ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?

Date:

Advertisements
ಮುಡಾ ಮತ್ತು ಬೆಂಗಳೂರಿನೊಳಗಿನ ಅವೇ ಸಾಮಾನ್ಯ ರಾಜಕಾರಣದ ಒಳಸುಳಿಗಳಿಂದ ಮುಖ್ಯಮಂತ್ರಿಗಳು ಹೊರಗೆ ಹೊರಟಿರುವ ಸಂದರ್ಭದಲ್ಲಿ 2023ರ ಜನಾದೇಶವನ್ನು ನೆನಪಿನಲ್ಲಿಡುತ್ತಾ, ಆಡಳಿತದಲ್ಲಿ ಬಿಗಿಯನ್ನೂ, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮವನ್ನೂ ತರುವ ಕಡೆಗೆ ಪ್ರಯಾಣ ಸಾಗಬೇಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಗೆ, ಅವರ ಜಮೀನಿಗೆ ಪ್ರತಿಯಾಗಿ ನೀಡಲಾದ ಸೈಟುಗಳ ಸಂಬಂಧ ಆರೋಪ ಶುರುವಾಗಿ ಎರಡೂವರೆ ತಿಂಗಳಾಗುತ್ತಾ ಬಂದಿತು. ಈಗಾಗಲೇ ಲೋಕಾಯುಕ್ತ ತನಿಖೆ ಆರಂಭವಾಗಿದ್ದು, ತನಿಖೆಯ ಅಂತಿಮ ತೀರ್ಮಾನಗಳಿಗೆ ಎಲ್ಲರೂ ಬದ್ಧರಾಗಬೇಕು ಅಥವಾ ಕಾನೂನಿನ ಪ್ರಕ್ರಿಯೆ ಮುಂದುವರೆಯಬೇಕು. ಆದರೆ, ಈ ಸಂಬಂಧ ನಡೆಯುತ್ತಿರುವ ವಿದ್ಯಮಾನಗಳು ಆರೋಪ – ಪ್ರತ್ಯಾರೋಪಕ್ಕೆ ದಾರಿ ಮಾಡಿಕೊಟ್ಟಿದ್ದು, ವಿರೋಧ ಪಕ್ಷಗಳ ನಾಯಕರು ಮತ್ತು ಸಚಿವರುಗಳು ಈ ವಿಚಾರದಲ್ಲಿ ಸಾಕಷ್ಟು ಸಮಯ ವ್ಯಯಿಸುತ್ತಿರುವುದು ಎದ್ದು ಕಾಣುತ್ತಿದೆ. ಮಾಧ್ಯಮಗಳಂತೂ ದಿನದ ಬಹುಭಾಗವನ್ನು ಇದಕ್ಕೇ ಮೀಸಲಿಟ್ಟಿವೆ. ಚುನಾವಣೆಯ ಸಮಯದಲ್ಲಿ ಹೀಗಾಗುವುದು ಸಾಮಾನ್ಯ. ಆದರೆ, ಎರಡೂ ದೊಡ್ಡ ಸಾರ್ವತ್ರಿಕ ಚುನಾವಣೆಗಳು ಮುಗಿದ ನಂತರ ಶುರುವಾದ ಈ ಆರೋಪಗಳ ಭರಾಟೆ ಯಾವಾಗ ಮುಗಿಯುತ್ತದೆ ಎಂಬ ಪ್ರಶ್ನೆ ಇದೆ.

ಇದರ ಅರ್ಥ ಈ ಎಲ್ಲಾ ಆರೋಪಗಳು ಬದಿಗೆ ಸರಿಯಬೇಕಂದಲ್ಲ. ಇದು ಹೊರಬಂದಿದ್ದರಿಂದಲೇ, ವಿರೋಧ ಪಕ್ಷಗಳ ನಾಯಕರ ಅಕ್ರಮಗಳು ಬೇರೆ ಬೇರೆ ತನಿಖಾ ಸಂಸ್ಥೆಗಳಡಿಯಲ್ಲಿ ಗೆದ್ದಲು ತಿನ್ನುತ್ತಿದ್ದಂತೆ ಮಲಗಿದ್ದವೂ ಈಗ ಎದ್ದು ನಿಂತಿವೆ. ಎಲ್ಲವೂ ತನಿಖೆಗೆ ಒಳಪಡಬೇಕು; ಕಾನೂನಿಗೆ ಯಾರೂ ದೊಡ್ಡವರು ಅಥವಾ ಚಿಕ್ಕವರು ಇರಬಾರದು. ಪರಸ್ಪರ ಈ ರೀತಿ ಜನರ ಮುಂದೆ ಬಿಚ್ಚಿಕೊಳ್ಳುವುದು, ಕಾನೂನಿನ ಪ್ರಕ್ರಿಯೆಗೆ ಒಳಪಡುವುದು ದ್ವೇಷ ರಾಜಕಾರಣವೂ ಅಲ್ಲ; ಅಪ್ರಜಾತಾಂತ್ರಿಕವೂ ಅಲ್ಲ. ಅವೆಲ್ಲವೂ ನಡೆಯುತ್ತಿರುವ ಹಾಗೆಯೇ ರಾಜ್ಯದ ಆಡಳಿತ ಯಂತ್ರ ಮತ್ತು ವಿರೋಧ ಪಕ್ಷಗಳು ಹಾಗೂ ನಾಗರಿಕ ಸಮಾಜದಿಂದ ಜನಸಾಮಾನ್ಯರ ಬದುಕಿನ ಸಮಸ್ಯೆಗಳ ವಿಚಾರದತ್ತಲೂ ಗಮನ ಹರಿಯುವ ಅಗತ್ಯವಿದೆ. ಹೇಗೂ ಅಧಿಕಾರಶಾಹಿಯು ಆಡಳಿತವನ್ನು ಎಡಬಿಡದೇ ನಡೆಸಿಕೊಂಡು ಹೋಗುವುದು ‘ವಿಕಸಿತವಾಗಿರುವ ಪ್ರಭುತ್ವ ಯಂತ್ರಾಂಗ’ದ ಮೂಲಗುಣ. ಯಾರೇ ಅರಸ ಬಂದರೂ, ಅದು ತಿರುಗುತ್ತಲೇ ಇರುತ್ತದೆ. ಆದರೆ, ಪ್ರಜಾಪ್ರಭುತ್ವದ ಆಡಳಿತದಲ್ಲಿ ಅದರ ಆಚೆಗೆ, ಐದು ವರ್ಷಗಳಿಗೊಮ್ಮೆ ಜನರ ಮುಂದೆ ಹೋಗಲೇಬೇಕಾದ ರಾಜಕಾರಣದ ಪಾರಮ್ಯ ಇರಬೇಕು. ಜನರ ಮುಂದೆ ಹೋಗಿ, ಮರು ಆಯ್ಕೆಯಾಗುವ ಅನಿವಾರ್ಯ ಇರದ ಅಧಿಕಾರಿಗಳು ರೂಲ್‌ ಬುಕ್‌ ಇಟ್ಟುಕೊಂಡು ಆಡಳಿತ ನಡೆಸುವುದರಿಂದ ಪ್ರಜಾಪ್ರಭುತ್ವದ ವಿಸ್ತರಣೆ ಸಾಧ್ಯವಾಗುವುದಿಲ್ಲ.

‘ಪ್ರಜಾಪ್ರಭುತ್ವದ ವಿಸ್ತರಣೆ’ ಈ ದೇಶದಲ್ಲಿ ನಾಲ್ಕನೇ ಅಂಗವಾದ ಮಾಧ್ಯಮ, ಅದಕ್ಕಿಂತಲೂ ಹೆಚ್ಚಾಗಿ ಐದನೇ ಅಂಗವಾದ ನಾಗರಿಕ ಸಮಾಜದ ಕ್ರಿಯಾಶೀಲತೆಯಿಂದ ಆಗಿದೆ; ಆಗುತ್ತಲಿದೆ. ಮಾಧ್ಯಮವು ಸಮಾಜದ ಪ್ರತಿನಿಧಿಯಾಗದೇ, ಆರ್ಥಿಕ ಸಾಮ್ರಾಜ್ಯ ಕಟ್ಟಿಕೊಂಡವರ ಕೈಯ್ಯಲ್ಲಿನ ದಾಳವಾಗಿ, ದ್ವೇಷ ರಾಜಕಾರಣದ ಅಸ್ತ್ರವಾಗಿ ಬಳಕೆಯಾದ ನಂತರ ಇದರಲ್ಲಿ ಸ್ವಲ್ಪ ಬದಲಾವಣೆ ಬಂದಿದೆ. ಆದರೂ, ಮೇಲಿನ ಎರಡು ಅಂಗಗಳು ಮತ್ತು ರಾಜಕೀಯ ಪಕ್ಷಗಳು ಅದನ್ನು ನಿಭಾಯಿಸುವ ರೀತಿಯಲ್ಲೇ ಪ್ರಜಾತಂತ್ರ ಉಸಿರಾಡುತ್ತಿದೆ. ಆದರೆ, ಕರ್ನಾಟಕದ ಈ ಹೊತ್ತಿನ ದುರಂತವೆಂದರೆ, ಎಲ್ಲರೂ ಮುಡಾ ಕೇಸು, ಸಿದ್ದರಾಮಯ್ಯನವರ ಮೇಲಿನ ಆರೋಪ, ಪ್ರತಿಪಕ್ಷದ ನಾಯಕರ ಬಚ್ಚಿಟ್ಟ ಕೇಸುಗಳಲ್ಲೇ ಮುಳುಗಿದಂತಿದೆ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯೇ ಮೋದಿಯವರ ಎರಡು ಅವಧಿಯ ಸಾಧನೆಯೇ?

ದುರಾಡಳಿತ, ಭ್ರಷ್ಟಾಚಾರ ಹಾಗೂ ಕೋಮುವಾದೀ ರಾಜಕಾರಣದ ವಿರುದ್ಧ 2023ರಲ್ಲಿ ಜನರು ಮತ ಚಲಾಯಿಸಿದ್ದಾರೆ; ಈ ರಾಜ್ಯಕ್ಕೊಂದು ಅಭಿವೃದ್ಧಿಯ ಮುನ್ನೋಟ ಬೇಕು, ಚಲನಶೀಲವಾದ ಸಾಮಾಜಿಕ ನೀತಿಯ ಅಗತ್ಯವಿದೆ. ಹೀಗಿರುವಾಗ ಆಡಳಿತ ಪಕ್ಷ ಆ ನಿಟ್ಟಿನಲ್ಲಿ ನಿರಂತರ ಕ್ರಿಯಾಶೀಲವಾಗಿರುವುದು ಅತ್ಯಗತ್ಯ. ತಮಗೆ ಯಾಕಾಗಿ 2023ರಲ್ಲಿ ಜನರು ಮತ ಹಾಕಿದರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಆಡಳಿತ ಪಕ್ಷದ ಕೆಲಸವಾಗಿದ್ದರೆ, ಜನರ ಬದುಕಿನ ಸಮಸ್ಯೆಗಳತ್ತ ನಿರಂತರವಾಗಿ ಗಮನ ಸೆಳೆಯುವುದು ವಿರೋಧಪಕ್ಷಗಳ ಕೆಲಸವಾಗಬೇಕು. ಆದರೆ, ಮೇಲ್ನೋಟಕ್ಕೆ ಅಷ್ಟೇನೂ ನಿಜವೆಂದು ಕಾಣದ ಮುಡಾ ವಿಚಾರವನ್ನಿಟ್ಟುಕೊಂಡು ಸತತ ಎರಡೂವರೆ ತಿಂಗಳು ವ್ಯರ್ಥವಾಗಿದ್ದು ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಷ್ಟವೇ ಸರಿ.

ಈಗೇನೋ ದಸರಾ ಮುಗಿಸಿಕೊಂಡು ಮುಖ್ಯಮಂತ್ರಿಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೊರಟಂತೆ ಕಾಣುತ್ತದೆ. ಅವರ ತಿಂಗಳ ಪ್ರವಾಸದ ಪಟ್ಟಿ ನೋಡಿದರೆ ಬೆಂಗಳೂರಿಗಿಂತ ಹೆಚ್ಚು ಹೊರಗೇ ಇರುವ ಯೋಜನೆ ಮಾಡಿಕೊಂಡಿರುವುದು ಸ್ಪಷ್ಟ. ಇದು ಕೇವಲ ಮುಡಾದಿಂದ ಪಕ್ಕಕ್ಕೆ ಸರಿಯುವ ತಂತ್ರವಷ್ಟೇ ಆಗದೇ, 2023ರ ಜನಾದೇಶವನ್ನು ನೆನಪಿನಲ್ಲಿಡುತ್ತಾ, ಆಡಳಿತದಲ್ಲಿ ಬಿಗಿಯನ್ನೂ, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮವನ್ನೂ ತರುವ ಕಡೆಗೆ ಪ್ರಯಾಣ ಸಾಗಬೇಕಿದೆ. ಕಂದಾಯ ಇಲಾಖೆಯಲ್ಲಿ ಅಂತಹ ಪ್ರಯತ್ನ ಶುರುವಾಗಿರುವುದು ಸಚಿವರ ಹಲವು ನಡೆಗಳಿಂದ ವ್ಯಕ್ತವಾಗುತ್ತದೆ. ಐಟಿ ಬಿಟಿ ಇಲಾಖೆಯು ಮುಂದಿನ ದಿನಗಳಿಗೆ ಸಂಪೂರ್ಣ ಸನ್ನದ್ಧವಾಗುತ್ತಿರುವುದು ಸಕಾರಾತ್ಮಕ ಅಂಶವೆಂಬ ಸಮಾಧಾನವಿದ್ದರೂ, ಅದೇ ಸಚಿವರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಹೊಸ ಚಿಂತನೆ ತಂದಿರುವ ಲಕ್ಷಣವಿಲ್ಲ. ತಾ.ಪಂ., ಜಿ.ಪಂ., ಚುನಾವಣೆಗಳಿಗೇ ಈ ಸರ್ಕಾರ ಮುಂದಾಗದಿರುವುದು ದೊಡ್ಡ ಲೋಪ. ಅದೇ ರೀತಿ ಒಳಮೀಸಲಾತಿ, ಜಾತಿಜನಗಣತಿಯಂತಹ ಮಹತ್ವದ ಸಂಗತಿಗಳಿಗೆ ಕೈ ಹಾಕದೇ ಪ್ರಜಾಪ್ರಭುತ್ವದ ದಿನದ ಮಾನವ ಸರಪಳಿಗಳಂತಹ ಸಾಂಕೇತಿಕ ಕ್ರಮಗಳಲ್ಲೇ ಸಮಾಜ ಕಲ್ಯಾಣ ಇಲಾಖೆಯು ಮುಳುಗಿದೆಯೇ ಎಂಬ ಸಂಶಯ ಬರುತ್ತದೆ. ಪಿಡಬ್ಲ್ಯುಡಿ ಸಚಿವರು ಭಾರೀ ಭ್ರಷ್ಟಾಚಾರದ ಕಳಂಕ ಹೊತ್ತುಕೊಳ್ಳದಿರುವುದು ಒಳ್ಳೆಯ ಬೆಳವಣಿಗೆಯಾದರೂ, ಉಳಿದ ಇಲಾಖೆಗಳಲ್ಲೇನಾಗುತ್ತಿದೆ ಕಂಡುಬಂದಿಲ್ಲ. ಕಾರ್ಮಿಕ ಸಚಿವರು ಮುಟ್ಟಿನ ರಜೆಯಂತಹ ಒಂದೆರಡು ಪ್ರಮುಖ ಕ್ರಮಗಳಿಗೆ ಮುಂದಾಗಿದ್ದಾರೆ.

ವಿಶ್ವವಿದ್ಯಾಲಯಗಳ ಸಿಂಡಿಕೇಟುಗಳಿಗೆ ಅತ್ಯುತ್ತಮ ಆಯ್ಕೆ ಮಾಡಿರುವ ಸರ್ಕಾರ, ಹೈದ್ರಾಬಾದ್‌ ಕರ್ನಾಟಕದ ಶಿಕ್ಷಣ ಸುಧಾರಣೆಗೆ ಶಿಕ್ಷಣ ತಜ್ಞರೂ ಅಲ್ಲದ, ಮೋದಿ ಅಭಿಮಾನಿ ಗುರುರಾಜ ಕರ್ಜಗಿಯವರನ್ನು ನೇಮಿಸಿರುವುದು ವೈರುಧ್ಯ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ವಿಶೇಷವಾದ ಮುನ್ನೋಟ, ನಿಷ್ಠುರ ಕ್ರಮಗಳಿಲ್ಲದೇ ಹೋದರೆ, ಕಲ್ಯಾಣ ಕಾರ್ಯಕ್ರಮಗಳಾಚೆ ಈ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿಯ ಸಮಗ್ರ ಯೋಜನೆ ಇಲ್ಲವೆಂದೇ ಅರ್ಥ. ಶಿಕ್ಷಣ ಕ್ಷೇತ್ರವನ್ನು ಹಾಳುಗೆಡವಲಾದರೂ ಬಿಜೆಪಿ ಪಕ್ಷಕ್ಕೆ ಅದರ ಮೇಲೆ ಗಮನ ಇರುತ್ತದೆ.

ಮುಡಾ ಮತ್ತು ಬೆಂಗಳೂರಿನೊಳಗಿನ ಅವೇ ಸಾಮಾನ್ಯ ರಾಜಕಾರಣದ ಒಳಸುಳಿಗಳಿಂದ ಮುಖ್ಯಮಂತ್ರಿಗಳು ಹೊರಗೆ ಹೊರಟಿರುವ ಸಂದರ್ಭದಲ್ಲಿ ಇವೆಲ್ಲವೂ ಅವರ ಆಲೋಚನೆಯಲ್ಲಿ ಸುಳಿದಾಡಲಿ. ಸಾಕಷ್ಟು ಕೆಲಸ ಮಾಡುವ ಸಾಮರ್ಥ್ಯವಿರುವ ದಿನೇಶ್‌ ಗುಂಡೂರಾವ್‌ ಮತ್ತು ಶರಣಪ್ರಕಾಶ ಪಾಟೀಲರು ಆರೋಗ್ಯ ಕ್ಷೇತ್ರಕ್ಕೂ, ಎಂ.ಸಿ. ಸುಧಾಕರ್‌ ಮತ್ತು ಮಧು ಬಂಗಾರಪ್ಪನವರು ಶಿಕ್ಷಣ ಕ್ಷೇತ್ರಕ್ಕೂ ಕಾಯಕಲ್ಪ ತರಲಿ. ಪ್ರತಿಯೊಬ್ಬ ಸಚಿವರೂ ತಮ್ಮ ಇಲಾಖೆಗಳಿಗೆ ಮುನ್ನೋಟವೊಂದನ್ನು ರೂಪಿಸಿಕೊಳ್ಳಲಿ ಎಂದು ಹಾರೈಸೋಣ. ಎಲ್ಲಾ ಪಕ್ಷದ ಎಲ್ಲಾ ನಾಯಕರ ಹಗರಣಗಳೂ ನಿಷ್ಪಕ್ಷಪಾತವಾಗಿ, ನಿಷ್ಠುರವಾಗಿ ತನಿಖೆಗೆ ಒಳಪಡಲಿ, ಆದ್ಯತೆ ಆಡಳಿತದ ಮೇಲೆ ಇರಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X