‘ಈ ದಿನ’ ಸಂಪಾದಕೀಯ | ದ್ವೇಷ ಭಾಷಣ; ತುರ್ತು ಕಡಿವಾಣ ಅತ್ಯವಶ್ಯ

Date:

Advertisements
ದ್ವೇಷ ಭಾಷಣ ಸಂಬಂಧ ಸುಪ್ರೀಂ ಕೋರ್ಟ್‌ನ ಹೊಸ ನಿರ್ದೇಶನ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ, ಪೊಲೀಸರಿಗೆ ನೇರ ನಿರ್ದೇಶನ ಕೊಡಬಲ್ಲ ಅಧಿಕಾರವಿರುವ ಚುನಾವಣಾ ಆಯೋಗವು ಸುಪ್ರೀಂ ನಿರ್ದೇಶನವನ್ನು ಕರ್ನಾಟಕದಲ್ಲಿ ಎಷ್ಟರಮಟ್ಟಿಗೆ ಪಾಲಿಸಲಿದೆ ಎಂಬುದು ಕುತೂಹಲಕರ

ದ್ವೇಷ ಭಾಷಣಗಳ ಕುರಿತು ದೂರು ಬರುವವರೆಗೆ ಕಾಯುವ ಬದಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಅತ್ಯಂತ ತಡವಾಗಿ ಬಂದಿದೆಯಾದರೂ ಮಹತ್ವದ್ದು. ಒಂದು ಕಾಲಕ್ಕೆ ಉತ್ತರದ ರಾಜ್ಯಗಳಲ್ಲಿ ಮಾತ್ರವೇ ದ್ವೇಷ ಭಾಷಣದ ವರಸೆ ಹೆಚ್ಚಾಗಿತ್ತು. ಇದೀಗ ದಕ್ಷಿಣ ಭಾರತವೂ ದ್ವೇಷ ಭಾಷಣಗಳಲ್ಲಿ ಹಿಂದೆ ಉಳಿದಿಲ್ಲ, ಕರ್ನಾಟಕ ಕೂಡ. ಸುಧಾರಣಾ ಆಯೋಗಗಳು ಎಷ್ಟೇ ಶಿಫಾರಸು ಮಾಡಿದರೂ ರಾಜಕೀಯ ಹಸ್ತಕ್ಷೇಪ ತಪ್ಪಿಸಿಕೊಳ್ಳಲಾಗದ ಪೊಲೀಸ್ ವ್ಯವಸ್ಥೆ ಮತ್ತು ಚುನಾವಣೆ ಹೊತ್ತಿನಲ್ಲಿ ಅಪರಿಮಿತ ಅಧಿಕಾರ ಇದ್ದರೂ ಆಡಳಿತಾರೂಢ ಪಕ್ಷಗಳ ಸನ್ನೆಗಳಿಗೆ ತಕ್ಕಂತೆ ಬಾಗಿ ಬಳುಕುವ ಚುನಾವಣಾ ಆಯೋಗ ಇದಕ್ಕೆ ಮುಖ್ಯ ಕಾರಣ.

ದೇಶದ ದ್ವೇಷ ಭಾಷಣ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ 2015ರವರೆಗೂ ತಳದಲ್ಲಿತ್ತು. ಆದರೆ, ಕಳೆದ ಮೂರು ವರ್ಷದಿಂದ ಈಚೆಗೆ ಗಣನೀಯ ಪ್ರಮಾಣದಲ್ಲಿ ಭಾಷಣಗಳ ಜೊತೆಗೆ ದ್ವೇಷವೂ ಹೆಚ್ಚಳ ಕಂಡಿದೆ. ಕರ್ನಾಟಕ ಗೃಹ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2020ರ ಜನವರಿಯಿಂದ 2023ರ ಜನವರಿವರೆಗಿನ ಮೂರು ವರ್ಷದ ಅವಧಿಯಲ್ಲಿ ದ್ವೇಷ ಭಾಷಣ ಸಂಬಂಧ ಒಟ್ಟು 105 ಎಫ್‌ಐಆರ್ ದಾಖಲಾಗಿವೆ. ರಾಜಧಾನಿ ಬೆಂಗಳೂರು ಬರೋಬ್ಬರಿ 55 ಪ್ರಕರಣಕ್ಕೆ ಸಾಕ್ಷಿಯಾಗಿದೆ. ಉಳಿದಂತೆ, ಬೀದರ್‌ ಜಿಲ್ಲೆಯಲ್ಲಿ ಆರು, ಶಿವಮೊಗ್ಗ ಜಿಲ್ಲೆಯಲ್ಲಿ ಐದು, ಕಲಬುರಗಿ ಮತ್ತು ಹಾವೇರಿ ಜಿಲ್ಲೆಯಲ್ಲಿ ತಲಾ ನಾಲ್ಕು ಪ್ರಕರಣ ದಾಖಲಾಗಿವೆ.

“ರಾಜ್ಯದಲ್ಲಿ ದಾಖಲಾದ ಎಲ್ಲ ದ್ವೇಷ ಭಾಷಣ ಪ್ರಕರಣಗಳ ಸಂಬಂಧ ಆರೋಪಿಗಳ ವಿರುದ್ಧ ತನಿಖೆ ನಡೆಸಲಾಗಿದೆ. ಮುಂದಿನ ಕ್ರಮಕ್ಕಾಗಿ ನ್ಯಾಯಾಲಯಗಳಿಗೆ ಅಂತಿಮ ವರದಿ ಸಲ್ಲಿಸಲಾಗಿದೆ,” ಎಂಬುದು ಸರ್ಕಾರದ ಅಧಿಕೃತ ಹೇಳಿಕೆ. ಇನ್ನೊಂದೆಡೆ, ಇದೇ ಮೂರು ವರ್ಷದ (2020-2023) ಅವಧಿಯಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 385 ಕ್ರಿಮಿನಲ್ ಕೇಸುಗಳನ್ನು ಹಿಂಪಡೆದಿದೆ. ಇವುಗಳಲ್ಲಿ ದ್ವೇಷ ಭಾಷಣ ಪ್ರಕರಣಗಳೂ ಸೇರಿವೆ.

Advertisements
ಈ ಲೇಖನ ಓದಿದ್ದೀರಾ?: ಈ ದಿನ ಸಂಪಾದಕೀಯ | ಅಂಬೇಡ್ಕರ್ ಪ್ರತಿಮೆಗೆ ಅವಮಾನ: ತನ್ನ ಮುಖಕ್ಕೆ ತಾನೇ ಸಗಣಿ ಎರಚಿಕೊಂಡ ‘ನಾಗರಿಕ ಸಮಾಜ’

ಕ್ರಿಶ್ಚಿಯನ್ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ್ದಕ್ಕಾಗಿ ಸಚಿವ ಮುನಿರತ್ನ ವಿರುದ್ಧ ಇತ್ತೀಚೆಗೆ (ಏ.6) ಪ್ರಕರಣ ದಾಖಲಾಗಿದೆ. ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿರುದ್ಧ ಸಖರಾಯಪಟ್ಟಣ ಪೊಲೀಸರು ದ್ವೇಷ ಭಾಷಣದ ಕೇಸು ದಾಖಲಿಸಿಕೊಂಡಿದ್ದಾರೆ. “ಸಿದ್ದರಾಮಯ್ಯ ಅವರನ್ನು ಮುಗಿಸಿ,” ಎಂದಿದ್ದ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. “ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಆಗುತ್ತದೆ,” ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇವು ಇತ್ತೀಚಿನ ಕೆಲವು ಉದಾಹರಣೆಗಳಷ್ಟೆ. ಹೀಗೆ ಪ್ರಕರಣಗಳೇನೋ ದಾಖಲಾಗುತ್ತಲೇ ಇರುತ್ತವೆ. ಆದರೆ, ಸೂಕ್ತ ತನಿಖೆ ನಡೆದು ದಂಡ ಹಾಕಿದ ಅಥವಾ ಶಿಕ್ಷೆ ಜಾರಿಯಾದ ನಿದರ್ಶನ ವಿರಳಾತಿವಿರಳ. ಇದೇ ಕಾರಣಕ್ಕೆ, ರಾಜಕೀಯ ಎದುರಾಳಿಗಳ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ಕಡುದ್ವೇಷದ ಮಾತನಾಡಿದರೂ ಕಾನೂನು ಕ್ರಮದಿಂದ ಸಲೀಸಾಗಿ ಬಚಾವಾಗಬಹುದು ಎಂಬಂಥ ವಾತಾವರಣ ನಿರ್ಮಾಣವಾಗಿದೆ. ಚುನಾವಣೆ ಕಾಲದಲ್ಲಂತೂ ಹಗೆಯ ಕೆನ್ನಾಲಿಗೆಗಳೇ ಹೆಚ್ಚು ಮಾತನಾಡುತ್ತಿರುತ್ತವೆ. ದ್ವೇಷ ಭಾಷಣಗಳನ್ನು ಗಂಭೀರವಾಗಿ ಪರಿಗಣಿಸದ ರಾಜಕೀಯ ಪಕ್ಷಗಳು ಮತ್ತು ಆಡಳಿತಾರೂಢ ಸರ್ಕಾರದ ಕೈಬೊಂಬೆಗಳಂತೆ ವರ್ತಿಸುವ ಪೊಲೀಸರು ಈ ಪರಿಸ್ಥಿತಿಗೆ ನೇರ ಕಾರಣ. ‘ಅಪರಾಧಗಳನ್ನು ತಡೆಯುವುದು ಮತ್ತು ಸಾರ್ವಜನಿಕ ಶಾಂತಿ ಕದಡುವುದನ್ನು ತಪ್ಪಿಸುವುದು ಪೊಲೀಸರ ಕರ್ತವ್ಯ’ ಎಂದು ಸಾರುವ, ಕರ್ನಾಟಕ ಪೊಲೀಸ್ ಕಾಯ್ದೆಯ 659(ಡಿ)(ಇ) ವಿಧಿಯನ್ನು ಪೊಲೀಸರಿಗೆ ನೆನಪಿಸಬೇಕಾದ ಸನ್ನಿವೇಶ ನಿರ್ಮಾಣ ಆಗಿರುವುದು ನಿಜಕ್ಕೂ ದುರಂತ.

ಇದೀಗ ಸುಪ್ರೀಂ ಕೋರ್ಟ್ ನಿರ್ದೇಶನ ಹೊರಬಿದ್ದಿದೆ. ನಿರ್ದೇಶನ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಕೂಡ ಕಾದಿದೆ. ಈಗಲಾದರೂ ಪೊಲೀಸರು ಎಚ್ಚೆತ್ತುಕೊಳ್ಳುತ್ತಾರೆಯೇ ಮತ್ತು ರಾಜಕಾರಣಿಗಳು ನಾಲಿಗೆ ಬಿಗಿ ಹಿಡಿದು ಮಾತನಾಡುತ್ತಾರೆಯೇ ಎಂಬುದು ಯಕ್ಷಪ್ರಶ್ನೆ. ಮತ್ತೊಂದೆಡೆ, ಚುನಾವಣಾ ಸಮಯದಲ್ಲಿ ಪೊಲೀಸರಿಗೆ ನೇರ ನಿರ್ದೇಶನ ಕೊಡಬಲ್ಲ ಅಧಿಕಾರ ಹೊಂದಿರುವ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಎಷ್ಟರಮಟ್ಟಿಗೆ ಪಾಲಿಸಲಿದೆ ಎಂಬುದಕ್ಕೂ ಕರ್ನಾಟಕ ವಿಧಾನಸಭಾ ಚುನಾವಣೆ ಸಾಕ್ಷಿಯಾಗಲಿದೆ.

ಚಿತ್ರ: ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X