹುದು. ಆತನ ಬದುಕಿನಲ್ಲಿ ಇದು ಮರೆಯಲಾರದ ಘಟನೆಯಾಗಿ ನೆನಪಿನಲ್ಲಿ ಉಳಿಯಲೂಬಹುದು.

ಆದರೆ ಒಬ್ಬ ನಟ ಅಭಿಮಾನಿಗಳಿರಬೇಕೆಂದು ಬಯಸುವುದು, ಅದನ್ನು ಜನಪ್ರಿಯತೆಯ ಗ್ರಾಫ್ ನಂತೆ ಬಳಸಿಕೊಳ್ಳುವುದು, ಅದನ್ನೇ ‘ಓಡುವ ಕುದುರೆ’ಯ ಮಾರುಕಟ್ಟೆಯಲ್ಲಿ ಬಿಕರಿಗಿಡುವುದು, ಓಡಿದಂತೆಲ್ಲ ಹಣ ಗಳಿಸುವುದು- ಕಾಲದಿಂದ ನಡೆದುಕೊಂಡು ಬಂದ ಕಟುವಾಸ್ತವ.

ನಟ ಕೂಡ ನಮ್ಮಂತೆಯೇ ಮನುಷ್ಯ ಎಂಬುದನ್ನು ಅರಿಯದ ಅಭಿಮಾನಿಗಳು, ಸಿನೆಮಾದ ನಟನೆಯನ್ನು, ಅತಿರಂಜಿತ ವರ್ಣನೆಯನ್ನು, ಅತಿಮಾನುಷ ವ್ಯಕ್ತಿತ್ವವನ್ನು ಮೆಚ್ಚುತ್ತ, ಮೆರೆಸುತ್ತ ಅವರದೇ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಅಭಿಮಾನ ಅಂಧಾಭಿಮಾನವಾಗಿ ಅತಿರೇಕಕ್ಕೆ ಹೋದಾಗ, ಇಂತಹ ಅವಘಡಗಳು ಸಂಭವಿಸುತ್ತವೆ. ಅಮಾಯಕರು ಅಸುನೀಗಿ, ಅವರನ್ನು ಆಶ್ರಯಿಸಿದ ಕುಟುಂಬಗಳನ್ನು ಕಣ್ಣೀರಿನ ಕಡಲಿಗೆ ತಳ್ಳುತ್ತದೆ. ಇದನ್ನು ನಟ-ನಟಿಯರು ಮತ್ತು ಅಭಿಮಾನಿಗಳು ಅರಿತು ಅರಗಿಸಿಕೊಳ್ಳುವುದು- ಇಬ್ಬರಿಗೂ ಒಳ್ಳೆಯದು.

ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ ರಾಜಕುಮಾರ್, ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು. ಬರಿ ಕರೆಯುವುದಲ್ಲ, ಕೈ ಎತ್ತಿ ಮುಗಿಯುತ್ತಿದ್ದರು. ನೀವಿದ್ದರೆ ನಾವು ಎನ್ನುತ್ತಿದ್ದರು. ರಾಜಕುಮಾರ್ ಅವರಿಗಿದ್ದ ಅಭಿಮಾನಿ ಬಳಗ ಬಹಳ ದೊಡ್ಡದು. ಅದನ್ನು ಅವರು ಕನ್ನಡ ಭಾಷೆ ಹಾಗೂ ಕಲೆ-ಸಂಸ್ಕೃತಿ ಬೆಳವಣಿಗೆಗೆ; ನಾಡಿನ ಒಳಿತಿಗೆ ನಾಜೂಕಾಗಿ ಬಳಸಿಕೊಂಡರು.

ಆ ಹಿರಿಯರು ಹಾಕಿಕೊಟ್ಟ ಮೇಲ್ಪಂಕ್ತಿ ನಮ್ಮ ಕಣ್ಣಮುಂದೆಯೇ ಇರುವಾಗ, ಈ ಕಾಲದ ನಟ-ನಟಿಯರು ರಾಜ್ ರ ಉದಾತ್ತ ನಡೆಯತ್ತ ನೋಡಬೇಕಾಗಿದೆ. ಅವರಿಟ್ಟ ಹೆಜ್ಜೆಯಲ್ಲಿ ಮುಂದಡಿ ಇಡಬೇಕಾಗಿದೆ. ಅಭಿಮಾನಿಗಳು ಕೂಡ ಸಿನೆಮಾವನ್ನು ಕೇವಲ ಮನರಂಜನೆ ಎಂದು ಭಾವಿಸಬೇಕಾಗಿದೆ. ನಟ-ನಟಿಯರನ್ನು ಮನುಷ್ಯರೆಂದು ಪರಿಗಣಿಸಬೇಕಾಗಿದೆ. ಈ ಜೀವ-ಜೀವನ ದೊಡ್ಡದು ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X