ʼಗೋವು ತಾಯಿಗೆ ಸಮಾನʼ ಎಂದು ಭಾಷಣ ಬಿಗಿಯುತ್ತಾ ಪ್ರವರ್ಧಮಾನಕ್ಕೆ ಬಂದ ಮೋದಿ, ಮನಮೋಹನ್ ಸಿಂಗ್ ಅವಧಿಯಲ್ಲಿ ಭಾರತ ಗೋಮಾಂಸ ರಫ್ತಿನಲ್ಲಿ ನಂ ವನ್ ಸ್ಥಾನದಲ್ಲಿದೆ ಎಂದು ಗೇಲಿ ಮಾಡಿದ್ದರು. 2014 ಏಪ್ರಿಲ್‌ನಲ್ಲಿ ಬಿಹಾರದ ನವಾದದಲ್ಲಿ ಚುನಾವಣಾ ಭಾಷಣ ಮಾಡುತ್ತಾ, ನರೇಂದ್ರ ಮೋದಿ ಅವರು “ಪಿಂಕ್ ರೆವಲೂಷನ್” ಎಂದು ಜರೆದಿದ್ದರು.
ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಗೋಮಾತೆಯ ಬಾಲ ಹಿಡಿದುಕೊಂಡು. ʼಗೋವು ತಾಯಿಗೆ ಸಮಾನʼ ಎಂದು ಭಾಷಣ ಬಿಗಿಯುತ್ತಾ ಪ್ರವರ್ಧಮಾನಕ್ಕೆ ಬಂದ ಮೋದಿ, ಮನಮೋಹನ್ ಸಿಂಗ್ ಅವಧಿಯಲ್ಲಿ ಭಾರತ ಗೋಮಾಂಸ ರಫ್ತಿನಲ್ಲಿ ನಂ ವನ್ ಸ್ಥಾನದಲ್ಲಿದೆ ಎಂದು ಗೇಲಿ ಮಾಡಿದ್ದರು. 2014 ಏಪ್ರಿಲ್‌ನಲ್ಲಿ ಬಿಹಾರದ ನವಾದದಲ್ಲಿ ಚುನಾವಣಾ ಭಾಷಣ ಮಾಡುತ್ತಾ, ನರೇಂದ್ರ ಮೋದಿ ಅವರು “ಪಿಂಕ್ ರೆವಲೂಷನ್” ಎಂದು ಜರೆದಿದ್ದರು.
ಅವರು ಮೊದಲ ಅವಧಿಗೆ ಪ್ರಧಾನಿಯಾದ ಕೂಡಲೇ ಹಿಂದುತ್ವದ ಮದವೇರಿಸಿಕೊಂಡ ಗುಂಪು ಮುಸ್ಲಿಮರ ಮನೆಯ ಅಡುಗೆ ಮನೆಗೆ ಹೋಗಿ ಒಲೆಯಲ್ಲಿ ಬೇಯುತ್ತಿದ್ದ ಮಾಂಸವನ್ನು ದನದ ಮಾಂಸ ಎಂದು ಮನೆಯವನನ್ನು ಹೊಡೆದು ಕೊಂದಿದ್ದವು. ಮಾಂಸ ಕೊಂಡೊಯ್ಯುವ ಮುಸ್ಲಿಮರನ್ನು, ಗೋ ಸಾಗಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು ಹೊಡೆಯುವುದು, ರೈತರ ಸಂತೆಯಿಂದ ಗೋವುಗಳನ್ನು ಖರೀದಿ ಮಾಡಿ ಕೊಂಡೊಯ್ಯುತ್ತಿದ್ದ ವಾಹನವನ್ನು ತಡೆಯುವುದು, ಹಲ್ಲೆ ಮಾಡುವುದು ನಿತ್ಯದ ಸುದ್ದಿಯಾಗಿತ್ತು. ನಮ್ಮ ರಾಜ್ಯದಲ್ಲಿಯೇ ಗೋ ವ್ಯಾಪಾರಿಯನ್ನು ಹೊಡೆದು ಕೊಂದ ಘಟನೆ ಕಳೆದ ವರ್ಷ ನಡೆದಿತ್ತು. ಗೋ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ತಡೆದು ಸುಲಿಗೆ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿದೆ.
ಇಲ್ಲಿ ಬಿಜೆಪಿಯ ಹಿಂದುತ್ವದ ಕಾರ್ಯಕರ್ತರು ಗೋವ್ಯಾಪಾರಿಗಳನ್ನು ಸುಲಿಗೆ ಮಾಡಿದ್ರೆ, ಅತ್ತ ಮೋದಿ ಸರ್ಕಾರ ಗೋಮಾಂಸ ರಫ್ತು ಕಂಪನಿಗಳಿಂದ ಎಲೆಕ್ಟೋರಲ್ ಬಾಂಡ್ ಹೆಸರಿನಲ್ಲಿ ಚಂದಾ ಎತ್ತಿದೆ! ಹಿಂದುತ್ವ, ಗೋಮಾತೆ ಎಂದು ಹೇಳಿ ದೇಶದಲ್ಲಿ ಅಶಾಂತಿ, ದ್ವೇಷ ಹುಟ್ಟಿಸಿದ ಪಕ್ಷಕ್ಕೆ ಗೋಮಾಂಸ ರಫ್ತು ಕಂಪನಿಗಳಿಂದ ದೇಣಿಗೆ ಪಡೆಯುವಾಗ ಗೋಮಾತೆ ನೆನಪಿಗೆ ಬರಲಿಲ್ಲವೇ?
ಇದು ಇಂದು ನೆನ್ನೆಯ ವಿಷಯವಲ್ಲ. 2013ರಲ್ಲಿಯೇ ಅಂದರೆ ಮೋದಿ ಪ್ರಧಾನಿಯಾಗುವ ಮುನ್ನವೇ ಬಿಜೆಪಿ ಬೀಫ್ ರಫ್ತು ಕಂಪನಿಗಳಿಂದ ದೇಣಿಗೆ ಪಡೆದಿದೆ ಎಂಬ ಆರೋಪ ಬಂದಿತ್ತು. “ಗೋಮಾಂಸ ರಫ್ತು ವಿರೋಧಿಸುತ್ತಿರುವ ಬಿಜೆಪಿ ಗೋಮಾಂಸ ರಫ್ತು ಮಾಡುವ ವ್ಯಕ್ತಿಯಿಂದಲೇ ಪಕ್ಷಕ್ಕೆ ರೂ. 200 ಕೋಟಿ ದೇಣಿಗೆ ಪಡೆದಿದೆ” ಎಂದು ಉತ್ತರ ಪ್ರದೇಶ ಸಚಿವ ಆಜಂ ಖಾನ್ 2015ರಲ್ಲಿ ಆರೋಪಿಸಿದ್ದರು.
2018ರಲ್ಲಿ ಆಗಿನ ಕೇಂದ್ರ ಸಚಿವ ಅರುಣ್ ಜೇಟ್ಲಿ ರಾಜಕೀಯ ಪಕ್ಷಗಳು ಖಾಸಗಿಯವರಿಂದ ದೇಣಿಗೆ ಪಡೆಯುವ ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಘೋಷಿಸಿದ್ದರು. ಅದಾದ ನಂತರ ಬಿಜೆಪಿಗೆ ದೇಣಿಗೆಯ ಮಹಾಪೂರವೇ ಹರಿದುಬಂದಿದೆ. ಮೋದಿ ಸರ್ಕಾರ ಅಕ್ರಮವಾಗಿ ದೇಣಿಗೆ ಪಡೆಯುತ್ತಿದೆ. ಎಲೆಕ್ಟೋರಲ್ ಬಾಂಡ್ ಖರೀದಿಸಿದ ಕಂಪನಿಗಳಿಗೆ ಗುತ್ತಿಗೆ ನೀಡುವುದು, ಅವರ ಮೇಲಿನ ಭ್ರಷ್ಟಾಚಾರ ಪ್ರಕರಣಗಳನ್ನು ಕೊನೆಗೊಳಿಸುವುದು, ಐಟಿ ಇಡಿ ರೇಡ್ ಬೆದರಿಕೆ ಒಡ್ಡಿ ಬಾಂಡ್ ಖರೀದಿಸುವಂತೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶದಂತೆ ಈಗ ಬಾಂಡ್ ಖರೀದಿಸಿದವರ ಪಟ್ಟಿ ಬಹಿರಂಗಪಡಿಸಲಾಗಿದೆ. ಅದರಲ್ಲಿ ಬಿಜೆಪಿ ಮತ್ತು ಅದರ ಸಮಾನ ಮನಸ್ಕ ಪಕ್ಷ ಶಿವಸೇನೆಗೆ ಮಹಾರಾಷ್ಟ್ರದ ಬೀಫ್ ರಫ್ತು ಕಂಪನಿ ಅಲ್ಲಾನ ಗ್ರೂಪ್ (Allana Group)2019ರಲ್ಲಿ ರೂ. 5 ಕೋಟಿ ದೇಣಿಗೆ ನೀಡಿದೆ. ಶಿವಸೇನಾಗೆ ರೂ. 3ಕೋಟಿ, ಬಿಜೆಪಿಗೆ ರೂ. 2ಕೋಟಿ! ಅಲ್ಲಿಗೆ ಹಿಂದುತ್ವ, ಗೋಮಾತೆ ಎಲ್ಲವೂ ಇವರಿಗೆ ರಾಜಕೀಯದ ವಿಷಯ ಅಷ್ಟೇ. ಭಾವನಾತ್ಮಕ ಸಂಗತಿಗಳನ್ನು ಹೇಳುತ್ತಾ ಬಹುಸಂಖ್ಯಾತರ ಮತಗಳನ್ನು ಕ್ರೋಢೀಕರಿಸುವುದು ಇವರ ಏಕಮಾತ್ರ ಅಜೆಂಡಾ ಎಂಬುದು ಸ್ಪಷ್ಟವಾಗುತ್ತದೆ.
Allanasons Private Limited ಮಹಾರಾಷ್ಟ್ರದ ಅತಿದೊಡ್ಡ ಗೋಮಾಂಸ ರಫ್ತು ಕಂಪನಿ. 2019ರ ಏಪ್ರಿಲ್‌ನಲ್ಲಿ ಈ ಕಂಪನಿಯ ಮೇಲೆ ಆದಾಯ ಇಲಾಖೆ ದಾಳಿ ನಡೆಸಿತ್ತು. ತೆರಿಗೆ ವಂಚನೆಯ ಆರೋಪ ಈ ಕಂಪನಿಯ ಮೇಲೆ ಬಂದಿತ್ತು. ಅಕ್ಟೋಬರ್‌ನಲ್ಲಿ ರೂ.5 ಕೋಟಿಯ ಬಾಂಡ್ ಖರೀದಿ ಮಾಡಿತ್ತು. ಚುನಾವಣಾ ಆಯೋಗ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ ಅಲ್ಲಾನ ಗ್ರೂಪ್‌ನ ಕಂಪನಿಗಳು ಶಿವಸೇನಾ ಮತ್ತು ಬಿಜೆಪಿಗೆ ಒಟ್ಟು ರೂ.9ಕೋಟಿ 10ಲಕ್ಷ ದೇಣಿಗೆ ಕೊಟ್ಟಿವೆ. ಇವೆರಡು ಪಕ್ಷಗಳು ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸುತ್ತಿವೆ ಎಂಬುದು ಗಮನಾರ್ಹ.
ಬಿಜೆಪಿಗೆ ಗೋವು ಮತ ತಂದುಕೊಡುವ ಕಾಮಧೇನು ಎಂಬುದಂತು ಗೊತ್ತಿತ್ತು. ಆ ಕಾರಣಕ್ಕಾಗಿಯೇ ಗೋವಿನ ವಿಚಾರವನ್ನು ಧರ್ಮ, ಆಚರಣೆ, ಸಂಪ್ರದಾಯದ ಹೆಸರಿನಲ್ಲಿ ವೈಭವೀಕರಿಸುವ ಕೆಲಸ ಬಿಜೆಪಿ ನಿರಂತರವಾಗಿ ಮಾಡಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಆದರೂ ಗೋಮಾಂಸ ರಫ್ತು ಕಡಿಮೆಯಾಗಲಿಲ್ಲ. ಹೆಚ್ಚೇ ಆಗಿದೆ. ಸದ್ಯ ಗೋಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನಕ್ಕೇರಿದೆ. ಗೋಮಾಂಸ ರಫ್ತು ಮಾಡುವ ಕಂಪನಿಗಳನ್ನು ನಡೆಸುತ್ತಿರುವವರು ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತಿನವರೇ ಹೆಚ್ಚು ಇದ್ದಾರೆ. ಅವು ಸಂಪೂರ್ಣ ಬಿಜೆಪಿಯ ಹಿಡಿತದಲ್ಲಿರುವ ರಾಜ್ಯಗಳು. ಗೋಮಾಂಸದ ಉದ್ಯಮಿಗಳಲ್ಲಿ ಅಪ್ಪಟ ಸಸ್ಯಾಹಾರಿಗಳಾದ ಜೈನರೂ ಇದ್ದಾರೆ. ಗೋವಿನ ಮೇಲೆ ನಿಜವಾದ ಭಕ್ತಿ ಇದ್ದಿದ್ದರೆ ಬಿಜೆಪಿ ಪ್ರಾಬಲ್ಯ ಇರುವ ರಾಜ್ಯಗಳಲ್ಲಿ ಸಂಪೂರ್ಣ ನಿಷೇಧ ಮಾಡಬೇಕಿತ್ತು ಅಲ್ಲವೇ? ಅಂತಹ ಯಾವುದೇ ಹೆಜ್ಜೆ ಇಡದ ಬಿಜೆಪಿಗೆ ಅಷ್ಟೇ ಅಲ್ಲ ಗೋಮಾಂಸ ರಫ್ತು ಮಾಡುವ ಕಂಪನಿಗಳಿಂದಲೇ ದೇಣಿಗೆ ಪಡೆದ ಬಿಜೆಪಿಗೆ ಗೋವಿನ ಹೆಸರಿನಲ್ಲಿ ಮತ ಕೇಳುವ ನೈತಿಕತೆ ಉಳಿದಿದೆಯೇ?
ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುತ್ತಾ, ಗೋಮಾಂಸ ಸೇವಿಸುವ ಮುಸ್ಲಿಮರನ್ನು ತುಚ್ಛವಾಗಿ ನಿಂದಿಸುವ ಹಿಂದುತ್ವ ಕಾರ್ಯಕರ್ತರು ಅಥವಾ ಬಿಜೆಪಿಯ ನಾಯಕರು ಯಾವತ್ತೂ ಈ ದೇಶದಲ್ಲಿ ಗೋಮಾಂಸವನ್ನು ತಿನ್ನುವ ಹಿಂದೂಗಳ ಬಗ್ಗೆ ಮಾತಾಡಿಲ್ಲ. ಗೋಹತ್ಯೆ ನಿಷೇಧ ಮಾಡಬೇಕು ಎಂದು ಯಾರೂ ಮೋದಿ ಸರ್ಕಾರವನ್ನು ಒತ್ತಾಯಿಸಿಲ್ಲ. ದೇಶದಲ್ಲಿ ಗೋಮಾಂಸ ರಫ್ತಿಗೆ ಅನುಮತಿ ಕೊಟ್ಟು ಇಲ್ಲಿನ ಜನ ಕೊಳ್ಳಬಾರದು, ತಿನ್ನಬಾರದು, ಅದು ನಮ್ಮ ತಾಯಿ ಎಂದರೆ ಹೇಗೆ? ವಾಸ್ತವದಲ್ಲಿ ಹಾಲುಕೊಡುವ ಹಸುವನ್ನು ಕೊಲ್ಲಬಾರದು ಎಂದಿದೆ. ಆದರೆ, ಎತ್ತು, ಎಮ್ಮೆ, ಕೋಣವನ್ನು ಮಾಂಸಕ್ಕಾಗಿ ಬಳಸಬಹುದು. ಮಾಂಸಕ್ಕಾಗಿಯೇ ಕೋಣಗಳನ್ನು ಸಾಕಲಾಗುತ್ತಿದೆ. ಅಷ್ಟೇ ಏಕೆ ಬಿಜೆಪಿಯವರು ಸದಾ ಟೀಕಿಸುವ ಪಾಕಿಸ್ತಾನಕ್ಕೆ ಅತಿ ಹೆಚ್ಚು ಗೋಮಾಂಸ ರಫ್ತಾಗುವುದು ಭಾರತದಿಂದ! ಬಿಜೆಪಿಯವರು ಇನ್ನಾದರೂ ಗೋಮಾತೆಗೆ ಚುನಾವಣಾ ಪ್ರಚಾರದಿಂದ ವಿಶ್ರಾಂತಿ ನೀಡಬೇಕಿದೆ.

Allansons pvt ltd ಎಂಬ ಕಂಪನಿಯು buffello meat ಅಂದರೆ ಎಮ್ಮೆಯ ಮಾಂಸ ರಫ್ತು ಮಾಡುವ ಕಂಪನಿ. ಬಿಜೆಪಿಯ ಹೆಸರು ಕೆಡಿಸುವ ಭರದಲ್ಲಿ ಎಮ್ಮೆ – ಆಕಳುಗಳ ನಡುವಿನ ವ್ಯತ್ಯಾಸ ಅರಿಯದ ಮೂರ್ಖ ಈ ಸುದ್ದಿಯನ್ನು ಬರೆದಿದ್ದು ಸಂಪೂರ್ಣ ಪೂರ್ವಗ್ರಹ ಪೀಡಿತವಾಗಿದೆ. ಮೋದಿಯವರನ್ನು ವಿರೋಧಿಸುತ್ತ ಭಾರತ ವಿರೋಧಿಯೇ ಆಗಿರುವ ಇಂಥವರಿಂದ ಸಮಾಜ ಸುಧಾರಣೆಯನ್ನಾಗಲಿ, ದೇಶ ಸುಧಾರಣೆಯನ್ನಾಗಲಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ಇದೊಂದೆ ವಿಷಯ ನೋಡಿದರೆ ಸಾಕು ಈ ದಿನ ಎಂಬ ಈ ಪತ್ರಿಕೆಯ ಮಾಹಿತಿಯ ವಿಶ್ವಸನೀಯತೆ ತಿಳಿಯುತ್ತದೆ.