ಈ ದಿನ ಸಂಪಾದಕೀಯ | ಹುಬ್ಬಳ್ಳಿ, ಮಂಗಳೂರು ಅತ್ಯಾಚಾರ ಪ್ರಕರಣ; ಪೊಲೀಸ್‌ ಇಲಾಖೆ ಎಚ್ಚೆತ್ತುಕೊಳ್ಳಬೇಕು

Date:

Advertisements

ಈ ಘಟನೆಗಳು ಕೊಡುವ ಒಂದು ಸಂದೇಶವೇನೆಂದರೆ, ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಕಟ್ಟಡ ಕಾರ್ಮಿಕರಾಗಿಯೋ, ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿಯೋ, ಸೆಕ್ಯುರಿಟಿ ಗಾರ್ಡ್‌ಗಳಾಗಿಯೋ ಒಟ್ಟಿನಲ್ಲಿ ಹೊಟ್ಟೆಪಾಡಿಗೆ ವಲಸೆ ಬರುವ ಯುವಕರು ಇಲ್ಲಿ ಅತ್ಯಾಚಾರ, ದರೋಡೆ, ಕೊಲೆಯಂತಹ ಕೃತ್ಯಗಳಲ್ಲಿ ಭಾಗಿಗಳಾಗಿ ಜೈಲುಪಾಲಾಗುತ್ತಿದ್ದಾರೆ. ಹಾಗೆಯೇ ಇಲ್ಲಿಗೆ ಕೆಲಸ ಅರಸಿ ಹೊರರಾಜ್ಯದಿಂದ ಬಂದ ಮಹಿಳೆಯರು ಸ್ಥಳೀಯರಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರಗೈದು ಕೊಂದು ಹಾಕಿದ್ದ ಬಿಹಾರ ಮೂಲದ ಆರೋಪಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಆರು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಆರೋಪಿ ಕೂಡ ಬಿಹಾರದವನು. ಮೃತ ಬಾಲಕಿಯೂ ವಲಸೆ ಕಾರ್ಮಿಕ ಕುಟುಂಬಕ್ಕೆ ಸೇರಿದ್ದಳು. ಇತ್ತ ಏಪ್ರಿಲ್‌ 16ರಂದು ರಾತ್ರಿ ಮಂಗಳೂರಿನ ಉಳ್ಳಾಲದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಮೂವರು ಸ್ಥಳೀಯ ಯುವಕರು ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಕೇರಳದ ಪ್ಲೈವುಡ್‌ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಬುಧವಾರ ಮಂಗಳೂರಿನಲ್ಲಿ ಕೆಲಸ ಹುಡುಕಲು ಬಂದಿದ್ದಾಗ ಕೆಟ್ಟು ಹೋದ ಮೊಬೈಲ್‌ ದುರಸ್ತಿಗೆಂದು ಆಟೋ ಚಾಲಕನ ಸಹಾಯ ಕೇಳಿದ್ದಾಳೆ. ಆಟೋವಾಲ ಮೊಬೈಲ್‌ ರಿಪೇರಿ ಮಾಡಿಸಿ ಅದರ ಹಣವನ್ನೂ ತಾನೇ ಪಾವತಿಸಿ, ಆಕೆಗೆ ಹೋಟೆಲಿನಿಂದ ಊಟ ತರಿಸಿ ಕೊಟ್ಟಿದ್ದಾನೆ. ನಂತರ ಮತ್ತಿಬ್ಬರು ಸ್ನೇಹಿತರ ಜೊತೆ ಕಾರಿನಲ್ಲಿ ನದಿ ಕಿನಾರೆಗೆ ಕರೆದೊಯ್ದು ಮತ್ತು ಬರುವ ಪಾನೀಯ ಕುಡಿಸಿ ಈ ಕೃತ್ಯ ಎಸಗಿ ಅಲ್ಲೇ ಬಿಟ್ಟು ಹೋಗಿದ್ದಾರೆ.

ಗುರುವಾರ ಬೆಳಿಗ್ಗೆ ಯುವತಿ ಮನೆಯೊಂದರ ಬಳಿ ಬಂದು ಕುಸಿದು ಬಿದ್ದ ನಂತರ ಘಟನೆ ಬೆಳಕಿಗೆ ಬಂದಿದೆ. ಆಕೆ ರೈಲು ಹತ್ತಿ ತನ್ನೂರಿಗೆ ಹೋಗಿದ್ದರೆ ಈ ಪ್ರಕರಣ ಬಯಲಿಗೆ ಬರುತ್ತಲೇ ಇರಲಿಲ್ಲ. ಆರೋಪಿಗಳ ಊಹೆ ಕೂಡಾ ಅದೇ ಆಗಿತ್ತೇನೋ. ಯುವತಿಯ ಹೇಳಿಕೆ ಪಡೆದ ಪೊಲೀಸರು ಸಿ ಸಿ ಟಿ ವಿ ದೃಶ್ಯಾವಳಿ ಆಧರಿಸಿ ಆರೋಪಿಗಳಾದ ಆಟೋ ಚಾಲಕ ಪ್ರಭುರಾಜ್‌, ಡೆಲಿವರಿ ಬಾಯ್‌ ಮನೀಶ್, ಎಲೆಕ್ಟ್ರೀಷಿಯನ್‌ ಮಿಥುನ್‌ನನ್ನು ಬಂಧಿಸಿದ್ದಾರೆ.

Advertisements

ಈ ಘಟನೆಗಳು ಕೊಡುವ ಒಂದು ಸಂದೇಶವೇನೆಂದರೆ, ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಕಟ್ಟಡ ಕಾರ್ಮಿಕರಾಗಿಯೋ, ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿಯೋ, ಸೆಕ್ಯುರಿಟಿ ಗಾರ್ಡ್‌ಗಳಾಗಿಯೋ ಒಟ್ಟಿನಲ್ಲಿ ಹೊಟ್ಟೆಪಾಡಿಗೆ ವಲಸೆ ಬರುವ ಮಂದಿ ಇಲ್ಲಿ ಅತ್ಯಾಚಾರ, ದರೋಡೆ, ಕೊಲೆಯಂತಹ ಕೃತ್ಯಗಳಲ್ಲಿ ಭಾಗಿಗಳಾಗಿ ಜೈಲುಪಾಲಾಗುತ್ತಿದ್ದಾರೆ. ಹಾಗೆಯೇ ಇಲ್ಲಿಗೆ ಕೆಲಸ ಅರಸಿ ಹೊರರಾಜ್ಯದಿಂದ ಬಂದ ಮಹಿಳೆಯರು ಅತ್ಯಾಚಾರಕ್ಕೆ ಈಡಾಗುತ್ತಿದ್ದಾರೆ. ಎರಡು ಕಡೆಯಿಂದ ಬಲಿಪಶುವಾಗುತ್ತಿರುವವರು ಹೆಣ್ಣುಜೀವಗಳು ಎಂಬುದು ಮಾತ್ರ ವಾಸ್ತವ. ಹೆಣ್ಣುಮಕ್ಕಳ ಮಾನ ಪ್ರಾಣಕ್ಕೆ ಎಲ್ಲೆಡೆಯೂ ಅಪಾಯ ಕಾದಿದೆ.

ಹೊರರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಉತ್ತರ ಭಾರತದ ರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟು ಕಾರಣವೋ, ನಮ್ಮಲ್ಲಿನ ಕಾರ್ಮಿಕರ ಕೊರತೆಯೂ ಅಷ್ಟೇ ಕಾರಣ. ಅವರು ಹೊಟ್ಟೆಪಾಡಿಗೆ ಇಲ್ಲಿಗೆ ಬಂದಿರಬಹುದು, ಆದರೆ ಇಲ್ಲಿಗೆ ಬಂದ ಅವರೆಲ್ಲ ಪರೋಕ್ಷವಾಗಿ ರಾಜ್ಯ ನಿರ್ಮಾಣದಲ್ಲಿ ತೊಡಗಿದ್ದಾರೆ. ವಸತಿ ಸಮುಚ್ಚಯ, ರಸ್ತೆ‌, ಸರ್ಕಾರಿ ಕಟ್ಟಡ, ಫ್ಲೈಓವರ್‌, ಮೆಟ್ರೋ ಸೇತುವೆ ಹೀಗೆ ಎಲ್ಲ ಕಾಮಗಾರಿಗಳ ಕೆಲಸಗಾರರು ಹೊರ ರಾಜ್ಯದವರು. ಕೊಡಗು, ಚಿಕ್ಕಮಗಳೂರು ಕಾಫಿ ತೋಟಗಳು ಸೇರಿದಂತೆ ಬಹುತೇಕ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಮಿಕರಾಗಿ ಪಶ್ಚಿಮ ಬಂಗಾಳ, ಅಸ್ಸಾಂನ ಕಾರ್ಮಿಕರು ನೆಲೆಗೊಂಡಿದ್ದಾರೆ. ಅವರಿಗೆ ರಕ್ಷಣೆ ಕೊಡುವುದು, ಭದ್ರತೆ ನೀಡುವುದು ಸರ್ಕಾರದ ಕರ್ತವ್ಯ. ಹಾಗೆಯೇ ಅವರ ಮೇಲೆ ನಿಗಾ ಇಡುವುದು ಪೊಲೀಸ್‌ ಇಲಾಖೆಯ ಆದ್ಯ ಕರ್ತವ್ಯವಾಗಬೇಕು. ಹೀಗೆ ಒಂದು ಕಡೆ ಅವರಿಗೆ ಭದ್ರತೆ ಮತ್ತೊಂದು ಕಡೆ ಅವರಿಂದ ತೊಂದರೆಯಾಗದಂತೆ ಸ್ಥಳೀಯರಿಗೆ ರಕ್ಷಣೆ ಕೊಡುವುದು ಕೂಡಾ ಜೊತೆ ಜೊತೆಗೆ ಆಗಬೇಕಿದೆ.

ಕರ್ನಾಟಕ ನ್ಯಾಯದಾನದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ನಿನ್ನೆಯಷ್ಟೇ ʼIndia Justice Reportʼ ತನ್ನ ನಾಲ್ಕನೇ ಆವೃತ್ತಿಯ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ, ಪೊಲೀಸ್‌ ಇಲಾಖೆ ಕಾರ್ಯ ನಿರ್ವಹಣೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ವರದಿ ಹೇಳುತ್ತದೆ. ಪೊಲೀಸ್‌ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಪ್ರಮಾಣವನ್ನು ತಗ್ಗಿಸಲಾಗಿದೆ. ಸಿಬ್ಬಂದಿಗಾಗಿ ಸರ್ಕಾರ ವೆಚ್ಚ ಮಾಡುವ ಮೊತ್ತ ಹೆಚ್ಚಾಗಿದೆ. ಎಲ್ಲವೂ ಚೆನ್ನಾಗಿದೆ ಎಂದು ವರದಿ ಹೇಳುತ್ತಿರುವ ಈ ಸಮಯದಲ್ಲಿ ಪೊಲೀಸ್‌ ಇಲಾಖೆ ಕಾರ್ಯ ಅಷ್ಟೇನೂ ತೃಪ್ತಿಕರವಾಗಿಲ್ಲ ಎಂದೇ ಪರಿಗಣಿಸಬೇಕಿದೆ. ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಮಾಣವೂ ಹೆಚ್ಚಾಗಿದೆ. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ- ಕೊಲೆ; ಕೌಟುಂಬಿಕ ಕಲಹ ಕಾರಣಕ್ಕೆ ಕೊಲೆ ಹೆಚ್ಚಿದೆ. ಇದನ್ನು ಸರ್ಕಾರ, ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ. ವರ್ಷದಲ್ಲಿ ಐನೂರಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಪ್ರಕರಣ ಇತ್ಯರ್ಥವಾಗಿ ಶಿಕ್ಷೆಯಾಗುತ್ತಿರುವುದು ಮಾತ್ರ ಶೂನ್ಯ. ಪೋಕ್ಸೋ ಪ್ರಕರಣಗಳಲ್ಲಿ ಪೊಲೀಸರು ಸಂತ್ರಸ್ತರ ಪರ ಮಾತೃಹೃದಯಿಗಳಾಗಬೇಕಿದೆ. ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯ ಸಂಗ್ರಹಿಸಿ ಕಾಲ ಮಿತಿಯೊಳಗೆ ಆರೋಪ ಪಟ್ಟಿ ಸಲ್ಲಿಸುವುದು, ಬಲಿಷ್ಠರು, ಪ್ರಭಾವಿಗಳ ರಕ್ಷಣೆಗೆ ನಿಲ್ಲದೇ ಎಲ್ಲರನ್ನೂ ಕಾನೂನಿನಡಿ ಸಮಾನವಾಗಿ ಪರಿಗಣಿಸಬೇಕು.

ಮೊತ್ತ ಮೊದಲಿಗೆ ಅಪರಾಧ ಕೃತ್ಯ ಎಸಗುವವರಿಗೆ ಕಾನೂನಿನ ಭಯ ಬರುವ ವಾತಾವರಣ ನಿರ್ಮಾಣ ಮಾಡಲು ಪೊಲೀಸ್‌ ಇಲಾಖೆ ಸಶಕ್ತವಾಗಿ ಕಾರ್ಯ ನಿರ್ವಹಿಸಬೇಕಿದೆ. ಅಪರಾಧ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಭಯದ ವಾತಾವರಣ ನಿರ್ಮಾಣವಾಗದ ಹೊರತು ಸಾಮೂಹಿಕ ಅತ್ಯಾಚಾರ, ಪೋಕ್ಸೋ ಮಾತ್ರವಲ್ಲ ಯಾವುದೇ ಅಪರಾಧ ಪ್ರಕರಣಗಳನ್ನು ತಡೆಯಲು ಸಾಧ್ಯವಾಗದು. ಪೊಲೀಸ್‌ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X