ಈ ದಿನ ಸಂಪಾದಕೀಯ | ಪ್ರಸವ ಅಥವಾ ಗರ್ಭಪಾತ; ಮಹಿಳೆಯ ಆಯ್ಕೆಯೇ ಅಂತಿಮ

Date:

Advertisements

ಪ್ರಸವಕ್ಕೆ ತಾನು ಮಾನಸಿಕವಾಗಿ ತಯಾರಿಲ್ಲ ಎಂದು ಸಾರುವ ಮಹಿಳೆಗೆ ಬಲವಂತದ ಪ್ರಸವವನ್ನು ಹೇರುವುದು ಎಷ್ಟು ನ್ಯಾಯ? ಈಕೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಮಾನಸಿಕ ಅಸ್ವಾಸ್ಥ್ಯದ ಸ್ಥಿತಿಯಲ್ಲಿ ಒಂದು ವೇಳೆ ಈಕೆ ಆತ್ಮಹತ್ಯೆ ಮಾಡಿಕೊಂಡರೇನು ಗತಿ? ಮೊದಲನೆಯದಾಗಿ ಈಕೆಗೆ ತನ್ನ ಒಡಲಿನ ಮೇಲಿರುವ ಸ್ವಾಯತ್ತತೆಯನ್ನು ಉಲ್ಲಂಘಿಸಿ ಬಲವಂತದ ಪ್ರಸವವನ್ನು ಹೇರಿ ಸಾವಿನ ದವಡೆಗೆ ತಳ್ಳಿದಂತಾಗುವುದಿಲ್ಲವೇ?

ಮಹಿಳೆಗೆ ತನ್ನ ಒಡಲಿನ ಮೇಲಿರುವ ಹಕ್ಕು ಮತ್ತು ಆಕೆಯ ಗರ್ಭದೊಳಗಣ ಭ್ರೂಣದ ಹಕ್ಕಿನ ನಡುವೆ ಕೆಲ ದಿನಗಳ ಹಿಂದೆ ಕಾನೂನಿನ ಸಮರವೇ ನಡೆದು ಹೋಯಿತು. ಸುಪ್ರೀಮ್ ಕೋರ್ಟನ್ನು ಭಾರೀ ಪೇಚಿಗೆ ಸಿಲುಕಿಸಿದ್ದ ಪ್ರಕರಣವಿದು. ತಾಯಿಯಾಗಿ ಗರ್ಭಪಾತ ಕುರಿತು ಮಹಿಳೆಯ ಆಯ್ಕೆ ಅಥವಾ ಹಕ್ಕಿನ ಪರವಾಗಿ ನಿಲ್ಲಬೇಕೇ ಅಥವಾ ಆಕೆಯ ಬಸಿರಿನ ಭ್ರೂಣದ ಪರ ನಿಂತು ಜೀವಪರವಾಗಿರಬೇಕೇ ಎಂಬ ಇಕ್ಕಟ್ಟು ನ್ಯಾಯಾಲಯವನ್ನು ಕಾಡಿತ್ತು. ಈ ಇಕ್ಕಟ್ಟನ್ನು ಕುರಿತು ಸುಪ್ರೀಮ್ ಕೋರ್ಟಿನ ಎರಡು ಪ್ರತ್ಯೇಕ ಪೀಠಗಳು ಎರಡು ಹಂತಗಳಲ್ಲಿ ಭಿನ್ನ ತೀರ್ಪನ್ನು ನೀಡಿದವು.

ಎರಡು ವಾರಗಳ ಹಿಂದೆ ಇದೇ ಸುಪ್ರೀಮ್ ಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳ ಪೀಠವು ಗರ್ಭಪಾತ ಕುರಿತು ಒಮ್ಮತಕ್ಕೆ ಬರಲಿಲ್ಲ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಗರ್ಭಪಾತಕ್ಕೆ ಅನುಮತಿ ನೀಡಿದ್ದರು. ಮಹಿಳೆಯು ತನ್ನ ಒಡಲನ್ನು ಕುರಿತು ತೀರ್ಮಾನ ತೆಗೆದುಕೊಳ್ಳುವ ಸ್ವಾಯತ್ತತೆ ಹೊಂದಿದ್ದಾಳೆ. ಆಕೆಯ ನಿರ್ಧಾರವೇ ಅಂತಿಮ. ಅದನ್ನು ಗೌರವಿಸಬೇಕು ಎಂದು  ಅಕ್ಟೋಬರ್ 9ರಂದು ಸಾರಿದ್ದರು. ಆದರೆ ಇದೇ ಪೀಠದ ನ್ಯಾಯಮೂರ್ತಿ ಹಿಮಾ ಕೋಹ್ಲಿ ಅವರು ಗರ್ಭಪಾತಕ್ಕೆ ತಮ್ಮ ಮನಸ್ಸಾಕ್ಷಿ ಒಪ್ಪುತ್ತಿಲ್ಲವೆಂದು ಅನುಮತಿ ನಿರಾಕರಿಸಿದ್ದರು. ಹೀಗಾಗಿ ಈ ಪ್ರಕರಣ ದ್ವಿಸದಸ್ಯ ಪೀಠದಿಂದ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆಯಾಯಿತು. ಎರಡೇ ದಿನಗಳ ನಂತರ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಮೂವರು ಸದಸ್ಯರ ಪೀಠ ಗರ್ಭಪಾತಕ್ಕೆ ಅನುಮತಿಯನ್ನು ನಿರಾಕರಿಸಿತು.

Advertisements

ಈ ಪ್ರಕರಣದ ಮಹಿಳೆಯು ನ್ಯಾಯಾಲಯದ ಕದ ಬಡಿದಾಗ ಆಕೆ 24 ವಾರಗಳು ಮತ್ತು ಒಂದು ದಿನ ತುಂಬಿದ ಗರ್ಭವನ್ನು ಧರಿಸಿದ್ದಳು. ಗರ್ಭಪಾತಕ್ಕೆ ಸಂಬಂಧಿಸಿದ ಕಾಯಿದೆಯ ಪ್ರಕಾರ 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶವಿದೆ. ಪ್ರಸವದ ಕೆಲ ವಾರಗಳ ನಂತರ Postpartum psychosis ಎಂದು ಕರೆಯಲಾಗುವ ಮಾನಸಿಕ ಕಾಯಿಲೆ ಮಹಿಳೆಯರನ್ನು ಕಾಡುವ ಸಂಭವವಿದೆ. ವಾಸ್ತವ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯದೆ ಭ್ರಮೆ ಭ್ರಾಂತಿ, ಮರುಳಿನಿಂದ ಕೂಡಿದ ಹೊಯ್ದಾಟದ ಮನಸ್ಥಿತಿ ಹಾಗೂ ವರ್ತನೆಯಲ್ಲಿ ಹಠಾತ್ ಬದಲಾವಣೆಯ ಕಾಯಿಲೆಯಿದು. ಈ ಕಾಯಿಲೆಯಿಂದ ಬಳಲುವ ತಾನು ಮೂರನೆಯ ಮಗುವಿಗೆ ಜನ್ಮ ನೀಡುವ ಸ್ಥಿತಿಯಲ್ಲಿಲ್ಲ ಎಂಬುದು ಮಹಿಳೆಯ ಮನವಿಯಾಗಿತ್ತು. ಪೋಸ್ಟ್ ಪಾರ್ಟಮ್ ಕಾಯಿಲೆಯು ಕಾಯಂ ಅಲ್ಲ, ಅದಕ್ಕೆ ಕಾಲಮಿತಿ ಉಂಟು ಎಂಬುದು ಸುಪ್ರೀಮ್ ಕೋರ್ಟಿನ ಅಂತಿಮ ನಿಲುವು ಆದರೆ ಈ ಮಾನಸಿಕ ಕಾಯಿಲೆಗೆ ಕಾಲಮಿತಿಯೇನೂ ಇಲ್ಲ. ಹಲವು ಪ್ರಕರಣಗಳಲ್ಲಿ ದೀರ್ಘ ಕಾಲ ಮುಂದುವರೆದಿದೆ ಎಂಬ ವಾದವೂ ಉಂಟು.

ತಾಯಿಯ ಪರ ವಹಿಸದೆ ಭ್ರೂಣದ ಪಕ್ಷಪಾತಿ ತೀರ್ಪನ್ನು ನೀಡಿದೆ ಸುಪ್ರೀಮ್ ಕೋರ್ಟು. ತಾಯಿಯ ಹಕ್ಕಿಗಿಂತ ಭ್ರೂಣದ ಹಕ್ಕೇ ಹೆಚ್ಚೆಂದು ಸಾರಿದೆ. ಇಲ್ಲಿ ತಾಯಿ ಮತ್ತು ಭ್ರೂಣ ಇಬ್ಬರ ಪರಿಸ್ಥಿತಿಯೂ ಹೃದಯ ವಿದ್ರಾವಕವೇ. ಆದರೆ ವೈದ್ಯಕೀಯ ಗರ್ಭಪಾತವೂ ಸೇರಿದಂತೆ ಗರ್ಭವತಿ ಮಹಿಳೆಗೂ ಮಾನವ ಹಕ್ಕುಗಳಿವೆ. ಭ್ರೂಣದ ಅಸ್ತಿತ್ವವು ತಾಯಿಯ ಅಸ್ತಿತ್ವವನ್ನು ಆಧರಿಸಿರುತ್ತದೆಯೇ ವಿನಾ ಅದಕ್ಕೆ ಪ್ರತ್ಯೇಕ ಅಸ್ತಿತ್ವ ಇಲ್ಲ ಎಂಬ ವಾದವನ್ನು ನ್ಯಾಯಾಲಯದ ಅಂತಿಮ ತೀರ್ಪು ತಳ್ಳಿ ಹಾಕಿದೆ. ಇದೇ ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠ ವರ್ಷದ ಹಿಂದೆ ಮಹಿಳೆಯರ ಗರ್ಭಪಾತದ ಹಕ್ಕನ್ನು ವಿಸ್ತರಿಸಿ ನೀಡಿದ್ದ ತೀರ್ಪನ್ನು ಐತಿಹಾಸಿಕ ತೀರ್ಪು ನೀಡಿತ್ತು. 24 ವಾರಗಳವರೆಗಿನ ಗರ್ಭ ಹೊತ್ತ ಅವಿವಾಹಿತ ಮಹಿಳೆಯರಿಗೆ ಸುರಕ್ಷಿತ ಗರ್ಭಪಾತ ನಿರಾಕರಿಸುವಂತಿಲ್ಲ. ಇಂತಹ ನಿರಾಕರಣೆಯು ಸ್ತ್ರೀ ಒಡಲಿನ ಸ್ವಾಯತ್ತತೆ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಉಲ್ಲಂಘನೆ. ಈ ಸಂಬಂಧದಲ್ಲಿ ವಿವಾಹಿತ ಮಹಿಳೆ ಮತ್ತು ಅವಿವಾಹಿತ ಮಹಿಳೆಯ ನಡುವೆ ಭೇದ ಭಾವ ಸರಿಯಲ್ಲ. ಇಬ್ಬರೂ ಸಮಾನ ಹಕ್ಕು ಹೊಂದಿದ್ದಾರೆಂಬುದು ಈ ತೀರ್ಪಿನ ಸಾರವಾಗಿತ್ತು.

ಲಿಂಗಸಮಾನತೆ ಸಾರುವ ಸಮಾಜದಲ್ಲಿ ವೈದ್ಯಕೀಯ ಗರ್ಭಪಾತ ಕಾಯಿದೆಯನ್ನು ಸಮಕಾಲೀನ ಸಾಮಾಜಿಕ ವಾಸ್ತವಗಳಿಗೆ ಅನುಗುಣವಾಗಿ ವ್ಯಾಖ್ಯಾನ ಮಾಡಲೇಬೇಕು. ಬದಲಾದ ಸಾಮಾಜಿಕ ಸಂದರ್ಭವು ನಮ್ಮ ಕಾನೂನುಗಳ ಮರುಹೊಂದಾಣಿಕೆಗೂ ಒತ್ತಾಯಿಸುತ್ತದೆ. ಕಾನೂನು ಎಂಬುದು ನಿಂತ ನೀರಲ್ಲ, ಬದಲಾಗುತ್ತಿರುವ ಸಾಮಾಜಿಕ ಸಂದರ್ಭ ಮತ್ತು ಸಾಮಾಜಿಕ ನ್ಯಾಯವನ್ನು ಮತ್ತೊಂದು ಹಂತಕ್ಕೆ ಮುಂದೆ ಒಯ್ಯಬೇಕಾದ ಅಗತ್ಯವನ್ನು ಗಮನದಲ್ಲಿ ಇರಿಸಿಕೊಂಡು ಕಾನೂನಿನ ಮರುವ್ಯಾಖ್ಯಾನ ನಡೆಯಲೇಬೇಕು ಎಂಬುದಾಗಿ ಇದೇ ಮುಖ್ಯ ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿತ್ತು.

ಈ ಪ್ರಕರಣದಲ್ಲಿ ಮಹಿಳೆಯು ಧರಿಸಿದ್ದ ಗರ್ಭಕ್ಕೆ 26 ವಾರಗಳು ತುಂಬಿದ್ದವು. ಮಾನಸಿಕ ಅಸ್ವಸ್ಥಳಾದ ಈಕೆ ಈ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿರುವ ಹಿನ್ನೆಲೆಯಿದೆ. 28 ವಾರಗಳು ತುಂಬಿದ್ದ ಮಹಿಳೆಗೆ ಗರ್ಭಪಾತಕ್ಕೆ ಅವಕಾಶ ನೀಡಿ ದೆಹಲಿ ಹೈಕೋರ್ಟು 2022ರ ಜನವರಿಯಲ್ಲಿ ತೀರ್ಪು ನೀಡಿದ್ದ ನಿದರ್ಶನವಿದೆ. ಸುಪ್ರೀಮ್ ಕೋರ್ಟಿನ ಅಂತಿನ ತೀರ್ಪಿಗೆ ಮೂರು ದಿನಗಳ ಹಿಂದೆಯಷ್ಟೇ 25 ವಾರಗಳನ್ನು ಪೂರೈಸಿದ್ದ ಮಹಿಳೆಗೆ ಗರ್ಭಪಾತದ ಅವಕಾಶ ನೀಡಿತ್ತು ಬಾಂಬೆ ಹೈಕೋರ್ಟು.

ಪ್ರಸವಕ್ಕೆ ತಾನು ಮಾನಸಿಕವಾಗಿ ತಯಾರಿಲ್ಲ ಎಂದು ಸಾರುವ ಮಹಿಳೆಗೆ ಬಲವಂತದ ಪ್ರಸವವನ್ನು ಹೇರುವುದು ಎಷ್ಟು ನ್ಯಾಯ? ಈಕೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಮಾನಸಿಕ ಅಸ್ವಾಸ್ಥ್ಯದ ಸ್ಥಿತಿಯಲ್ಲಿ ಒಂದು ವೇಳೆ ಈಕೆ ಆತ್ಮಹತ್ಯೆ ಮಾಡಿಕೊಂಡರೇನು ಗತಿ? ಮೊದಲನೆಯದಾಗಿ ಈಕೆಗೆ ತನ್ನ ಒಡಲಿನ ಮೇಲಿರುವ ಸ್ವಾಯತ್ತತೆಯನ್ನು ಉಲ್ಲಂಘಿಸಿ ಬಲವಂತದ ಪ್ರಸವವನ್ನು ಹೇರಿ ಸಾವಿನ ದವಡೆಗೆ ತಳ್ಳಿದಂತಾಗುವುದಿಲ್ಲವೇ? ಅಷ್ಟೇ ಅಲ್ಲದೆ ಇರುವ ಇಬ್ಬರು ಮಕ್ಕಳು ತಬ್ಬಲಿಗಳಾಗುವುದಿಲ್ಲವೇ?

ಎರಡು ವೈದ್ಯಕೀಯ ಮಂಡಳಿಗಳ ವರದಿಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯ ತನ್ನ ಅಂತಿಮ ತೀರ್ಪನ್ನು ನೀಡಿದೆ ಎಂದು ಹೇಳಲಾಗಿದೆ. ಆದರೆ ಹಾಲಿ ಕಾಯಿದೆಯಡಿ ವೈದ್ಯಕೀಯ ಮಂಡಳಿಯೊಂದನ್ನು ರಚಿಸಲಾಗುತ್ತದೆ. ಈ ಮಂಡಳಿಯಲ್ಲಿ ಸ್ತ್ರೀರೋಗತಜ್ಞೆ, ಮಕ್ಕಳರೋಗ ತಜ್ಞ, ರೇಡಿಯಾಲಜಿಸ್ಟ್ ಮುಂತಾದವರು ಸದಸ್ಯರಾಗಿರುತ್ತಾರೆ. ಈ ಮಂಡಳಿಯ ಸದಸ್ಯೆಯಾಗಿ ಗರ್ಭಪಾತದ ಪರ ಅಥವಾ ವಿರೋಧವಾಗಿ ನಿರ್ಧಾರ ಕೈಗೊಳ್ಳಲು ಅಗತ್ಯ ತರಬೇತಿ, ಅರ್ಹತೆಗಳು ಹಾಗೂ ಅನುಭವ ಹೊಂದಿದವರು ಸ್ತ್ರೀರೋಗತಜ್ಞೆ ಮಾತ್ರ. ಆದರೆ ಉಳಿದ ಸದಸ್ಯರೆಲ್ಲ ಬಹುಮತದ ತೀರ್ಮಾನಕ್ಕೆ ಬಂದರೆ ಈಕೆಯ ನಿರ್ಧಾರಕ್ಕೆ ಬೆಲೆಯಿಲ್ಲ.

ತಾಯಿ ಮತ್ತು ಭ್ರೂಣದ ನಡುವಿನ ದುರದೃಷ್ಟಕರ ಸೆಣಸಿನಲ್ಲಿ ಭ್ರೂಣ ಗೆದ್ದಿದೆ. ಆದರೆ ತನ್ನ ಆಸ್ತಿತ್ವಕ್ಕಾಗಿ ಅದು ಸಂಪೂರ್ಣವಾಗಿ ಆಧರಿಸಿರುವ ತಾಯಿ ಸೋತಿದ್ದಾಳೆ. ಹೆಣ್ಣು ಕೇವಲ ತಾಯಿ ಮಾತ್ರವಲ್ಲ ಆಕೆಗೆ ಸ್ತ್ರೀಯಾಗಿ ಸ್ವತಂತ್ರ ಅಸ್ತಿತ್ವವೊಂದಿದೆ. ಆ ಅಸ್ತಿತ್ವದ ಪ್ರಕಾರ ಅಂತಿಮವಾಗಿ ಭ್ರೂಣವನ್ನು ಉಳಿಸಿಕೊಳ್ಳುವ ಅಥವಾ ಗರ್ಭಪಾತ ಮಾಡಿಸಿಕೊಳ್ಳುವ ಆಯ್ಕೆಯನ್ನು ನ್ಯಾಯಾಲಯ ಆಕೆಗೇ ಬಿಡಬೇಕಿತ್ತು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X