ನಿವೃತ್ತಿಯ ನಂತರ ಯಾವುದೇ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಸಂಜೀವ ಖನ್ನಾ ಘೋಷಿಸಿದ್ದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ನಿವೃತ್ತಿಯ ನಂತರ ನ್ಯಾಯಮೂರ್ತಿಗಳಿಗೆ ಸರ್ಕಾರಗಳು, ಪಕ್ಷಗಳು ನೀಡುತ್ತ ಬಂದಿರುವ ಅನೇಕ ಹುದ್ದೆಗಳಿರುತ್ತವೆ. ತನ್ನ ಇಚ್ಛೆಗೆ ತಕ್ಕಂತೆ ನ್ಯಾಯವನ್ನು ಬಾಗಿಸುವವರಿಗೆ ಸರ್ಕಾರ ಈ ಹುದ್ದೆಗಳನ್ನು ನೀಡುತ್ತದೆ.
ಎಚ್.ಆರ್.ಖನ್ನಾ (ಹನ್ಸರಾಜ್ ಖನ್ನಾ) ಎಂಬ ಎಂಟೆದೆಯ ನಿರ್ಭೀತ ನ್ಯಾಯಮೂರ್ತಿಯೊಬ್ಬರಿದ್ದರು. 1977ರಲ್ಲಿ ಅವರು ಭಾರತದ ಮುಖ್ಯನ್ಯಾಯಮೂರ್ತಿ ಆಗಬೇಕಿತ್ತು. ಅದಕ್ಕೆ ಬೇಕಿದ್ದ ಸೇವಾ ಜ್ಯೇಷ್ಠತೆ ಮತ್ತು ಇತರೆ ಅರ್ಹತೆಗಳು ಅವರಿಗಿದ್ದವು. ಆದರೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಖನ್ನಾ ಅವರಿಗೆ ಸಲ್ಲಬೇಕಿದ್ದ ಹುದ್ದೆಯನ್ನು ತಪ್ಪಿಸುತ್ತಾರೆ. ಆ ಸ್ಥಾನಕ್ಕೆ ಖನ್ನಾ ಅವರಿಗಿಂತ ಕಿರಿಯರೊಬ್ಬರನ್ನು ತರುತ್ತಾರೆ. ತುರ್ತುಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿದು ಖನ್ನಾ ನೀಡಿದ್ದ ಭಿನ್ನಮತದ ತೀರ್ಪು ಇಂದಿರಾ ಅವರನ್ನು ಕೆರಳಿಸಿರುತ್ತದೆ. ತಮಗೆ ಆದ ಅಪಮಾನವನ್ನು ಪ್ರತಿಭಟಿಸಿ ಎಚ್ ಆರ್ ಖನ್ನಾ ರಾಜೀನಾಮೆ ನೀಡುತ್ತಾರೆ. ಇಂದು ಅವರಿಲ್ಲ, ಆದರೆ ಅವರ ತೀರ್ಪು ಉಳಿದಿದೆ. ಎಡಿಎಂ ಜಬಲ್ಪುರ್ ವರ್ಸಸ್ ಶಿವಕಾಂತ ಶುಕ್ಲಾ ಪ್ರಕರಣದ ತೀರ್ಪು ಎಂದೇ ಹೆಸರುವಾಸಿಯಾಗಿದೆ. ಮೂಲಭೂತ ಹಕ್ಕುಗಳ ಜೀವ ಜೀವಾಳಗಳೇ ಆಗಿರುವ ಜೀವದ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ಅವರು ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲೂ ಎತ್ತಿ ಹಿಡಿಯುತ್ತಾರೆ. ತುರ್ತುಪರಿಸ್ಥಿತಿಯಾದರೇನಂತೆ ಪ್ರಾಣದ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ಮೊಟಕು ಮಾಡುವಂತಿಲ್ಲ, ಆಳುವವರ ಮರ್ಜಿಗೆ ಒಪ್ಪಿಸುವುದು ಸಲ್ಲದು ಎನ್ನುತ್ತಾರೆ. ಖನ್ನಾ ಅವರ ಈ ನಡೆ ಕಾನೂನಿನ ಪಾರಮ್ಯ ಮತ್ತು ಸಾಂವಿಧಾನಿಕ ಮೌಲ್ಯಗಳ ನಿರ್ಭೀತ ಪ್ರತಿಪಾದನೆ ಎಂದು ಬಣ್ಣಿಸಲಾಗಿದೆ.
ಈ ಮೊದಲು ತುರ್ತುಪರಿಸ್ಥಿತಿಯ (1975-1977) ಕಾಲದಲ್ಲಿ ಇಂದಿರಾ ಗಾಂಧಿ ಎಚ್.ಆರ್. ಖನ್ನಾ ಸರ್ಕಾರದ ಶಿಫಾರಸಿನ ಮೇರೆಗೆ ಮೂಲಭೂತ ಹಕ್ಕುಗಳನ್ನು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅಮಾನತುಗೊಳಿಸಿರುತ್ತಾರೆ.
ಸುಪ್ರೀಮ್ ಕೋರ್ಟಿನಲ್ಲಿ ಎಚ್.ಆರ್. ಖನ್ನಾ ಅವರ ಬಹುತೇಕ ಸಹೋದ್ಯೋಗಿ ನ್ಯಾಯಮೂರ್ತಿಗಳು ತುರ್ತುಪರಿಸ್ಥಿತಿಗೆ ತಾಳ ಹಾಕಿದ್ದ ಹೊತ್ತಿನಲ್ಲಿ ಎಚ್.ಆರ್. ಖನ್ನಾ ಅವರ ಈ ದಿಟ್ಟ ತೀರ್ಪು ಚರಿತ್ರೆಯಲ್ಲಿ ಚಿನ್ನದ ಅಕ್ಷರಗಳಲ್ಲಿ ಕೆತ್ತಿಟ್ಟಂತೆ ಉಳಿದು ಬೆಳಗುತ್ತಿದೆ. ಆಳುವವರ ಕಣ್ಣಲ್ಲಿ ಕಣ್ಣು ನೆಟ್ಟು ನ್ಯಾಯವನ್ನು ಎತ್ತಿ ಹಿಡಿಯುವ ದಿಟ್ಟತನ ಖನ್ನಾ ಅವರದಾಗಿತ್ತು. ಇತ್ತೀಚಿನ ದಶಕಗಳಲ್ಲಿ ವಿರಳವಸ್ತುವಾಗುತ್ತಿದೆ.
ನೈತಿಕ ಸಮತೋಲನವನ್ನು ಕಾಲವೇ ಮರುಸ್ಥಾಪಿಸುವುದೂ ಇದೆ. ಅದನ್ನು ಇಂಗ್ಲಿಷಿನಲ್ಲಿ Poetic Justice ಎನ್ನುತ್ತಾರೆ. ಕನ್ನಡದಲ್ಲಿ ಕಾವ್ಯಾತ್ಮಕ ನ್ಯಾಯ ಎಂದು ಕರೆಯಬಹುದೇನೋ. 1977ರಲ್ಲಿ ಎಚ್. ಆರ್. ಖನ್ನಾ ಅವರಿಗೆ ಆಗಿದ್ದ ಐತಿಹಾಸಿಕ ಅನ್ಯಾಯವನ್ನೂ ಕಾಲವೇ ಮರುಸ್ಥಾಪಿಸುತ್ತದೆ. ಕಳೆದ ವರ್ಷ ನವೆಂಬರ್ ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರುತ್ತಾರೆ ನ್ಯಾಯಮೂರ್ತಿ ಸಂಜೀವ್ ಖನ್ನಾ. ಅವರು ಮತ್ಯಾರೂ ಅಲ್ಲ, ನ್ಯಾಯಮೂರ್ತಿ ಸಂಜೀವ್ ಖನ್ನಾ. ಖುದ್ದು ಎಚ್.ಆರ್. ಖನ್ನಾ ಅವರ ತಮ್ಮ ನ್ಯಾಯಮೂರ್ತಿ ಡಿ.ಆರ್. ಖನ್ನಾ (ದೇವರಾಜ ಖನ್ನಾ) ಅವರ ಮಗ.
ತಮ್ಮ ಚಿಕ್ಕಪ್ಪ ಎಚ್.ಆರ್.ಖನ್ನಾ ಹಾಕಿಕೊಟ್ಟಿದ್ದ ನಿಷ್ಠುರ ನ್ಯಾಯದ ಹಾದಿಯನ್ನು ಆದರ್ಶ ಆಗಿಸಿಕೊಂಡಿದ್ದ ಸಂಜೀವ್ ಖನ್ನಾ ಮಂಗಳವಾರ (ಮೇ 13) ಸಂಜೆ ನಿವೃತ್ತರಾದರು. ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಖನ್ನಾ ಅವರ ಜಾಗಕ್ಕೆ ಬಂದಿದ್ದಾರೆ.
ನಿವೃತ್ತಿಯ ನಂತರ ಯಾವುದೇ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಸಂಜೀವ ಖನ್ನಾ ಘೋಷಿಸಿದ್ದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ನಿವೃತ್ತಿಯ ನಂತರ ನ್ಯಾಯಮೂರ್ತಿಗಳಿಗೆ ಸರ್ಕಾರಗಳು, ಪಕ್ಷಗಳು ನೀಡುತ್ತ ಬಂದಿರುವ ಅನೇಕ ಹುದ್ದೆಗಳಿರುತ್ತವೆ. ತನ್ನ ಇಚ್ಛೆಗೆ ತಕ್ಕಂತೆ ನ್ಯಾಯವನ್ನು ಬಾಗಿಸುವವರಿಗೆ ಸರ್ಕಾರ ಈ ಹುದ್ದೆಗಳನ್ನು ನೀಡುತ್ತದೆ. ರಾಜ್ಯಸಭಾ ಸದಸ್ಯತ್ವದಿಂದ ಹಿಡಿದು ರಾಜ್ಯಪಾಲರವರೆಗೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಹಿಡಿದು, ಕಾನೂನು ಆಯೋಗದವರೆಗೆ ಅನೇಕಾನೇಕ ಸ್ಥಾನಮಾನಗಳಿವೆ. ನವದೆಹಲಿಯ ಹೃದಯಭಾಗದಲ್ಲಿ ಸರ್ಕಾರಿ ಬಂಗಲೆ, ವಾಹನ, ವೇತನ ಭತ್ಯದ ಅನುಕೂಲಗಳು. ದೇಶದ ಮುಖ್ಯ ನ್ಯಾಯಮೂರ್ತಿಯಾಗಿದ್ದವರೊಬ್ಬರು ನಿವೃತ್ತಿಯ ನಂತರ ಕೇರಳದ ರಾಜ್ಯಪಾಲರಂತಹ ಹುದ್ದೆಗೆ, ಮತ್ತೊಬ್ಬರು ರಾಜ್ಯಸಭಾ ಸದಸ್ಯತ್ವಕ್ಕೆ ಮನಸೋತ ದುರಂತವೂ ನಮ್ಮ ಕಣ್ಣಮುಂದಿದೆ. ಹಾಗೆಂದಾಕ್ಷಣ ನಿವೃತ್ತಿಯ ನಂತರ ಹುದ್ದೆಗಳನ್ನು ಒಪ್ಪಿಕೊಳ್ಳುವ ಎಲ್ಲರೂ ರಾಜಿ ಮಾಡಿಕೊಂಡವರು ಎಂದುಕೊಳ್ಳಬೇಕಿಲ್ಲ. ಆದರೆ ಬಹುತೇಕರು ನಿವೃತ್ತಿಯ ನಂತರದ ಲಾಭಗಳ ಮೇಲೆ ಕಣ್ಣಿಟ್ಟವರೇ ಆಗಿರುತ್ತಾರೆ.
ಈ ಹಂತದಲ್ಲಿ ಎಚ್ ಆರ್ ಖನ್ನಾ ಅವರನ್ನು ಪುನಃ ಉಲ್ಲಖಿಸಬೇಕಾಗುತ್ತದೆ. ತುರ್ತುಪರಿಸ್ಥಿತಿಯ ನಂತರ ಅಧಿಕಾರಕ್ಕೆ ಬರುವ ಸರ್ಕಾರ ಖನ್ನಾ ಅವರನ್ನು ಕಾನೂನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತದೆ. ಅವರನ್ನು ಕೇಂದ್ರ ಕಾನೂನು ಮಂತ್ರಿಯನ್ನಾಗಿಯೂ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆದರೆ ಮೂರೇ ದಿನಗಳಲ್ಲಿ ಅವರು ರಾಜೀನಾಮೆ ನೀಡಿ ಹೊರಬರುತ್ತಾರೆ. 1982ರಲ್ಲಿ ಗ್ಯಾನಿ ಜೈಲ್ ಸಿಂಗ್ ಗೆ ಎದುರಾಗಿ ಪ್ರತಿಪಕ್ಷಗಳ ಅಭ್ಯರ್ಥಿಯನ್ನಾಗಿ ರಾಷ್ಟ್ರಪತಿ ಚುನಾವಣೆಗೆ ಅವರನ್ನು ಹೂಡಲಾಗುತ್ತದೆ. ಗ್ಯಾನಿ ಗೆಲ್ಲುತ್ತಾರೆ, ಖನ್ನಾ ಸೋಲುತ್ತಾರೆ. ನಿವೃತ್ತಿಯ ನಂತರ ಹುದ್ದೆಗಳನ್ನು ಒಪ್ಪಿಕೊಳ್ಳಬಾರದೆಂಬ ತತ್ವದ ಅಣಕವೂ ಇಲ್ಲಿ ಜರುಗಿದ್ದೀತು.
ಭಾರತ ಮತ್ತೆಂದಾದರೂ ಸ್ವಾತಂತ್ರ್ಯ ಮತ್ತು ಜನತಂತ್ರದ ಹಾದಿ ಹಿಡಿದದ್ದೇ ಆದರೆ, ಯಾರಾದರೊಬ್ಬರು ಸುಪ್ರೀಮ್ ಕೋರ್ಟಿನಲ್ಲಿ ಖನ್ನಾ ಅವರಿಗೆ ಸೂಕ್ತ ಸ್ಮಾರಕವನ್ನು ನಿರ್ಮಿಸುವುದು ನಿಶ್ಚಿತ ಎಂದು ದಿ ನ್ಯೂಯಾರ್ಕ್ ಟೈಮ್ಸ್ 1976ರಲ್ಲಿ ಬರೆಯುತ್ತದೆ. ಅಂತಹ ಯಾವ ಸ್ಮಾರಕದ ನಿರ್ಮಾಣವೂ ಆಗಿಲ್ಲ. ಆದರೆ ಸುಪ್ರೀಮ್ ಕೋರ್ಟಿನ ಎರಡನೆಯ ನಂಬರಿನ ಕೋರ್ಟ್ ಹಾಲ್ ಗೋಡೆಯ ಮೇಲೆ ಎಚ್. ಆರ್. ಖನ್ನಾ ಭಾವಚಿತ್ರವಿದೆ. ಕಾಕತಾಳೀಯವೋ ಎಂಬಂತೆ ಸಂಜೀವ ಖನ್ನಾ ಅವರು ತಮ್ಮ ಸುಪ್ರೀಮ್ ಕೋರ್ಟ್ ಪಾಳಿಯನ್ನು ಇದೇ ಎರಡನೆಯ ನಂಬರಿನ ಕೋರ್ಟಿನಿಂದಲೇ ಆರಂಭಿಸುತ್ತಾರೆ.
ಇಂದಿನಿಂದ ಭಾರತದ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಬಿ ಆರ್ ಗವಾಯಿ ಕೂಡ ಖನ್ನಾ ಅವರ ಈ ಮೇಲ್ಪಂಕ್ತಿಯನ್ನು ಅನುಸರಿಸಿರುವುದು ಜನತಂತ್ರದ ಪಾಲಿಗೆ, ನ್ಯಾಯಾಂಗದ ಸ್ವಾಸ್ಥ್ಯಕ್ಕೆ ಚೇತೋಹಾರಿ.
ಹತ್ತು ವರ್ಷಗಳ ಹಿಂದೆ ಮುಖ್ಯನ್ಯಾಯಮೂರ್ತಿಯಾಗಿದ್ದ ಆರ್ ಎಂ ಲೋಧಾ ಕೂಡ ಇದೇ ಅನುಶಾಸನವನ್ನು ರೇಖಾಂಕಿತಗೊಳಿಸಿದ್ದರು. ನಿವೃತ್ತಿಯ ನಂತರ ಕನಿಷ್ಠ ಎರಡು ವರ್ಷಗಳ ತನಕ ಯಾವುದೇ ಹುದ್ದೆಗಳನ್ನು ಸ್ವೀಕರಿಸಬಾರದು ಎಂದಿದ್ದರು.
ಯುಪಿಎ ಎರಡನೆಯ ಅವಧಿಯಲ್ಲಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿದ್ದಾಗ ಬಿಜೆಪಿ ನಾಯಕ ಅರುಣ್ ಜೇಟ್ಲಿ ಇದೇ ತತ್ವವನ್ನು ಪ್ರತಿಪಾದಿಸಿದ್ದರು. ನ್ಯಾಯಾಧೀಶರ ತೀರ್ಪುಗಳು ನಿವೃತ್ತಿಯ ನಂತರದ ಹುದ್ದೆಗಳಿಂದ ಪ್ರಭಾವಿತವಾಗಿರುತ್ತವೆ ಎಂದಿದ್ದರು. ಆದರೆ ಅವರ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಳೆದ ಹತ್ತು ವರ್ಷಗಳಲ್ಲಿ ಈ ತತ್ವವನ್ನು ಗಾಳಿಗೆ ತೂರಿರುವುದು ಕಣ್ಣಿಗೆ ರಾಚುತ್ತದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ತೀರ್ಪುಗಳು ನಿಚ್ಚಳ ನಿರ್ಭೀತ ಚಿಂತನೆಯನ್ನು ಪ್ರತಿಬಿಂಬಿಸಿದವು ಮತ್ತು ಮಾನವ ಹಕ್ಕುಗಳ ವಿಚಾರದಲ್ಲಿ ಸಂವೇದನಾಶೀಲವಾಗಿದ್ದವು. ನ್ಯಾಯಾಂಗ ತೀರ್ಪುಗಳು ಮತ್ತು ಆಡಳಿತಾತ್ಮಕ ನಿರ್ಧಾರಗಳೆರಡರಲ್ಲೂ, ಖನ್ನಾ ತಮ್ಮದೇ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆಂಬ ಮುಖ್ಯ ನ್ಯಾಯಮೂರ್ತಿ ಗವಾಯಿ ಹೇಳಿಕೆಯಲ್ಲಿ ಇನಿತೂ ಅತಿಶಯವಿಲ್ಲ.
ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳಿಂದ ತೀರಾ ಇತ್ತೀಚೆಗೆ ನ್ಯಾಯಮೂರ್ತಿ ಖನ್ನಾ ಅವರು, ವೈಯಕ್ತಿಕವಾಗಿ ಮತ್ತು ನ್ಯಾಯಾಂಗದ ಮೇಲೆ ದಾಳಿಗಳನ್ನು ಎದುರಿಸಿದರು. ಈ ದಾಳಿಗಳ ನಡುವೆ ಸ್ಥಿರವಾಗಿ ನಿಂತದ್ದು ಅವರ ಅಗ್ಗಳಿಕೆ.
1991ರ ಪೂಜಾ ಸ್ಥಳಗಳ ಕಾಯ್ದೆಯ ವಿಚಾರದಲ್ಲಿ ಖನ್ನಾ ಪೀಠ ಈ ಹಿಂದಿನ ಪೀಠದ ಕಿಡಿಗೇಡಿತನವನ್ನು ಸರಿಪಡಿಸುವ ಅವಕಾಶವನ್ನು ಬಳಸಿಕೊಳ್ಳಲಿಲ್ಲ ಎಂಬ ಟೀಕೆಯಿದೆ. 2025ರ ವಕ್ಫ್ (ತಿದ್ದುಪಡಿ) ಕಾಯ್ದೆಯ ನಿಬಂಧನೆಗಳನ್ನು ತಡೆಹಿಡಿಯುವ ಅವಕಾಶದಿಂದಲೂ ಅವರು ನಿವೃತ್ತಿಯ ಕಾರಣ ನೀಡಿದೆ ಹಿಂದೆ ಸರಿದರು.
ಅಲಹಾಬಾದ್ ಹೈಕೋರ್ಟ್‌ನ ಒಬ್ಬ ನ್ಯಾಯಮೂರ್ತಿಯೊಬ್ಬರು ವಿಶ್ವಹಿಂದು ಪರಿಷತ್ ವೇದಿಕೆಯಿಂದ ನೀಡಿದ ಮುಸ್ಲಿಮ್ ದ್ವೇಷದ ಹೇಳಿಕೆ ಆಘಾತ ಉಂಟು ಮಾಡುವಂತಹುದು. ಸಾಮಾಜಿಕ ಸಾಮರಸ್ಯದ ನೇಯ್ಗೆಯನ್ನು ಹರಿಯುವಂತಹುದಾಗಿತ್ತು. ಖನ್ನಾ ಅವರು ಆ ನ್ಯಾಯಮೂರ್ತಿಯನ್ನು ಕರೆದು, ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಕೇಳಿಕೊಂಡರು. ಆದರೆ ಆ ನ್ಯಾಯಮೂರ್ತಿ ಹಾಗೆ ಮಾಡದೆ ಧಿಕ್ಕರಿಸಿದ್ದಾರೆ.
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಸಂಭವಿಸಿದ ಬೆಂಕಿ ಮತ್ತು ಸುಟ್ಟ ನೋಟುಗಳ ಪ್ರಕರಣವು ನ್ಯಾಯಮೂರ್ತಿ ಖನ್ನಾ ಅವರನ್ನು ಅಗ್ನಿಪರೀಕ್ಷೆಗೆ ಒಡ್ಡಿತು. ಮೂವರು ನ್ಯಾಯಾಧೀಶರ ಸಮಿತಿಯನ್ನು ನೇಮಿಸಿದ ಅವರ ತ್ವರಿತ ಕ್ರಮ ಸ್ವಾಗತಾರ್ಹವಾಗಿತ್ತು. ವರ್ಮಾ ರಾಜೀನಾಮೆ ನೀಡಲು ನಿರಾಕರಿಸಿದಾಗ, ಪದಚ್ಯುತಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಭಾರತದ ರಾಷ್ಟ್ರಪತಿಗೆ ಮತ್ತು ಸರ್ಕಾರಕ್ಕೆ ಕಳುಹಿಸಿದ ಅವರ ಕ್ರಮ ಪ್ರಶಂಸಾರ್ಹ.
ನ್ಯಾಯಾಂಗದಲ್ಲಿ ಸಾರ್ವಜನಿಕ ವಿಶ್ವಾಸವನ್ನು ನಡೆನುಡಿಗಳಿಂದ ಸಂಪಾದಿಸಬೇಕೇ ವಿನಾ ಆಜ್ಞೆಆದೇಶಗಳನ್ನು ನೀಡಿ ಪಡೆಯುವಂತಿಲ್ಲ ಎಂದವರು ಖನ್ನಾ. ಹಿಂದೆ ಮುಂದೆ ಯಾವುದೇ ಮೈಗಾವಲಿನವರು ಇಲ್ಲದೆ ನ್ಯಾಯಾಲಯದಲ್ಲಿ ಮತ್ತು ನವದೆಹಲಿಯ ಲೋಧಿ ಗಾರ್ಡನ್ ನ ವಾಯುವಿಹಾರದಲ್ಲಿ ಒಂಟಿಯಾಗಿ ನಡೆದಾಡಿದ ವಿರಳ ಸಿಜೆಐ ಆಗಿದ್ದರು.
ಆಳುವವರಿಗೆ ಅಂಕುಶ ಇರಿಸಲು ಇಂತಹ ಖನ್ನಾಗಳನ್ನು ಮೀರಿಸಿದ ನಿಷ್ಠುರ ನಡೆಯ ಒಡೆಯರು ನ್ಯಾಯಾಂಗವನ್ನು ಮುನ್ನಡೆಸುವ ಕಾಲ ಬರಬೇಕಿದೆ.
