ಹನಿಟ್ರ್ಯಾಪ್ ಎಂಬ ಮೋಸದ, ಪ್ರೇಮದ ಬಲೆಗೆ ಬೀಳುವ ರಾಜಕಾರಣಿಗಳು ಎಂಥವರು ಎಂದು ತಮ್ಮ ಹೆಗಲು ತಾವೇ ಮುಟ್ಟಿಕೊಂಡು ಸಾರಿದ್ದಾರೆ. ತಾವು ಸಜ್ಜನರಾಗಿದ್ದರೆ, ಹನಿಟ್ರ್ಯಾಪ್ ಜಾಲದೊಳಗೆ ಸಿಲುಕುವ ಭಯ ಬರಲು ಸಾಧ್ಯವಿಲ್ಲ.
ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಗುರುವಾರ ಬಜೆಟ್ ಬಗ್ಗೆ ಗಂಭೀರವಾದ ಚರ್ಚೆ ನಡೆದಿತ್ತು. ಸಚಿವರೊಬ್ಬರು ತಮ್ಮ ಮೇಲೆ ಹನಿಟ್ರ್ಯಾಪ್ ಸಂಚು ನಡೆದಿತ್ತು ಎಂದು ಹೇಳಿ ಇಡೀ ದಿನದ ಕಲಾಪ ಹೊರಳುದಾರಿ ಹಿಡಿಯಿತು . ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ. ಇದನ್ನು ನಡೆಸಿದವರು ಯಾರು ಎಂಬುದು ಬಹಿರಂಗವಾಗಬೇಕು ಎಂದು ಹೇಳುತ್ತಿದ್ದಂತೆ, ಮಧ್ಯಪ್ರವೇಶಿಸಿದ ಸಚಿವ ರಾಜಣ್ಣ ಒಟ್ಟು 48 ರಾಜಕಾರಣಿಗಳ ಹನಿಟ್ರ್ಯಾಪ್ ವಿಡಿಯೋ ಸಿ ಡಿ, ಪೆನ್‌ಡ್ರೈವ್ ಇವೆ ಎಂದರು. ವಿಪಕ್ಷಗಳ ಪ್ರತಿಭಟನೆಗೆ ವೇದಿಕೆ ಒದಗಿತು. ಎರಡು ಅತ್ಯಾಚಾರ ಪ್ರಕರಣಗಳ ಆರೋಪಿ, ಎಚ್‌ಐವಿ ಸೋಂಕಿತರ ತಂಡದಿಂದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮೇಲೆ ಹನಿಟ್ರ್ಯಾಪ್ ಮಾಡಿಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಈ ಅವಕಾಶವನ್ನು ಬಳಸಿಕೊಂಡರು. ತಮ್ಮ ಮೇಲೆ ಅತ್ಯಾಚಾರದ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ, ನಾನು ಅತ್ಯಾಚಾರ ಮಾಡಿಲ್ಲ ಎಂದು ರೋಷಾವೇಶದಿಂದ ಮಾತನಾಡಿದರು. ನೇರವಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮೇಲೆ ಆರೋಪ ಮಾಡಿದರು.
ವಾಸ್ತವದಲ್ಲಿ ಮುನಿರತ್ನ ಮೇಲೆ ವಿಧಾನಸೌಧದ ಕೊಠಡಿಯಲ್ಲೇ ಅತ್ಯಾಚಾರ ನಡೆದಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಸ್ವತಃ ವಿಪಕ್ಷ ನಾಯಕ ಆರ್ ಅಶೋಕ್‌ಗೆ ಎಚ್‌ಐವಿ ಸೋಂಕಿತ ರಕ್ತ ಇಂಜೆಕ್ಟ್ ಮಾಡಲು ಯತ್ನಿಸಿ ವಿಫಲರಾಗಿರುವ ಬಗ್ಗೆ ಮಹಿಳೆಯೊಬ್ಬರು ಮಾಧ್ಯಮಗಳ ಮುಂದೆ ನೇರವಾಗಿಯೇ ಆರೋಪಿಸಿದ್ದರು. ಅಶೋಕ್ ಕಂಗಾಲಾಗಿ ಆಘಾತದ ಪ್ರತಿಕ್ರಿಯೆ ನೀಡಿದ್ದರು. ಇಂತಹ ಗಂಭೀರ ಆರೋಪ ಇರುವಾಗ ಆತನನ್ನು ಪಕ್ಷದಿಂದ ಅಮಾನತು ಮಾಡದಿರುವ ಬಿಜೆಪಿಯ ನೈತಿಕತೆಯೇ ಪ್ರಶ್ನಾರ್ಹ. ಸದನದ ವೇದಿಕೆಯನ್ನು ತಮ್ಮ ರಕ್ಷಣೆಗೆ ಬಳಸಿಕೊಂಡರು ಮುನಿರತ್ನ. ತಾನು ಅಮಾಯಕ ಎಂದು ಬಿಂಬಿಸಿಕೊಳ್ಳಲು ದುರುಪಯೋಗ ಮಾಡಿದರು. ಕಳಂಕಿತರಿಗೆ ಲವಲೇಶದಷ್ಟು ಪಾಪಪ್ರಜ್ಞೆಯಾಗಲಿ, ಪಶ್ಚಾತ್ತಾಪವಾಗಲಿ ಇಲ್ಲ ಎಂಬುದನ್ನು ತೋರಿದ ನಿದರ್ಶನವಿದು. ಈ ಪ್ರವೃತ್ತಿಗೆ ಸದನವೇ ಪರೋಕ್ಷವಾಗಿ ಅಂಕುಶ ಇಡಬೇಕಿತ್ತು. ನೈತಿಕವಾಗಿ ಸರಿಯಲ್ಲ ಎಂದು ಹೇಳಬಹುದಿತ್ತು. ಹಾಗೆ ಆಗದೇ ಇದ್ದದ್ದು ದುರದೃಷ್ಟಕರ.
ಹನಿಟ್ರ್ಯಾಪ್ ಎಂಬ ಮೋಸದ, ಪ್ರೇಮದ ಬಲೆಗೆ ಬೀಳುವ ರಾಜಕಾರಣಿಗಳು ಎಂಥವರು ಎಂದು ತಮ್ಮ ಹೆಗಲು ತಾವೇ ಮುಟ್ಟಿಕೊಂಡು ಸಾರಿದ್ದಾರೆ. ತಾವು ಸಜ್ಜನರಾಗಿದ್ದರೆ, ಹನಿಟ್ರ್ಯಾಪ್ ಜಾಲದೊಳಗೆ ಸಿಲುಕುವ ಭಯ ಬರಲು ಸಾಧ್ಯವಿಲ್ಲ.
ಇಂದಿನ ರಾಜಕಾರಣಿಗಳಲ್ಲಿ ನೈತಿಕತೆ, ಪ್ರಾಮಾಣಿಕತೆ, ಸನ್ನಡತೆ ಹುಡುಕುವುದು ಹಾಸ್ಯಾಸ್ಪದ ಆಗಿ ಹೋಗಿರುವುದು ಬಹುದೊಡ್ಡ ವಿಡಂಬನೆ. ಹಣಬಲ, ಜಾತಿಬಲ, ತೋಳ್ಬಲದಿಂದ ಚುನಾವಣೆಗಳಲ್ಲಿ ಗೆದ್ದು ಶಾಸಕರು, ಸಂಸದರು, ಮಂತ್ರಿಗಳಾಗುವ ಭ್ರಷ್ಟ ವ್ಯವಸ್ಥೆಯಲ್ಲಿ ಹನಿಟ್ರ್ಯಾಪ್ ಎಂಬ ಅನೈತಿಕ ಜಾಲದ ಭೂತ ತಲೆಯೆತ್ತುತ್ತಲೇ ಇರುತ್ತದೆ. ಕೆಲವರು ಸಹಾಯ ಕೇಳಿ ಬಂದ ಅಮಾಯಕ ಹೆಣ್ಣುಮಕ್ಕಳನ್ನು ದುರುಪಯೋಗಪಡಿಸಿಕೊಂಡು ನಂತರ ಅತ್ಯಾಚಾರದ ದೂರು ದಾಖಲಾದಾಗ, ಅಥವಾ ಪುರಾವೆಗಳು ಬಹಿರಂಗಗೊಂಡಾಗ ಹನಿಟ್ರ್ಯಾಪ್ ಎಂದು ಹೇಳಿ ಜಾರಿಕೊಳ್ಳಲು ಯತ್ನಿಸುವುದನ್ನೂ ಆಗಾಗ ನೋಡುತ್ತಿರುತ್ತೇವೆ. ಈಗ ಸಚಿವ ರಾಜಣ್ಣ ಹೇಳಿರುವಂತೆ 48 ಮಂದಿ ಶಾಸಕರ ಹನಿಟ್ರ್ಯಾಪ್ ಮಾಡಿ ಸೆಕ್ಸ್ ವಿಡಿಯೊಗಳನ್ನು ಮಾಡಲಾಗಿದೆ ಎಂದು ಹೇಳಿರುವುದು ಹೊಸ ಅಚ್ಚರಿಯನ್ನೇನೂ ಉಂಟು ಮಾಡುವುದಿಲ್ಲ.
2019ರಲ್ಲಿ ಹಿಂದೆ ಆಪರೇಷನ್ ಕಮಲ ಆದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ ಮುಂಬೈನ ಹೋಟೆಲಿನಲ್ಲಿ ವಾರಗಳ ಕಾಲ ಇಟ್ಟು ಅಲ್ಲಿ ಅವರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂಬ ಆರೋಪ ಆಗಿನ ಮುಖ್ಯಮಂತ್ರಿಯೊಬ್ಬರ ಪುತ್ರನ ಮೇಲೆ ಬಂದಿತ್ತು. ಅಷ್ಟೇ ಅಲ್ಲ, ಬಿಜೆಪಿಯ ಏಳು ಮಂದಿ ಶಾಸಕರು ಕೋರ್ಟ್‌ನಿಂದ ತಮ್ಮ ಬಗ್ಗೆ ಮಾಧ್ಯಮಗಳಲ್ಲಿ ಮಾನಹಾನಿಕರ ವರದಿ ಬಿತ್ತರಿಸದಂತೆ ತಡೆಯಾಜ್ಞೆ ತಂದಿದ್ದರು. ಡಾ ಕೆ ಸುಧಾಕರ್, ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಡಿ ವಿ ಸದಾನಂದ ಗೌಡ, ಗೋಪಾಲಯ್ಯ ತಡೆಯಾಜ್ಞೆ ತಂದವರ ಪಟ್ಟಿಯಲ್ಲಿದ್ದರು. ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ತಡೆಯಾಜ್ಞೆ ತಂದಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ರಾಜ್ಯದಲ್ಲಿ ಹನಿಟ್ರ್ಯಾಪ್ ನಡೆಯುತ್ತಿದೆ, ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವರ ಮೇಲೂ ಆಗಿತ್ತು ಎಂದು ಸಹೋದರ ರಮೇಶ್ ಜಾರಕಿಹೊಳಿ ಪ್ರಕರಣವನ್ನು ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿ ಡಿ ಪ್ರಕರಣ ಹೊರ ಬಂದಾಗ ಡಿ ಕೆ ಶಿವಕುಮಾರ್ ಮೇಲೆ ಆರೋಪ ಮಾಡಲಾಗಿತ್ತು. ಇಬ್ಬರು ಬದ್ಧ ವೈರಿಗಳಾಗಿದ್ದರು. ಆದರೆ ಹಾಸನದ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ತಾವೇ ನೂರಾರು ಮಹಿಳೆಯರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿ ಅದರ ವಿಡಿಯೋ ಮಾಡಿಟ್ಟುಕೊಂಡ ಪ್ರಕರಣ ಬಯಲಾದಾಗ ಪೆನ್‌ಡ್ರೈವ್ ಹಂಚಿಕೆ ಮಾಡಿದವರು ಡಿ ಕೆ ಸಹೋದರರು ಎಂದು ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ನೇರವಾಗಿ ಆರೋಪಿಸಿದ್ದರು. ಮುನಿರತ್ನನ ಮೇಲಿನ ಅತ್ಯಾಚಾರ ಪ್ರಕರಣ ಡಿ ಕೆ ಸಹೋದರರ ಷಡ್ಯಂತ್ರ ಎಂದು ಮುನಿರತ್ನ ಆರೋಪಿಸುತ್ತಲೇ ಇದ್ದಾರೆ. ಮುನಿರತ್ನ ಮತ್ತು ಪ್ರಜ್ವಲ್ ಪ್ರಕರಣ ಬೇರೆಯದೇ. ಅಲ್ಲಿ ಯಾರದ್ದೋ ಷಡ್ಯಂತ್ರ ಎಂಬ ವಾದಕ್ಕೆ ಆಧಾರವೇ ಇಲ್ಲ.
ಆದರೆ, ಕೆಲ ತಿಂಗಳಿನಿಂದ ಉಪಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾ ಸರ್ಕಾರಕ್ಕೂ, ಪಕ್ಷಕ್ಕೂ ಮುಜುಗರ ಉಂಟು ಮಾಡಿದ್ದ ಸಚಿವ ಕೆ ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ಪಕ್ಷದವರಿಂದಲೇ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅವರು ಹೇಳುವಂತೆ ತಮ್ಮದೇ ಪಕ್ಷದ ಯುವ ಮುಖಂಡ ಮಹಿಳೆಯನ್ನು ಪರಿಚಯಿಸಿ ಹನಿಟ್ರ್ಯಾಪ್‌ಗೆ ಯತ್ನಿಸಿದೆ. ಹಾಗಿದ್ದರೆ ಎರಡು ಬಾರಿ ಮಹಿಳೆಯೊಬ್ಬರನ್ನು ಸಚಿವರ ಬಳಿಗೆ ಕರೆದೊಯ್ದ ಆ ಯುವ ಮುಖಂಡ ಯಾರು ಎಂಬುದು ಬಯಲಾಗಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಿ ಜನರ ಮುಂದೆ ಸತ್ಯವನ್ನು ಅನಾವರಣ ಮಾಡಬೇಕು. ಈಗಾಗಲೇ ರಮೇಶ್ ಜಾರಕಿಹೊಳಿ ಸಿಡಿ, ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಜ್ವಲ್ ರೇವಣ್ಣನ ಸೆಕ್ಸ್ ಹಗರಣ ರಾಜ್ಯದ ಮಾನ ಹರಾಜು ಹಾಕಿದೆ. ಈಗ ಕೇಳಿ ಬಂದಿರುವ ಆರೋಪದ ತನಿಖೆ ನಡೆಸಿ ಇಂತಹ ಕೆಟ್ಟ ಚಾಳಿಗೆ ಬ್ರೇಕ್ ಹಾಕುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡಬೇಕಿದೆ.
