ಈ ದಿನ ಸಂಪಾದಕೀಯ | ಅಪಹರಿಸಿರುವ ಪ್ಯಾಲೆಸ್ತೀನ್‌ನನ್ನು ಮರಳಿಸಲಿ ಇಸ್ರೇಲ್

Date:

Advertisements

ಇದೇ ತಿಂಗಳ ಏಳರಂದು ಹಮಸ್ ನಡೆಸಿದ ದಾಳಿ ಇಸ್ರೇಲಿನ ಸೋಲಿನ ಪ್ರತೀಕ. ಬೇಹುಗಾರಿಕೆ ಮತ್ತು ಸದಾ ಸನ್ನದ್ಧ ಮಿಲಿಟರಿ ಶಕ್ತಿ ಕುರಿತು ಎದೆಯುಬ್ಬಿಸುತ್ತಿದ್ದ ಇಸ್ರೇಲಿಗೆ ಉಂಟಾದ ತೀವ್ರ ಮುಖಭಂಗ. ಹಮಸ್ ದಾಳಿಯಲ್ಲಿ ಇಸ್ರೇಲಿನ 700 ನಾಗರಿಕರು ಹತರಾಗಿದ್ದಾರೆ. ಬಹುದೊಡ್ಡ ಸಂಖ್ಯೆಯ ಇಸ್ರೇಲಿ ಪ್ರಜೆಗಳನ್ನು ಹಮಸ್ ವಶಪಡಿಸಿಕೊಂಡು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ. ಗಾಝಾದ ಮೇಲೆ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಎಚ್ಚರಿಕೆ ನೀಡಿದೆ.

2007ರ ನಂತರ ಗಾಝಾ ಪಟ್ಟಿಯನ್ನು ಆಳುತ್ತಿರುವ ಪ್ಯಾಲೆಸ್ತೀನಿ ಸರ್ಕಾರ. ಪ್ಯಾಲೆಸ್ತೀನನ್ನು ಆಕ್ರಮಿಸಿಕೊಂಡಿರುವ ಇಸ್ರೇಲ್ ವಿರುದ್ಧ ಸಶಸ್ತ್ರ ಹೋರಾಟದಲ್ಲಿ ವಿಶ್ವಾಸ ಹೊಂದಿರುವ ಪಕ್ಷ. ಯಾಸೆರ್ ಅರಾಫತ್ ನೇತೃತ್ವದ ಪ್ಯಾಲೆಸ್ತೀನ್ ಪ್ರಾಧಿಕಾರವನ್ನು ಹಿಂದಿಕ್ಕಿ ಮುಂದೆ ಬಂದ ರಾಜಕೀಯ ಪಕ್ಷ.

ನಾಗರಿಕರೆಂದು ಲೆಕ್ಕಿಸದೆ ಹಮಸ್ ನಡೆಸಿರುವ ಈ ದಾಳಿ ಪ್ಯಾಲೆಸ್ತೀನ್ ಹೋರಾಟಕ್ಕೆ ಬಲವನ್ನು ತಂದುಕೊಡುವುದಿಲ್ಲ. ಇಸ್ರೇಲ್ ಇಂತಹುದೇ ದಾಳಿಗಳನ್ನು ಮಾಡಿರುವುದು ನಿಜ. ಆದರೆ ಇಸ್ರೇಲ್ ತುಳಿಯುವ ಅನೈತಿಕ ಅಮಾನುಷ ದಾರಿಗಳು ಪ್ಯಾಲೆಸ್ತೀನ್‌ಗೆ ಮಾದರಿ ಆಗಬೇಕಿಲ್ಲ. ಈ ದಾಳಿಯು ಇಸ್ರೇಲ್‌ನಿಂದ ಭೀಕರ ಪ್ರತಿದಾಳಿಯನ್ನು ಆಹ್ವಾನಿಸಿದೆ. ಪ್ಯಾಲೆಸ್ತೀನ್ ನಾಗರಿಕರ ಪ್ರಾಣಗಳನ್ನು ಪಣಕ್ಕೆ ಒಡ್ಡಿದೆ.

Advertisements

ಪ್ರಧಾನಿ ಬೆಂಜಮಿನ್ ನೇತಾನ್ಯಾಹು ರಾಜಕೀಯವಾಗಿ ಭಾರೀ ಹಿನ್ನಡೆ ಎದುರಿಸಬೇಕಾಗಿ ಬಂದಿದೆ. ತಾನು ಅಜೇಯ ಎಂಬ ಇಸ್ರೇಲಿನ ಅತಿಯಾದ ಆತ್ಮವಿಶ್ವಾಸ ನುಚ್ಚುನೂರಾಗಿದೆ. ಆಕ್ರೋಶಭರಿತವಾಗಿ ಗಾಯ ನೆಕ್ಕಿಕೊಳ್ಳುತ್ತ ಗಾಝಾ ಪಟ್ಟಿಯ ಮೇಲೆ ದೈತ್ಯ ದಾಳಿಗೆ ಸಜ್ಜಾಗತೊಡಗಿದೆ ಇಸ್ರೇಲ್. ಆದರೆ ಹಮಸ್ ನೀಡಿರುವ ಹೊಡೆತ, ಇಸ್ರೇಲಿನ ವರ್ಚಸ್ಸನ್ನು ಆಳಕ್ಕೆ ಜಜ್ಜಿದೆ. ಗಾಝಾ ಪಟ್ಟಿಯನ್ನು ಸರ್ವನಾಶ ಮಾಡಿದರೂ ಇಸ್ರೇಲಿನ ವರ್ಚಸ್ಸು ಬಹುಕಾಲದ ತನಕ ದುರಸ್ತಿಯಾಗುವುದಿಲ್ಲ ಎನ್ನುತ್ತಿದ್ದಾರೆ ಅಂತಾರಾಷ್ಟ್ರೀಯ ವ್ಯವಹಾರಗಳ ವ್ಯಾಖ್ಯಾನಕಾರರು. ಈ ದಾಳಿಯಿಂದ ಹಮಸ್ ಗೆ ದೊಡ್ಡ ಲಾಭವೇನೂ ಹಸ್ತಗತ ಆಗಿಲ್ಲ. ಇತ್ತ ಕೈಜಾರಿ ಹೋಗಿ ಇಸ್ರೇಲ್ ವಶವರ್ತಿಯಾಗಿರುವ ಅವರ ದೇಶವೂ ವಾಪಸು ಸಿಗುತ್ತಿಲ್ಲ, ಅತ್ತ ಇಸ್ರೇಲಿನ ಬೆನ್ನುಮೂಳೆ ಮುರಿದು ಮೊಣಕಾಲೂರಿಸುವುದೂ ಸಾಧ್ಯವಿಲ್ಲ. ಪಶ್ಚಿಮದ ಎಲ್ಲ ದೇಶಗಳ ಬೆಂಬಲವನ್ನು ಇಸ್ರೇಲ್ ಹೊಂದಿದೆ.

ಅಮೆರಿಕೆಯಂತೂ ಇಸ್ರೇಲ್ ಗೆ ಬೇಷರತ್ ಬೆಂಬಲವನ್ನು ಸಾರಿದೆ. ಹಮಸ್ ನ ಈ ದಾಳಿಯು ಪ್ಯಾಲೆಸ್ತೀನಿ ಪ್ರಜೆಗಳ ಮೇಲೆ ಇಸ್ರೇಲಿ ಹಿಂಸೆ ಮತ್ತು ದಮನವನ್ನು ಮತ್ತಷ್ಟು ಕ್ರೂರ ಮತ್ತು ಬರ್ಬರಗೊಳಿಸುವುದು ನಿಚ್ಚಳ. ಹೀಗಿದ್ದರೂ ಹಮಸ್ ಈ ದಾಳಿ ನಡೆಸಿದ್ದು, ಪ್ಯಾಲೆಸ್ತೀನ್ ಹೋರಾಟದ ನಾಯಕತ್ವಕ್ಕಾಗಿ ನಡೆಯುತ್ತಿರುವ ಮೇಲಾಟದಲ್ಲಿ ಗೆಲ್ಲುವುದಕ್ಕಾಗಿ. ಪ್ಯಾಲೆಸ್ತೀನಿಯನ್ ಪ್ರಾಧಿಕಾರವನ್ನು ಮೂಲೆಗುಂಪು ಮಾಡಲಿಕ್ಕಾಗಿ. ಪ್ಯಾಲೆಸ್ತೀನ್ ಪ್ರಾಧಿಕಾರವು ಪ್ಯಾಲೆಸ್ತೀನೀಯರ ಅಧಿಕೃತ ಸರ್ಕಾರ. ಸ್ವತಂತ್ರ ಪ್ಯಾಲೆಸ್ತೀನ್‌ನ ಸಾಕಾರಕ್ಕಾಗಿ ಇಸ್ರೇಲ್ ಜೊತೆಗೆ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿತ್ತು. ಆದರೆ ಸ್ವತಂತ್ರ ಪ್ಯಾಲೆಸ್ತೀನ್ ಕನಸಾಗಿಯೇ ಉಳಿದಿದ್ದು, ಪ್ಯಾಲೆಸ್ತೀನ್ ಪ್ರಾಧಿಕಾರ ಪ್ಯಾಲೆಸ್ತೀನಿಯರ ಪೈಕಿ ಗಳಿಸಿಕೊಂಡಿದ್ದ ನ್ಯಾಯಸಮ್ಮತಿಯ ಮುಕುಟ ಮಣ್ಣುಪಾಲಾಗಿದೆ.

ಈ ಬೆಳವಣಿಗೆಯ ಒಟ್ಟಾರೆ ಪರಿಣಾಮ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಣ ಶಾಂತಿಯ ಸಾಧ್ಯತೆಗಳ ಸರ್ವನಾಶ. ದಿವಂಗತ ಅರಸು ಅಬ್ದುಲ್ಲಾ ಆಳ್ವಿಕೆಯ ಸೌದಿ ಅರೇಬಿಯಾ 20 ವರ್ಷಗಳ ಹಿಂದೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಶಾಂತಿ ಒಪ್ಪಂದದ ಪ್ರಸ್ತಾವವೊಂದನ್ನು ಮುಂದಿಟ್ಟಿದ್ದರು. ಅರಬ್ ಲೋಕ ಮತ್ತು ಇಸ್ರೇಲ್ ನಡುವಣ ಸಂಬಂಧಗಳಿಗೆ ಸೌಹಾರ್ದ ರೂಪ ನೀಡುವುದು ಈ ಒಪ್ಪಂದದ ಉದ್ದೇಶವಾಗಿತ್ತು. ಪ್ಯಾಲೆಸ್ತೀನ್- ಇಸ್ರೇಲ್ ಭೂಭಾಗದಲ್ಲಿ ಕಾಯಂ ಶಾಂತಿ ನೆಲೆಸಲು ದಾರಿ ಮಾಡುವ ಎಲ್ಲ ಸಾಮರ್ಥ್ಯ ಹೊಂದಿತ್ತು. 1967ರ ಆರು ದಿನಗಳ ಸಮರದಲ್ಲಿ ಇಸ್ರೇಲ್ ವಶಪಡಿಸಿಕೊಂಡಿದ್ದ ಪ್ಯಾಲೆಸ್ತೀನ್ ಭೂಭಾಗದಲ್ಲಿ ಪೂರ್ಣ ಮಾನ್ಯತೆ ಹೊಂದಿದ ಪ್ಯಾಲೆಸ್ತೀನ್ ಸ್ವತಂತ್ರ ದೇಶದ ಅಸ್ತಿತ್ವವನ್ನು ಸಾರುವುದು ಈ ಒಪ್ಪಂದದ ಸಾರ. ಪ್ರತಿಯಾಗಿ ಇಸ್ರೇಲ್ ದೇಶ ಕೂಡ ಸಂಪೂರ್ಣ ಸ್ವೀಕೃತಿ ಮತ್ತು ಮಾನ್ಯತೆಯನ್ನು ಪಡೆಯುವುದಿತ್ತು. ಯಾಸೆರ್‌ ಅರಾಫತ್‌ ನೇತೃತ್ವದ ಪ್ಯಾಲೆಸ್ತೀನಿಯನ್ ಪ್ರಾಧಿಕಾರವು ಈ ಒಪ್ಪಂದಕ್ಕೆ ತಕ್ಷಣವೇ ಸಮ್ಮತಿಸಿತ್ತು. ಆದರೆ ಏರಿಯಲ್ ಶೆರಾನ್ ನೇತೃತ್ವದ ಬಲಪಂಥೀಯ ಇಸ್ರೇಲಿ ಸರ್ಕಾರ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು. 1967ರ ಆಕ್ರಮಣದಲ್ಲಿ ಪ್ಯಾಲೆಸ್ತೀನ್‌ಗೆ ಸೇರಿದ್ದ ವೆಸ್ಟ್ ಬ್ಯಾಂಕ್, ಗಾಝಾ, ಗೋಲನ್ ಹೈಟ್ಸ್ ಹಾಗೂ ಲೆಬನಾನ್ ಮುಂತಾದ ಪ್ರದೇಶಗಳನ್ನು ಇಸ್ರೇಲ್ ವಶಪಡಿಸಿಕೊಂಡಿತ್ತು. ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ಗೆ ವಾಪಸು ಮಾಡುವ ಮನಸ್ಸು ಇಸ್ರೇಲಿಗೆ ಇರಲಿಲ್ಲ. ಗಾಝಾ ಪಟ್ಟಿಯ ಚುನಾಯಿತ ಸರ್ಕಾರ ನಡೆಸುತ್ತಿದ್ದ ಹಮಸ್ ರಾಜಕೀಯ ಪಕ್ಷವೂ ಈ ಪ್ರಸ್ತಾವವನ್ನು ಒಪ್ಪಲಿಲ್ಲ.

ಪ್ಯಾಲೆಸ್ತೀನ್ ಡೇರೆಯನ್ನು ಅಂಗುಲಂಗುಲವಾಗಿ ಆಕ್ರಮಿಸಿದ ಇಸ್ರೇಲಿ ಒಂಟೆ ಕಾಲಕ್ರಮೇಣ ಇಡೀ ಡೇರೆಯನ್ನು ತನ್ನದೆಂದು ಸಾರಿರುವ ಪರಮ ಅನ್ಯಾಯದ ಕತೆ ಪ್ಯಾಲೆಸ್ತೀನ್- ಇಸ್ರೇಲ್ ಸಂಘರ್ಷ. 2002ರ ಅರಬ್ ಶಾಂತಿ ಪ್ರಸ್ತಾವಕ್ಕೆ ಮರುಜೀವ ಕೊಡುವುದೊಂದೇ ಈ ಭೂಭಾಗದ ಅಮಾನುಷ ಸಂಘರ್ಷವನ್ನು ಅಂತ್ಯಗೊಳಿಸಬಲ್ಲದು. ಇಲ್ಲವಾದರೆ ಹಿಂಸೆ-ಪ್ರತೀಕಾರ-ದ್ವೇಷದ ವಿಷವರ್ತುಲ ನಿತ್ಯ ನಿರಂತರ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X