ಹಾಗೆ ನೋಡಿದರೆ ಸರ್ಕಾರಿ ಕಾಮಗಾರಿಗಳ ಉದ್ಘಾಟನೆಗೆ ಗುದ್ದಲಿಪೂಜೆ ಮಾಡಿಸುವುದು ಕೂಡಾ ಸಂವಿಧಾನದ ಆಶಯಕ್ಕೆ ವಿರೋಧವೇ ಆಗಿದೆ. ಇದುವರೆಗೂ ಬೇರೆ ಧರ್ಮದವರು ಇದನ್ನು ವಿರೋಧಿಸಿಲ್ಲ. ಕೆಎಸ್‌ಆರ್‌ಟಿಸಿ, ಬಿಎಂಟಿಸಿಗಳಲ್ಲಿ ನೂರಾರು ಮುಸ್ಲಿಂ ಚಾಲಕರು, ನಿರ್ವಾಹಕರು ಇದ್ದಾರೆ. ಬಸ್‌ಗಳಲ್ಲಿ ದೇವರ ಫೋಟೋ ಇಡುವುದನ್ನು ಅವರು ವಿರೋಧಿಸಿಲ್ಲ. ತಮ್ಮ ಧರ್ಮದ ಸಂಕೇತವನ್ನು ಇಡಬೇಕು ಎಂದು ಹಟ ಹಿಡಿದಿಲ್ಲ
ಕಂಡಕ್ಟರ್ ಒಬ್ಬರು ತಮ್ಮ ಧಾರ್ಮಿಕ ಸಂಕೇತವಾದ ಹಸಿರು ಟೋಪಿ ಧರಿಸಿದ್ದನ್ನು ಪ್ರಶ್ನಿಸುತ್ತಾ ಮಹಿಳೆಯೊಬ್ಬರು ವಿಡಿಯೊ ಮಾಡಿ ಹರಿಯಬಿಟ್ಟಿದ್ದು ವ್ಯಾಪಕ ಖಂಡನೆಗೆ ಒಳಗಾಗಿದೆ. ಆದರೆ, ಇಸ್ಲಾಮೊಫೋಬಿಯಾದಿಂದ ನರಳುತ್ತಿರುವ ಸಂಘಿಗಳು ಆಕೆಯನ್ನು ಹುಡುಕಿ ಸನ್ಮಾನ ಮಾಡುವ ಮಟ್ಟಕ್ಕೆ ಹೊಗಳುತ್ತಿದ್ದಾರೆ. “ನಿಮ್ಮ ಧರ್ಮ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ, ಯೂನಿಫಾರಂನಲ್ಲಿ ಟೋಪಿ ಧರಿಸಬಹುದಾ” ಎಂದು ಪ್ರಶ್ನೆ ಮಾಡುವ ಆ ಮಹಿಳೆ ವಾಸ್ತವದ ಬಗ್ಗೆಅದೆಷ್ಟು ಮೂರ್ಖಳು ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ ಆಕೆ ಮಾಡುತ್ತಿರುವುದು ತಪ್ಪು, ಆತನ ಅನುಮತಿ ಇಲ್ಲದೇ ವಿಡಿಯೋ ಮಾಡುತ್ತಿರುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಪರಾಧ ಎಂದು ಎಚ್ಚರಿಸುವ ಒಬ್ಬರೂ ಆ ಬಸ್‌ನಲ್ಲಿ ಇರಲಿಲ್ಲವೇ ಎಂಬ ಗಂಭೀರ ಪ್ರಶ್ನೆಯೂ ಮೂಡುತ್ತದೆ.
ಸರಿಯಾಗಿ ಗಮನಿಸಿ ಯಾರಾದರೂ ಮತ್ತೊಂದು ವಿಡಿಯೊ ಮಾಡಿದ್ದರೆ ಅದೇ ಬಸ್‌ನ ಮುಂಭಾಗದಲ್ಲಿ ಸಕಲ ದೇವರ ಫೋಟೊಗಳೂ, ಹೂ ಹಾರ ಹಾಕಿರುವುದು ಗೋಚರಿಸುತ್ತಿತ್ತು.
ಮುಸ್ಲಿಂ ಕಂಡಕ್ಟರ್ ಹಸಿರು ಟೋಪಿ ಧರಿಸಬಾರದು ಎಂದಾದರೆ ಬಸ್‌ಗಳಲ್ಲಿಯೂ ದೇವರ ಫೋಟೋ, ಶ್ಲೋಕಗಳ ಸ್ಟಿಕ್ಕರ್ ಅಂಟಿಸಿ, ಹೂಹಾರ ಹಾಕಿ ಅಗರಬತ್ತಿ ಹಚ್ಚೋದು ಸರಿಯಾ? ಹಿಂದೂ ಕಂಡಕ್ಟರ್, ಡ್ರೈವರ್ ಕೈಗೆ ಕೆಂಪು ದಾರ ಕಟ್ಟುವುದು, ವಿಭೂತಿ, ಕುಂಕುಮ ಹಚ್ಚುವುದು ಕೂಡಾ ಯೂನಿಫಾರಂ ನಿಯಮಕ್ಕೆ ವಿರುದ್ಧವಲ್ಲವೇ? ಪ್ರತಿ ವರ್ಷ ಆಯುಧ ಪೂಜೆಯ ದಿನ
ಬಸ್‌ಗಳಿಗೆ ಹಿಂದೂ ಧಾರ್ಮಿಕ ವಿಧಿ ಪ್ರಕಾರ ಪೂಜೆ ಮಾಡುತ್ತಿಲ್ಲವೇ? ಹಾಗೆ ನೋಡಿದರೆ ಸರ್ಕಾರಿ ಕಾಮಗಾರಿಗಳ ಉದ್ಘಾಟನೆಗೆ ಅರ್ಚಕರಿಂದ ಗುದ್ದಲಿಪೂಜೆ ಮಾಡಿಸುವುದು ಕೂಡಾ ಸಂವಿಧಾನದ ಆಶಯಕ್ಕೆ ವಿರೋಧವೇ ಆಗಿದೆ. ಇದುವರೆಗೂ ಬೇರೆ ಧರ್ಮದವರು ಇದನ್ನು ವಿರೋಧಿಸಿಲ್ಲ. ಕೆಎಸ್‌ಆರ್‌ಟಿಸಿ, ಬಿಎಂಟಿಸಿಗಳಲ್ಲಿ ನೂರಾರು ಮುಸ್ಲಿಂ ಚಾಲಕರು, ನಿರ್ವಾಹಕರು ಇದ್ದಾರೆ. ತಮ್ಮ ಸಹೋದ್ಯೋಗಿಗಳು ಬಸ್‌ನಲ್ಲಿ ದೇವರ ಫೋಟೋ ಇಟ್ಟರೆ ವಿರೋಧಿಸಿಲ್ಲ. ತಮ್ಮ ಧರ್ಮ ಸಂಕೇತವನ್ನು ಇಡಬೇಕು ಎಂದು ಹಟ ಹಿಡಿದಿಲ್ಲ. ಇದೇ ಅಲ್ಲವೇ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವ ಪರಿ.
ಕಳೆದ ವರ್ಷ ಆಜಾನ್ ವಿರುದ್ಧದ ಅರ್ಜಿ ವಿಲೇವಾರಿ ಮಾಡಿದ ಕರ್ನಾಟಕ ಹೈಕೋರ್ಟ್ ರಾತ್ರಿ ಹತ್ತರ ನಂತರ ಬೆಳಿಗ್ಗೆ 5ರವರೆಗೆ ಯಾವುದೇ ಸ್ಥಳಗಳಲ್ಲಿ 40 ಡೆಸಿಬಲ್ ಶಬ್ದಮಾಪನಕ್ಕಿಂತ ಹೆಚ್ಚು ಮೈಕ್ ಹಾಕುವಂತಿಲ್ಲ ಎಂದು ತೀರ್ಪು ನೀಡಿತ್ತು. ಕರಾವಳಿಯಲ್ಲಿ ಯಕ್ಷಗಾನಗಳು ಶುರುವಾಗುವುದೇ ರಾತ್ರಿ ಹತ್ತರ ನಂತರ. ಅಷ್ಟೇ ಅಲ್ಲ ಭೂತಾರಾಧನೆಯೂ ರಾತ್ರಿಯೇ ನಡೆಯುವ ಆಚರಣೆ. ಅವರೆಲ್ಲ ಈ ನಿಯಮದಿಂದ ತೊಂದರೆಗೆ ಒಳಗಾದರು. ನಿಯಮ ಪಾಲಿಸುವುದು ಅಷ್ಟರಲ್ಲೇ ಇದೆ. ಆದರೆ ಹಿಂದೂ ಮೂಲಭೂತವಾದಿಗಳಿಗೆ ಮಸೀದಿಗಳ ಮೈಕ್ ಇಳಿಸುವುದು ಮುಖ್ಯ ಗುರಿಯಾಗಿತ್ತು. ಅದು ತಮ್ಮ ಬುಡಕ್ಕೇ ಬಂದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ವಿಧಾನಸೌಧದಲ್ಲಿ ಸಚಿವರು ತಮ್ಮ ಕೊಠಡಿಗಳಲ್ಲಿ ಪೂಜೆ- ಹೋಮ ಮಾಡಿಸುವುದು, ವಾಸ್ತು ಕಾರಣದಿಂದ ಬಾಗಿಲು ಮುಚ್ಚುವುದು, ಗೋಡೆ ಒಡೆದು ನವೀಕರಣ ಮಾಡುವುದು ಸಾಮಾನ್ಯವಾಗಿದೆ. ಸರ್ಕಾರಿ ಕಚೇರಿಗಳಲ್ಲಿ, ಬಸ್‌ಗಳಲ್ಲಿ, ಪಾರ್ಕ್‌ಗಳಲ್ಲಿ ಯಾವುದೇ ಧರ್ಮದ ದೇವರುಗಳ ಗುಡಿ ಸ್ಥಾಪನೆ, ಫೋಟೋ ಇಡೋದು, ಪೂಜೆ ಮಾಡುವುದು ತರವಲ್ಲ. ಆದರೆ, ಬೆಂಗಳೂರಿನ ಬಹುತೇಕ ಪಾರ್ಕ್‌ಗಳಲ್ಲಿ ದೇವರ ಗುಡಿಗಳಿವೆ. ಅಲ್ಲಿ ಮುಸ್ಲೀಮರೂ ಬಂದು ವಾಕಿಂಗ್ ಮಾಡುತ್ತಾರೆ. ಅವರು ಯಾರೂ ವಿರೋಧಿಸುತ್ತಿಲ್ಲ. ಅಲ್ಲೊಂದು ಮಸೀದಿ, ಚರ್ಚು ಕಟ್ಟಲು ಅವಕಾಶ ಕೊಡಿ ಎಂದು ಯಾರೂ ಕೇಳಿಲ್ಲ. ಕಂಡಕ್ಟರ್‌ನ ಟೋಪಿ ತೆಗೆಸಿದ ಪ್ರಕರಣದ ಮುಂದುವರಿದ ಭಾಗವಾಗಿ ಬಸ್‌ಗಳಲ್ಲಿ ದೇವರ ಫೋಟೋ ಇಡಬಾರದು, ಕೈಗೆ ಕೆಂಪುದಾರ ಕಟ್ಟಬಾರದು, ಹಣೆಗೆ ಕುಂಕುಮ- ವಿಭೂತಿ ಹಚ್ಚಬಾರದು ಎಂಬ ನಿಯಮ ಜಾರಿಯಾದರೆ ಬಹುಸಂಖ್ಯಾತರು ಒಪ್ಪುವರೇ?
ಜಾತ್ಯತೀತತೆ ಸಾರುವ ಸಂವಿಧಾನವನ್ನು ನಾವು ಸ್ವೀಕರಿಸಿದ್ದೇವೆ ಎಂಬುದನ್ನು ಮರೆಯಬಹುದೇ? ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರಿಗೆ ಬೇರೆ ಬೇರೆ ಮಾನದಂಡಗಳಿವೆಯೇ. ಇದು ಸಂವಿಧಾನವಿರೋಧಿ ನಡೆ.

👏👏👏 ನಿಮ್ಮ ಬರವಣಿಗೆಯೂ ಅತ್ಯದ್ಭುತ 💐💐