ಇಂತಹ ಮನುಷ್ಯತ್ವವನ್ನು ಅಣಕಿಸುವ, ಹೃದಯ ಚೂರಾಗಿಸುವ ಈ ಸುದ್ದಿಗಳು ಎಲ್ಲಿಂದ ಬರುತ್ತಿವೆ ಎಂದು ನೋಡಿದರೆ ಅಲ್ಲೊಂದು ಸಮಾನ ಅಂಶ ಕಾಣುತ್ತದೆ. ಅದು ಸುಶಿಕ್ಷಿತ, ಪ್ರತಿಷ್ಠಿತ ಕುಟುಂಬ, ಆರ್ಥಿಕವಾಗಿ ಸದೃಢವಾಗಿರುವ ಯುವ ದಂಪತಿಯ ಕಡೆಯಿಂದ ಬರುತ್ತಿವೆ. ಉತ್ತಮ ಶಿಕ್ಷಣ, ಕೈ ತುಂಬ ಸಂಬಳ ಬರುವ ಉದ್ಯೋಗ, ಆಯ್ಕೆಯ ಸಂಗಾತಿ, ಅದ್ದೂರಿ ಮದುವೆ, ಎಲ್ಲವೂ ಆದ ನಂತರ ಇಂತಹದೊಂದು ದುರಂತವನ್ನು ತಂದುಕೊಳ್ಳುವ ಮನಸ್ಥಿತಿ ಯಾಕೆ ಬರುತ್ತದೆ ಎಂಬುದು ಚಿಂತಿಸಬೇಕಾದ ವಿಚಾರ.
ಬೆಂಗಳೂರಿನ ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಮಹಾರಾಷ್ಟ್ರ ಮೂಲಕ ಟೆಕ್ಕಿ ತನ್ನ ಪತ್ನಿ ಗೌರಿಯ ಕತ್ತು ಸೀಳಿ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಟ್ಟು ಬಳಿಕ ಪೊಲೀಸರಿಗೆ, ಮಹಾರಾಷ್ಟ್ರದಲ್ಲಿರುವ ಪತ್ನಿಯ ಪೋಷಕರಿಗೆ ತಾನೇ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಗಂಡ, ಹೆಂಡತಿ ಮಧ್ಯೆ ಜಗಳವಾಗಿ ಪತ್ನಿಯನ್ನು ರಾಕೇಶ್ ತುಂಡು, ತುಂಡಾಗಿ ಕತ್ತರಿಸಿದ್ದಾನೆ ಎನ್ನಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ‘ವರ್ಕ್ ಫ್ರಂ ಹೋಂ’ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದನಂತೆ. ಇಬ್ಬರೂ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು. ವಯಸ್ಸು ಇನ್ನೂ 35ರ ಆಸುಪಾಸು. ಪತ್ನಿಯ ಸಾವು, ಪತಿ ಜೈಲು ಪಾಲು. ಸಾಧಿಸಿದ್ದೇನು?
2023ರಲ್ಲಿ ಅಫ್ತಾಬ್ ಪೂನವಾಲಾ ದೆಹಲಿಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ತನ್ನೊಂದಿಗೆ ಲಿವಿನ್ ಸಂಬಂಧದಲ್ಲಿದ್ದ ಪ್ರೇಯಸಿ ಶ್ರದ್ಧಾ ವಾಕರ್‌ಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿರಿಸಿ ನಂತರ ನಗರದ ಪಾರ್ಕ್, ನದಿ ಸೇರಿದಂತೆ ನಾನಾ ಸ್ಥಳಗಳಲ್ಲಿ ಎಸೆದಿದ್ದ. ತಮ್ಮ ಮಗಳು ಆರು ತಿಂಗಳಿನಿಂದ ಸಂಪರ್ಕಕ್ಕೆ ಸಿಗದಿದ್ದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ ತರುವಾಯ ಈ ಪ್ರಕರಣ ಬೆಳಕಿಗೆ ಬಂದಿತ್ತು. ಯುವಕ ಮುಸ್ಲಿಂ, ಯುವತಿ ಹಿಂದೂ ಎಂಬ ಕಾರಣಕ್ಕೆ ಮಾಧ್ಯಮಗಳೂ ಭಾರೀ ಸುದ್ದಿ ಮಾಡಿದ್ದವು. ಆದರೆ ಆನಂತರ ಇಂತಹ ಪ್ರಕರಣಗಳು ಉನ್ಮಾದ ಇಲ್ಲವೇ ಚಿತ್ತವಿಕಾರದಂತೆ ಘಟಿಸಿದವು.
ಸಂಗಾತಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ತುಂಬಿಟ್ಟ ಪತಿ. ಪತ್ನಿಯನ್ನು ಕೊಂದು ಶವವನ್ನು ಸೂಟ್‌ಕೇಸಿನಲ್ಲಿ ತುಂಬಿ ಸಾಗಿಸಿದ ಪತಿ… ಎಂಬ ಸುದ್ದಿಗಳು ಮತ್ತೆ ಮತ್ತೆ ವರದಿಯಾದವು. ಈ ಮಧ್ಯೆ ಮಹಿಳೆಯರೂ ಇದೇ ಮಾದರಿ ಅನುಸರಿಸಿದರು. ಪತಿಯನ್ನು ಕೊಂದು ಮೃತದೇಹವನ್ನು ಸೂಟ್‌ಕೇಸಿನಲ್ಲಿ ತುಂಬಿಸಿ ಎಸೆಯಲು ಹೊರಟಿದ್ದ ಪತ್ನಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು. ಪತಿಯ ಜೊತೆ ಮನಸ್ತಾಪವಾಗಿ ಬೆಂಗಳೂರಿನಲ್ಲಿ ಪುಟ್ಟ ಮಗನ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದ ಪತ್ನಿ, ಗಂಡನ ಮೇಲಿನ ಸಿಟ್ಟಿಗೆ ಮಗುವನ್ನು ಗೋವಾಗೆ ಕರೆದೊಯ್ದು ಹೋಟೆಲು ಕೋಣೆಯಲ್ಲಿ ಉಸಿರುಗಟ್ಟಿಸಿ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಸಿ ಸಾಗಿಸುವಾಗ ಅರ್ಧ ದಾರಿಯಲ್ಲಿ ಪೊಲೀಸರ ಅತಿಥಿಯಾಗಿದ್ದಳು.
ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಇಂತಹ ಮತ್ತೊಂದು ಪ್ರಕರಣ ವರದಿಯಾಗಿತ್ತು. ಪರರಾಜ್ಯದ ಯುವತಿ ಪತಿಯಿಂದ ದೂರಾಗಿ ಒಂಟಿಯಾಗಿ ವಾಸವಾಗಿದ್ದಳು. ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಸಹೋದ್ಯೋಗಿ ಆಕೆಯ ಮನೆಗೇ ಬಂದು ಕೊಲೆ ಮಾಡಿ ದೇಹವನ್ನು ತುಂಡರಿಸಿ ಫ್ರಿಡ್ಜ್ ನಲ್ಲಿ ತುಂಬಿ ಹೋಗಿದ್ದ. ತಿಂಗಳ ನಂತರ ಮನೆಯಿಂದ ದುರ್ವಾಸನೆ ಬಂದು, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬಯಲಾಗಿತ್ತು. ತಿಂಗಳಿನಿಂದ ಆ ಮನೆಯಲ್ಲಿದ್ದ ವಾಸವಿದ್ದ ಒಂಟಿ ಹೆಣ್ಣು ಕಾಣದಿರುವ ಬಗ್ಗೆ ನೆರೆಕರೆಯವರಾರೂ ಗಮನಿಸಿಲ್ಲ. ಯಾಕೆಂದರೆ ಆಕೆ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ತನ್ನ ಪಾಡಿಗೆ ತಾನಿರುತ್ತಿದ್ದಳು ಎಂಬುದು ಸ್ಥಳೀಯರ ಅಭಿಪ್ರಾಯ. ಆಕೆ ಕೆಲಸ ಮಾಡುತ್ತಿದ್ದ ಮಾಲ್‌ನವರೂ ಕೆಲಸಕ್ಕೆ ಯಾಕೆ ಬರುತ್ತಿಲ್ಲ ಎಂದು ವಿಚಾರಿಸಿಲ್ಲ. ಈ ಸಮಾಜ ಎಷ್ಟು ಯಾಂತ್ರಿಕವಾಗಿ ಸಾಗುತ್ತಿದೆ, ನಗರದ ಜನ ಹೇಗೆ ಮನುಷ್ಯ ಸಹಜ ಜವಾಬ್ದಾರಿ, ಸಂವೇದನೆಗಳಿಂದ ವಿಮುಖರಾಗುತ್ತಿದ್ದಾರೆ ಎಂಬುದಕ್ಕೆ ಇವೆಲ್ಲ ಅಪಾಯಕಾರಿ ನಿದರ್ಶನಗಳಾಗಿ ಕಾಣಿಸುತ್ತವೆ.
ಇದೇ ಮಾರ್ಚ್ ಮೊದಲ ವಾರದಲ್ಲಿ ಉತ್ತರಪ್ರದೇಶದಿಂದ ಬಂದ ಸುದ್ದಿ ಇನ್ನೂ ಭೀಕರ. ಲಂಡನ್‌ನಲ್ಲಿ ಮರ್ಚಂಟ್ ನೇವಿ ಉದ್ಯೋಗಿಯಾಗಿದ್ದ ಕೇವಲ 29 ವರ್ಷ ವಯಸ್ಸಿನ ಸೌರಭ್ ರಜಪೂತ್ ನನ್ನು ರಜೆ ಕಳೆಯಲು ಊರಿಗೆ ಬಂದಿದ್ದಾಗ ಆತನ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಸೇರಿ ಚಾಕುವಿನಿಂದ ಇರಿದು ಕೊಂದು ದೇಹವನ್ನು ಕತ್ತರಿಸಿ, ಡ್ರಮ್‌ನೊಳಗೆ ತುಂಬಿ ಸಿಮೆಂಟ್‌ನಿಂದ ಮುಚ್ಚಿದ್ದರು. ನಂತರ ಇಬ್ಬರೂ ಪ್ರವಾಸಕ್ಕೆ ತೆರಳಿದ್ದರು. ಪತಿಯನ್ನು ಭೀಕರವಾಗಿ ಕೊಲೆ ಮಾಡಿಯೂ ಆಕೆಗೆ ಪ್ರಿಯಕರನೊಂದಿಗೆ ಪ್ರವಾಸ ತೆರಳಿದ್ದಳು ಎಂದರೆ ಆಕೆಯ ಮನಸ್ಥಿತಿ ಎಂತಹದ್ದು ಎಂಬುದು ಮನೋವಿಜ್ಞಾನ ಅಭ್ಯಾಸಿಗಳಿಗೆ ಅಧ್ಯಯನಯೋಗ್ಯ.
ಇಂತಹ ಮನುಷ್ಯತ್ವವನ್ನು ಅಣಕಿಸುವ, ಹೃದಯ ಚೂರಾಗಿಸುವ ಈ ಸುದ್ದಿಗಳು ಎಲ್ಲೆಲ್ಲಿಂದ ಬರುತ್ತಿವೆ ಎಂದು ನೋಡಿದರೆ ಅಲ್ಲೊಂದು ಸಮಾನ ಅಂಶ ಕಾಣುತ್ತದೆ. ಅದು ಸುಶಿಕ್ಷಿತ, ಪ್ರತಿಷ್ಠಿತ ಕುಟುಂಬ, ಆರ್ಥಿಕವಾಗಿ ಸದೃಢವಾಗಿರುವ ಯುವ ದಂಪತಿಯ ಕಡೆಯಿಂದ ಬರುತ್ತಿವೆ. ಉತ್ತಮ ಶಿಕ್ಷಣ, ಕೈ ತುಂಬ ಸಂಬಳ ಬರುವ ಉದ್ಯೋಗ, ಆಯ್ಕೆಯ ಸಂಗಾತಿ, ಅದ್ದೂರಿ ಮದುವೆ, ಎಲ್ಲವೂ ಆದ ನಂತರ ಇಂತಹದೊಂದು ದುರಂತವನ್ನು ತಂದುಕೊಳ್ಳುವ ಮನಸ್ಥಿತಿ ಯಾಕೆ ಬರುತ್ತದೆ ಎಂಬುದು ನಿಜಕ್ಕೂ ಇಡೀ ಸಮಾಜ, ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು, ಮನೋ ವಿಜ್ಞಾನಿಗಳು ಎಲ್ಲರೂ ಸೇರಿ ಚಿಂತಿಸಬೇಕಾದ ವಿಚಾರ. ಈ ಯುವ ಸಮಾಜ ಎತ್ತ ಸಾಗುತ್ತಿದೆ? ಯುವ ಸಮುದಾಯ ಯಾಕಿಂತ ಕ್ರೂರ ಹೆಜ್ಜೆಗಳನ್ನಿಡುತ್ತಿದೆ? ಜೊತೆಗೇ ಬದುಕುವ ಸಂಗಾತಿಗಳ ನಡುವಿನ ಮುನಿಸು, ಮನಸ್ತಾಪ, ಬಗೆಹರಿಯಲಾರದಷ್ಟು ಕಠಿಣವೇ? ಕೊಂದು ಮುಗಿಸದೇ ಬೇರೆ ಪರಿಹಾರ ಇಲ್ಲವೇ? ಸಂಗಾತಿಯನ್ನು ಕೊಂದ ನಂತರ ತನ್ನ ಬದುಕು ಹೇಗಿರುತ್ತದೆ ಎಂಬುದನ್ನು ಯೋಚಿಸಲಾರದಷ್ಟು ಮನಸ್ಸು ಮಂಕಾಗಲು ಕಾರಣವೇನು? ಇವುಗಳಿಗೆ ಇಡೀ ಸಮಾಜ ಉತ್ತರ ಕಂಡುಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ಇದೊಂದು ದೊಡ್ಡ ಪಿಡುಗಾಗಿ ಯುವ ಸಮುದಾಯವನ್ನು ಕಾಡಲಿದೆ. ಮದುವೆ ಬೇಡ ಎಂಬ ಮನಸ್ಥಿತಿ ಈಗಾಗಲೇ ಸುಶಿಕ್ಷಿತ ವಲಯದಲ್ಲಿ ಬಂದುಬಿಟ್ಟಿದೆ. ಲಿವ್ಇನ್ ಎಂಬುದು ದಾಂಪತ್ಯಕ್ಕೆ ಪರ್ಯಾಯವಾಗಿ ಬಂದಿದೆ. ಅಲ್ಲೂ ಇಂತಹ ಕೃತ್ಯಗಳು ವರದಿಯಾಗುತ್ತಿವೆ ಎಂಬುದು ಆಘಾತಕಾರಿ.
ಸಂಗಾತಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸುವ ಆ ಪ್ರಕ್ರಿಯೆ ಮನೆಯೊಳಗೇ ಯಾರಿಗೂ ಗೊತ್ತಾಗದ ರೀತಿಯಲ್ಲಿ ನಡೆದು ಹೋಗುತ್ತಿದೆ. ದಂಪತಿ ಮಾತ್ರ ಇರುವ ಕುಟುಂಬಗಳಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಹೊರ ಜಗತ್ತಿಗೆ ತಿಳಿಯುವುದೇ ಇಲ್ಲ. ಅಂಟಿಕೊಂಡಿರುವ ಮನೆಗಳಲ್ಲಿ ವಾಸವಿದ್ದರೂ ಅಲ್ಲೊಂದು ಕೊಲೆ ನಡೆದಿರುವುದು ಅವರ ಗಮನಕ್ಕೆ ಬಂದೇ ಇರುವುದಿಲ್ಲ. ನಗರ ಪ್ರದೇಶದ ಜನರ ಬದುಕು ಅಷ್ಟೊಂದು ಯಾಂತ್ರಿಕವಾಗಿಬಿಟ್ಟಿದೆ ಎಂದರೆ ವರ್ಷಗಟ್ಟಲೆ ಪಕ್ಕದ ಮನೆಯಲ್ಲೇ ಇದ್ದರೂ ಅಪರಿಚಿತರಾಗಿಯೇ ಇರುತ್ತಾರೆ. ಅದರಲ್ಲೂ ಬೇರೆ ರಾಜ್ಯದ ಕುಟುಂಬಗಳಾದರೆ ಸ್ಥಳೀಯರೂ ಸುಲಭದಲ್ಲಿ ಅವರೊಂದಿಗೆ ಬೆರೆಯುವುದಿಲ್ಲ. ಒಂದು ಕಡೆ ಕುಟುಂಬ, ಸಂಬಂಧಿಕರು ದೂರದಲ್ಲಿರುತ್ತಾರೆ. ತಮ್ಮ ನೋವುಗಳನ್ನು ಹಂಚಿಕೊಳ್ಳಲು ಸ್ನೇಹಿತರೂ ಇರುವುದಿಲ್ಲ. ಇಬ್ಬರ ನಡುವಿನ ಮನಸ್ತಾಪ, ಜಗಳ ಹೀಗೆ ಅವರ ನಡುವೆಯೇ ಅಂತ್ಯ ಕಾಣುತ್ತಿದೆ ಎಂಬುದು ಬಹಳ ಆತಂಕದ ಸಂಗತಿ.
ಕೊಂದವರು ಜೈಲು ಪಾಲಾಗುತ್ತಾರೆ. ಎಂದೋ ಶಿಕ್ಷೆ ಅನುಭವಿಸಿ ಹೊರ ಬರಬಹುದು. ಆದರೆ, ಕೌಟುಂಬಿಕ ವ್ಯವಸ್ಥೆಯನ್ನು ಅಲುಗಾಡಿಸುವ ಇಂತಹ ಕ್ರೌರ್ಯ ಕೊನೆಯಾಗಬೇಕೆಂದರೆ ಯುವ ಸಮುದಾಯವನ್ನು ಜಾಗೃತಗೊಳಿಸುವ ಕೆಲಸ ಆಗಬೇಕಿದೆ. ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವ, ಸಣ್ಣಪುಟ್ಟ ಬಿರುಕುಗಳನ್ನು ನಿವಾರಿಸಿಕೊಂಡು ಬದುಕನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಸಮಾಜದ ಮಾರ್ಗದರ್ಶನದ ಅಗತ್ಯ ಇದೆ.
