ಈ ದಿನ ಸಂಪಾದಕೀಯ | ಮೌಢ್ಯ ಬಿತ್ತುವ ಕಾವೇರಿ ಆರತಿ ಯಾವ ಪುರುಷಾರ್ಥಕ್ಕೆ?

Date:

Advertisements
ಸಿದ್ದರಾಮಯ್ಯನವರ ಸರ್ಕಾರ ಕಾವೇರಿ ಆರತಿಯಂತಹ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ತಡೆಯೊಡ್ಡಿ, ನಾಡಿನ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ಕಾವೇರಿ ರಭಸಕ್ಕೆ, ರೈತರ ಆಕ್ರೋಶಕ್ಕೆ ಕಾಂಗ್ರೆಸ್ ಕೊಚ್ಚಿಹೋಗಲಿದೆ.

ಕೆಆರ್‌ಎಸ್ ಅಣೆಕಟ್ಟೆಯ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್‌ ನಿರ್ಮಿಸುವ ಸರ್ಕಾರದ ಯೋಜನೆಗೆ ಚಾಲನೆ ಸಿಕ್ಕಿದೆ. ಅಮ್ಯೂಸ್‌ಮೆಂಟ್ ಪಾರ್ಕ್‌ನ ಭಾಗವಾಗಿ ಹೆಲಿಪ್ಯಾಡ್, ವಾಹನ ನಿಲ್ದಾಣ, ಮನರಂಜನಾ ಉದ್ಯಾನ, ತೂಗು ಸೇತುವೆ, ವೀಕ್ಷಣಾ ಗೋಪುರ ಸೇರಿದಂತೆ ಒಟ್ಟು 41 ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಆಗಲೇ ಕಾಮಗಾರಿಯೂ ಆರಂಭವಾಗಿದೆ.

ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯು ಆರತಿ ನಡೆಯುವ ಸ್ಥಳದ ಸಮತಟ್ಟು ಕಾರ್ಯ ಆರಂಭಿಸಿದೆ. ನದಿ ತೀರದ ಹಳ್ಳ–ಕೊಳ್ಳಗಳಿಗೆ ಮಣ್ಣು ತುಂಬಲಾಗುತ್ತಿದೆ. ಆರತಿ ನಡೆಸಲು 45/45 ಮೀಟರ್‌ ಅಳತೆಯ ಸೋಪಾನ ಮತ್ತು ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಲು 75/75 ಮೀಟರ್‌ ಅಳತೆಯ ಅಂಕಣ ಸಿದ್ಧಗೊಳ್ಳುತ್ತಿದೆ.

ಕೆಆರ್‌ಎಸ್ ಅಣೆಕಟ್ಟೆಯ ಬಳಿ ಆರಂಭವಾದ ಕಾಮಗಾರಿ ಕಂಡ ರೈತರು ಆತಂಕಗೊಂಡು ಮಂಡ್ಯ, ಮೈಸೂರು, ಶ್ರೀರಂಗಪಟ್ಟಣಗಳಲ್ಲಿ ಬೀದಿಗಿಳಿದಿದ್ದಾರೆ. ‘ಕೆಆರ್‌ಎಸ್ ಅಣೆಕಟ್ಟೆಯ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆ ಕೈಬಿಡಬೇಕು. ಕೋಟಿ ವೆಚ್ಚದ ಕಾವೇರಿ ಆರತಿ ಯಾವುದೇ ಕಾರಣಕ್ಕೂ ಬೇಡ. ಅದರ ಬದಲು ಆ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳಬೇಕು’ ಎಂದು ರೈತ ಸಂಘ, ಕನ್ನಡಪರ, ಪ್ರಗತಿಪರ ಸಂಘಟನೆಗಳು ಪ್ರತಿಭಟಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಮೂಲಕ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪಾದಚಾರಿಗಳನ್ನು ‘ಬೇವರ್ಸಿ’ಗಳಂತೆ ನಡೆಸಿಕೊಳ್ತಿದೆ ಬೆಂಗಳೂರು ನಗರ!

ರೈತರ ಪ್ರತಿಭಟನೆಗೆ ಜೂ.19ರ ಗುರುವಾರ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಕಾವೇರಿ ಆರತಿಯಿಂದ ಸೃಷ್ಟಿಯಾಗುವ ಉದ್ಯೋಗ ಸೇರಿ ಆಗುವ ಪ್ರಯೋಜನಗಳ ಬಗ್ಗೆ ರೈತ ಸಂಘಗಳಿಗೆ ತಿಳಿವಳಿಕೆ ಇಲ್ಲ. ಕಾವೇರಿ ಆರತಿಯನ್ನು ಗಂಗಾ ಆರತಿಗಿಂತ ಉತ್ತಮವಾಗಿ ಮಾಡಲಿದ್ದೇವೆ. ಕೊಡಗು, ಮಂಡ್ಯ, ತಮಿಳುನಾಡು, ಪುದುಚೆರಿ, ಕೇರಳದಿಂದಲೂ ಜನ ಬಂದು ನೋಡುವಂತೆ ಕಾರ್ಯಕ್ರಮ ಮಾಡಲಾಗುವುದು. ಅಲ್ಲಿ ನಡೆವ ಧಾರ್ಮಿಕ ಕಾರ್ಯಕ್ರಮ, ಲೈಟ್‌ ಶೋ ಸೇರಿ ಸ್ಥಳೀಯ ಮಟ್ಟದಲ್ಲಿ 1500 ಉದ್ಯೋಗ ಸೃಷ್ಟಿಯಾಗಲಿದೆ. ಸ್ಥಳೀಯರ ಜೊತೆ ನಾನೇ ಮಾತನಾಡಲಿದ್ದೇನೆ’ ಎಂದಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಾರ, ಕಾವೇರಿ ಆರತಿ ಎನ್ನುವುದು ಧಾರ್ಮಿಕ ಕಾರ್ಯಕ್ರಮ, ಅಮ್ಯೂಸ್‌ಮೆಂಟ್ ಪಾರ್ಕ್ ಎನ್ನುವುದು ಅಭಿವೃದ್ಧಿ. ಅದನ್ನು ಬೇಡ ಎನ್ನುವವರಿಗೆ ಬುದ್ಧಿ ಇಲ್ಲ, ತಿಳಿವಳಿಕೆ ಇಲ್ಲ. ಮಂಡ್ಯದ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ರೈತರು ಆತುರಕ್ಕೆ ಬಿದ್ದು ಪ್ರತಿಭಟನೆಗಿಳಿಯಬಾರದು, ದುಡುಕಬಾರದು ಎಂದು ಬುದ್ಧಿವಾದ ಹೇಳಿದ್ದಾರೆ. ಮಂಡ್ಯ ಶಾಸಕ ಪಿ. ರವಿಕುಮಾರ್, ಯಾರೇ ವಿರೋಧಿಸಿದರೂ ದಸರಾ ವೇಳೆಗೆ ಕಾವೇರಿ ಆರತಿ ಮಾಡುತ್ತೇವೆ ಎಂದು ಹೂಂಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು, ಶಾಸಕರು ತೊಡೆ ತಟ್ಟಿದರೆ, ನಾವೂ ಸಿದ್ಧ ಎಂದು ತಿರುಗೇಟು ನೀಡಿದ್ದಾರೆ.

ಕಾವೇರಿ ಆರತಿ ಹಾಗೂ ಅಮ್ಯೂಸ್‌ಮೆಂಟ್‌ ಪಾರ್ಕ್‌- ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಆಯ್ಕೆ ಮಾಡಿಕೊಂಡಿರುವ ಸ್ಥಳ, ಕೆಆರ್‌ಎಸ್‌ ಜಲಾಶಯದ ಕೆಳಭಾಗದ ಪ್ರದೇಶ. ಇದೇ ರೈತರ ಕೆಂಗಣ್ಣಿಗೆ ಕಾರಣವಾಗಿರುವುದು. 1931ರಲ್ಲಿ ನಿರ್ಮಾಣಗೊಂಡ ಅಣೆಕಟ್ಟೆಗೆ ಈಗ 94 ವರ್ಷವಾಗಿದ್ದು, ಶತಮಾನದ ಹೊಸ್ತಿಲಲ್ಲಿದೆ. ರೈತರ ಜೀವನಾಡಿಯಾದ ಕನ್ನಂಬಾಡಿ ಕಟ್ಟೆಯ ಅಸ್ತಿತ್ವಕ್ಕೆ ಧಕ್ಕೆ ತರುವ, ಅನಾಹುತ ಸೃಷ್ಟಿಸುವ ಇಂಥ ಅವೈಜ್ಞಾನಿಕ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ ಎಂದು ರೈತರು ಬಿಗಿಪಟ್ಟು ಹಿಡಿದಿದ್ದಾರೆ.

ಉತ್ತರ ಪ್ರದೇಶದ ‘ಗಂಗಾ ಆರತಿ‘ಯಿಂದ ಪ್ರೇರಿತವಾದ ‘ಕಾವೇರಿ ಆರತಿ’ಯು ಮೌಢ್ಯ ಬಿತ್ತುವ ಕಾರ್ಯಕ್ರಮ. ಕರ್ಪೂರದ ಆರತಿಗೇಕೆ 92 ಕೋಟಿ? ಡ್ಯಾಂ ಬಳಿ 10 ಸಾವಿರ ಜನ ಸೇರಿದರೆ ಜಲ ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತದೆ. ಕಾವೇರಿ ನದಿ ಕಲುಷಿತಗೊಂಡರೆ ಕುಡಿಯುವ ನೀರು ಮತ್ತು ತಿನ್ನುವ ಅನ್ನ ವಿಷಮಯವಾಗುತ್ತದೆ ರೈತನಾಯಕಿ ಸುನಂದಾ ಜಯರಾಂ ಹೇಳಿರುವುದು ಸರಿಯಾಗಿಯೇ ಇದೆ.

ಅಷ್ಟಕ್ಕೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಯೋಜನೆ ಜಾರಿಗೊಳಿಸುವುದರಿಂದ ಜಿಲ್ಲೆಯ ರೈತರಿಗೆ ಆಗುವ ಪ್ರಯೋಜನವೇನು? ಇದೇ ಹಣದಲ್ಲಿ ಉಪನಾಲೆಗಳನ್ನು ದುರಸ್ತಿಗೊಳಿಸಿ ಕೆರೆ–ಕಟ್ಟೆಗಳ ಹೂಳು ತೆಗೆಸಿ ನೀರು ಹರಿಸಿದರೆ ರೈತರ ಬದುಕು ಬಂಗಾರವಾಗುವುದಿಲ್ಲವೇ ಎಂಬ ಮಾತುಗಳೂ ಕೇಳಿಬರುತ್ತಿವೆ.  

ಒಟ್ಟಿನಲ್ಲಿ ಮೈಸೂರು ಮತ್ತು ಮಂಡ್ಯದ ಕೃಷಿ ಚಟುವಟಿಕೆಗಳಿಗೆಂದೇ ನಿರ್ಮಾಣವಾಗಿ, ಬೆಂಗಳೂರು-ಮೈಸೂರಿಗೂ ಕುಡಿಯುವ ನೀರು ಪೂರೈಸುತ್ತಿರುವ ಕೆಆರ್‌ಎಸ್‌ ಜಲಾಶಯದ ಸುತ್ತ ನಡೆಯುತ್ತಿರುವ ಕಾಮಗಾರಿಗಳ ವಿರುದ್ಧ ಈಗ ಪ್ರತಿಭಟನೆ ಕಾವೇರತೊಡಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮುಂಗಾರು ಮಳೆಗೆ ಸರ್ಕಾರ ಸಿದ್ಧವಿದೆಯೇ?

2016–17ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ಜಲಾಶಯದ ಸಮೀಪ 300 ಎಕರೆ ಪ್ರದೇಶದಲ್ಲಿ 1,500 ಕೋಟಿ ವೆಚ್ಚದಲ್ಲಿ ಡಿಸ್ನಿಲ್ಯಾಂಡ್ ಹಾಗೂ 125 ಅಡಿಯ ಕಾವೇರಿ ಪ್ರತಿಮೆಯನ್ನು ನಿರ್ಮಿಸಲು ನೀಲನಕ್ಷೆ ತಯಾರಿಸಿತ್ತು. ಅಣೆಕಟ್ಟೆ ಸಮೀಪದ ನಿಷೇಧಿತ ಪ್ರದೇಶದಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಪರಿಸರ, ರೈತ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ರಸ್ತೆ ಚಳವಳಿ ಮತ್ತು ಕಾನೂನು ಹೋರಾಟದ ಮೂಲಕ ಯೋಜನೆಯನ್ನು ತಟಸ್ಥಗೊಳಿಸುವಲ್ಲಿ ಯಶಸ್ವಿಯಾಗಿದ್ದವು.

ಈಗ ಅದು ಮತ್ತೊಂದು ರೂಪದಲ್ಲಿ, ಕಾವೇರಿ ಆರತಿಯ ನೆಪದಲ್ಲಿ ಉದ್ಭವವಾಗಿದೆ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಸರ್ಕಾರ, ಜನರ ಬಾಯಿ ಮುಚ್ಚಿಸಲು ದುಂಡಾವರ್ತನೆಗಿಳಿದಿದೆ. ಅದನ್ನು ಅದೇ ರೀತಿ ಮಣಿಸಲು ರೈತರು ಕೂಡ ಮುಂದಾಗಿದ್ದಾರೆ.

ಅಣೆಕಟ್ಟು ಸುರಕ್ಷತಾ ಕಾಯ್ದೆಯ 2021ರ ಪ್ರಕಾರ ಅಣೆಕಟ್ಟೆಯ 20 ಕಿಮೀ ಸುತ್ತ ಯಾವುದೇ ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಳ್ಳುವಂತಿಲ್ಲ ಎನ್ನುವ ವಿಷಯ ಮುಂದಿಟ್ಟು ಎಂ. ಶಿವಪ್ರಕಾಶ್ ಎಂಬುವವರು ಸರ್ಕಾರದ ಕಾಮಗಾರಿ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ ಹೂಡಿದ್ದಾರೆ.

ಕಾವೇರಿ ಆರತಿಯನ್ನು ಮಾಡಿಯೇ ತೀರುತ್ತೇವೆ ಎಂದು ಹಠಕ್ಕೆ ಬಿದ್ದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕ ರವಿಕುಮಾರ್- ಮೂವರೂ ಕೃಷಿ ಕುಟುಂಬದಿಂದ ಬಂದವರು. ಕೃಷಿಕರ ಕಷ್ಟಗಳನ್ನು ಕಂಡುಂಡವರು. ಅವರಿಂದಲೇ ಆಯ್ಕೆಯಾಗಿ ಶಾಸಕ, ಸಚಿವರಾದವರು. ಈಗ ಅವರ ವಿರುದ್ಧವೇ ಸೆಟೆದು ನಿಂತಿರುವುದು, ಪ್ರತಿರೋಧವನ್ನು ಹತ್ತಿಕ್ಕಲು ಹವಣಿಸುತ್ತಿರುವುದು, ತಿಳಿವಳಿಕೆ ಇಲ್ಲದವರು ಎಂದು ತೆಗಳುತ್ತಿರುವುದು- ಅಧಿಕಾರಸ್ಥರ ಅಹಂಕಾರದಂತೆ ಕಾಣುತ್ತಿದೆ.

ಇನ್ನು ಆರತಿ, ಸಂಸ್ಕೃತಿ ಎಂಬ ಧಾರ್ಮಿಕ ಅಮಲಿನಲ್ಲಿ ಮತದಾರರನ್ನು ತೇಲಿಸಿ, ಅಧಿಕಾರಕ್ಕೇರುವುದು ಬಿಜೆಪಿಗರ ಷಡ್ಯಂತ್ರ ಎಂದು ಕಟುವಾಗಿ ಟೀಕಿಸುವ ಸಮಾಜವಾದಿ ಸಿದ್ದರಾಮಯ್ಯನವರು, ಈ ಬಗ್ಗೆ ಮೌನವಾಗಿರುವುದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ. ಸಿದ್ದರಾಮಯ್ಯನವರ ಸರ್ಕಾರ ಕಾವೇರಿ ಆರತಿಯಂತಹ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ತಡೆಯೊಡ್ಡಿ, ನಾಡಿನ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ಕಾವೇರಿ ರಭಸಕ್ಕೆ, ರೈತರ ಆಕ್ರೋಶಕ್ಕೆ ಕಾಂಗ್ರೆಸ್ ಕೊಚ್ಚಿಹೋಗಲಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X