ನ್ಯಾಯಾಂಗವು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಆಧಾರ ಸ್ತಂಭಗಳಲ್ಲೊಂದು. ನ್ಯಾಯಮೂರ್ತಿಗಳು ಇದೇ ಸಮಾಜದ ನಡುವಿನಿಂದ ಬಂದವರು, ಅತಿಮಾನವರೇನೂ ಅಲ್ಲ. ಅವರು ಮಾಡುವ ನ್ಯಾಯನಿರ್ಣಯಗಳನ್ನು ಅವರ ಸಾಮಾಜಿಕ ಹಿನ್ನೆಲೆ, ಇಷ್ಟಾನಿಷ್ಟಗಳು ಪ್ರಭಾವಿಸುವ ಸಾಧ್ಯತೆಗಳು ದಟ್ಟವಾಗಿರುತ್ತವೆ
2018ರಿಂದ ಇಲ್ಲಿಯವರೆಗೆ ನೇಮಕ ಮಾಡಲಾಗಿರುವ ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಶೇ.75.68ರಷ್ಟು ಮಂದಿ ‘ಬಲಿಷ್ಠ’ ಅಥವಾ ‘ಮೇಲ್ಜಾತಿ’ಗಳಿಗೆ ಸೇರಿದವರು. ಹಿಂದುಳಿದ ಜಾತಿಗಳಿಗೆ ಸಿಕ್ಕಿರುವ ಪ್ರಾತಿನಿಧ್ಯ ಕೇವಲ ಶೇ.11.92 (72 ಮಂದಿ) ಪರಿಶಿಷ್ಟ ಜಾತಿಗಳಿಂದ ಶೇ.2.98 (18) ಮತ್ತು ಪರಿಶಿಷ್ಟ ಪಂಗಡಗಳಿಂದ ಶೇ.1.49ರಷ್ಟು (ಒಂಬತ್ತು ಮಂದಿ) ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ.
2018ರ ಜುಲೈ 17ರಿಂದ ನೇಮಕ ಮಾಡಲಾಗಿರುವ 604 ಮಂದಿ ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ 458 ಮಂದಿ ಸಾಮಾನ್ಯ ವರ್ಗಗಳಿಗೆ ಸೇರಿದವರು. ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು 13 ಮಂದಿ.
ದೇಶದ ಕಾನೂನು ಮಂತ್ರಿ ಅರ್ಜುನ್ ರಾಮ್ ಮೇಘವಾಲ್ ಅವರು ಇತ್ತೀಚೆಗೆ ಈ ಸಂಗತಿಯನ್ನು ಲೋಕಸಭೆಗೆ ತಿಳಿಸಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಸುಪ್ರೀಮ್ ಕೋರ್ಟಿನ ಕೊಲಿಜಿಯಂ (ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯಮೂರ್ತಿಗಳ ಸಮಿತಿ) ನೇಮಕ ಮಾಡುವ ವ್ಯವಸ್ಥೆ ಕಳೆದ ಮೂರು ದಶಕಗಳಿಂದ ಜಾರಿಯಲ್ಲಿದೆ. ನೇಮಕಗಳಲ್ಲಿ ಸಾಮಾಜಿಕ ವೈವಿಧ್ಯತೆ ಇರಬೇಕೆಂಬುದು ಸುಪ್ರೀಮ್ ಕೋರ್ಟಿನ ಮೂಲ ಭಾವ. ಈ ಮೂಲಭಾವವನ್ನು ಮರೆತಿರುವುದು ಅತೀವ ದುರದೃಷ್ಟಕರ.
ಸಂವಿಧಾನದ 124, 217 ಹಾಗೂ 224ನೆಯ ವಿಧಿಗಳ ಪ್ರಕಾರ ಸುಪ್ರೀಮ್ ಕೋರ್ಟು ಮತ್ತು ಹೈಕೋರ್ಟುಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗುತ್ತದೆ. ಯಾವುದೇ ವರ್ಗ ಅಥವಾ ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ಅವಕಾಶ ಈ ವಿಧಿಗಳಲ್ಲಿ ಇಲ್ಲ.
ಆದರೆ ನೇಮಕ ಮಾಡಿಕೊಳ್ಳಲಾಗುವ ನ್ಯಾಯಮೂರ್ತಿಗಳ ಪ್ರಸ್ತಾವಗಳನ್ನು ಕಳಿಸುವಾಗ ಪರಿಶಿಷ್ಟ ಜಾತಿ ಪಂಗಡಗಳು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಪೈಕಿ ಸೂಕ್ತ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರ ಎಲ್ಲ ಹೈಕೋರ್ಟುಗಳ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಿರುತ್ತದೆ ಎಂದು ಮೇಘವಾಲ್ ಲೋಕಸಭೆಗೆ ತಿಳಿಸಿದ್ದಾರೆ.
2011ರ ಜನಗಣತಿಯ ಪ್ರಕಾರ ದೇಶದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯಾ ಪ್ರಮಾಣ ಶೇ.16.6, ಪರಿಶಿಷ್ಟ ಪಂಗಡಗಳ ಜನರ ಪ್ರಮಾಣ ಶೇ.8.6, ಅಲ್ಪಸಂಖ್ಯಾತರ ಪ್ರಮಾಣ ಶೇ.19.3. ಹಿಂದುಳಿದ ಜಾತಿಗಳ ಜನರ ಪ್ರಮಾಣ ಕುರಿತು ಲಭ್ಯವಿರುವ ಆಕರ 1980ರ ಮಂಡಲ್ ಆಯೋಗದ ವರದಿ. ಈ ವರದಿಯ ಪ್ರಕಾರ ಓಬಿಸಿಗಳ ಪ್ರಮಾಣ ಶೇ.52.
ಮನುಸ್ಮೃತಿಯನ್ನು ಆರಾಧಿಸುವ ಆರೆಸ್ಸೆಸ್ ನ ನೆರಳಾದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಹಿಂದುಳಿದವರು, ಪರಿಶಿಷ್ಟ ಜಾತಿ- ಪಂಗಡಗಳಿಗೆ ಪ್ರಾತಿನಿಧ್ಯ ದೊರೆಯಬೇಕೆಂಬ ವಿಶೇಷ ಕಾಳಜಿಯೇನೂ ಇಲ್ಲ. ಉನ್ನತ ಹಂತದ ನ್ಯಾಯಮೂರ್ತಿಗಳ ನೇಮಕವನ್ನು ಕೊಲಿಜಿಯಂ ಕೈತಪ್ಪಿಸಿ ತನ್ನ ಕೈಗೆ ತೆಗೆದುಕೊಳ್ಳುವ ಈ ಸರ್ಕಾರದ ಹವಣಿಕೆ ಫಲಿಸಿಲ್ಲ. ಹೀಗಾಗಿ ಕಾಲ ಕಾಲಕ್ಕೆ ಹಿಂದುಳಿದವರು-ಪರಿಶಿಷ್ಟರು-ಅಲ್ಪಸಂಖ್ಯಾತರ ಹೆಗಲುಗಳ ಮೇಲೆ ಬಂದೂಕು ಇಟ್ಟು ಸುಪ್ರೀಮ್ ಕೋರ್ಟಿನತ್ತ ಗುಂಡು ಹಾರಿಸುತ್ತಿದೆ ಅಷ್ಟೇ.
ಆದರೆ ಬಿಜೆಪಿ ಸರ್ಕಾರ ಹೇಳಲಿ ಬಿಡಲಿ, ಉನ್ನತ ಹಂತದ ನ್ಯಾಯಾಂಗದಲ್ಲಿ ದಮನಿತರು ಶೋಷಿತರ ವರ್ಗಗಳಿಗೆ ಮೊದಲಿನಿಂದಲೂ ಪ್ರಾತಿನಿಧ್ಯ ದೊರೆಯದಿರುವುದು ವಾಸ್ತವವೇ.
ನ್ಯಾಯಾಂಗವು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಆಧಾರ ಸ್ತಂಭಗಳಲ್ಲೊಂದು. ನ್ಯಾಯಮೂರ್ತಿಗಳು ಇದೇ ಸಮಾಜದ ನಡುವಿನಿಂದ ಬಂದವರು, ಅತಿಮಾನವರೇನೂ ಅಲ್ಲ. ಅವರು ಮಾಡುವ ನ್ಯಾಯನಿರ್ಣಯಗಳನ್ನು ಅವರ ಸಾಮಾಜಿಕ ಹಿನ್ನೆಲೆ, ಇಷ್ಟಾನಿಷ್ಟಗಳು ಪ್ರಭಾವಿಸುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ಉನ್ನತ ಹಂತದ ನ್ಯಾಯಾಂಗಕ್ಕೆ ನೇಮಕಗೊಳ್ಳುತ್ತಿರುವ ದೊಡ್ಡ ಸಂಖ್ಯೆಯ ನ್ಯಾಯಮೂರ್ತಿಗಳು ಪುರಾತನ ಸಾಮಾಜಿಕ ಪೂರ್ವಗ್ರಹಗಳನ್ನು ಹೊಂದಿರುವ ಸಾಮಾಜಿಕ ವರ್ಗಗಳಿಗೇ ಸೇರಿದವರು ಎಂಬುದು ಗಮನಾರ್ಹ.
ಕಾರ್ಯಾಂಗ ಮತ್ತು ಶಾಸಕಾಂಗವನ್ನು ಮೀಸಲು ವ್ಯವಸ್ಥೆಗೆ ಒಳಪಡಿಸಿರುವ ಹಿನ್ನೆಲೆಯಲ್ಲಿ ಜನತಂತ್ರದ ಮೂರನೆಯ ಕಂಬವಾಗಿರುವ ನ್ಯಾಯಾಂಗವನ್ನು ಹೊರಗಿಟ್ಟಿರುವುದು ಸೂಕ್ತವಲ್ಲ. ದೇಶದ ಬಹುಜನರ ಕಷ್ಟ ಕಾರ್ಪಣ್ಯಗಳನ್ನು, ಸಮಸ್ಯೆಗಳನ್ನು ಅರಿತವರು ನ್ಯಾಯಮೂರ್ತಿಗಳಾಗಬೇಕು. ಸ್ವಾತಂತ್ರ್ಯ ಗಳಿಸಿ ಏಳು ದಶಕಗಳ ನಂತರವೂ ಇಂತಹ ಪ್ರಾತಿನಿಧ್ಯ ನೀಡಿಕೆಯನ್ನು ನಾವು ಸಾಧಿಸಿಲ್ಲ. ಮೀಸಲಾತಿಯನ್ನು ಅನ್ವಯಿಸದೆಯೇ ಈ ಪ್ರಾತಿನಿಧ್ಯ ಸಾಧ್ಯವಾದರೆ ಒಳ್ಳೆಯದು. ಇಲ್ಲವಾದರೆ ಮೀಸಲಾತಿ ನೀಡಿಯಾದರೂ ಸರಿ ಬಹುಜನರು, ಅಲ್ಪಸಂಖ್ಯಾತರ ನಡುವಿನಿಂದ ಬಂದವರಿಗೆ ಉನ್ನತ ಹಂತದ ನ್ಯಾಯಾಂಗದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯಲೇಬೇಕು. ಉನ್ನತ ನ್ಯಾಯಾಂಗದ ಶೇ.67ರಷ್ಟು ನ್ಯಾಯಮೂರ್ತಿಗಳನ್ನು ನೇರವಾಗಿ ವಕೀಲರ ನಡುವಿನಿಂದ ಆರಿಸಲಾಗುತ್ತದೆಯೇ ವಿನಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಲ್ಲ. ಆಯಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯ ಶಿಫಾರಸುಗಳೇ ನಿರ್ಣಾಯಕ. ಮುಖ್ಯ ನ್ಯಾಯಮೂರ್ತಿಯವರು ಪರಿಶಿಷ್ಟ ಜಾತಿ- ಪಂಗಡಗಳ ಅಭ್ಯರ್ಥಿಗಳ ಹೆಸರುಗಳನ್ನು ಯಾಕೆ ತಿರಸ್ಕರಿಸುತ್ತಿದ್ದಾರೆ ಎಂಬ ಕಾರಣಗಳು ಹೊರಬೀಳಬೇಕು. ಈ ಕುರಿತು ಪಾರದರ್ಶಕತೆಯನ್ನು ಪಾಲಿಸಲೇಬೇಕು.
ಸಾಮಾಜಿಕ ಬದಲಾವಣೆ ಎಂಬುದು ಸಂವಿಧಾನ ಪ್ರತಿಪಾದಿತ ಗುರಿಗಳಲ್ಲೊಂದು. ಸಾಧಿಸಬೇಕಿದ್ದರೆ ಅದಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು. ಇಂತಹ ವಾತಾವರಣಗಳ ಪೈಕಿ ನ್ಯಾಯಾಂಗದಲ್ಲಿ ಪ್ರಾತಿನಿಧ್ಯ ನೀಡಿಕೆ ಬಹು ಮಹತ್ವದ್ದು. ನ್ಯಾಯಾಂಗದ ಎಲ್ಲ ಹಂತಗಳಲ್ಲಿಯೂ ವಂಚಿತ ಶೋಷಿತ ದಮನಿತ ವರ್ಗಗಳಿಗೆ ಪ್ರಾತಿನಿಧ್ಯ ಅತ್ಯಗತ್ಯ. ಬಿಜೆಪಿಯ ಬಾಯಾಳಿ ಸಂಸದರು ಮತ್ತು ತಲೆಯಾಳುಗಳು ಸಂವಿಧಾನವನ್ನು ತಿದ್ದುಪಡಿ ಮಾಡುವ ಮಾತುಗಳನ್ನು ಆಡುತ್ತಲೇ ಇರುತ್ತಾರೆ.
ಹಾಗಿದ್ದರೆ ನ್ಯಾಯಾಂಗದಲ್ಲಿ ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರುವ ದಿಟ್ಟತನವನ್ನು ತೋರಲಿ.

Very good editorial. 👍
Thanks for reading and commenting…