‘ಈ ದಿನ’ ಸಂಪಾದಕೀಯ | ಸರ್ಕಾರಗಳು ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವುದು ಅತ್ಯಂತ ಅಪಾಯಕಾರಿ

Date:

Advertisements
ಯಾವುದೇ ಧರ್ಮದ ತೀವ್ರವಾದಿ ಸಂಘಟನೆಗಳೇ ಆಗಲಿ, ಸರ್ಕಾರಗಳು ಮೃದು ಧೋರಣೆ ತಳೆದು ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವುದು – ಆ ಸಂಘಟನೆಗಳ ಚಟುವಟಿಕೆಗಳನ್ನು ನೇರವಾಗಿ ಬೆಂಬಲಿಸಿದಂತೆ. ಈ ವಿಷಯದಲ್ಲಿ, ಕರ್ನಾಟಕದ ಕಾಂಗ್ರೆಸ್ ಪಕ್ಷಕ್ಕೂ, ಬಿಜೆಪಿಗೂ ಖಂಡಿತ ವ್ಯತ್ಯಾಸವಿಲ್ಲ

ಕೋಮು ಸಂಘರ್ಷಕ್ಕೆ ಕಾರಣವಾದ ಆರೋಪಿಗಳನ್ನು ನ್ಯಾಯಾಲಯಗಳು ಖುಲಾಸೆ ಮಾಡುತ್ತಿರುವುದು ಇತ್ತೀಚಿನ ಆಘಾತಕಾರಿ ವಿದ್ಯಮಾನ. ಆದರೆ, ಅದಕ್ಕಿಂತಲೂ ಗಂಭೀರ ಸಂಗತಿ ಎಂದರೆ, ಖುದ್ದು ಸರ್ಕಾರಗಳೇ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವಲ್ಲಿ ಪೈಪೋಟಿ ನಡೆಸುತ್ತಿರುವುದು. ಕರ್ನಾಟಕದಲ್ಲಿ ಕಳೆದ ಎರಡು ಅವಧಿಯ ಸರ್ಕಾರಗಳು ಒಟ್ಟು 567 ಕೇಸುಗಳನ್ನು ವಾಪಸ್ ಪಡೆದಿರುವುದು ಇದಕ್ಕೆ ಸಾಕ್ಷಿ. ಇಂಗ್ಲಿಷ್ ದೈನಿಕವೊಂದಕ್ಕೆ ಆರ್‌ಟಿಐನಡಿ ಸಿಕ್ಕ ಮಾಹಿತಿಯಿಂದ ಈ ಸಂಗತಿ ಬೆಳಕಿಗೆ ಬಂದಿದೆ.

2019ರ ಜುಲೈನಿಂದ 2023ರ ಏಪ್ರಿಲ್‌ವರೆಗಿನ ನಾಲ್ಕು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಒಟ್ಟು 385 ಕ್ರಿಮಿನಲ್ ಕೇಸುಗಳನ್ನು ಹಿಂದಕ್ಕೆ ಪಡೆದಿದೆ. ಈ ಪೈಕಿ ಬರೋಬ್ಬರಿ 182 ಕೇಸುಗಳು ದ್ವೇಷಭಾಷಣ, ಗೋರಕ್ಷಣೆ ಹೆಸರಿನಲ್ಲಿ ದೌರ್ಜನ್ಯ ಹಾಗೂ ಕೋಮು ಸಂಘರ್ಷಗಳಿಗೆ ಸಂಬಂಧಿಸಿವೆ. ಬಿಜೆಪಿ ಸರ್ಕಾರದ ಈ ಕ್ರಮದಿಂದ ಎರಡು ಸಾವಿರಕ್ಕೂ ಹೆಚ್ಚು ಆರೋಪಿಗಳು ಶಿಕ್ಷೆಗೊಳಗಾಗಬಹುದಾದ ಸಾಧ್ಯತೆ ತಪ್ಪಿದಂತಾಗಿದೆ. ಈ ಪೈಕಿ, ಒಂದು ಸಾವಿರಕ್ಕೂ ಹೆಚ್ಚು ಮಂದಿ ಆರೋಪಿಗಳು ಬಲಪಂಥೀಯ ಸಂಘಟನೆಗಳಿಗೆ ಸೇರಿದವರು. ಅಲ್ಲದೆ, ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮತ್ತು ಹೊನ್ನಾಳಿಯ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟಿರುವುದು 2021ರ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ. “ಹಾಲಿ ಅಥವಾ ಮಾಜಿ ಶಾಸಕರು, ಸಂಸದರ ವಿರುದ್ಧ ದಾಖಲಾಗುವ ಕ್ರಿಮಿನಲ್ ಕೇಸುಗಳನ್ನು ಹೈಕೋರ್ಟ್ ಒಪ್ಪಿಗೆ ಇಲ್ಲದೆ ಸರ್ಕಾರಗಳು ರದ್ದು ಮಾಡುವಂತಿಲ್ಲ,” ಎಂಬುದು ಸುಪ್ರೀಂ ಕೋರ್ಟ್‌ನ ಕಟ್ಟಪ್ಪಣೆ.

ಈ ಲೇಖನ ಓದಿದ್ದೀರಾ?: ಈ ದಿನ ಸಂಪಾದಕೀಯ | ಸಲಿಂಗ ವಿವಾಹ ಕಾನೂನುಬದ್ಧಗೊಂಡರೆ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆಯೇ?

Advertisements

ಇನ್ನು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ (2013-2018) ಕೋಮು ಸಂಘರ್ಷಗಳಿಗೆ ಸಂಬಂಧಿಸಿದ 182 ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯಲಾಗಿತ್ತು. ಈ ಪೈಕಿ 176 ಪ್ರಕರಣಗಳಲ್ಲಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಇದೀಗ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಗಳ 1,600 ಮಂದಿ ಕಾರ್ಯಕರ್ತರು ಆರೋಪಿಗಳಾಗಿದ್ದರು. ಸರ್ಕಾರದಿಂದ ಈ ನಿರ್ಧಾರ ಪ್ರಕಟವಾದಾಗ ಬಿಜೆಪಿ ಅತ್ಯಂತ ಕಟುವಾಗಿ ವಿರೋಧಿಸಿತ್ತು ಮತ್ತು ವೋಟ್‌ಬ್ಯಾಂಕ್ ರಾಜಕಾರಣ ಎಂದು ಜರೆದಿತ್ತು. ಆದರೆ ನಂತರದಲ್ಲಿ, ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕಿಂತಲೂ ದುಪ್ಪಟ್ಟು ಕ್ರಿಮಿನಲ್ ಕೇಸುಗಳನ್ನು ವಾಪಸ್ ಪಡೆದು, ಸರ್ಕಾರ ನಡೆಸುವುದಕ್ಕಿಂತ ರಾಜಕೀಯ ಲಾಭಗಳನ್ನು ಪಡೆಯುವುದೇ ಮುಖ್ಯ ಎಂದು ಸಾಬೀತು ಮಾಡಿದೆ. ಯಾವುದೇ ಧರ್ಮದ ತೀವ್ರವಾದಿ ಸಂಘಟನೆಗಳೇ ಆಗಲಿ, ಸರ್ಕಾರಗಳು ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವುದು – ಆ ಸಂಘಟನೆಗಳ ಚಟುವಟಿಕೆಗಳನ್ನು ನೇರವಾಗಿ ಬೆಂಬಲಿಸಿದಂತೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ವರ್ತನೆಗೂ, ಬಿಜೆಪಿ ವರ್ತನೆಗೂ ಖಂಡಿತ ಯಾವುದೇ ವ್ಯತ್ಯಾಸವಿಲ್ಲ.

ಈ ಲೇಖನ ಓದಿದ್ದೀರಾ?: ಈ ದಿನ ಸಂಪಾದಕೀಯ | ಪುಲ್ವಾಮಾ ದುರಂತದ ಸ್ಫೋಟಕ ಸತ್ಯಗಳು- ಸರ್ಕಾರ ಮೌನ ಮುರಿಯಬೇಕು

ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವ ಪ್ರಕ್ರಿಯೆ ಸರ್ಕಾರದ ಸುತ್ತಲೇ ಗಿರಕಿ ಹೊಡೆಯುವುದರಿಂದಲೇ ರಾಜಕೀಯ ಪಕ್ಷಗಳಿಗೆ ಈ ಕೆಲಸ ಅತ್ಯಂತ ಸಲೀಸು. ಮೊದಲಿಗೆ ಗೃಹಸಚಿವರು ಪ್ರಸ್ತಾವನೆ ಸಲ್ಲಿಸುತ್ತಾರೆ. ಸಂಪುಟ ಉಪ ಸಮಿತಿ ಪ್ರಸ್ತಾವನೆಯನ್ನು ಅನುಮೋದಿಸುತ್ತದೆ. ಕೊನೆಯ ಹಂತದಲ್ಲಿ, ಸಂಪುಟ ಸಮಿತಿ ಒಪ್ಪಿಗೆ ಸೂಚಿಸಿದರೆ ಮುಗಿಯಿತು. ಈ ನಡುವೆ, ಸಂಪುಟ ಉಪ ಸಮಿತಿಯು ಪೊಲೀಸರು ಮತ್ತು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯುವುದು ಕಡ್ಡಾಯ. ಆದರೆ, ಆ ಅಭಿಪ್ರಾಯವನ್ನು ಪರಿಗಣಿಸಬೇಕೆಂಬ ಯಾವ ನಿಯಮವೂ ಇಲ್ಲ. ಬಿಜೆಪಿ ಸರ್ಕಾರ 2022ರಲ್ಲಿ ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದಾಗ, ಪೊಲೀಸರು ಮತ್ತು ಕಾನೂನು ಇಲಾಖೆ ಅಸಮ್ಮತಿ ಸೂಚಿಸಿದರೂ, ಅದನ್ನು ಪರಿಗಣಿಸದೆ ರಾಜಕೀಯ ಪಕ್ಷದ ಕಾರ್ಯಸೂಚಿಯಂತೆ ನಿರ್ಧಾರ ಕೈಗೊಳ್ಳಲಾಗಿತ್ತು.

ಪ್ರತಿಭಟನೆಗಳ ಸಮಯದಲ್ಲಿ, ಜನಪರ ಚಳವಳಿಗಳ ಸಂದರ್ಭದಲ್ಲಿ ಅಮಾಯಕರ ಮೇಲೂ ಉದ್ದೇಶಪೂರ್ವಕವಾಗಿ ಕ್ರಿಮಿನಲ್ ಕೇಸುಗಳು ದಾಖಲಾಗುವುದು ನಿಜ. ಆದರೆ, ಅದನ್ನೇ ನೆಪವಾಗಿಟ್ಟುಕೊಂಡು ಸರ್ಕಾರಗಳು ಸಾರಾಸಗಟಾಗಿ ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವುದನ್ನು ಸಮರ್ಥಿಸುವುದು ಸರಿಯಲ್ಲ. ಹೀಗೆಯೇ ಮುಂದುವರಿದರೆ, ಈ ಬೆಳವಣಿಗೆ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ ಮತ್ತು ಕಾರ್ಯಸೂಚಿಯ ಭಾಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ, ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವ ಸರ್ಕಾರಗಳ ನಿರ್ಧಾರಗಳನ್ನು ನ್ಯಾಯಾಂಗವು, ಸಮಾಜಘಾತುಕ ಮತ್ತು ಅತ್ಯಂತ ಅಪಾಯಕಾರಿ ನಡೆ ಎಂದೇ ಪರಿಗಣಿಸಬೇಕಾದ ಅನಿವಾರ್ಯತೆ ಇದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X